ಮಡಿಕೇರಿಯ ಕತ್ತಲೆ ಕೋಣೆಯಿಂದ ಹೊರಕ್ಕೆ ಬಂದಳು 27 ವರ್ಷದ ಪದವಿ ವಿದ್ಯಾರ್ಥಿನಿ..!

ಮಡಿಕೇರಿಯ ಗಾಳಿಬೀಡು ಗ್ರಾಮದಲ್ಲಿ 27 ವರ್ಷದ ಹುಡುಗಿಯನ್ನು ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗಾಳಿಬೀಡು ನಿವಾಸದ ಮೇಲೆ ದಾಳಿ ಮಾಡಿ ಯುವತಿಯನ್ನು ಬಂಧನದಿಂದ ಮುಕ್ತ ಮಾಡಿದ್ದಾರೆ. ಇದೀಗ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೇಳು ವರ್ಷದಿಂದ ಕತ್ತಲ ಕೋಣೆಯಲ್ಲಿದ್ದ ಯುವತಿಗೆ ಮಾತುಗಳೇ ಮರೆತು ಹೋಗಿವೆ. ಅದೇನೋ ಹೇಳಬೇಕು ಎಂದು ಹಂಬಲಿಸುವ ಆ ಯುವತಿ ಆರೇಳು ವರ್ಷಗಳ ಬಳಿಕ ಸೂರ್ಯನ ಬಿಸಿಲು ಕಂಡಿದ್ದಾಳೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದು, ಇನ್ಮುಂದೆ ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ.

ಇದನ್ನೂ ಓದಿ: Shapoorji Pallonji : ಬಾಂಬೆ ಮೂಲದ ಬಿಲ್ಡರ್​​ ಕೈಗೆ ಸಿಕ್ಕ ಕನ್ನಡಿಗರ ಆರ್ತನಾದ..!

ಸರ್ಕಾರಿ ಅಧಿಕಾರಿ ಪುತ್ರಿ, ಕತ್ತಲೆ ಕೋಣೆ ಸೇರಿದ್ದು ಯಾಕೆ..?

ಮಡಿಕೇರಿಯ ಕೂಗಳತೆ ದೂರದಲ್ಲಿ ಇರುವ ಗಾಳಿಬೀಡು ಗ್ರಾಮದ ಧನಂಜಯ್​ ಎಂಬುವರ ಮಗಳು. ಈಕೆಯ ತಂದೆ ಕಂದಾಯ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಓದಿನಲ್ಲಿ ಸಾಕಷ್ಟು ಮುಂದಿದ್ದ ಈಕೆ, ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಆಗಿದ್ದಳು. ಓದಿನಲ್ಲಿ ಮುಂದಿದ್ದ ಈಕೆಯನ್ನು ಈ ಸ್ಥಿತಿಗೆ ತಂದಿದ್ದು, ಆಕೆಯ ತಾಯಿಯ ಸಾವು ಎನ್ನುವುದು ಮೇಲ್ನೋಟಕ್ಕೆ ಕೇಳಿ ಬರುತ್ತಿರುವ ವಿಚಾರ. ಆದರೆ ಇದು ಸತ್ಯವೇ..? ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಇದಕ್ಕೆ ಕಾರಣ ಈಕೆಯ ಮನೆಯವರು ನಡೆದುಕೊಂಡಿರುವ ರೀತಿ ನೀತಿಗಳು. ಹಾಗೂ ಅಧಿಕಾರಿಗಳಿಗೆ ಕೊಟ್ಟಿರುವ ಸುಳ್ಳು ಮಾಹಿತಿ. ಇನ್ನೂ ಹೀಗೆ ಹಂದಿಗೂಡಿಗೂ ಕಡೆಯಾಗಿದ್ದ ಕೋಣೆಯೊಳಗೆ ಬಂಧಿಯಾಗಿರುವ ವಿಚಾರ ಇಲ್ಲಿನ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೂ ಮಾಹಿತಿ ಇಲ್ಲ ಎನ್ನುವುದು ಅಚ್ಚರಿಯ ವಿಚಾರ.

ಈಕೆಯ ತಾಯಿಯ ಸಾವು ಅದೆಷ್ಟು ಕ್ರೂರವಾಗಿತ್ತು..!

ಅಸಲಿಗೆ ಯುವತಿಯ ತಂದೆಗೆ ಎರಡನೇ ವಿವಾಹ ಆಗಿದೆ. ಎರಡನೇ ಹೆಂಡತಿಯನ್ನು ಅಧಿಕಾರಿ ಪ್ರಭಾವತಿ ವಿಚಾರಣೆ ಮಾಡಿದಾಗ ನಮಗೆ ಇಬ್ಬರು ಮಕ್ಕಳು, ಒಬ್ಬಳು ಇಲ್ಲೇ ಇದ್ದಾಳೆ, ಇನ್ನೊಬ್ಬಳು ಮಡಿಕೇರಿಯಲ್ಲಿ ಕೆಲಸದಲ್ಲಿ ಇದ್ದಾಳೆ ಎಂದು ಸುಳ್ಳು ಹೇಳಿದ್ದರು. ಆದರೆ ಇದೇ ಸಮಯಕ್ಕೆ ಮನೆಯ ಒಳಗಿನಿಂದ ಕಿರುಚಾಟ ಕೇಳಿ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಆಕೆ ನಮ್ಮಕ್ಕ ಎಂದು ಎರಡನೇ ಮಗಳು ಬಾಯ್ಬಿಟ್ಟಿದ್ದಾಳೆ. ಆಗ ಮನೆಯವರು ಸುಳ್ಳು ಹೇಳಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಬಾಗಿಲು ತೆಗೆದು ನೋಡಿದಾಗ ದುಸ್ಥಿತಿ ಬೆಳಕಿಗೆ ಬಂದಿದೆ. ಈಕೆಯ ತಾಯಿ ಸಾವಿನ ಬಳಿಕ ಈ ರೀತಿ ಆಗಿದ್ದಾಳೆ ಎಂದು ಹೇಳುತ್ತಾರೆ. ಆದರೆ ಆಕೆಯ ತಾಯಿಯ ಸಾವು ಅದೆಷ್ಟು ಕ್ರೂರವಾಗಿತ್ತು ಎನ್ನುವುದನ್ನು ಊಹೆ ಮಾಡುವುದು ಕಷ್ಟಕರವಾಗಿದೆ. ಒಂದು ವೇಳೆ ಈಕೆಯ ತಾಯಿಯ ಕ್ರೂರ ಸಾವನ್ನು ಈಕೆ ಕಣ್ಣಾರೆ ಕಂಡು ಈ ಸ್ಥಿತಿಗೆ ತಲುಪಿದಳೋ..? ಅಥವಾ ಈಕೆಯ ತಾಯಿ ಸಾವಿನ ಬಳಿಕ ಎರಡನೇ ಮದುವೆಯಾದ ತಂದೆ, ಬೇಕೆಂದೇ ಈಕೆಯನ್ನು ಮಾನಸಿಕ ರೋಗಿಯನ್ನಾಗಿ ಮಾಡಿದ್ದಾರೋ ಎನ್ನುವುದು ತನಿಖೆ ಆಗಬೇಕಿದೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ದಿಢೀರ್​ ಬೆಳವಣಿಗೆ..!! ಸರ್ಕಾರದ ವಿರುದ್ಧ ಸ್ವಪಕ್ಷೀಯರ ದಾಳಿ..!

ಸಮಾಜದಿಂದ ಮುಚ್ಚಿಟ್ಟ ಉದ್ದೇಶದ ಬಗ್ಗೆ ಆಗಬೇಕಿದೆ ತನಿಖೆ..!!

ತಾಯಿಯನ್ನು ಅತಿಯಾಗಿ ಪ್ರೀತಿಸುವ ಮಕ್ಕಳು ಒಮ್ಮೊಮ್ಮೆ ಹೀಗೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವುದು ಸಹಜ. ಆದರೆ ಮಾನಸಿಕವಾಗಿ ಅಸ್ವಸ್ಥರಾಗುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ಮಾನಸಿಕ ತಜ್ಞರು. ಆದರೆ ಈಕೆ ತನ್ನ ತಾಯಿ ಸಾವಿನ ಬಳಿಕ ಈ ಸ್ಥಿತಿಗೆ ತಲುಪಿದ್ದರೆ, ಈಕೆಯ ಪೋಷಕರು ಮುಚ್ಚಿಡುವ ಪ್ರಮೇಯ ಇರಲಿಲ್ಲ. ಮಾನಸಿಕ ಸ್ಥಿಮಿತ ಕಳೆದುಕೊಂಡವರಿಗೆ ಸರ್ಕಾರದಿಂದ ಕೊಡುವ ಮಾಸಿಕ ವೇತನ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಿತ್ತು. ಆದರೆ ಈಕೆಯನ್ನು ಸಮಾಜದಿಂದಲೇ ದೂರ ಇಡುವ ಕೆಲಸ ಮಾಡಿದ್ದಾರೆ ಎಂದರೆ ಕುಟುಂಬಸ್ಥರಲ್ಲಿ ಯಾವುದೋ ದುರುದ್ದೇಶ ಇದೆ ಎನ್ನುತ್ತಾರೆ ತಜ್ಞರು. ತಂದೆಯನ್ನು ವಿಚಾರಣೆಗಾಗಿ ಅಧಿಕಾರಿಗಳು ಕರೆದಿದ್ದು, ಸೂಕ್ತ ಮಾಹಿತಿ ಪಡೆದ ಬಳಿಕ ಪೊಲೀಸರು ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಒಂದು ವೇಳೆ ಈಕೆಯ ತಾಯಿಯನ್ನು ಕೊಂದು, ಬೇರೆ ಮದುವೆಯಾಗಿ ಈಕೆಯನ್ನು ಮನೆಯೊಳಗೆ ಕೂಡಿ ಹಾಕಿದ್ದರಿಂದ ಈ ಸ್ಥಿತಿಗೆ ತಲುಪಿದ್ದಾಳಾ..? ಗೊತ್ತಿಲ್ಲ. ಮಡಿಕೇರಿ ಪೊಲೀಸರೇ ಈ ಬಗ್ಗೆ ಹೇಳಬೇಕಿದೆ.

ಕಮೆಂಟ್ ಮಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರೇ ನಮ್ಮ ಗುರುಗಳು

Related Posts

Don't Miss it !