ಅಧಿಕಾರದ ದರ್ಪದ ಎದುರು ಅಧಿಕಾರಿ ಮಾಡುವುದಾದರೂ ಏನು..?

ಕೊರೊನಾ 2ನೇ ಅಲೆಯನ್ನು ತಡೆಯುವ ಉದ್ದೇಶದಿಂದ ಸರ್ಕಾರ ಸಾಕಷ್ಟು ಕಸರತ್ತು ಮಾಡುತ್ತಿದೆ. ಇದರ ಭಾಗವಾಗಿಯೇ ಲಾಕ್ಡೌನ್ ಜಾರಿ ಮಾಡಿದೆ. ಮೇ 24ರ ತನಕ ಸರ್ಕಾರದ ಆದೇಶ ಜಾರಿಯಲ್ಲಿದೆ. ಸರ್ಕಾರದ ನೂತನ ಮಾರ್ಗಸೂಚಿ ಪ್ರಕಾರ ಅಂತರ್ ಜಿಲ್ಲಾ ಸಂಚಾರಕ್ಕೂ ಅವಕಾಶವಿಲ್ಲ. ಬೆಳಗ್ಗೆ 10 ಗಂಟೆ ತನಕ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ಅವಕಾಶ ನೀಡಿದೆ. ಆ ಬಳಿಕ ಅನಗತ್ಯವಾಗಿ ಸಂಚಾರ ಮಾಡಬಾರದು, ಒಂದು ವೇಳೆ ಅತ್ಯವಶ್ಯಕ ಕೆಲಸ ಇಲ್ಲದೆ ಸಂಚಾರ ಮಾಡಿದರೆ ವಾಹನ ಜಪ್ತಿ ಮಾಡುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಆದ್ರೆ ಅಧಿಕಾರದ ಧಿಮಾಕಿನಲ್ಲಿ  ಕೆಲವು ಕಡೆ ಸರ್ಕಾರದ ಆದೇಶ ಸ್ಪಷ್ಟವಾಗಿ ಉಲ್ಲಂಘನೆ ಆಗುತ್ತಿದೆ.

ಸಿಎಂ ಪುತ್ರ ವಿಜಯೇಂದ್ರ ಮಾಡಿದ್ದೇನು ಗೊತ್ತಾ?

ಮೈಸೂರಿನ ನಂಜನಗೂಡಿನಲ್ಲಿರುವ ದಕ್ಷಿಣ ಕಾಶಿ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ವಿಜಯೇಂದ್ರ ದಂಪತಿ ಸಮೇತ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಎಂಟು ಮಂದಿ ಗನ್ ಮ್ಯಾನ್ ಗಳ ಜೊತೆ ಆಗಮಿಸಿದ್ದ ವಿಜಯೇಂದ್ರ ದಂಪತಿ ಕಪಿಲಾ ನದಿ ತೀರದಲ್ಲಿ ಹಾಗೂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಕೊರೊನಾ ಸಂಕಷ್ಟ ಸಮಯದಲ್ಲಿ ಯಾವುದೇ ಸಾರ್ವಜನಿಕರಿಗೆ ದೇವಸ್ಥಾನ ಪ್ರವೇಶ ನಿಷಿದ್ಧ. ಕೇವಲ ದೇವಸ್ಥಾನದ ಅರ್ಚಕರು ಮಾತ್ರ ಪೂಜೆ ಸಲ್ಲಿಸಲು ಅವಕಾಶವಿದೆ. ಸರ್ಕಾರದ ಆದೇಶ  ಈ ರೀತಿ ಇದ್ದರೂ ಸಿಎಂ ಪುತ್ರನೇ ಆದೇಶ ಉಲ್ಲಂಘಟನೆ ಮಾಡುವುದು ಎಚ್ಟು ಸರಿ ಎನ್ನುವ ಪ್ರಶ್ನೆ ಎದುರಾಗಿದೆ.

ವಿಜಯೇಂದ್ರ ಕೇಸ್ ಬಗ್ಗೆ ಹೈಕೋರ್ಟ್  ಹೇಳಿದ್ದೇನು ?

ರಾಜ್ಯದ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕಾನೂನು ಉಲ್ಲಂಘನೆ ಮಾಡಿ ನಂಜನಗೂಡಿನ ಶ್ರೀಕಂಠೇಶ್ವರ ಸನ್ನಿಧಿಗೆ ಭೇಟಿ ನೀಡಿದ್ದು ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಹೈಕೋರ್ಟ್ ನಲ್ಲಿ ಮೆಮೋ ಸಲ್ಲಿಕೆ ಮಾಡಲಾಗಿತ್ತು. ವಕೀಲ ಜಿ.ಆರ್ ಮೋಹನ್ ಸಲ್ಲಿಸಿದ್ದ ಮೆಮೊ ವಿಚಾರಣೆ ನಡೆಸಿದ ಹೈಕೋರ್ಟ್ ಲಾಕ್ ಡೌನ್ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ತಪ್ಪು, ಈ ಪ್ರಕರಣದಲ್ಲಿ  FIR ದಾಖಲಿಸಬೇಕು ಎಂದು ತಿಳಿಸಿದೆ. ಜೊತೆಗೆ ಈ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡುವಂತೆಯೂ  ಸೂಚನೆ ನೀಡಿದೆ. ಮೆಮೋ ಜೊತೆಗೆ ಸಂಪೂರ್ಣ ಪ್ರಕರಣದ ವಿಚಾರಣೆಗೆ ಹೈಕೋರ್ಟ್​ ನಿರ್ಧಾರ ಮಾಡಿದೆ.

ವಿಜಯೇಂದ್ರ ಬರುವಾಗ ಅಧಿಕಾರಿ ತಡೆಯಲು ಸಾಧ್ಯವೇ..?

ಸಿಎಂ ಪುತ್ರ ವಿಜಯೇಂದ್ರ ದೇಗುಲಕ್ಕೆ ಬರುತ್ತಿದ್ದೇನೆ ಎಂದಾಗ ಓರ್ವ ಅಧಿಕಾರಿ ವಿಜಯೇಂದ್ರ ಅವರನ್ನು ತಡೆಯಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಉದ್ಬವಿಸಿದೆ. ಶ್ರೀಕಂಠೇಶ್ವರ ದೇವಸ್ಥಾನದ EO (ಕಾರ್ಯ ನಿರ್ವಾಹಕ ಅಧಿಕಾರಿ) ರವೀಂದ್ರ ಕ್ಷಮೆ ಕೇಳಿದ್ದಾರೆ. ಇದು ನನ್ನಿಂದ ಆಗಿರುವ ತಪ್ಪು, ನನಗೆ ಯಾವುದೇ ಶಿಕ್ಷೆ ನೀಡಿದರು ಅನುಭವಿಸಲು ಸಿದ್ಧ. ನನ್ನ ಅಧಿಕಾರವಧಿ ಇನ್ನೂ ಕೇವಲ 1 ವರ್ಷ ಮಾತ್ರ ಬಾಕಿ ಇದ್ದು,  ಈಗಲೇ ಸ್ವಯಂ ನಿವೃತ್ತಿ ಪಡೆಯಿರಿ ಎಂದರೂ ಅದಕ್ಕೆ ನಾನು ಸಿದ್ಧ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದ ತಪ್ಪಿತಸ್ಥರ ವಿರುದ್ಧ FIR ದಾಖಲು ಮಾಡಬೇಕು, ಶಿಕ್ಷೆ ಕೊಡಿಸಬೇಕು ಎಂದು ಆಗ್ರಹ ಮಾಡಿದೆ.

ನಿಜವಾಗಲೂ ಶಿಕ್ಷೆ ಆಗಬೇಕಿರುವುದು ಯಾರಿಗೆ..?

ರಾಜಕಾರಣಿಗಳು ತಾವು ಮಾಡಿದ್ದೆಲ್ಲವೂ ಸರಿ ಎನ್ನುವ ಮನಭಾವ ತಾಳಿದಂತೆ ಕಾಣುತ್ತಿದೆ. ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದರೂ ಸರ್ಕಾರದಲಿಲ್ಲ, ಯಾವುದೇ ಸ್ಥಾನಮಾನವಿಲ್ಲ. ತನ್ನ ಅಪ್ಪ ಸಿಎಂ ಎನ್ನುವುದನ್ನೇ ಬಂಡವಾಳ ಮಾಡಿಕೊಂಡು ಸರ್ಕಾರದ ಆದೇಶವನ್ನೇ ಉಲ್ಲಂಘನೆ ಮಾಡಿರುವ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ. ಇದೇ ರೀತಿ ಸಾಕಷ್ಟು ಮಂದಿ ರಾಜಕಾರಣಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ಪ್ರಕರಣದ ಜೊತೆಗೆ ಆ ಪ್ರಕರಣಗಳನ್ನೂ ಹೈಕೋರ್ಟ್ ಸೇರಿಸಿಕೊಂಡು ಕನಿಷ್ಟಪಕ್ಷ ಖುದ್ದು ಹಾಜರು ಮಾಡಿಸಿ ದಂಡ ಹಾಕಿದರೆ ಮುಂದಿನ ದಿನಗಳಲ್ಲಿ ರಾಜಕಾರಿಗಳ ಅಧಿಕಾರದ ಮದಕ್ಕೆ ಕೊಂಚ ಬ್ರೇಕ್ ಬೀಳಲಿದೆ. ಅಧಿಕಾರದ ದರ್ಪದಲ್ಲಿ ದೇವಸ್ಥಾನಕ್ಕೆ ನುಗ್ಗಿದ ಮೇಲೆ ಈಗ ದೇವಸ್ಥಾನ ಡಳಿತ ಮಂಡಳಿ ಅಥವಾ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಹೊಣೆಯಾಗಿಸಿದರೆ ಪ್ರಯೋಜನವಿಲ್ಲ.

Related Posts

Don't Miss it !