ಒಳ್ಳೆಯ ಕೆಲಸ ಯಾರು ಮಾಡಿದರೇನು..! ಒಳ್ಳೆಯದೇ ಅಲ್ಲವೇ..?

2020ರ ಆರಂಭದಲ್ಲಿ ಶುರುವಾದ ಕೊರೊನಾ ಎಂಬ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆದಿತ್ತು. ಅಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಿದಾಗ ಲಕ್ಷಾಂತರ ಜನ ವಲಸೆ ಕಾರ್ಮಿಕರು ಅನುಭವಿಸಲಾರದ ಸಂಕಷ್ಟವನ್ನು ಅನುಭವಿಸಿದ್ರು. ಸಾವಿರಾರು ಕಿಲೋ ಮೀಟರ್ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ತಮ್ಮ ಹುಟ್ಟೂರು ತಲುಪಿದ್ರು. ಆಗ ಬಾಲಿವುಡ್ ನಟ ಸೋನು ಸೂದ್ ಸೇರಿದಂತೆ ಸಾವಿರಾರು ಜನರು ಬಡ ಜನರ ಗೋಳು ಕೇಳುವ ಕೆಲಸ ಮಾಡಿದ್ರು. ಹಲವಾರು ಸಂಘ ಸಂಸ್ಥೆಗಳು ರಸ್ತೆಯುದ್ದಕ್ಕೂ ಆಹಾರ, ನೀರು ಕೊಟ್ಟಿದ್ರು. ಬೆಂಗಳೂರಿನಲ್ಲೂ ಸಾಕಷ್ಟು ಎನ್ಜಿಒಗಳು ಆಹಾರ ಪೊಟ್ಟಣ, ದಿನಸಿ ಕಿಟ್ ಸೇರಿದಂತೆ ಹಲವು ಬಡ ಜನರ ಕಣ್ಣೊರೆಸುವ ಕೆಲಸ ಮಾಡಿದ್ರು. ಇನ್ನೂ ಕೆಲವು ಸಂಸ್ಥೆಗಳು ಜನರನ್ನು ಏರ್ ಲಿಫ್ಟ್ ಕೂಡ ಮಾಡಿಸಿದ್ರು. ಇದೆಲ್ಲವೂ ಒಳ್ಳೆಯದೇ ಕಾರ್ಯಕ್ರಮಗಳು ಆಗಿದ್ದವು. ಆದರೆ ಈ ಬಾರಿ ಸ್ವಲ್ಪ ವಿಭಿನ್ನವಾದ ವಾತಾವರಣ ಸೃಷ್ಟಿಯಾಗಿದೆ.

ಕೊರೊನಾ ಸಂಕಷ್ಟದಲ್ಲಿ ಕನ್ನಡಿಗನ ಮೆಚ್ಚುವ ಕೆಲಸ!

ಕೊರೊನಾ 2ನೇ ಅಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಅಕ್ಕಿ ಬೇಳೆ, ಆಹಾರದ ಪೊಟ್ಟಣ ಕೊಟ್ಟರೆ ಸಾಕಾಗುವುದಿಲ್ಲ. ಇಲ್ಲಿ ಏನಿದ್ದರೂ ಆಕ್ಸಿಜನ್ ಸಿಲಿಂಡರ್, ರೆಮ್ಡಿಸಿವಿರ್ ಇಂಜೆಕ್ಷನ್, ಐಸಿಯು ಬೆಡ್ ಅವಶ್ಯಕತೆ ಹೆಚ್ಚಾಗಿದೆ. ಇದನ್ನು ಎಲ್ಲಾ ಸಂಘ ಸಂಸ್ಥೆಗಳು ಮಾಡಲು ಸಾಧ್ಯವಾಗದಿದ್ದರೂ ಸಾಕಷ್ಟು ಜನರು ಆಕ್ಸಿಜನ್ ಸೇರಿದಂತೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅದರಲ್ಲಿ ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಕೂಡ ಒಬ್ಬರು. ಕರ್ನಾಟಕದ ಭದ್ರಾವತಿ ಮೂಲದರೇ ಆದ ಶ್ರೀನಿವಾಸ್ ಬಿ.ವಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದರೂ ಅಷ್ಟೊಂದು ಪರಿಚಿತರಲ್ಲ. ಕಳೆದ ವರ್ಷದಿಂದಲೇ ಸಾಕಷ್ಟು ಜನಸೇವೆ ಮಾಡುತ್ತಿದ್ದರೂ ಪ್ರಚಾರದಿಂದ ದೂರ ಉಳಿದಿದ್ದ ಶ್ರೀನಿವಾಸ್, 2ನೇ ಅಲೆಯಲ್ಲಿ ಮಾಡುತ್ತಿದ್ದ ಕೆಲಸದಿಂದ ಬೆಳಕಿಗೆ ಬಂದಿದ್ದರು.

ದೆಹಲಿ ಪೊಲೀಸರಿಂದ ದಿಢೀರ್ ದಾಳಿ, ವಿಚಾರಣೆ

ಶ್ರೀನಿವಾಸ್ ದೆಹಲಿ, ಉತ್ತರ ಪ್ರದೇಶ, ಗುರುಗ್ರಾಮ ಸೇರಿದಂತೆ ದೆಹಲಿ ಸುತ್ತಮುತ್ತಲಿನ ಜನರಿಗೆ ಆಕ್ಸಿಜನ್ ಪೂರೈಕೆ ಮಾಡುವುದು, ಆಂಬ್ಯುಲೆನ್ಸ್ ಸೇವೆ ಕಲ್ಪಿಸುವುದು ಮಾಡುತ್ತಿದ್ದಾರೆ. ಕಷ್ಟ ಎಂದವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಬಿ.ವಿ ಅವರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ಬಳಿಕ ಮಾತನಾಡಿರುವ ಕನ್ನಡಿಗ ಶ್ರೀನಿವಾಸ್ ಬಿ.ವಿ ಆಮ್ಲಜನಕ, ರೆಮ್ಡಿಸಿವಿರ್, ಊಟೋಪಚಾರ ವಿತರಣೆ ಬಗ್ಗೆ ಪೊಲೀಸರು ಅನುಮಾನಗೊಂಡು ರಾಷ್ಟ್ರೀಯ ಯುವ ಕಾಂಗ್ರೆಸ್ ಕಚೇರಿಯಲ್ಲೂ ಪರಿಶೀಲನೆ ನಡೆಸಿದ್ದಾರೆ. ನಮ್ಮಲ್ಲಿ ಮುಚ್ಚಿಟ್ಟು ಮಾಡುವ ಕೆಲಸ ಏನಿಲ್ಲ, ವಿಚಾರಣೆ ಮಾಡಲಿ ಅಭ್ಯಂತರವಿಲ್ಲ. ವಿಚಾರಣೆಯಿಂದ ನಮ್ಮಿಂದ ಯಾವ ತಪ್ಪು ಆಗಿಲ್ಲ ಎಂಬುದು ಸಾಬೀತಾಗಿದೆ. ಕೊರೊನಾ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದನ್ನು ನಾವು ಮುಂದುವರಿಸುತ್ತೇವೆ ಎಂದಿದ್ದಾರೆ.

ಬೆಂಗಳೂರಲ್ಲಿ BJP ಯುವ ಮೋರ್ಚಾ ಅಧ್ಯಕ್ಷರ ಸಾಧನೆ..!

ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರೂ ಕೂಡ ಕರ್ನಾಟಕದವರೇ ಆಗಿದ್ದಾರೆ. ಅದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ. ಸಂಸದ ತೇಜಸ್ವಿ ಸೂರ್ಯ ಕೂಡ ಬೆಂಗಳೂರಿನಲ್ಲಿ ಜನಮೆಚ್ಚುವ ಕೆಲಸ ಮಾಡಿದ್ದರು. ಬೆಂಗಳೂರಿನ ಬಿಬಿಎಂಪಿ ವಾರ್ ರೂಮಿನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನು ಬೆಳಕಿಗೆ ತಂದಿದ್ದರು. ಅದನ್ನು ಎಲ್ಲರೂ ಮುಕ್ತ ಕಂಠದಿಂದಲೇ ಸ್ವಾಗತ ಮಾಡಿದ್ರು. ಆದರೆ ಅಲ್ಲೊಂದು ಆಗಿದ್ದ ಸಣ್ಣ ಲೋಪ ಸಂಸದ ಮೇಲೆ ವಿರೋಧಿಗಳು ಕೆಂಗಣ್ಣು ಬೀರುವಂತೆ ಮಾಡಿತ್ತು. ಸಂಸದರು ಕೇವಲ ಮುಸ್ಲಿಂ ಸಮುದಾಯದ ನೌಕರರ ಹೆಸರು ಓದಿದ್ದು ಹಾಗೂ ಸಂಸದರ ಜೊತೆಗಿದ್ದ ಶಾಸಕರು ಮದರಸಾ ಎಂದಿದ್ದು ತೀವ್ರ ವಿರೋಧಕ್ಕೆ ಕಾರಣವಾಯ್ತು.

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನು ಸಂಸದರು ಬಯಲಿಗೆ ಎಳೆದಿದ್ದು ಒಳ್ಳೆಯ ಕೆಲಸವೇ ಆಗಿದೆ. ಆದ್ರೆ ಮಾಡಿದ ಸಣ್ಣ ಅಚಾತುರ್ಯ ಸಂಸದ ಕೆಲಸ ಹೊಳೆಯಲ್ಲಿ ಹುಣಸೆ ತೊಳೆದಂತಾಯ್ತು. ರಾಜಕೀಯ ಕಾರಣಕ್ಕೆ ವಿರೋಧಿಸಬಾರದು ಎನ್ನುವುದು ಸರಿ. ಅದೇ ರೀತಿ ಕಾಂಗ್ರೆಸ್ ರಾಷ್ಟ್ರೀಯ ಯುವ ಅಧ್ಯಕ್ಷ ಶ್ರೀನಿವಾಸ್ ಕೂಡ ದೆಹಲಿ ಸುತ್ತಮತ್ತಲ ಪ್ರದೇಶದಲ್ಲಿ ತನ್ನ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆದರೂ ರಾಜಕೀಯ ಕಾರಣಕ್ಕೆ ಅವರ ಕೆಲಸಕ್ಕೆ ಕಲ್ಲಾಕುವುದು ಸರೀಯೇ..? ಇಂಥಹ ಸಂಕಷ್ಟ ಕಾಲದಲ್ಲಿ ಸೋಂಕಿತರಿಗೆ ಸಣ್ಣ ಸಹಾಯ ಮಾಡಿದರೂ ಅದು ಮರೆಯಲಾಗದ ಅನುಭವ. ಆದರೂ ಇಂತಹ ಸಮಯದಲ್ಲಿ ರಾಜಕೀಯ ಕಾರಣದಿಂದ ಆಸಕ್ತಿಯನ್ನು ಕುಂದಿಸುವ ಕೆಲಸ ಮಾಡಬಾರದು ಅಲ್ಲವೇ..?

Related Posts

Don't Miss it !