ಕಾಫಿ ವಾಲಾನನ್ನು ಕಳ್ಳನನ್ನಾಗಿ ಮಾಡಿದ್ದೇ ಖಾಕಿಪಡೆ..!! ಬ್ಯಾಟರಿ ಕಳವು ಸೀಕ್ರೆಟ್​​…

ಬೆಂಗಳೂರಿನಲ್ಲಿ ರಾತ್ರಿ 11 ಗಂಟೆ ಮೇಲೆ ಅಲ್ಲಲ್ಲಿ ಟೀ, ಕಾಫಿ ಮಾರಾಟ ಮಾಡುವ ಜನರು ಸಿಗುತ್ತಾರೆ. ಕತ್ತಲ ರಾತ್ರಿಯಲ್ಲಿ ಸಂಚರಿಸುವ ಬಹುತೇಕ ಜನರು ತಮ್ಮ ನಿದ್ರೆಯನ್ನು ಹೋಗಲಾಡಿಸಲು ಅವರನ್ನೇ ಅವಲಂಭಿಸಿರುತ್ತಾರೆ. ಬೆಂಗಳೂರು ಎಂಬ ಮಾಯಾ ನಗರಿಯನ್ನು ನಂಬಿ ಬಂದವರು ಹೇಗಾದರೂ ಮಾಡಿ ಜೀವನ ಮಾಡಬೇಕು ಎನ್ನುವ ಕಾರಣಕ್ಕೆ ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ಜನರಿಗೆ ಇವರು ಸಹಾಯಕರು. ಇನ್ನೂ ಇವರೂ ಕೂಡ ಟೀ, ಕಾಫಿ ಪ್ಲಾಸ್ಕ್​​ ಹಿಡಿದು ಓಡಾಡುತ್ತಾರೆ. ಒಂದೆರಡು ರೂಪಾಯಿ ಹೆಚ್ಚು ಹಣ ತೆಗೆದುಕೊಂಡಡೂ ಬಿಸಿ ಬಿಸಿ ಕಾಫಿ, ಟೀ ಕೊಟ್ಟು ಜೊತೆಗೆ ಬನ್​ ಕೂಡ ಕೊಟ್ಟು ರಾತ್ರಿ ಹಸಿವನ್ನು ನೀಗಿಸ್ತಾರೆ. ಇಂತಹ ಜನರ ಬಳಿಯೂ ಪೊಲೀಸರು ಮಾಮೂಲಿ ವಸೂಲಿ ಮಾಡುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇದೇ ರೀತಿ ಪೊಲೀಸರ ಹಣದಾಹಕ್ಕೆ ಬಲಿಯಾದ ಕಾಫಿ ವಾಲಾ ಕಳ್ಳನಾಗಿದ್ದಾನೆ.

ಟ್ರಾಫಿಕ್​ ಸಿಗ್ನಲ್​ ದಂಪತಿ ಬ್ಯಾಟರಿ ಕಳವು..!

ಬೆಂಗಳೂರಿನ ಟ್ರಾಫಿಕ್ ಸಿಗ್ನಲ್​​ ಹಾಗೂ ಸಿಸಿಟಿವಿಗಳಿಗಾಗಿ ಅಳವಡಿಸಿದ್ದ ಬ್ಯಾಟರಿಗಳನ್ನೇ ಕಳವು ಮಾಡುವ ಕಾಯ ಮಾಡಿಕೊಂಡಿದ್ದರು ಈ ದಂಪತಿ. ಸಿಕಂದರ್ ಮತ್ತು ಆತನ ಪತ್ನಿ ನಜ್ಮಾ ಇಬ್ಬರೂ ಜೊತೆಯಾಗಿ ಸಿಗ್ನಲ್​ ಬಳಿ ಹಾಕಿದ್ದ ಬ್ಯಾಟರಿಗಳನ್ನು ಕಳವು ಮಾಡಿ ಸಾಕಷ್ಟು ಹಣ ಸಂಪಾದನೆ ಮಾಡಿದ್ದರು. ಸಿಗ್ನಲ್​ ದೀಪಗಳು ಬ್ಯಾಟರಿ ಇಲ್ಲದೆ ಆಫ್​ ಆಗುವುದು, ಸಿಸಿಟಿವಿಗಳು ತಾಂತ್ರಿಕ ಸಮಸ್ಯೆ ಇಲ್ಲದಿದ್ದರೂ ರೆಕಾರ್ಡ್​ ಆಗದ ಕಾರಣವನ್ನು ಹುಡುಕಿದ ಪೊಲೀಸರು ಬ್ಯಾಟರಿಗಳೇ ಇಲ್ಲ ಎನ್ನುವುದನ್ನು ಪತ್ತೆ ಹಚ್ಚಿದ್ದರು. ಅಶೋಕ ನಗರ ಪೊಲೀಸರು ತನಿಖೆ ನಡೆಸಿ ಕಳೆದ ಆರೇಳು ತಿಂಗಳಿಂದ ಬ್ಯಾಟರಿ ಕಳವು ಮಾಡುತ್ತಿದ್ದ ದಂಪತಿ ಸಿಕಂದರ್​ ಹಾಗೂ ಆತನ ಪತ್ನಿ ನಜ್ಮಾ ಹಾಗೂ ಬ್ಯಾಟರಿ ಖರೀದಿ ಮಾಡುತ್ತಿದ್ದ ಧನಶೇಖರ್​ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಕಳ್ಳತನದ ಹಿನ್ನೆಲೆ ಕೆದಕಿದಾಗ ಖಾಕಿ ಬಣ್ಣವೇ ಬಯಲಾಗಿದೆ.

ಇದನ್ನೂ ಓದಿ: ಪದವಿ ಪರೀಕ್ಷೆ ಮುಂದೂಡಿಕೆ ಮಾಡಲು ಸರ್ಕಾರದಿಂದಲೇ ಸೂಚನೆ..!!

ಕಾಫಿ ವಾಲಾ ಬಾಯ್ಬಿಟ್ಟ ಸತ್ಯ, ಪೊಲೀಸರೇ ಕಂಗಾಲು..!

ಕನ್ನಡದ ಮೇರುನಟ ಡಾ ರಾಜ್​ಕುಮಾರ್​ ಸಮಾಧಿ ಬಳಿ ಪ್ರತಿ ರಾತ್ರಿ ಟೀ, ಕಾಫಿ ಮಾರುತ್ತಿದ್ದ ಸಿಕಂದರ್​, ತನ್ನ ಪತ್ನಿ ನಜ್ಮಾ ಹಾಗೂ ಮಗಳ ಜೊತೆಗೆ ಉತ್ತಮ ಜೀವನ ನಡೆಸುತ್ತಿದ್ದರು. ದುಡಿದು ತಿನ್ನುವ ಮನಸ್ಸು ಹೊಂದಿದ್ದ ಸಿಕಂದರ್​ನನ್ನು ಕಳ್ಳನನ್ನಾಗಿ ಮಾಡಿದ್ದು, ಪೊಲೀಸರ ಧನಧಾಹಿ ಮನಸ್ಥಿತಿ. ಪ್ರತಿದಿನ ಟೀ ಕಾಫಿ ಮಾರಾಟ ಮಾಡುವುದನ್ನು ಗಮನಿಸಿದ ಸ್ಥಳೀಯ ಪೊಲೀಸರು ಸಿಕಂದರ್​ನಿಂದ ಮಾಮೂಲಿ ವಸೂಲಿ ಮಾಡುವುದಕ್ಕೆ ಶುರು ಮಾಡಿದ್ದರು. ವ್ಯಾಪಾರ ಮಾಡಿದ ದಿನ ಮಾಮೂಲಿ ಕೊಡುತ್ತಿದ್ದ ಸಿಕಂದರ್​ಗೆ ಒಂದು ದಿನ ಆಘಾತ ಕಾದಿತ್ತು. ಮಗಳ ಹುಟ್ಟುಹಬ್ಬಕ್ಕೆ ಬಟ್ಟೆ ಖರೀದಿ ಮಾಡಲು ಹೋಗುತ್ತಿದ್ದಾಗ ಜೇಬಿನಲ್ಲಿದ್ದ 300 ರೂಪಾಯಿ ಹಣವನ್ನೂ ಪೊಲೀಸರು ಕಿತ್ತುಕೊಂಡಿದ್ದರು. ನಿರಾಕರಿಸಿದಾಗ ಸಾರ್ವಜನಿಕವಾಗಿಯೇ ಕಪಾಳಮೋಕ್ಷ ಮಾಡಿದ್ದರಂತೆ. ಆಗ ನಿರ್ಧಾರ ಬದಲಿಸಿದ್ದ ಸಿಕಂದರ್​ ಕಳ್ಳನಾಗಿ ಬದಲಾದ.

ಇದನ್ನೂ ಓದಿ: ಬಿಜೆಪಿ ಸರ್ಕಾರದಲ್ಲಿ ದೇವಸ್ಥಾನದ ಗಂಟೆಗೂ ಅಪಸ್ವರ..!? ಇದರ ಹಿಂದೆ ಗುಮಾನಿ..!?

ಪೊಲೀಸರಿಂದ 20 ಲಕ್ಷ ಮೌಲ್ಯದ 230 ಬ್ಯಾಟರಿ ಜಪ್ತಿ..!

ಡಾ ರಾಜ್​ಕುಮಾರ್​ ಸಮಾಧಿ ಬಳಿ ಟೀ ಕಾಫಿ ಮಾರುತ್ತಿದ್ದ ಸಿಕಂದರ್​ ಬಳಿ ಪೊಲೀಸರೇ ಹಣ ವಸೂಲಿ ಮಾಡುವುದಕ್ಕೆ ಶುರು ಮಾಡಿದ್ದರು. ದಿನಪೂರ್ತಿ ದುಡಿದರೂ ಪೊಲೀಸರಿಗೆ ಅರ್ಧದಷ್ಟು ಆದಾಯ ಕೊಟ್ಟು ಬದುಕುವುದು ಕಷ್ಟ ಎನಿಸಿದ ಮೇಲೆ ಕಳ್ಳತನ ಮಾಡುವುದಕ್ಕೆ ನಿರ್ಧಾರ ಮಾಡಿದ್ದ. ಪೊಲೀಸರಿಂದ ಹಿಂಸೆ ಅನುಭವಿಸಿದ ಮೇಲೆ ಪೊಲೀಸರಿಗೆ ಏನಾದರೂ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ ಸಿಗ್ನಲ್​ಗಳಲ್ಲಿ ಅಳವಡಿಸುವ ಬ್ಯಾಟರಿ ಕಳವು ಮಾಡುವುದಕ್ಕೆ ನಿರ್ಧಾರ ಮಾಡಿದ್ದನು. ತನ್ನ ಹೆಂಡತಿ ನಜ್ಮಾಳ ಸಹಾಯ ಕೂಡ ಪಡೆದುಕೊಂಡಿದ್ದನು. ಮೊದಲಿಗೆ ಇಂಡಿಯನ್ ಎಕ್ಸ್​ಪ್ರೆಸ್ ಬಳಿಯ ಟ್ರಾಫಿಕ್ ಸಿಗ್ನಲ್​ನ ಬ್ಯಾಟರಿ ಕಳವು ಮಾಡಿ ಮಾರಾಟ ಮಾಡಿದಾಗ ಸಾಕಷ್ಟು ಹಣ ಸಿಕ್ಕಿತ್ತು. ಆ ಬಳಿಕ ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದನು. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ವಿಶೇಷ ಎಂದರೆ ಪೊಲೀಸರೇ ಕಾಫಿ ವಾಲಾನನ್ನು ಕಳ್ಳನನ್ನಾಗಿ ಬದಲಾಯಿಸಿದ್ದು..

ಇದನ್ನೂ ಓದಿ: ಮಗಳು ಗರ್ಭಿಣಿ ಆದರೂ ಕರಗದ ಕೋಪ.. ಆಕ್ಸಿಡೆಂಟ್ ಹೆಸರಲ್ಲಿ ಅಳಿಯನ ಮರ್ಡರ್..!!

Related Posts

Don't Miss it !