ಸಾಲು ಮರದ ತಿಮ್ಮಕ್ಕಗೆ ಇನ್ಮುಂದೆ ಸಂಪುಟ ಸಚಿವೆ ಸ್ಥಾನಮಾನ..!

ಸಾಲು ಮರದ ತಿಮ್ಮಕ್ಕ ಯಾರಿಗೆ ತಾನೆ ಗೊತ್ತಿಲ್ಲ. ತನ್ನ ಇಡೀ ಜೀವನವನ್ನು ಮರಗಳ ಪೋಷಣೆಗೆ ಧಾರೆ ಎರೆದ ವೃಕ್ಷಮಾತೆ. ಸುಮಾರು 4 ಕಿಲೋ ಮೀಟರ್​ ದೂರ ಸಾಲು ಗಿಡಗಳನ್ನು ನೆಟ್ಟು ಪೋಷಣೆ ಮಾಡಿ, ಇಂದು ಸಾಲುಮರದ ತಿಮ್ಮಕ್ಕ ಎಂದು ತನ್ನ ಕೆಲಸವೇ ತನ್ನ ಹೆಸರಿನ ಮುಂದೆ ಬರುವಂತೆ ಮಾಡಿರುವ ದಿಟ್ಟ ಮಹಿಳೆ. ಸಾಲುಮರದ ತಿಮ್ಮಕ್ಕನಿಗೆ ಬರೋಬ್ಬರಿ 111 ವರ್ಷಗಳು ಪೂರ್ಣ. ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ರಾಜ್ಯ ಸರ್ಕಾರದ ವತಿಯಿಂದ ಗೌರವಿಸಿ, ಸನ್ಮಾನ ಮಾಡಲಾಯ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಲು ಮರದ ತಿಮ್ಮಕ್ಕನಿಗೆ ಗ್ರೀನ್​ ಅಂಬಾಸಿಡರ್​ ಅನ್ನೋ ಗೌರವ ನೀಡಿದ್ರು.

ಇನ್ಮುಂದೆ ಸಾಲುಮರದ ತಿಮ್ಮಕ್ಕನಿಗೆ ಸಚಿವೆ ಸ್ಥಾನಮಾನ..!

ರಾಜ್ಯ ಸರ್ಕಾರ ವೃಕ್ಷಮಾತೆ ಸಾಲುಮರದ ತಿಮ್ಮಕ್ಕರನ್ನು ಪರಿಸರ ರಾಯಭಾರಿ ಗೌರವ ನೀಡಿ ಗೌರವಿಸಿದೆ. ಜೊತೆಗೆ ಕ್ಯಾಬಿನೆಟ್ ದರ್ಜೆ ಸಚಿವೆ ಸ್ಥಾನಮಾನ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಸಾಲುಮರದ ತಿಮ್ಮಕ್ಕನವರ ಜನ್ಮದಿನದ ಸಂಭ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಪರಿಸರ ರಕ್ಷಣೆ ಉದ್ದೇಶದಿಂದ ಈ ಸ್ಥಾನಮಾನ ನೀಡಲಾಗ್ತಿದೆ. ಸರ್ಕಾರಿ ಕಾರು, ವೇತನವನ್ನೂ ಸರ್ಕಾರ ನೀಡಲಿದೆ. ಎಲ್ಲಾ ಕಡೆಯಲ್ಲೂ ಪರಿಸರ ರಕ್ಷಣೆ ಬಗ್ಗೆ ಸಾಲುಮರದ ತಿಮ್ಮಕ್ಕ ಪ್ರಚಾರ ಮಾಡಲು ಇದರಿಂದ ಸಹಕಾರಿ ಆಗಲಿದೆ ಎಂದಿದ್ದಾರೆ. ಇನ್ನೂ ಸಾಲುಮರದ ತಿಮ್ಮಕ್ಕ ಹೊರ ರಾಜ್ಯ ಪ್ರವಾಸ ಮಾಡಿದರೆ ಆ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು ಎಂದಿದ್ದಾರೆ.

ಸಾಲುಮರದ ತಿಮ್ಮಕ್ಕ, ವೆಬ್​ಸೈಟ್​ ಹಾಗು ವೆಬ್​ ಸೀರಿಸ್​..!

ಅಭಿವೃದ್ಧಿಯ ಆಸೆಗೆ ಬಿದ್ದ ಮಾನವ ಪರಿಸರವನ್ನು ಹಾಳು ಮಾಡುತ್ತಿದ್ದಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣದಿಂದ ಪರಿಸರ ರಕ್ಷಣೆಗೆ ರಾಜ್ಯ ಸರ್ಕಾರ ಒತ್ತು ಕೊಟ್ಟಿದ್ದು, ಯಾವುದೇ ಫಲಾಪೇಕ್ಷೆ ಬಯಸದೆ ಪರಿಸರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಸಾಲುಮರದ ತಿಮ್ಮಕ್ಕನ ಬಗ್ಗೆ ವೆಬ್​ಸೈಟ್​ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ವಾರ್ತಾ ಇಲಾಖೆ ಸಾಲುಮರದ ತಿಮ್ಮಕ್ಕ ಮಾಡಿದ ಕೆಲಸ, ಬಂದಿರುವ ಖ್ಯಾತಿ, ಗೌರವದ ಬಗ್ಗೆ ವಿವರಣೆ ನೀಡಲಿದೆ. ಇನ್ನೂ ಸಾಲುಮರದ ತಿಮ್ಮಕ್ಕ ಅವರ ಜೀವನ ಆಧರಿಸಿ ವೆಬ್‌ಸೀರಿಸ್ ಕೂಡ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಇವುಗಳ ಮೂಲಕ ಅದೆಷ್ಟೋ ಯುವ ಮನಸ್ಸುಗಳನ್ನು ಪರಿಸರದ ಕಡೆಗೆ ಸೆಳೆಯುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.

ಮನುಷ್ಯ ಒಳ್ಳೆಯದನ್ನು ಮಾಡಿದಾಗ ಒಳ್ಳೆಯದೇ ಆಗುತ್ತದೆ..!

ಸಾಲು ಮರದ ತಿಮ್ಮಕ್ಕನ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡುತ್ತ, ತಮ್ಮ ಕೆಲಸದಿಂದ ಸಾಧನೆ ಮಾಡಲು ಯಾವುದೇ ಜಾತಿ ಧರ್ಮ, ಹಿನ್ನೆಲೆ, ಬೆಂಬಲ ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದು ತಿಮ್ಮಕ್ಕನನ್ನು ನೋಡಿದಾಗ ನೆನಪಿಗೆ ಬರುತ್ತದೆ. ತಿಮ್ಮಕ್ಕ ಯಾವುದೇ ಲಾಭದ ಉದ್ದೇಶದಿಂದ ಮರಗಳನ್ನು ಸಾಕಲಿಲ್ಲ. ಬದಲಿಗೆ ತನ್ನ ಮಕ್ಕಳು ಎಂದುಕೊಂಡು ಮರಗಳನ್ನು ಪೋಷಣೆ ಮಾಡಿದ್ದಾರೆ. ಇಂದು ಅವರಿಗೆ ಸಲ್ಲಬೇಕಾದ ಗೌರವ ಸಂದಿದೆ. ತಾನಾಯ್ತು ತನ್ನ ಮರಗಳಾಯ್ತು ಎಂದು ಬದುಕಿರುವ ಸಾಲುಮರದ ತಿಮ್ಮಕ್ಕ ನಮಗೆಲ್ಲಾ ಸ್ಫೂರ್ತಿ ಎಂದು ತಿಳಿಸಿದ್ರು. ಇನ್ನೂ ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ 10 ಎಕರೆ ಭೂಮಿ ಮಂಜೂರು ಮಾಡುವುದಾಗಿಯೂ ಸಿಎಂ ಭರವಸೆ ನೀಡಿದ್ದಾರೆ. 111 ವರ್ಷದಲ್ಲಿ ಕ್ಯಾಬಿನೆಟ್​ ಸ್ಥಾನಮಾನ ಪಡೆದ ಮೊದಲ ಮಹಿಳೆ ಸಾಲುಮರದ ತಿಮ್ಮಕ್ಕ ಎನ್ನಬಹುದು.

Related Posts

Don't Miss it !