ಶಿಕ್ಷಕರನ್ನು ಕೊಂದ ಅಶಿಕ್ಷಿತರ ಅಧಿಕಾರದ ಲಾಲಸೆ..?

ರಾಜಕಾರಣ ಎನ್ನುವುದೇ ಹೆಣದ ಮೇಲಿನ ರಾಜ್ಯಭಾರ ಅನ್ನೋದು ನಾಣ್ಣುಡಿ. ಅಧಿಕಾರಕ್ಕಾಗಿ ತನ್ನ ಆತ್ಮೀಯರನ್ನೇ ಕೊಲೆ ಮಾಡಿ ಸಿಂಪತಿ ಗಿಟ್ಟಿಸುವುದಕ್ಕೂ ರಾಜಕಾರಣಿಗಳು ಹಿಂಜರಿಯುವುದಿಲ್ಲ ಎನ್ನುವ ಮಾತು ಜನಜನಿತವಾಗಿದೆ. ಆದರೆ, ಇಲ್ಲಿ ಚುನಾವಣಾ ಆಯೋಗ ಮಾಡಿದ ಸಣ್ಣ ಎಡವಟ್ಟು ಹಾಗೂ ರಾಜಕಾರಣಿಗಳ ಅಧಿಕಾರದ ಲಾಲಸೆಯಿಂದ 35 ಶಿಕ್ಷಕರ ಅಂತ್ಯ ಸಂಸ್ಕಾರ ಮಾಡುವಂತಾಗಿದೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರು ಕುಟುಂಬವನ್ನು ತಬ್ಬಲಿ ಮಾಡಿ ಸಾವಿನ ಮನೆ ಸೇರಿದ್ದಾರೆ. 

ಇತ್ತೀಚಿಗಷ್ಟೇ ಪಂಚರಾಜ್ಯ ಚುನಾವಣೆ ನಡೆದಿತ್ತು. ಅದೇ ಸಮಯದಲ್ಲಿ ರಾಜ್ಯದ ಮೂರು ಕ್ಷೇತ್ರಗಳಾದ ಬೆಳಗಾವಿ ಲೋಕಸಭಾ, ರಾಯಚೂರಿನ ಮಸ್ಕಿ ವಿಧಾನಸಭಾ ಹಾಗೂ ಬೀದರ್‌ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಕರ್ನಾಟಕದಲ್ಲಿ ಸೋಂಕು‌ ವಿಪರೀತ ಆಗಿದ್ದರೂ ಅಬ್ಬರದ ಚುನಾವಣಾ ಪ್ರಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೂ ತಡೆಕೆಡಿಸಿಕೊಳ್ಳದ ರಾಜಕಾರಣಿಗಳು ಚುನಾವಣೆ ನಡೆಸಿದ್ದರು. ಆ ಬಳಿಕ ಸಿಎಂ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಕೂಡ ಸೋಂಕಿತರಾಗಿ ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ್ದರು. ಆದ್ರೆ ಮತದಾನ ಕರ್ತವ್ಯದಲ್ಲಿ‌ ಭಾಗಿಯಾಗಿದ್ದ  ಒಟ್ಟು 35 ಶಿಕ್ಷಕರು ಸಾವನ್ನಪ್ಪಿದ್ದಾರೆ ಎನ್ನುವ ವರದಿ ಬೆಚ್ಚಿಬೀಳುವಂತೆ ಮಾಡಿದೆ. 

ಬೈ ಎಲೆಕ್ಷನ್​ನಲ್ಲಿ ಭಾಗಿಯಾದ 35 ಶಿಕ್ಷಕರು ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ ಎನ್ನುವುದು ಸರ್ಕಾರಕ್ಕೆ ಜಿಲ್ಲಾಧಿಕಾರುಗಳಿಂದ ಬಂದಿರುವ ವರದಿ ಬಹಿರಂಗ ಮಾಡಿದೆ. ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಶಿಕ್ಷಕರು ಸಾವನ್ನಪ್ಪಿರುವ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದು, ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಬೈಎಲೆಕ್ಷನ್​ ವೇಳೆ ಸಾವನ್ನಪ್ಪಿರುವ ಶಿಕ್ಷಕರ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ 35 ಶಿಕ್ಷಕರು ಕೊರೊನಾ ಸೋಂಕಿಗೆ ತುತ್ತಾಗಿ‌ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆ ವೇಳೆ ಬರೋಬ್ಬರಿ 700 ಶಿಕ್ಷಕರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಅನ್ನೋ ವರದಿ ಬಂದಿದೆ. ಇನ್ನೂ ತೆಲಂಗಾಣದಲ್ಲಿ ಸುಮಾರು 500 ಜನ ಶಿಕ್ಷಕರು ಸೋಂಕಿಗೆ ತುತ್ತಾಗಿದ್ದು 15 ಶಿಕ್ಷಕರು ಸಾವನ್ನಪ್ಪಿದ್ದಾರೆ. ಇನ್ನೂ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ರಾಜ್ಯದ ಶಿಕ್ಷಕರ ಸ್ಥಿತಿಗತಿ ವರದಿ ಬರಬೇಕಿದೆ. ಒಟ್ಟಾರೆ, ಇದಕ್ಕೆಲ್ಲಾ ಕಾರಣ ಚುನಾವಣಾ ಆಯೋಗ ಕೊರೊನಾ ಎರಡನೇ ಅಲೆ ಬಗ್ಗೆ ತಜ್ಞರು ನೀಡಿದ್ದ ವರದಿ ಧಿಕ್ಕರಿಸಿ ನಡೆಸಿದ ಚುನಾವಣೆಯೇ ಆಗಿದೆ. 

ಕರ್ನಾಟಕದಲ್ಲಿ ಶಿಕ್ಷಕರನ್ನು ಬೇಕಾಬಿಟ್ಟಿ ಕೆಲಸಕ್ಕೆ ನಿಯೋಜನೆ ಮಾಡುವುದರಿಂದಲೇ ಶಿಕ್ಷಣದ ಗುಣಮಟ್ಟ ಸರ್ಕಾರಿ ಶಾಲೆಗಳಲ್ಲಿ ಕುಸಿಯುತ್ತಿದೆ. ಈಗ ಕೊರೊನಾ ಸಮಯದಲ್ಲಿ ಶಾಲೆಯಿಲ್ಲ. ಮಕ್ಕಳಿಗೆ ಬಿಸಿಯೂಟವೂ ಇಲ್ಲ. ಆದರೆ ಪಡಿತರ ಕೊಡುವ ಜೊತೆಯಲ್ಲೇ ಅಕ್ಕಿಯನ್ನು ಹೆಚ್ಚುವರಿ ಸೇರಿಸಿ ಕೊಡಲಾಗದ ಸರ್ಕಾರ,  ಮಕ್ಕಳ ಮನೆಗೆ ಶಿಕ್ಷಕರು ಅಕ್ಕಿ ತಲುಪಿಸುವ ಹೊಣೆಗಾರಿಕೆ ನೀಡಿದೆ. ಈಗಾಗಲೇ ರಾಜ್ಯದಲ್ಲಿ ಸುಮಾರು 600 ಜನ ಶಿಕ್ಷಕರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೊರೊನಾ ಕೆಲಸಕ್ಕೆ‌ ಬಳಸಿಕೊಳ್ಳುವ ಸರ್ಕಾರ ಶಿಕ್ಷಕರಿಗೆ ಲಸಿಕೆಯನ್ನಾದರೂ ನೀಡಿದೆಯೇ..? ಅದೂ ಇಲ್ಲ. ಅಶಿಕ್ಷಿತರ ಆಡಳಿತ, ಅಧಿಕಾರದ ಲಾಲಸೆ ಶಿಕ್ಷಕರನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ಆಗಿದೆ. 

Related Posts

Don't Miss it !