ಮಂಡ್ಯದಲ್ಲಿ ಮಲಗಿದ್ದಾಗಲೇ ಹೆಣವಾದ ಐವರು..! ಖಾಕಿಗೆ ಸಿಕ್ಕಿಲ್ಲ ಸಣ್ಣ ಕುರುಹು..!

ರಾಜ್ಯದಲ್ಲಿ ಕೊರೊನಾ ಬಂದು ಸರ್ಕಾರ ಜನರ ಬದುಕಿನ ಮೇಲೆ ಬರೆ ಎಳೆದ ಬಳಿಕ ಕಳ್ಳತನ, ದರೋಡೆ, ಕೊಲೆಯಂತಹ ಘಟನೆಗಳು ಹೆಚ್ಚಾಗುತ್ತಿವೆ. ಮಂಡ್ಯದಲ್ಲೂ ಈ ರೀತಿಯ ಘಟನೆಯೊಂದು ನಡೆದಿದೆ. ರಾತ್ರಿ ಮಲಗಿದ್ದ ಐವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಅದರಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆಆರ್​ಎಸ್​ ಡ್ಯಾಂ ಇರುವ ಕೃಷ್ಣರಾಜಸಾಗರ ಗ್ರಾಮದಲ್ಲೇ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆ ಲಕ್ಷ್ಮೀ. 12 ವರ್ಷದ ರಾಜ್, 7 ವರ್ಷದ ಕೋಮಲ್, 4 ವರ್ಷದ ಕುನಾಲ್, 8 ವರ್ಷದ ಗೋವಿಂದ ಕೊಲೆಯಾದ ದುರ್ದೈವಿಗಳು. ಭೀಕರ ಕೊಲೆ ನಡೆದಿರುವ ಕಾರಣಕ್ಕೆ ಇಡೀ ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿದೆ. ಕೆಆರ್‌ಎಸ್ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೊಲೆ ಮಾಡಿದ್ದು ಯಾರು..? ಯಾವ ಕಾರಣಕ್ಕಾಗಿ ಎನ್ನುವುದೇ ಜನರನ್ನು ಕಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.

ಇದನ್ನೂ ಓದಿ: 5 ಜನರು ಸತ್ತು 5 ತಿಂಗಳಾಯ್ತು..! ಎಲ್ಲರೂ ದೆವ್ವಗಳಾದ್ರಾ..? ಕಳ್ಳನನ್ನು ರಕ್ಷಿಸಿದ ದೇವರ ಮನೆ..!?

ದ್ವೇಷದಿಂದ ನಡೆದಿರುವ ಘಟನೆಯಾ ಎಂಬ ಶಂಕೆ..!

ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಸ್ಥಳಕ್ಕೆ ದಕ್ಷಿಣ ವಲಯದ ಐಜಿ ಪ್ರವೀಣ್ ಮಧುಕರ್ ಪವರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತರ ಸಂಬಂಧಿಕರಿಂದ ಬಗ್ಗೆ ಮಾಹಿತಿಯನ್ನೂ ಸಂಗ್ರಹ ಮಾಡಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಮಂಡ್ಯ ಪೊಲೀಸರು ಕೈಗೊಂಡಿರುವ ತನಿಖಾ ಮಾಹಿತಿಯನ್ನೂ ಸಂಗ್ರಹಿಸಿದ್ದಾರೆ. ಮಂಡ್ಯ ಎಸ್​ಪಿ ಎನ್.ಯತೀಶ್ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ. ಮಕ್ಕಳು ಸೇರಿದಂತೆ ಐವರ ಕೊಲೆ ಮಾಡಿರುವ ಪ್ರಕರಣದ ತನಿಖೆಗೆ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ದಕ್ಷಿಣ ವಲಯ ಐಜಿ ಪ್ರವೀಣ್ ಮಧುಕರ್ ಪವರ್ ಹೇಳಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹರಿತವಾದ ಆಯುಧ ಬಳಿಸಿ ದುಷ್ಕೃತ್ಯ ಮಾಡಿದ್ದಾರೆ. ಸದ್ಯಕ್ಕೆ ಯಾರ ಮೇಲೆಯೂ ಅನುಮಾನವಿಲ್ಲ. ತನಿಖೆ ಪ್ರಾರಂಭ ಮಾಡಿದ್ದೇವೆ ಎಂದಿದ್ದಾರೆ. ಆದರೆ ಮನೆಯಲ್ಲಿ ಇಷ್ಟು ಜನರನ್ನು ಬಿಟ್ಟು ಬೇರೆ ಯಾರು ಇಲ್ಲದಿರುವುದೇ ಅನುಮಾನಕ್ಕೆ ಕಾರಣವಾಗಿದೆ.

ಅಲೆಮಾರಿ ಜನಾಂಗ ದ್ವೇಷಕ್ಕೆ ಬಲಿ ಆಯಿತೆ..?

ಮಂಡ್ಯದ ಕೆಆರ್​ಎಸ್​ನಲ್ಲಿ ಕೊಲೆಯಾಗಿರುವ ಐವರು ಅಲೆಮಾರಿ ಜನಾಂಗಕ್ಕೆ ಸೇರಿದವರು. ಮನೆಯಲ್ಲಿ ಓರ್ವ ಮಹಿಳೆ 4 ಮಕ್ಕಳನ್ನು ನೋಡಿಕೊಂಡು ವಾಸವಿದ್ದರು. ಗಂಡ ಗಂಗಾರಾಮ್ ಹಾಗೂ ಆತ ಅಣ್ಣ ಗಣೇಶ್ ಪ್ಲಾಸ್ಟಿಕ್​ ವ್ಯಾಪಾರಿಗಳು. ಕಳೆದ 2 ದಿನಗಳ ಹಿಂದೆಯೇ ಗಂಗರಾಮ್​​ ಮತ್ತು ಗಣೇಶ್ ಹಾಗೂ ಆತನ ಪತ್ನಿ ಚಂಪಾಡಿ ವ್ಯಾಪಾರದ ಉದ್ದೇಶದಿಂದ ಊರು ಬಿಟ್ಟಿದ್ದರು ಎನ್ನಲಾಗಿದೆ. ಈ ವೇಳೆ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ನಾಲ್ವರು ಮಕ್ಕಳನ್ನು ಸೇರಿ ಓರ್ವ ಮಹಿಳೆಯನ್ನು ಹತ್ಯೆ ಮಾಡಿದ್ದಾರೆ. ಈ ಮಕ್ಕಳದಲ್ಲಿ ಗಂಗಾರಾಮ್​​ ಮತ್ತು ಲಕ್ಷ್ಮೀ ಮಕ್ಕಳು, ಗಣೇಶ್​ ಮತ್ತು ಚಂಪಾಡಿ ಪುತ್ರ ಗೋವಿಂದನೂ ಸೇರಿದ್ದಾನೆ. ಮೊದಲೇ ಊರಿಂದ ಊರಿಗೆ ಅಲೆದಾಡಿಕೊಂಡು ವ್ಯಾಪಾರ ಮಾಡುವ ಜನರು ವ್ಯಾಪಾರದ ಸಮಯದಲ್ಲಿ ಸಣ್ಣ ಪುಟ್ಟ ಗಲಾಟೆ ದ್ವೇಷ ಮಾಡಿಕೊಂಡಿದ್ದರೂ ಮನೆಗೆ ನುಗ್ಗಿ ಕೊಲೆ ಮಾಡುವ ಮಟ್ಟಕ್ಕೆ ತಲುಪಲಾರದು, ಅದೂ ಅಲ್ಲದೆ ಕೊಲೆಯಾದವರು ಯಾರೂ ವ್ಯಾಪಾರಕ್ಕೆ ಹೋಗುತ್ತಿರಲಿಲ್ಲ ಎನ್ನುವುದು ಪೊಲೀಸರ ಊಹೆ.

ಇದನ್ನೂ ಓದಿ; 100 ರೂಪಾಯಿ ಲಂಚ.. ಅರ್ಧ ಹೆಲ್ಮೆಟ್​.. ಇದು ಪೊಲೀಸರಿಗೇ ಎಚ್ಚರಿಕೆ ಗಂಟೆ..!!

ಅನೈತಿಕ ಸಂಬಂಧ ಹಿನ್ನೆಲೆಯೋ..? ಅತ್ಯಾಚಾರ ಯತ್ನವೋ..?

ಮಾರಾಕಾಸ್ತ್ರದಿಂದ ಕೊಚ್ಚಿ ‌ಕೊಲೆ ಮಾಡಿದ್ದಾರೆ ಎನ್ನುವುದು ನಿಜ. ಆದರೆ ದುಷ್ಕರ್ಮಿಗಳು ಮನೆಯ ಒಳಕ್ಕೆ ಬರುವಾಗ ಬಾಗಿಲು ಮುರಿದು ಬಂದಿಲ್ಲ. ನೇರವಾಗಿ ಬಾಗಿಲು ತೆಗಿಸಿಯೇ ಮನೆಯ ಒಳಕ್ಕೆ ಬಂದಿದ್ದಾರೆ. ಅಂದರೆ ಕೊಲೆಗಾರರು ಯಾರೂ ಚಿರಪರಿಚಿತರೇ ಆಗಿರಬೇಕು. ಆಕೆಯ ಜೊತೆಗೆ ಮೊದಲಿನಿಂದಲೂ ಅನೈತಿಕ ಸಂಬಂಧವಿದ್ದು, ಈ ಬಾರಿಯೂ ಸಂಬಂಧ ಬೆಳೆಸಿದ ಬಳಿಕ ಯಾವುದೋ ಮಾತುಕತೆ ನಡೆದು ಕೊಲೆ ನಡೆದಿರಬಹುದು ಅಥವಾ ಅನೈತಿಕ ಸಂಬಂಧದ ವಿಚಾರ ಮಕ್ಕಳಿಗೆ ಗೊತ್ತಾಗಿದ್ದರಿಂದ ನಡೆದಿರುವ ಕೊಲೆ ಆಗಿರಬಹುದು. ಮಕ್ಕಳ ಕೊಲೆಯನ್ನು ವಿರೋಧಿಸಿದ್ದಕ್ಕೆ ಮಹಿಳೆಯನ್ನೂ ಕೊಲೆ ಮಾಡಿ ಮನೆಯಿಂದ ನೇರವಾಗಿ ಬಾಗಿಲು ಬಂದ್​ ಮಾಡಿಕೊಂಡು ಹೋಗಿರಬಹುದು. ಅನೈತಿಕ ಸಂಬಂಧ ಇರಲಿಲ್ಲ ಎನ್ನುವುದಾದರೆ ಯಾವುದೋ ಕಾರಣ ಹೇಳಿಕೊಂಡು ಮನೆಗೆ ಬಂದವರು ಆಕೆ ಮೇಲೆ ವ್ಯಾಮೋಹಗೊಂಡು ಅತ್ಯಾಚಾರಕ್ಕೆ ಯತ್ನಿಸಿರಬಹುದು. ಆ ವೇಳೆ ಗಲಾಟೆ ವೇಳೆ ಕೊಲೆ ಮಾಡಿ ಹೋಗಿರಬಹುದು ಎನ್ನುವ ಅನುಮಾನವೂ ಪೊಲೀಸರನ್ನು ಕಾಡುತ್ತಿದೆ. ಆದರೆ ಕೊಲೆ ನಡೆದಿರುವುದು ಒಂಟಿ ಮನೆಯಲ್ಲಿ ಅಲ್ಲ. ವಠಾರದ ಮನೆಯಲ್ಲಿ ಎನ್ನುವುದು ಗಮನಿಸಬೇಕಾದ ಸಂಗತಿ. ಹೀಗಾಗಿ ಗಂಡನೇ ಕೊಲೆ ಮಾಡಿ ಎಸ್ಕೇಪ್​ ಆಗಿದ್ದಾನಾ..? ಎನ್ನುವ ಪ್ರಶ್ನೆಯೂ ಕಾಡುತ್ತಿದೆ.

Related Posts

Don't Miss it !