ಹೊಸ ಬಾಳಿಗೆ ಕಾಲಿಟ್ಟ 65 ವರ್ಷದ ವೃದ್ಧ ಪ್ರೇಮಿಗಳು..! ಯೌವ್ವನ ಮೀರಿತು 35 ವರ್ಷದ ಪ್ರೇಮ..!

ಮಂಡ್ಯ ಅಂದ್ರೆ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗೋದು ಸಾಮಾನ್ಯ. ಆದರೆ ಇದೀಗ ವಿಭಿನ್ನ ವಿಚಾರದಲ್ಲಿ ಮಂಡ್ಯ ಸುದ್ದಿಯಾಗಿದೆ. 65 ವರ್ಷ ವಯಸ್ಸಿನ ವಯೋವೃದ್ಧರು ಹಸೆಮಣೆ ಏರಿ ನೂತನ ಬಾಳಿಗೆ ಕಾಲಿಟ್ಟಿದ್ದಾರೆ. ಶ್ರೀಕ್ಷೇತ್ರ ಮೇಲುಕೋಟೆಯಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ವಿವಾಹ ಮಹೋತ್ಸವ ನಡೆದಿದೆ. 35 ವರ್ಷಗಳಿಂದ ಕಾಯುತ್ತಿದ್ದ ತನ್ನ ಪ್ರೀತಿ ಸಿಕ್ಕಿದ ಖುಷಿಯಲ್ಲಿ ಆ ವೃದ್ಧರು ಇದ್ದರು ಎನ್ನುವುದೇ ವಿಶೇಷ ಸಂಗತಿ.

65 ವರ್ಷದ ಜನುಮದ ಜೋಡಿಗೆ ಕಂಕಣ ಭಾಗ್ಯ..!!

ಮೂಲತಃ ಹಾಸನ ಜಿಲ್ಲೆಯವರಾದ ಚಿಕ್ಕಣ್ಣ ತನ್ನ ಸೋದರ ಅತ್ತೆಯ ಮಗಳನ್ನು ಪ್ರೀತಿಸುತ್ತಿದ್ದರು. ಜಯಮ್ಮ ಅವರಿಗೂ ಚಿಕ್ಕಣ್ಣ ಮೇಲೆ ಒಲವು ಮೂಡಿತ್ತು. ಆದರೆ ಜಯಮ್ಮ ಕುಟುಂಬಸ್ಥರು ಚಿಕ್ಕಣ್ಣನಿಗೆ ಕೊಟ್ಟು ಮದುವೆ ಮಾಡಲು ನಿರಾಕರಿಸಿದರು. ಬೇರೊಬ್ಬ ಯುವಕನ ಜೊತೆಗೆ ಜಯಮ್ಮಳ ಮದುವೆ ಮಾಡಿದ್ದರು. ಆದರೆ ಜಯಮ್ಮಳ ಸಂಸಾರ ಸುಖಸಾಗರ ಆಗಲೇ ಇಲ್ಲ. ನಾಲ್ಕೈದು ವರ್ಷಗಳ ಹಿಂದೆ ಗಂಡನಿಂದ ಬೇರ್ಪಟ್ಟು ಒಬ್ಬನೇ ಮಗನನ್ನು ಸಾಕುತ್ತಿದ್ದ ಜಯಮ್ಮಳನ್ನು ಚಿಕ್ಕಣ್ಣ ಮದುವೆಯಾಗುವ ಮೂಲಕ ತಾನು ಪ್ರೀತಿಸಿದ್ದ ಯುವತಿಯನ್ನು ಮುದುಕಿಯಾದ ಮೇಲೂ ಕೈ ಹಿಡಿದು ಪ್ರೀತಿ ಸಾಬೀತು ಮಾಡಿದ್ದಾರೆ.

ಶ್ರೀ ಕ್ಷೇತ್ರ ಮೇಲುಕೋಟೆಯ ಮಡಿಲಲ್ಲಿ ಸಪ್ತಪದಿ..!

ಸಾಕ್ಣತ್ ವಿಷ್ಞುವೇ ಚಲುವನಾರಾಯಣನ ಅವತಾರದಲ್ಲಿ ನೆಲೆ ನಿಂತಿರುವ ಮೇಲುಕೋಟೆಯಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯ ನೆರವೇರಿದೆ. ದೇಹಕ್ಕೆ 65 ವರ್ಷ ವಯಸ್ಸಾದರೂ 35 ವರ್ಷದ ಪ್ರೀತಿಗೆ ಮೋಹ ಕಡಿಮೆಯಾಗಿಲ್ಲ ಎನ್ನುವುದನ್ನು ಚಿಕ್ಕಣ್ಣ ಜಗತ್ತಿಗೆ ಸಾರಿ ಹೇಳಿದ್ದಾರೆ. ಇನ್ನೂ ಜಯಮ್ಮ ಬೇರೆಯವರನ್ನು ಮದುವೆಯಾದರೂ ಚಿಕ್ಕಣ್ಣ ಮಾತ್ರ ತನ್ನ ಪ್ರೇಮವನ್ನು ಬೇರೊಬ್ಬರ ಜೊತೆ ಹಂಚಿಕೊಳ್ಳದೆ ಏಕಾಂಗಿಯಾಗಿಯೇ ಉಳಿದಿದ್ದರು. ಇದೀಗ 25 ವರ್ಷದ ಮಗನ ಜೊತೆಗೆ ಜೀವನ ಮಾಡುತ್ತಿದ್ದ ಜಯಮ್ಮನ ವಿಚಾರ ತಿಳಿದು ಮದುವೆ ಪ್ರಸ್ತಾಪ ಮುಂದಿಟ್ಟಿದ್ದರು. ಒತ್ತಾಯಪೂರ್ವಕವಾಗಿ ಮದುವೆಯಾಗಿದ್ದ ಗಂಡ ಅರ್ಧ ಜೀವನದಲ್ಲಿ ಬಿಟ್ಟು ಹೋದ ಬಳಿಕ ಪ್ರೀತಿಯೇ ನನ್ನುಸಿರು ಎಂದು ಬದುಕುತ್ತಿದ್ದ ಚಿಕ್ಕಣ್ಣನ ಜೊತೆ ಸಪ್ತಪದಿ ತುಳಿಯುವ ಮನಸ್ಸು ಮಾಡಿದ್ದಾರೆ.

ಮಗನ ಭವಿಷ್ಯದ ಬಗ್ಗೆ ಜಯಮ್ಮಗೆ ಚಿಂತೆ..!

ಮೈಸೂರಿನ ಹೆಬ್ಬಾಳದ ಚಿಕ್ಕಣ್ಣ ಹಾಗೂ ಜಯಮ್ಮ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಅಪರೂಪದ ಜೋಡಿಗಳಲ್ಲಿ ಅಪರೂಪ ಆಗಿರುವ ಈ ಜೋಡಿ ಹಕ್ಕಿಗೆ ತಮ್ಮ ಮಗನ ಭವಿಷ್ಯದ ಚಿಂತೆ ಎದುರಾಗಿದೆ. ಜಯಮ್ಮನಿಗೆ 25 ವರ್ಷದ ಮಗನಿದ್ದು, ಕೆಎಸ್‌ಆರ್‌ಟಿಸಿಯಲ್ಲಿ ಮ್ಯಾಕಾನಿಕ್ ಆಗಿದ್ದಾರೆ ಎನ್ನಲಾಗಿದೆ. ಆದರೆ ಜಯಮ್ಮ ಹಾಗೂ ಚಿಕ್ಕಣ್ಣ 35 ವರ್ಷದ ಪ್ರೀತಿಯ ಕೂಗಿಗೆ ಓಗುಟ್ಟಿದ್ದಾರೆ. ಆದರೆ ನಮ್ಮಿಬ್ಬರ ಪ್ರೇಮ ವಿಚಾರ ಮಗನ ಬಾಳಿಗೆ ಮಸುಕು ಆಗದಿರಲಿ ಎನ್ನುವ ಆಶಯ ಅವರಿಬ್ಬರದ್ದು. ಈ ಮೂಲಕ ಪ್ರೀತಿಗೆ ಸಾವಿಲ್ಲ, ಪ್ರೀತಿಸುವ ಮನಸ್ಸು ಗಟ್ಟಿಯಾಗಿರಬೇಕು ಎಂಬುದನ್ನು ಸಾಕ್ಷಿಕರಿಸಿದ್ದಾರೆ.

Related Posts

Don't Miss it !