ಜನರ ಕಷ್ಟಕ್ಕೆ ಸಿಎಂ ಮನಸ್ಸು ಹೇಗೆ ಮಿಡಿಯುತ್ತಿದೆ..?

ರಾಜ್ಯದ ಮುಖ್ಯಮಂತ್ರಿ ಆದವರು ಜನರ ಜೊತೆಗೆ ನಿಂತು ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ನಮ್ಮ ರಾಜ್ಯದ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ವಯಸ್ಸು ಹೆಚ್ಚಾಗಿದೆ. ಜನರ ನಡುವೆ ಓಡಾಡಿಕೊಂಡು ಕೆಲಸ ಮಾಡುವುದು ಕಷ್ಟವಾಗುತ್ತದೆ. ಆದರೆ ಸಿಎಂ ಆದವರು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತ ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ತಮ್ಮ ನಿವಾಸದ ಬಳಿಗೆ ಯಾರೊಬ್ಬರೂ ಬಾರದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆಯುವುದು ಸಮಂಜಸವಲ್ಲ. ಅದೂ ಅಲ್ಲದೆ ಇಡೀ ರಾಜ್ಯದ ಜನರಿಗೆ ದಂಡನಾಯಕ ಆದವನೇ ಪ್ರತಿಭಟನೆ ಹೆದರಿ ಮನೆಯ ರಸ್ತೆ ಬಂದ್ ಮಾಡುವುದು ಎಷ್ಟು ಸರಿ..? ಎನ್ನುವ ಪ್ರಶ್ನೆ ಉದ್ಬವ ಆಗಿದೆ. ಕಳೆದ 15 ದಿನಗಳ ಹಿಂದೆ ಆಸ್ಪತ್ರೆ ಬೆಡ್ ಗಾಗಿ ಜನರು ಪರದಾಡುವ ಸ್ಥಿತಿ ಬೆಂಗಳೂರಿನಲ್ಲಿ ಸೃಷ್ಟಿಯಾಗಿತ್ತು. ಆ ಸಮಯದಲ್ಲಿ ಒಬ್ಬರು ಸಿಎಂ ನಿವಾಸದ ಬಳಿಗೆ ಬಂದು ಬೆಡ್ ಕೊಡಿಸುವಂತೆ ಮನವಿ ಮಾಡಿದ್ದರು. ಸಿಎಂ ನಿವಾಸದ ಬಳಿಗೆ ಬಂದ ಬಳಿಕ ಸಿಎಂ ಕಚೇರಿ ಸಿಬ್ಬಂದಿಗಳು ಬೆಡ್ ಕೂಡ ಕೊಡಿಸಿದ್ದರು. ಆ ಬಳಿಕ ಸಿಎಂ ನಿವಾಸದ ಬಳಿಗೆ ಯಾರೂ ಸುಳಿಯದಂತೆ ಬ್ಯಾರಿಕೇಡ್ ಹಾಕಿದ್ದಾರೆ.

ಕಾಂಗ್ರೆಸ್ ಮನವಿ ಸ್ವೀಕಾರಕ್ಕೂ ಸಿಗದ ಅವಕಾಶ..!?

ಸಿಎಂ ನಿವಾಸದ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಿರೋದನ್ನು ವಿರೋಧಿಸಿದ ಕಾಂಗ್ರೆಸ್, ಕುಮಾರಕೃಪ ಗೆಸ್ಟ್ ಹೌಸ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಆಗ್ರಹ ಮಾಡಿತ್ತು. ಬ್ಯಾರಿಕೇಡ್ ಅಳವಡಿಸಿರುವುದು ಆಂಬ್ಯುಲೆನ್ಸ್‌ ಸೇರಿದಂತೆ ಹಲವು ವಾಹನಗಳಿಗೆ ತೊಂದರೆಯಾಗಿದೆ. ಕೂಡಲೇ ಬ್ಯಾರಿಕೇಡ್ ತೆರವುಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಲು ಸಿಎಂ ಕಚೇರಿಗೆ ಬಂದು ಮನವಿ ನೀಡಲು ಮುಂದಾಗಿದ್ದರು. ಮಾಜಿ ಮೇಯರ್ ರಾಮಚಂದ್ರಪ್ಪ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಸಿಎಂ ಬಿ.ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಲು ಆಗಮಿಸಿದ್ದರು. ಆದರೆ ಪೊಲೀಸರು ಭೇಟಿಗೆ ಅವಕಾಶ ನೀಡಲಿಲ್ಲ. ಸಿಎಂ ನಿವಾಸದ ಮುಂಭಾಗದಲ್ಲೇ ತಡೆದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ರಾಮಚಂದ್ರಪ್ಪ, ಸಿಎಂ ನಿವಾಸದ ಮುಂಭಾಗದ ರಸ್ತೆಯನ್ನ ಇವರು ಯಾಕೆ ಬಂದ್ ಮಾಡಿದ್ದಾರೆ..? ಇದು ಪಬ್ಲಿಕ್ ರಸ್ತೆ , ಇಲ್ಲಿ ಪೊಲೀಸರು ಯಾಕೆ ಬಂದ್ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ವಿಧಾನಸೌಧ ರಸ್ತೆ ಬಂದ್ ಮಾಡೋದು ಯಾವಾಗ..?

ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸದ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ ಬಳಿಕ ಸೋಂಕಿತರೊಬ್ಬರು ವಿಧಾನಸೌಧದ ಬಳಿಗೂ ಹೋಗಿದ್ದರು. ಆ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಸ್ಪತ್ರೆ ಬೆಡ್ ಒದಗಿಸಿಕೊಟ್ಟಿದ್ದರು. ಸಿಎಂ ರೀತಿ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಹೆದರಿಕೊಂಡರೆ ವಿಧಾನಸೌಧಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಬೇಕು ಅಲ್ಲವೇ..? ಸಿಎಂ ನಿವಾಸದ ರಸ್ತೆ ಬಂದ್ ಮಾಡಿದರೇನು ಬೆಡ್ ಸೇರಿದಂತೆ ಯಾವುದೇ ಸಮಸ್ಯೆ ಆದರೂ ಜನರು ವಿಧಾನಸೌಧದ ಬಳಿಗೆ ಬಂದು ಗಲಾಟೆ ಮಾಡುತ್ತಾರೆ. ಹಾಗಿದ್ದ ಮೇಲೆ ವಿಧಾನಸೌಧ ಮುಂಭಾಗ ಯಾರೂ ಹೋಗದಂತೆ ರಸ್ತೆ ಬಂದ್ ಮಾಡಿಬಿಡಿ. ಸಿಎಂ ನಿವಾಸಕ್ಕೆ ಅಷ್ಟೆ ಭದ್ರತೆ ಕೊಟ್ಟರೆ ರಾಜ್ಯದ ಶಕ್ತಿಸೌಧದ ಕಡೆಗೆ ಜನರ ಕಣ್ಣು ಬೀಳುವುದಿಲ್ಲವೇ..?

ತಮಗೆ ಸಮಸ್ಯೆ ಆಗದಿದ್ದರೆ ಯಾರೂ ಸಮಸ್ಯೆ ಮಾಡಲ್ಲ..!

ಈ ಮೇಲಿನ ಮಾತು ಎಲ್ಲಾ ಪ್ರಾಣಿಗಳಿಗೂ ಅನ್ವಯ. ಯಾವುದೇ ಪ್ರಾಣಿ ಎದುರಾಳಿ ಪ್ರಾಣಿಯಿಂದ ಸಮಸ್ಯೆ ಇಲ್ಲ ಎಂದು ಅರಿತುಕೊಂಡರೆ ಯಾವುದೇ ಕಾರಣಕ್ಕೂ ಸುಖಾಸುಮ್ಮನೆ ಎದುರಾಳಿ ಮೇಲೆ ದಾಳಿ ಮಾಡುವುದಿಲ್ಲ. ಉದಾಹರಣೆಗೆ  ರಸ್ತೆಯಲ್ಲಿ ಹಾವೊಂದು ಹರಿದು ಹೋಗುತ್ತಿದ್ದರೆ, ತಾವು ಏನನ್ನೂ ಮಾಡದೆ ತಮ್ಮಷ್ಟಕ್ಕೆ ನಿಂತುಬಿಟ್ಟರೆ ಹಾವು ತನ್ನಷ್ಟಕ್ಕೆ ತಾನು ಹೋಗುತ್ತದೆ ಅಷ್ಟೆ. ನೀವು ಸಮಸ್ಯೆ ಮಾಡಲುಇ ಹೋದರೆ ಮಾತ್ರ ಅದು ತಿರುಗಿ ಬೀಳುತ್ತದೆ. ಜನರಿಗೆ ಕೊರೊನಾ ಸಂಕಷ್ಟ ಕಾಲದಲ್ಲಿ ಸೂಕ್ತ ಬೆಡ್, ಆಕ್ಸಿಜನ್, ಇಂಜೆಕ್ಷನ್, ವೆಂಟಿಲೇಟರ್ ಸೌಲಭ್ಯವನ್ನು ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಒದಗಿಸಿಕೊಟ್ಟರೆ ಜನರು ನಿವಾಸದ ಬಳಿಗೆ ಬರುವ ಕೆಲಸ ಮಾಡೋದಿಲ್ಲ. ನೇರವಾಗಿ ಆಸ್ಪತ್ರೆಗೆ ಹೋಗುತ್ತಾರೆ. ಯಾವಾಗ ನಮ್ಮ ನಾಯಕರು ಸರಿಯಾಗಿ ಕೆಲಸ ಮಾಡದೆ ಹೋಗುತ್ತಾರೆ ಆಗಷ್ಟೆ ಜನರು ರೊಚ್ಚಿಗೇಳುತ್ತಾರೆ. ಆಗ ಬ್ಯಾರಿಕೇಡ್ ಹಾಕಿ ಅವಿತು ಕುಳಿತರೂ ಜನರನ್ನು ತಡೆಯುವ ಶಕ್ತಿ ಇರುವುದಿಲ್ಲ. ಇದನ್ನು ಅರಿತು ಬ್ಯಾರಿಕೇಡ್ ತೆರವು ಮಾಡುವ ಮನಸ್ಸನ್ನು ಮುಖ್ಯಮಂತ್ರಿಗಳು ಮಾಡಬೇಕಿದೆ. ಇಲ್ಲದಿದ್ರೆ ಮುಖ್ಯಮಂತ್ರಿ ಅನ್ನೋ ಪದವಿ ಇಟ್ಟುಕೊಂಡು ಇರಬೇಕಾದ ಅನಿವಾರ್ಯತೆ ಏನಿದೆ ಅಲ್ಲವೇ..?

Related Posts

Don't Miss it !