ಹೋರಾಟದ ಬದುಕಿಗೆ ತಿಲಾಂಜಲಿ ಇಟ್ಟ ‘ದೊರೆ’ ಸ್ವಾಮಿ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ನಿಧನರಾಗಿದ್ದಾರೆ. ಇತ್ತೀಚಿಗಷ್ಟೇ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ದೊರೆಸ್ವಾಮಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಯಲ್ಲಿದ್ದ ದೊರೆಸ್ವಾಮಿ ಇಂದು ಇಹಲೋಕ ತ್ಯಜಿಸಿದ್ದಾರೆ. 104 ವರ್ಷದ ದಿಟ್ಟ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಸರ್ಕಾರದ ವಿರುದ್ದದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ಇದ್ದರು. ಯಾವುದೇ ಸರ್ಕಾರವಿರಲಿ ತಪ್ಪು ಮಾಡಿದಾಗ ಎಚ್ಚರಿಸುವ ಕೆಲಸ ಮಾಡುತ್ತಿದ್ದರು. ಸದಾ ಕಾಲ ಜನಪರವಾಗಿ ನಿಲ್ಲುತ್ತಿದ್ದ ಹೆಚ್ ಎಸ್ ದೊರೆಸ್ವಾಮಿ ಹೋರಾಟದ ಮೂಲಕವೇ ಗುರ್ತಿಸಿಕೊಂಡಿದ್ದರು.

1918 ಏಪ್ರಿಲ್ 10 ರಂದು ಹಾರೋಹಳ್ಳಿಯಲ್ಲಿ ಜನಿಸಿದ್ದ ಹೆಚ್.ಎಸ್ ದೊರೆಸ್ವಾಮಿ, ಬೆಂಗಳೂರಿನ ಗ್ಯಾಸ್ ಕಾಲೇಜು, ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಬಳಿಕ ಬ್ರಿಟೀಷರ ವಿರುದ್ಧ ನಡೆಯುತ್ತಿದ್ದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಕರ್ನಾಟಕ ಏಕೀಕರಣದಲ್ಲೂ ಭಾಗಿಯಾಗಿದ್ದರು, ಇಂದಿರಾಗಾಂಧಿ ಜಾರಿ ಮಾಡಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಹಲವಾರು ದಿನಗಳ ಕಾಲ ಜೈಲುವಾಸ ಕೂಡ ಅನುಭವಿಸಿದರು. ಕನ್ನಡದ ಹಲವು ಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸಿದ್ದ ಹೆಚ್.ಎಸ್ ದೊರೆಸ್ವಾಮಿ ನೇರನುಡಿಗೆ ಹೆಸರುವಾಸಿ ಆಗಿದ್ದರು. ಯಾವುದೇ ಮುಲಾಜಿಗೆ ಒಳಗಾಗದೆ ಚಾಟಿ ಬೀಸುವ ಕಲೆ ಕರಗತ ಆಗಿತ್ತು.

ಕೊರೊನಾ ಸೋಂಕಿನಿಂದ ಗುಣಮುಖ ಆಗಿ ಮನೆಗೆ ವಾಪಸ್ ಆದ ಬಳಿಕ ಆರೋಗ್ಯದಲ್ಲಿ ಏರುಪೇರು‌ ಆಗಿದ್ದ ಕಾರಣ ಜಯದೇವ ಹೃದ್ರೋಗ ಸಂಸ್ಥೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ನಡುವೆ ಹೃದಯ ಸ್ಥಂಭನ ಸಂಭವಿಸಿದ್ದು ಇಹಲೋಕ ತ್ಯಜಿಸಿದ್ದಾರೆ. ಕೊನೆಯ ದಿನಗಳವರೆಗೂ ಹೋರಾಟ ಬಿಡದ ಹೆಚ್.ಎಸ್ ದೊರೆಸ್ವಾಮಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಡೆಸಿದ ‘ನಾನು ಗೌರಿ’ ಬೃಹತ್ ಹೋರಾಟಕ್ಕೆ ಸಾಥ್ ನೀಡಿದ್ರು. CAA, NPA, NRC ಹೋರಾಟ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಸದಾ ಕ್ರಿಯಾಶೀಲರಾಗಿ ಪಾಲ್ಗೊಳ್ಳುತ್ತಿದ್ರು. ಬೆಂಗಳೂರಿನಲ್ಲಿ ಒಂದು ಶತಕಕ್ಕೂ ಹೆಚ್ಚು ದಿನಗಳ ಕಾಲ ಜೀವಿಸಿರುವ ಏಕೈಕ ವ್ಯಕ್ತಿ ಎಂದರೂ ಅಚ್ಚರಿ ಏನಲ್ಲ. ನನ್ನ ಕೊನೆ ಉಸಿರು ಇರುವ ತನಕ ಹೋರಾಟ ನಡೆಸುತ್ತೇನೆ ಎಂದು ಘೋಷಿಸಿದ್ರು.

ಹೆಚ್.ಎಸ್ ದೊರೆಸ್ವಾಮಿ ಅವರಿಗೆ ಸಾಕಷ್ಟು ಪ್ರಶಸ್ತಿ, ಸನ್ಮಾನಗಳು ಹುಡುಕಿಕೊಂಡು ಬಂದಿವೆ. ಅದರಲ್ಲಿ ಪ್ರಮುಖವಾಗಿ ಬಸವ ಪುರಸ್ಕಾರ ಹಾಗೂ ಪತ್ರಿಕೋದ್ಯಮದ ರಾಮನಾಥ್ ಗೋಯಂಕ್ ಗೌರವಕ್ಕೆ ಪಾತ್ರರಾಗಿದ್ದರು. ಇತ್ತೀಚಿಗೆ ಸಿಎಎ, ಎನ್‌ಆರ್‌ಸಿ ವಿರೋಧಿಸಿ ನಡೆಯುತ್ತಿದ್ದ ಹೋರಾಟದ ವೇಳೆ ಅಮೂಲ್ಯ ಎನ್ನುವ ಯುವತಿ ಕೂಗಿದ್ದ ಘೋಷಣೆ ಹೆಚ್.ಎಸ್ ದೊರೆಸ್ವಾಮಿ ಅವರನ್ನು ಸಾಕಷ್ಟು ವಿವಾದಕ್ಕೂ ಸಿಲುಕಿಸಿತ್ತು. ಬಿಜೆಪಿ ನಾಯಕರು ಹೆಚ್‌.ಎಸ್ ದೊರೆಸ್ವಾಮಿ ಅವರ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಬಿಜೆಪಿ ವಿವಾದಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೊರೆಸ್ವಾಮಿ ಪಾಕಿಸ್ತಾನದ ಏಜೆಂಟ್ ಎಂದಿದ್ದ ಹೇಳಿಕೆ ಸಾಕಷ್ಟು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. ಯಾವುದೇ ಸರ್ಕಾರ ಟೀಕಿಸುವ ವೇಳೆ ಯಾರ ಮರ್ಜಿಗೂ ಅವಕಾಶ ಕೊಡದ ದೊರೆಸ್ವಾಮಿ ಇಂದು ಹೋರಾಟದ ಬದುಕನ್ನು ಸಾರ್ಥಕಗೊಳಿಸಿ ಹೊರಟಿದ್ದಾರೆ.

Related Posts

Don't Miss it !