Drugs Deal; ಓದುವ ಹುಡುಗನನ್ನು ಡ್ರಗ್ಸ್ ಮಾರಾಟಕ್ಕೆ ಕರೆ ತಂದಿದ್ದು ಯಾರು..!?

ಬೆಂಗಳೂರಿನ ಶಾಲಾ – ಕಾಲೇಜುಗಳು ಗಾಂಜಾ ಮಾರಾಟದ ಅಡ್ಡಗಳಾಗಿವೆ ಎನ್ನುವ ವಿಚಾರ ಈಗಾಗಲೇ ಸರ್ಕಾರಕ್ಕೂ ಮನದಟ್ಟಾಗಿದೆ. ಇದರ ನಡುವೆ ಬೆಂಗಳೂರಿನಲ್ಲಿ 20 ವರ್ಷದ ಡ್ರಗ್​​ ಪೆಡ್ಲರ್ ಓರ್ವನನ್ನು ಬಂಧನ ಮಾಡಿದ್ದು ಬರೋಬ್ಬರಿ 52 ಲಕ್ಷ ಮೌಲ್ಯದ 100 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ HSR ಲೇಔಟ್​ ಪೊಲೀಸ್ರು ಕಾರ್ಯಾಚರಣೆ ನಡೆಸಿದ್ದು, ಮನೆಯಲ್ಲಿ ಸಂಗ್ರಹ ಮಾಡಿದ್ದ ಗಾಂಜಾ ಜಪ್ತಿ ಮಾಡುವ ಮೂಲಕ ಬೃಹತ್​ ಪ್ರಮಾಣದ ಗಾಂಜಾ ವ್ಯವಹಾರ ಬಯಲಿಗೆ ಎಳೆದಿದ್ದಾರೆ. ವಿಶೇಷ ಅಂದ್ರೆ ಗಾಂಜಾ ವ್ಯವಹಾರದಲ್ಲಿ ಮಗ ಅರೆಸ್ಟ್​ ಆಗಿದ್ದು, ಪ್ರಮುಖ ಪೆಡ್ಲರ್​ ಆಗಿದ್ದ ಅಪ್ಪ ಪರಾರಿಯಾಗಿದ್ದಾನೆ. ಮಗನ ಬಂಧನ ಆಗ್ತಿದ್ದ ಹಾಗೆ ಮೊಬೈಲ್​​ ಸ್ವಿಚ್​ ಆಫ್​ ಮಾಡಿಕೊಂಡು ಎಸ್ಕೇಪ್​ ಆಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗಾಂಜಾ ಮಾರುಕಟ್ಟೆಯ ಕಾಯಂ ವ್ಯಾಪಾರಿ ಈತ..!!

ಪ್ರಮುಖವಾಗಿ ಗಾಂಜಾ ಮಾರಾಟ ಮಾಡುವುದು ಕಾಲೇಜು ವಿದ್ಯಾರ್ಥಿಗಳಿಗೆ. ಕಾಲೇಜುಗಳಲ್ಲಿ ಶೋಕಿಗಾಗಿ‌ ಯುವಕ ಯುವತಿಯರು ಗಾಂಜಾ ಸೇದುವ ಅಭ್ಯಾಸ ಮಾಡಿಕೊಂಡು ತದನಂತರ ಚಟಕ್ಕೆ‌ ಬೀಳುತ್ತಾರೆ. ಇನ್ನೂ ಸದಾ ಕಂಪ್ಯೂಟರ್ ಸಂಗಾತಿ ಜೊತೆಗೆ ಕಾಲ ಕಳೆಯುವ ಸಾಫ್ಟ್‌ವೇರ್ ಎಂಜಿನಿಯರ್​ಗಳು ಕೂಡ ಗಾಂಜಾ ಹಾಗೂ ಡ್ರಗ್ಸ್ ದಾಸರಾಗುವುದು ಸಾಮಾನ್ಯ. ಇದನ್ನೇ ಬಂಡವಾಳ​ ಮಾಡಿಕೊಂಡು ಗಾಂಜಾ ವ್ಯವಹಾರ ಮಾಡುತಿದ್ದರು ಎನ್ನುವುದು ಬಂಧಿತ ಸಾಧಿಕ್ ಪೊಲೀಸರಿಗೆ ನೀಡಿರುವ ಮಾಹಿತಿ. ಇನ್ನೂ ಸಾಧಿಕ್​ ತಂದೆ ಅವೇಝ್ ಎಂಬಾತನೇ ಮಗನನ್ನು ಡ್ರಗ್ಸ್ ಜಾಲಕ್ಕೆ ಕರೆತಂದಿದ್ದ ಎನ್ನುವ ಮಾಹಿತಿಯೂ ಪೊಲೀಸರ ತನಿಖೆಯ ಅಚ್ಚರಿ ಅಂಶವಾಗಿದೆ. ಒಡಿಶಾದಲ್ಲಿ ಗಾಂಜಾ ಖರೀದಿ ಮಾಡಿ ಆ ಬಳಿಕ ರೈಲಿನಲ್ಲಿ ಬೆಂಗಳೂರಿಗೆ ರವಾನೆ ಮಾಡುತ್ತಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ.

ಬೆಂಗಳೂರಿನ ಪಿಜಿ ವಾಸಿಗಳೇ ಈತನ ಟಾರ್ಗೆಟ್​..!

ಕಾಲೇಜು ಯುವಕ, ಯುವತಿಯರು, ಎಂಜಿನಿಯರ್ಸ್ ಜೊತೆಗೆ ಸಾಧಿಕ್ ಟಾರ್ಗೆಟ್ ಲಿಸ್ಟ್‌ನಲ್ಲಿ ಇದ್ದಿದ್ದು ಬೆಂಗಳೂರಿನಲ್ಲಿ ಒಬ್ಬಂಟಿಗಳ ವಾಸಸ್ಥಾನ ಆಗಿರುವ ಪೇಯಿಂಗ್ ಗೆಸ್ಟ್ ಹೌಸ್‌ಗಳು ( Paying guesthouse ) . ಕುಟುಂಬದಿಂದ ದೂರ ಉಳಿದೋ ಅಥವಾ ಕುಟುಂಬದಲ್ಲಿ ಸಹಮತ ಇಲ್ಲದ ಕಾರಣಕ್ಕೋ ಅಥವಾ ಬೇರೊಂದು‌ ಮನೆ ಮಾಡಿಕೊಂಡು ವಾಸ ಮಾಡುವುದು ಸಾಧ್ಯವಿಲ್ಲ ಎನ್ನುವ ಕಾರಣಕ್ಕೋ PG ಗಳಲ್ಲಿ ವಾಸ ಮಾಡ್ತಾರೆ. ಆದರೆ ಸಾಕಷ್ಟು ಸಮಸ್ಯೆಗಳ ಸುಳಿಗೆ ಸಿಲುಕಿದ ಬಳಿಕ ದುಷ್ಚಟಗಳ ದಾಸರಾಗುತ್ತಾರೆ. ಇಂತಹ ಜನರನ್ನೇ ಗಾಂಜಾ ಗಮ್ಮತ್ತಿನ ಗುಂಗಿನಲ್ಲಿ ತೇಲಿಸುತ್ತಿದ್ದರು ಎನ್ನಲಾಗಿದೆ.

ತಮಿಳುನಾಡಿನ ಆವೇಜ್ ರಾಜಾರೋಷವಾಗಿ ಡ್ರಗ್ಸ್ ವ್ಯಾಪಾರ..!

ಮೂಲತಃ ತಮಿಳುನಾಡಿನ ಅವೇಝ್ ಬೆಂಗಳೂರಿನಲ್ಲಿ ನಟೋರಿಯಸ್ ಡ್ರಗ್ ಪೆಡ್ಲರ್ ಆಗಿ ಬೆಳೆದಿದ್ದಾನೆ. ಸಾವಿರಾರು ಕೆಜಿ‌ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದಾನೆ ಎನ್ನಲಾಗಿದೆ. ಆರೋಪಿ‌ ಆವೇಜ್ ಒಡಿಶಾದಿಂದ ರೈಲು ಮೂಲಕ ತರಿಸಿ ಬೆಂಗಳೂರಲ್ಲಿ ಮಾರಾಟ ಮಾಡ್ತಿದ್ದ. ಸರ್ಜಾಪುರ , ಕೋರಮಂಗಲ , ಹೆಚ್​ಎಸ್​ಆರ್ ಲೇಔಟ್​ ಸೇರಿದಂತೆ ನಗರದ ಹಲವು ಪಿಜಿಗಳು, ಹಾಸ್ಟೆಲ್, ಕಾಲೇಜು, ಐಟಿ-ಬಿಟಿಗಳನ್ನು ಟಾರ್ಗೆಟ್ ಮಾಡಿ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಪ್ರಮುಖ ಆರೋಪಿ‌ ಆವೇಝ್ ಸಿಕ್ಕಿಬಿದ್ದರೆ ಮತ್ತಷ್ಟು ಗಾಂಜಾ ಮಾಲು ಸಿಗುವ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಷಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಲೇಜಿಗೆ ಹೋಗುವ ಮಕ್ಕಳಿದ್ದರೆ ಬೀ‌ ಕೇರ್ ಫುಲ್..!

ಕಾಲೇಜುಗಳು ಮಾತ್ರವಲ್ಲದೆ ಶಾಲಾ ಕೇಂದ್ರಗಳಲ್ಲೂ ಡ್ರಗ್ಸ್ ವ್ಯಾಪಾರ ಭರ್ಜರಿ ಆಗಿ ಸಾಗಿದೆ. ಪುಟಾಣಿ ಮಕ್ಕಳಿಗೆ ಚಾಕೊಲೇಟ್ ಮೂಲಕ ಡ್ರಗ್ಸ್ ಕೊಟ್ಟು ಡ್ರಗ್ಸ್ ದಾಸರಾಗುವಂತೆ ಮಾಡಲಾಗ್ತಿದೆ. ಮುಂದಿನ ದಿನಗಳಲ್ಲಿ ಡ್ರಗ್ಸ್, ಗಾಂಜಾ ವೇಗ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಿದೆ ಪೊಲೀಸ್ ಇಲಾಖೆ ಮೂಲಗಳು. ಡ್ರಗ್ಸ್ ಮಾಫಿಯಾ ತಡೆಗೆ ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ನಿಯಂತ್ರಣಕ್ಕೆ ಸಿಗದಂತೆ ಹೋಗುತ್ತಿದೆ. ಪೋಷಕರು ಎಚ್ಚೆತ್ತುಕೊಳ್ಳದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.

Related Posts

Don't Miss it !