ಇಬ್ಬರನ್ನು ಮದ್ವೆ ಆಗಿದ್ದ ಫೋಟೋ ವೈರಲ್, ಯುವಕ ಅರೆಸ್ಟ್..! ಕಾರಣ ಗೊತ್ತಾ?

ಕಳೆದ ಮೇ 7 ರಂದು ಮದ್ವೆಯಾದ ಒಂದು ಫೋಟೋ ವೈರಲ್ ಆಗಿತ್ತು. ಸಾಕಷ್ಟು ಜನ ವಾಟ್ಸಪ್ ಸ್ಟೇಟಸ್ ಕೂಡ ಹಾಕಿಕೊಂಡಿದ್ದರು. ಗಂಡು ಮಕ್ಕಳಿಗೆ ಹೆಣ್ಣುಗಳೇ ಸಿಗದೆ ಇರುವ ಈ ಕಾಲದಲ್ಲಿ ಡಬಲ್ ಧಮಾಕ. ಏನು ಲಕ್ ಮಗಾ, ಒಂದಕ್ಕೆ ಒಂದು ಫ್ರೀ ಅಂತೆಲ್ಲಾ ಟ್ರೋಲಿಗರು ಸಾಮಾಜಿಕ ಜಾಲ ತಾಣದಲ್ಲಿ ಫೊಸ್ಟ್ ಮಾಡಿದ್ದರು. ಅದ್ಯಾರ ಕಣ್ಣು ಈ ಜೋಡಿಗಳ ಮೇಲೆ ಬಿತ್ತೋ ಏನೋ..! ಆ ಯುವಕನನ್ನು ಅರೆಸ್ಟ್ ಮಾಡಲಾಗಿದೆ.

ಜೋಡಿ ಹುಡುಗಿಯರ ಮದ್ವೆಗೆ ಸಿಕ್ಕಿತ್ತು ಸ್ಪಷ್ಟನೆ..!

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ನಡೆದಿದ್ದ ವಿಶೇಷ ಮದುವೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗ್ತಿದ್ದ ಹಾಗೆ ಸ್ಪಷ್ಟನೆಯೂ ಸಿಕ್ಕಿತ್ತು. ಮದುವೆಯಾದ ಯುವಕ ಉಮಾಪತಿ ತನ್ನ ಅಕ್ಕ ರಾಣೆಮ್ಮ ಅವರ ಇಬ್ಬರು ಹೆಣ್ಣುಮಕ್ಕಳನ್ನು ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಗುರು ಹಿರಿಯರು ಹಾಗು ಇಬ್ಬರು ಯುವತಿಯರ ಒಪ್ಪಿಗೆಯನ್ನು ಪಡೆದೇ ಅಕ್ಕ ತಂಗಿಯನ್ನ ಮದುವೆಯಾಗಿದ್ದಾರೆ. ಸುಪ್ರಿಯ ಹಾಗೂ ಲಲಿತಾ ಇಬ್ಬರನ್ನು ಮದುವೆಯಾಗಿದ್ದಾರೆ. ಲಲಿತಾಗೆ ಜನ್ಮತಃ ಮಾತು ಬರಲ್ಲ, ಕಿವಿ ಕೇಳಿಸುವುದಿಲ್ಲ. ಆದರೂ ತಂಗಿಯನ್ನು ಮದುವೆ ಆಗುವಂತೆ ಸುಪ್ರಿಯಾ ಒತ್ತಾಯದಿಂದ ಯುವಕ ಉಮಾಪತಿ ಬಾಳುಕೊಟ್ಟಿದ್ದಾನೆ ಎಂದೆಲ್ಲಾ ಬಿಂಬಿಸಲಾಗಿತ್ತು. ಲಗ್ನಪತ್ರಿಕೆ ಹಾಗು ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸ್ಪಷ್ಟನೆಯೂ ವೈರಲ್ ಆಯ್ತು. ಯಾವುದೇ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳದೆ ಈ ರೀತಿ ವ್ಯಂಗ್ಯ ಮಾಡುವುದು ತಪ್ಪು ಎನ್ನುವ ಸಂದೇಶವೂ ಇತ್ತು. ಇದೀಗ ಅಸಲಿ ಪುರಾಣ ಬಯಲಾಗಿದೆ.

ಅಪ್ರಾಪ್ತೆಯನ್ನು ಮದುವೆಯಾಗಿದ್ದ ಮದುಮಗ ಅರೆಸ್ಟ್!

ಅಕ್ಕ, ತಂಗಿಯನ್ನ ಮದುವೆಯಾಗಿ ರಾಜ್ಯಾದ್ಯಂತ ಅಬ್ಬರದ ಪ್ರಚಾರ ಗಿಟ್ಟಿಸಿದ್ದ ಮಧುಮಗನನ್ನು ಜೈಲಿಗೆ ಕಳುಹಿಸಲಾಗಿದೆ. ಸುಪ್ರಿಯಾ ಮತ್ತು ಲಲಿತ ಎನ್ನುವ ಅಕ್ಕ ತಂಗಿಯನ್ನ ಮದುವೆಯಾಗಿದ್ದ ಉಮಾಪತಿ ಮಾಡಿದ್ದು ಸಣ್ಣದೊಂದು ಅಪರಾಧ. ಅದೇನೆಂದ್ರೆ ಲಲಿತಾ ಎಂಬ ಯುವತಿ ಅಪ್ರಾಪ್ತೆ, ಆಕೆಗೆ ಇನ್ನೂ ಕೇವಲ 16 ವರ್ಷ ಮಾತ್ರ. ಇದೇ ಕಾರಣಕ್ಕೆ ಪ್ರಕರಣ ದಾಖಲಿಸಿದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಮೂಕಿಯಾಗಿರುವ ಲಲಿತಾಳನ್ನು ಮದುವೆಯಾಗಿದ್ದ ಅಪರಾಧಕ್ಕಾಗಿ ಉಮಾಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇಬ್ಬರನ್ನು ಮದುವೆಯಾಗಿದ್ದ ಪೋಟೋ ವೈರಲ್ ಆಗಿದ್ದ ಬಳಿಕ ಮದುವೆ ಕುರಿತು ಪರಿಶೀಲನೆ ಮಾಡಲು ಕೋಲಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಆದೇಶ ಮಾಡಿದ್ದರು. ಅದರಂತೆ ಪರಿಶೀಲನೆ ವೇಳೆ ಲಲಿತಾ ಅಪ್ರಾಪ್ತೆ ಎನ್ನುವುದು ಬೆಳಕಿಗೆ ಬಂದಿತ್ತು. ಉಮಾಪತಿ ಸೇರಿ 7 ಜನರ ವಿರುದ್ದ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಯಾರದ್ದು ತಪ್ಪು..? ಕಾನೂನಲ್ಲಿ ಮಾನವೀಯತೆಗೆ ಸ್ಥಾನ ಇಲ್ಲವೇ..?

ಹಿರಿಯ ಮಗಳಾದ ಸುಪ್ರಿಯಾಗೆ ಮದುವೆ ನಿಶ್ಚಯವಾಗಿತ್ತು. ಆದರೆ ತನ್ನ ತಂಗಿ ಲಲಿತಾಳಿಗೆ ಕಿವಿ ಕೇಳಲ್ಲ, ಮಾತು ಬಾರಲ್ಲ. ಅವಳನ್ನು ಯಾರು ಮದುವೆ ಆಗ್ತಾರೆ ಅನ್ನೋ ಕಾರಣಕ್ಕೆ ಸುಪ್ರಿಯಾ ಸೇರಿ ಕುಟುಂಬಸ್ಥರು ಲಲಿತಾಳನ್ನು ಮದ್ವೆಯಾಗು, ಅಕ್ಕ ತಂಗಿ ಒಟ್ಟಿಗೆ ಇದ್ದರೆ ಚೆನ್ನಾಗಿರುತ್ತಾರೆ ಎಂದು ಉಮಾಪತಿಯನ್ನು ಒಪ್ಪಿಸಿದ್ದರು. ಅದೇನೇ ಇರಲಿ ಎರಡು ಮದುವೆ ಆಗಿದ್ದು ಕಾನೂನು ಪ್ರಕಾರ ಮಹಾ ಅಪರಾದವೇನಲ್ಲ. ಆದರೆ ಲಲಿತಾಗೆ ಇನ್ನೂ 18 ವರ್ಷ ತುಂಬಿಲ್ಲ ಅನ್ನೋದು ಅಪರಾಧವೇ ಸರಿ. ಆದರೆ ಅಧಿಕಾರಿಗಳು ಮದುವೆಯಾದ ಬಳಿಕ ಹುಡುಗನ ಬಂಧನ ಮಾಡಿದರೆ ನ್ಯಾಯ ಕೊಟ್ಟಂತೆ ಆಗುತ್ತದೆಯೇ..? ಮದುವೆಗೂ ಮುನ್ನವೇ ತಡೆಯುವ ಬದ್ಧತೆ ತೋರಿಸಬೇಕಿತ್ತು. ಈಗ ಬಂಧನ ಮಾಡಿದರೆ ಯಾವ ನ್ಯಾಯ..?

ಒಂದು ವೇಳೆ ಸುಪ್ರಿಯಳ ಮದುವೆ ಆಗಬೇಕಿದ್ದ ಉಮಾಪತಿ ಒತ್ತಾಯ ಪೂರ್ವಕವಾಗಿ ಲಲಿತಾಳನ್ನು ವರಿಸಿದ್ದರೆ ಅದು ಕಾನೂನುಬಾಹಿರ. ಆದರೆ ಸುಪ್ರಿಯಾಳ ಜೊತೆ ಮದುವೆ ಫಿಕ್ಸ್ ಆಗಿದ್ದು, ಮಾತು ಬಾರದ ಲಲಿತಾಳ ಜೊತೆಗೂ ಮದುವೆ ಆಗಿದ್ದಾನೆ ಎಂದರೆ ಆತನ ಒಳ್ಳೆತನಕ್ಕೆ ಬೆಲೆ ಕೊಡಬೇಕಿದೆ. ಲಲಿತಾಳ ಮದುವೆ ತಡೆಯಲು ವಿಫಲ ಆಗಿರುವ ಅಧಿಕಾರಿಗಳಿಗೆ ಶಿಕ್ಷೆ ಕೊಡಬೇಕಿದೆ. 18 ವರ್ಷ ಆಗುವ ತನಕ ಲಲಿತಾ ಪೋಷಕರ ಜೊತೆಯಲ್ಲೇ ಇರಲಿ ಎಂದು ಅಧಿಕಾರಿಗಳು ಸೂಚಿಸಬಹುದು. ಅದನ್ನು ಬಿಟ್ಟು ಹೊಸದಾಗಿ ಮದುವೆಯಾದ ಉಮಾಪತಿಯನ್ನು ಬಂಧಿಸಿ ಜೈಲಿಗೆ ಕಳಿಸುವುದು ಅನ್ಯಾಯವಲ್ಲವೇ..? ಫೋಟೋ ವೈರಲ್ ಆಗದೆ ಇದ್ದಿದ್ದರೆ ಎಲ್ಲವೂ ನ್ಯಾಯವಾಗಿ ಇರುತ್ತಿತ್ತೆ..? ಎಲ್ಲವನ್ನೂ ಕಾನೂನು ಪ್ರಕಾರವೇ ನೋಡುವುದು ಸೂಕ್ತ ಎನಿಸುವುದಿಲ್ಲ.

Related Posts

Don't Miss it !