ಅಪ್ಪು ಸಿನಿಮಾ ಶೈಲಿಯಲ್ಲಿ ಮನೆಗೆ ಬಂದ ಹುಡುಗ.. ಕಳ್ಳನೆಂದು ಭಾವಿಸಿ ಕೊಂದೇ ಬಿಟ್ಟ ಮಾವ..!!

ದಿವಂಗರ ನಟ ಪುನೀತ್​ ರಾಜ್​ ಕುಮಾರ್​ ನಾಯಕ ನಟನಾಗಿ ಮಾಡಿದ ಚಿತ್ರ ಅಪ್ಪು. ಇಂದಿಗೂ ಎಂದೆಂದಿಗೂ ಭರಪೂರ ಮನರಂಜನೆ ನೀಡುವ ಅಪ್ಪು ಚಿತ್ರದಲ್ಲಿ ನಟ ಪುನೀತ್​ ರಾಜ್​ಕುಮಾರ್​, ತಾನು ಪ್ರೀತಿಸಿದ ಹುಡುಗಿ ಮನೆಗೆ ರಾತ್ರೋರಾತ್ರಿ ಎಂಟ್ರಿ ಕೊಟ್ಟಿದ್ದರು. ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಕೇಕ್​ ತಿನ್ನಿಸಿ ಬಂದಿದ್ದರು. ಮಧ್ಯರಾತ್ರಿ ಮಗಳು ಕೂಗಿದಾಗ ಒಮ್ಮೆ ಅಡಗಿ ಕುಳಿತು ಕಮಿಷನರ್​ ಆಗಿದ್ದ ಹುಡುಗಿಯ ತಂದೆಯ ವಕ್ರದೃಷ್ಟಿಯಿಂದ ಪಾರಾಗಿದ್ದರು. ಇದೆಲ್ಲಾ ಸಿನಿಮಾ ಮೂರು ಗಂಟೆಗಳ ಕಾಲ ನೋಡಿ, ಮನಸಾರೆ ನಕ್ಕು ಮನರಂಜನೆ ಪಡೆಯುವುದಕ್ಕೆ ಸೂಕ್ತ. ಅದರಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಅವಗುಣಗಳನ್ನು ಬದಿಗೆ ಸರಿಸಿ ಮುಂದೆ ಸಾಗಬೇಕು. ಆದರೆ ಅಪ್ಪು ಸಿನಿಮಾ ಶೈಲಿಯಲ್ಲೇ ಹುಡುಗಿ ಮನೆಗೆ ಎಂಟ್ರಿ ಕೊಟ್ಟಿದ್ದ ಹುಡುಗನೊಬ್ಬ ಹೆಣವಾಗಿದ್ದಾನೆ.

ಮಗಳ ರೂಮಿನಲ್ಲಿದ್ದ ಆಕೆಯ ಗೆಳಯನ ಕೊಲೆ..!

ಕೇರಳದ ತಿರುವನಂತಪುರಂನ ಚಾಲಕುಡಿಯಲ್ಲಿ ಬುಧವಾರ ಮುಂಜಾವು ಸುಮಾರು 3:30ರ ಸಮಯದಲ್ಲಿ ಈ ಕೊಲೆ ನಡೆದಿದೆ. ಅಚಾನಕ್​ ಆಗಿ ಎಚ್ಚರವಾಗಿರುವ ಯುವತಿಯ ತಂದೆ ಲಾಲನ್​ ಮಗಳ ರೂಮಿನಿಂದ ಶಬ್ದ ಬರುವುದನ್ನು ಕೇಳಿಸಿಕೊಂಡಿದ್ದಾರೆ. ಮಗಳ ರೂಮಿನ ಬಾಗಿಲನ್ನು ತಟ್ಟಿದ್ದಾರೆ. ಆದರೆ ಬಾಗಿಲು ತೆಗೆಯದಿದ್ದಾಗ ಬಾಗಿಲನ್ನು ಮುರಿದು ಮಗಳ ಕೋಣೆಗೆ ಪ್ರವೇಶ ಮಾಡಿದ್ದಾರೆ. ಆ ವೇಳೆ ಮಗಳ ರೂಮಿನಲ್ಲೇ ಇದ್ದ 19 ವರ್ಷದ ಅನೀಶ್​ ಜಾರ್ಜ್​ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಆ ಬಳಿಕ ನೇರವಾಗಿ ಪಟ್ಟಾ ಪೊಲೀಸ್​ ಠಾಣೆಗೆ ಬಂದು ಹೀಗೆ ಒಬ್ಬನ್ನನ್ನು ಕೊಲೆ ಮಾಡಿದ್ದೇನೆ ಎಂದು ಶರಣಾಗಿದ್ದಾರೆ. ಪೊಲೀಸರು ಮನೆಗೆ ತೆರಳಿ ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಅನೀಶ್​ ಜಾರ್ಜ್​ ಜೀವ ಉಳಿಯಲಿಲ್ಲ. ಅನೀಶ್​ ಜಾರ್ಜ್​ ಕೂಡ ಪೆಟ್ಟಾ ನಿವಾಸಿ ಎಂದು ತಿಳಿದು ಬಂದಿದೆ.

Read This

ಕಳ್ಳನೆಂದು ಕೊಂದೆನೆಂದು ಪೊಲೀಸರಿಗೆ ಮಾಹಿತಿ..!

ನಡುರಾತ್ರಿ 3.30ರ ಸಮಯದಲ್ಲಿ ಬಿಕಾಂ ಓದುತ್ತಿದ್ದ ಹುಡುಗನನ್ನು ಹತ್ಯೆ ಮಾಡಿದ್ದು, ನಾನು ಕಳ್ಳನೆಂದು ಭಾವಿಸಿ ಕೊಂದು ಬಿಟ್ಟೆ ಎಂದು ಪೊಲೀಸರ ಎದುರು ಹೇಳಿದ್ದಾರೆ. ಆದರೆ ಕೊಲೆ ಮಾಡಲು ಮುಂದಾಗ, ಲಾಲನ್​ ಮಗಳು ‘ಈತ ನನ್ನ ಸ್ನೇಹಿತ’ ಎಂದು ಹೇಳಲಿಲ್ಲವೇ..? ಅಥವಾ ಸ್ವತಃ ಯುವತಿ ರೂಮಿಗೆ ಬಂದಿದ್ದ ಯುವಕ ಅನೀಶ್​ ಜಾರ್ಜ್​, ‘ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ’ ಎಂದು ಹೇಳಲಿಲ್ಲವೇ..? ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಲಗಖ ಮಾಹಿತಿ ಪ್ರಕಾರ ಕೊಲೆ ಪ್ರಕರಣದಿಂದ ಪಾರಾಗಲು ಇರುವ ಏಕೈಕ ಮಾರ್ಗವೆಂದರೆ ಕಳ್ಳನೆಂದು ಕೊಂದು ಬಿಟ್ಟೆ ಎಂದು ಕೋರ್ಟ್​ನಲ್ಲಿ ಸಾಬೀತು ಮಾಡುವುದು. ಒಂದು ವೇಳೆ ಕಳ್ಳನೆಂದು ಭಾವಿಸಿ ಕೊಂದೆ ಎನ್ನುವುದನ್ನು ಕೋರ್ಟ್​ನಲ್ಲಿ ಮನವರಿಕೆ ಮಾಡಿಕೊಟ್ಟರೆ, ಸ್ವಯಂ ರಕ್ಷಣೆಗಾಗಿ ಸಂವಿಧಾನದಲ್ಲಿ ಕೊಟ್ಟಿರುವ ರಕ್ಷಣೆ ಸಿಗಲಿದೆ ಎನ್ನುತ್ತಾರೆ ಕಾನೂನು ತಜ್ಞರು. ಲಾಲನ್​ ಅದೇ ಸೂತ್ರವನ್ನು ಇಲ್ಲಿ ಬಳಸುತ್ತಿದ್ದಾರೋ..? ಅಥವಾ ಕೊಲೆ ನಡೆದಾಗ ಏನೇನು ನಡೀತು ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ ಪೊಲೀಸರು.

ಬೆಳಗ್ಗಿನ ಜಾವ ನಡೆದ ಕೊಲೆ ಬಗ್ಗೆ ಗೊತ್ತೇ ಇಲ್ಲ..!

ಅಪ್ಪನೇ ಮಗಳ ಪ್ರೇಮಿಯನ್ನು ಕೊಲೆ ಮಾಡಿರುವ ವಿಚಾರ ಅಕ್ಕಪಕ್ಕದ ಮನೆಯ ಜನರಿಗೆ ಗೊತ್ತೇ ಆಗಿಲ್ಲ. ಸ್ವತಃ ಪೊಲೀಸರು ಬಂದು ಅನೀಶ್​ ಜಾರ್ಜ್​ ದೇಹವನ್ನು ಆಸ್ಪತ್ರೆಗೆ ಕೊಂಡೊಯ್ದ ಬಳಿಕ ಸ್ಥಳೀಯ ನಿವಾಸಿಗಳಿಗೆ ವಿಚಾರ ಗೊತ್ತಾಗಿದೆ. ಇನ್ನೂ ಇದೇ ಮನೆಯಲ್ಲಿ ಸೈಮನ್​ ಲಾಲನ್​ ಪತ್ನಿ ಹಾಗೂ ಇಬ್ಬರು ಮಕ್ಕಳು ವಾಸವಿದ್ದರು. ಕೊಲೆ ನಡೆದ ಬಳಿಕ ಮನೆಯನ್ನು ಸೀಜ್​ ಮಾಡಲಾಗಿದ್ದು, ಸೈಮನ್ ಲಾಲನ್​ ಕುಟುಂಬಸ್ಥರನ್ನು ಸ್ಥಳಾಂತರ ಮಾಡಲಾಗಿದೆ. ಲಾಲನ್​ ಸದ್ಯಕ್ಕೆ ಕಳ್ಳ ಎಂದು ಭಾವಿಸಿ ಕೊಂದುಬಿಟ್ಟೆ ಎಂದು ಪೊಲೀಸರ ಎದುರು ಹೇಳಿದ್ದಾನೆ. ಆದರೆ ಆತನ ಮಗಳಿಗೂ ಕೊಲೆಯಾದ ಅನೀಶ್​ ಜಾರ್ಜ್​ಗೂ ಚರ್ಚ್​ನಲ್ಲಿ ಪರಿಚಯವಾಗಿತ್ತು. ಅನೀಶ್​ ಸೈಮನ್​ ನಿವಾಸಕ್ಕೆ ಬರುವ ವಿಚಾರ ಗೊತ್ತಿತ್ತು. ಕೊಲೆ ಮಾಡುವ ಉದ್ದೇಶದಿಂದಲೇ ಸೈಮನ್​ ಚಾಕುವಿನ ಜೊತೆಯಲ್ಲೇ ಮಗಳ ಕೋಣೆಯನ್ನು ಪ್ರವೇಶ ಮಾಡಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ವಲ್ಪ ಬುದ್ಧಿ ಉಪಯೋಗಿಸಿ ತನಿಖೆ ಮಾಡಿದ್ರೆ ಆರೋಪಿ ಸಿಕ್ಕಿಬೀಳುವುದು ಖಚಿತ ಎನ್ನುತ್ತವೆ ಕಾನೂನು ಮೂಲಗಳು. ಆದರೂ ಪ್ರೇಮಿಯನ್ನು ನೋಡಲು ಹೋಗಿ ಹೆಣವಾಗಿದ್ದು, ಅನೀಶ್​ ಜಾರ್ಜ್​ ದುರಾದೃಷ್ಟವೇ ಸರಿ.

Related Posts

Don't Miss it !