ಬೆಂಗಳೂರಿನ ಬಾಲಕಿ ಸಾವಿಗೆ ಸರ್ಕಾರ ಮೂರು ಎಡವಟ್ಟುಗಳು ಕಾರಣ..!?

ಬೆಂಗಳೂರಿನ ಹೆಬ್ಬಾಳ ಬಳಿ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು 14 ವರ್ಷದ ಬಾಲಕಿ ಅಕ್ಷತಾ ಸಾವನ್ನಪ್ಪಿದ್ದಾಳೆ. 9ನೇ ತರಗತಿಯಲ್ಲಿ ಓದುತ್ತಿದ್ದ ಅಕ್ಷತಾ ಇಂದು ಕೊನೇ ದಿನದ ಪರೀಕ್ಷೆ ಮುಗಿಸಿ ಮನೆಗೆ ವಾಪಸ್​​ ಆಗುವಾಗ ಈ ಘಟನೆ ನಡೆದಿದೆ. ಘಟನೆಗೆ ಬಿಬಿಎಂಪಿ ಮಾಡಿದ ಎಡವಟ್ಟು ಅಕ್ಷಯಾ ಬದುಕನ್ನೇ ಕೊನೆಯಾಗಿಸಿದ್ದಾಳೆ. ಚೆನ್ನಾಗಿ ಓದಿ ಪೈಲಟ್​​ ಆಗುವ ಕನಸು ಕಂಡಿದ್ದ ಬಾಲಕಿ ಅಕ್ಷತಾ, ಶಾಲೆಯಿಂದ ಬರುವಾಗ ಅಂಡರ್​ ಪಾಸ್​ನಲ್ಲಿ ಹೋಗುವ ಪ್ರಯತ್ನ ಮಾಡಿದ್ದಾರೆ. ಆದರೆ ನಿನ್ನೆ ಸುರಿದಿದ್ದ ಮಳೆಯಿಂದ ಅಂಡರ್​ಪಾಸ್​ನಲ್ಲಿ ನೀರು ತುಂಬಿತ್ತು. ಶೂ ಹಾಗೂ ಯೂನಿಫಾರ್ಮ್​​ ಕೊಚ್ಚೆ ನೀರಿನಿಂದ ಒದ್ದೆಯಾಗುವುದನ್ನು ತಪ್ಪಿಸಲು ರಸ್ತೆ ಮೇಲೆ ಸಂಚರಿಸುತ್ತಿದ್ದರು. ತನ್ನ ತಂಗಿ ಜೊತೆಗೆ ತೆರಳುತ್ತಿದ್ದ ಅಕ್ಷಯಾಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಕೊನೆಯುಸಿರು ಎಳೆದಿದ್ದಾಳೆ. ಬಾಲಕಿಯ ಕರುಳು ಹೊರಕ್ಕೆ ಬಂದಿದೆ. ಬಾಲಕಿಯ ಪ್ರಾಣ ತೆಗೆದ ಬಿಬಿಎಂಪಿ ಕಸದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರೀಕ್ಷೆ ಮುಗಿಸಿದ ಬಳಿಕ ಜೇಮ್ಸ್​ ಚಿತ್ರಕ್ಕೆ ಹೋಗೋಣ ಎಂದು ಪೋಷಕರು ಹೇಳಿದ್ದು, ಇಂದು ಪರೀಕ್ಷೆ ಮುಗಿಸಿ ಅಪ್ಪು ಕೊನೇ ಚಿತ್ರ ಜೇಮ್ಸ್​ ನೋಡಲು ಮನೆ ಕಡೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಈ ಘಟನೆಗೆ ಸರ್ಕಾರದ ಮೂರು ಎಡವಟ್ಟುಗಳು ಕಾರಣ ಎನ್ನುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ.

ಮಧುಗಿರಿ ಮೂಲಕ ಬಾಲಕಿ

ಬಿಬಿಎಂಪಿ ಕಸದ ಲಾರಿ ಡಿಕ್ಕಿ ಸರ್ವೇ ಸಾಮಾನ್ಯ..!

ಬಿಬಿಎಂಪಿಯಲ್ಲಿ ಕಸದ ಲಾರಿಗಳ ಮೇಲೆ ಯಾರಿಗೂ ನಿಯಂತ್ರಣವಿಲ್ಲ. ಬಿಬಿಎಂಪಿ ಅಧಿಕಾರಿಗಳು ಕಸ ಸಂಗ್ರಹ ಹಾಗೂ ರವಾನೆಯನ್ನು ಗುತ್ತಿಗೆ ನೀಡುತ್ತದೆ. ಕಸ ಸಂಗ್ರಹ ಮಾಡುವ ಜನರೂ ಸೇರಿದಂತೆ ಪ್ರತಿಯೊಬ್ಬರೂ ಪಾನಮತ್ತರಾಗಿಯೇ ಕೆಲಸ ಮಾಡುತ್ತಾರೆ. ಇದಕ್ಕೆ ಅಧಿಕಾರಿಗಳು ಕೊಡುವ ಸಬೂಬು ‘ಕಸವನ್ನು ಸಂಗ್ರಹ ಮಾಡುವ ಜನರು ತುಂಬಾ ಕೆಟ್ಟ ವಾಸನೆಯಲ್ಲಿ ಇರುತ್ತಾರೆ’ ಮದ್ಯ ಸೇವನೆ ಮಾಡಬೇಡಿ ಎಂದು ಹೇಳಲಾಗದು ಎನ್ನುತ್ತಾರೆ. ಈ ಮಾತನ್ನು ಅಲ್ಲಗಳೆಯುವಂತಿಲ್ಲ. ಕಾರಣವೇನೆಂದರೆ ರಸ್ತೆಯ ನಡುವೆ ಕಸ ಸಂಗ್ರಹದ ವಾಹನ ಚಲಿಸುತ್ತಿದ್ದರೆ, ಕಸದ ತ್ಯಾಜ್ಯ ಸೋರುತ್ತಾ ಸಾಗುತ್ತವೆ. ರಸ್ತೆಯಲ್ಲಿ ಸಾಗುವ ವಾಹನ ಸವಾರರು ಮೂಗು ಮುಚ್ಚುವಂತೆ ಮಾಡುತ್ತವೆ. ಹೀಗಿರುವಾಗ ಬಿಬಿಎಂಪಿ ಅಧಿಕಾರಿಗಳು ಕಸ ಸಂಗ್ರಹ ಮತ್ತು ಸಾಗಾಟಕ್ಕೆ ಅನ್ಯ ಮಾರ್ಗ ಹುಡುಕಬೇಕಿದೆ. ಕನಿಷ್ಠಪಕ್ಷ ಮುಚ್ಚಿದ ಬಾಕ್ಸ್​​ನಲ್ಲಿ ಕಸ ಸಾಗಾಟ ಮಾಡಿದರೆ ಉತ್ತಮ ಎನ್ನುವುದು ಬಹುತೇಕರ ಅಭಿಪ್ರಾಯ. ಇಲ್ಲದಿದ್ದರೆ ಕುಡಿದ ಅಮಲಿನಲ್ಲಿ ಇನ್ನಷ್ಟೂ ಜನರನ್ನು ಬಿಬಿಎಂಪಿ ಕಸದ ವಾಹನಗಳು ಬಲಿ ಪಡೆಯುವುದು ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಸರ್ಕಾರವೇ ಮುಂಜಾಗ್ರತೆ ವಹಿಸಿ ಕುಡಿದು ವಾಹನ ಚಲಾಯಿಸುವುದನ್ನು ತಡೆಯಬೇಕಿದೆ.

ಅಪಘಾತದಲ್ಲಿ ಅಕ್ಷಯಾ

ಅಂಡರ್​ ಪಾಸ್​ ನೀರು ಖಾಲಿ ಮಾಡಿದ್ದರೆ ಅವಾಂತರಕ್ಕೆ ತಡೆ..!

ಭಾನುವಾರ ಸುರಿದ ಮಳೆಯಿಂದ ಅಂಡರ್​ ಪಾಸ್​ನಲ್ಲಿ ನೀರು ತುಂಬಿತ್ತು. ಅಂಡರ್​ ಪಾಸ್​ ಒಳಕ್ಕೆ ನೀರು ಹೋದಂತೆ ಎಚ್ಚರ ವಹಿಸಬೇಕಾದದ್ದು ಬಿಬಿಎಂಪಿ ಅಧಿಕಾರಿಗಳ ಕರ್ತವ್ಯ. ಒಂದು ವೇಳೆ ಮಳೆ ನೀರು ನುಗ್ಗಿದ ಬಳಿಕ ಶೀಘ್ರವೇ ನೀರನ್ನು ಹೊರ ಹಾಕುವ ಕೆಲಸ ಮಾಡಬೇಕಿತ್ತು. ಈ ಬಗ್ಗೆ ಅಂಡರ್​ ಪಾಸ್​ನಲ್ಲಿ ನೀರು ನುಗ್ಗಿ ಸಂಚಾರಕ್ಕೆ ಅಡ್ಡಿಯಾಗಿದೆ ಎನ್ನುವ ಬಗ್ಗೆ ಬಿಬಿಎಂಪಿಗೆ ರಾತ್ರಿಯೇ ದೂರು ಸಲ್ಲಿಕೆ ಆಗಿದೆ. ಆದರೂ ಬಿಬಿಎಂಪಿ ತುರ್ತು ರಕ್ಷಣಾ ಕಾರ್ಯಪಡೆ ಸಿಬ್ಬಂದಿ ಈ ಬಗ್ಗೆ ಗಮನ ವಹಿಸಿಲ್ಲ. ಮಳೆ ನಿಂತು 15 ಗಂಟೆಗೂ ಹೆಚ್ಚು ಕಾಲವಾದರೂ ನೀರು ತೆಗೆದಿರಲಿಲ್ಲ. ಶಾಲೆಯಿಂದ ಮನೆ ಕಡೆಗೆ ಹೊರಟಿದ್ದ ಮಕ್ಕಳು ಅಂಡರ್​ ಪಾಸ್​​ನಲ್ಲಿ ಹೋಗುವುದಕ್ಕೆ ಮುಂದಾಗಿದ್ದರು. ಆದರೆ ನೀರು ತುಂಬಿದ್ದರಿಂದ ಮತ್ತೆ ವಾಪಸ್​ ಬಂದಾಗ ಕೆಲವರು ರಸ್ತೆಯನ್ನು ದಾಟಲು ಮುಂದಾಗಿದ್ದರು. ಈ ವೇಳೆ ತಾವೂ ಕೂಡ ವಾಹನ ಬರುವ ಮುನ್ನ ರಸ್ತೆ ದಾಟಿ ಬಿಡೋಣ ಎಂದು ರಸ್ತೆ ದಾಟಲು ಮುಂದಾಗಿದ್ದರು. ಆದರೆ ಯಮನ ರೂಪದಲ್ಲಿ ಬಂದಿದ್ದ ಬಿಬಿಎಂಪಿ ಕಸದ ಲಾರಿ ಅಕ್ಷಯಾಳ ಪ್ರಾಣವನ್ನು ಕ್ಷಣಾರ್ಧದಲ್ಲಿ ಕಿತ್ತುಕೊಂಡಿತ್ತು. ಅಕ್ಷಯಾ ತಾಯಿ ನೀಡಿದ ದೂರು ಆಧರಿಸಿ ಆರ್​.ಟಿ ನಗರ ಪೊಲೀಸರು ಲಾರಿ ಚಾಲಕ ಮಂಜುನಾಥ್​ನನ್ನು ವಶಕ್ಕೆ ಪಡೆದಿದ್ದಾರೆ.

ಬಿಬಿಎಂಪಿ ನಿರ್ಲಕ್ಷ್ಯದ ಜೊತೆಗೆ ಬಿಎಂಟಿಸಿಗೂ ಲಿಂಕ್​..!

ಅಪಘಾತಕ್ಕೆ ಬಲಿಯಾಗಿರುವ 14 ವರ್ಷದ 9ನೇ ತರಗತಿ ವಿದ್ಯಾರ್ಥಿನಿ ಅಕ್ಷಯಾ ಹಾಗೂ ಆಕೆಯ ತಂಗಿ ಸಂಧ್ಯಾ ಶಾಲಾ ಬಸ್​ನಲ್ಲೇ ಸಂಚಾರ ಮಾಡುತ್ತಿದ್ದರು. ಆದ್ರೆ ಅಕ್ಷಯಾ ತಂದೆ ಬಿಎಂಟಿಸಿ ಹೆಣ್ಣೂರು ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ವೇತನವೂ ಸರಿಯಾಗಿ ಬರುತಿಲ್ಲ. ಇದೇ ಕಾರಣದಿಂದ ಮಕ್ಕಳನ್ನು ಶಾಲಾ ವಾಹನದಲ್ಲಿ ಕಳುಹಿಸುವುದನ್ನು ನಿಲ್ಲಿಸಿದ್ದರು. ಬಸ್​ ಬಂದು ಹೋಗುವಂತೆ ಮಕ್ಕಳಿಗೆ ತಿಳಿಸಿದ್ದರು. ಒಂದು ವೇಳೆ ಬಿಎಂಟಿಸಿ ಅಧಿಕಾರಿಗಳು ಸರಿಯಾಗಿ ವೇತನ ನೀಡಿದ್ದರೆ, ಮೊದಲಿನಂತೆಯೇ ಹೆಚ್ಚುವರಿ ಡ್ಯೂಟಿ ಸಿಕ್ಕರೂ ಪೋಷಕರು ಶಾಲಾ ಬಸ್​ನಲ್ಲೇ ಕಳುಹಿಸುತ್ತಿದ್ದರು. ಆದರೆ ಹೆಚ್ಚುವರಿ ಕೆಲಸವೂ ಇಲ್ಲ, ವೇತವನೂ ಸರಿಯಾಗಿ ಬಾರದ್ದರಿಂದ ಪೋಷಕರು ತೆಗೆದುಕೊಂಡ ನಿರ್ಧಾರ ಮಗಳನ್ನೇ ಕಳೆದುಕೊಳ್ಳುವಂತೆ ಮಾಡಿದೆ ಎನ್ನುವುದಂತೂ ಸತ್ಯ. ಈ ರೀತಿಯ ಸಾವು ಸಂಭವಿಸಿದ ಬಳಿಕ ಅಧಿಕಾರಿಗಳು ಒಂದಿಷ್ಟು ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವ ಬದಲು ಆಗಿರುವ ಸಮಸ್ಯೆಗಳಿಗೆ ಮುಕ್ತಿ ಕೊಡಬೇಕಿದೆ. ಇಲ್ಲೀವರೆಗೂ ಬೆಂಗಳೂರಿನಲ್ಲಿ ನೂರಾರು ಘಟನೆಗಳು ನಡೆದಿದ್ದು, ಬಿಬಿಎಂಪಿ ಅಥವಾ ಸರ್ಕಾರ ಎಚ್ಚರ ವಹಿಸಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಲೇ ಬೇಕಾದ ಸಂಗತಿ. ಇಲ್ಲೀವರೆಗೂ ಸರ್ಕಾರ ಈ ಬಾಲಕಿ ಕುಟುಂಬಕ್ಕೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಕಾಂಗ್ರೆಸ್​ ಶಾಸಕರ ಕ್ಷೇತ್ರ ಎನ್ನುವ ಕಾರಣಕ್ಕೆ ಪರಿಹಾರ ಕೊಡ್ತಾರೋ ಇಲ್ಲವೋ ಎನ್ನುವ ಅನುಮಾನವೂ ಕಾಡುತ್ತಿದೆ.

Related Posts

Don't Miss it !