ಹಾಸನದ ಒಂಟಿ ಮಹಿಳೆ ಕೊಲೆ ಜೊತೆ ಬಯಲಾದ ಪೊಲೀಸ್​ ವ್ಯವಸ್ಥೆ..!

ಹಾಸನ ಜಿಲ್ಲೆಯಲ್ಲಿ ಕೊಲೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಹತ್ಯಾ ಸರಣಿ ಕೊಂಡಿ ಕತ್ತರಿಸಲು ಖಾಕಿ ಸೇನೆಗೆ ಸವಾಲಾಗಿದೆ. ನಿನ್ನೆ ಗುರುವಾರ ಹನುಮಂತಪುರದಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ. 55 ವರ್ಷದ ಗೌರಮ್ಮ ಎಂಬಾಕೆಯನ್ನು ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಹಲವು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ ಗೌರಮ್ಮ, ಮೂರ್ನಾಲ್ಕು ವರ್ಷಗಳ ಹಿಂದೆ ಜಮೀನು ವಾಜ್ಯದಲ್ಲಿ ಸಂಬಂಧಿಗಳ ಹತ್ಯೆಗೆ ಸುಪಾರಿ ಕೊಟ್ಟಿದ್ದ ಆರೋಪಕ್ಕೆ ಗುರಿಯಾಗಿ ಜೈಲುವಾಸ ಅನುಭವಿಸಿದ್ದರು. ಜೈಲಿನಿಂದ ಬಂದ ಬಳಿಕ ಹಳೇ ದ್ವೇಷಕ್ಕೆ ಹತ್ಯೆ ಆಗಿದ್ಯೋ ಅಥವಾ ಬೇರೆ ಕಾರಣ ಇದೆಯೋ ಎನ್ನುವುದನ್ನು ಪೊಲೀಸರು ತನಿಖೆ ಮಾಡಬೇಕಿದೆ.

ಕೊಲೆ ಬಳಿಕ ಆಕ್ಟೀವ್​ ಆಗುತ್ತಾ ಆರಕ್ಷಕ ಪಡೆ..?

ಕೊಲೆ ನಡೆದ ಸ್ಥಳಕ್ಕೆ ಹಾಸನ ಎಸ್​ಪಿ ಆರ್.ಶ್ರೀನಿವಾಸ್‌ಗೌಡ ಹಾಗೂ ASP ಬಿ.ಎನ್.ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸಹ ಭೇಟಿ, ರಕ್ತದ ಹೆಜ್ಜೆ ಗುರುತುಗಳ ಮೂಲಕ ಆರೋಪಿಗಳ ಪತ್ತೆಗೆ ಕಸರತ್ತು ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ ಎನ್ನುವುದು ಸತ್ಯ. ಆದರೆ ಅಪರಾಧ ನಡೆಯುವ ಮುನ್ನ ತಡೆಯಬೇಕಿರುವ ಕರ್ತವ್ಯ ಆರಕ್ಷಕ ಸಿಬ್ಬಂದಿ ಮೇಲಿದೆ. ಅಪರಾಧ ನಡೆದ ಬಳಿಕ ತನಿಖೆ ಮಾಡುವುದು ಪೊಲೀಸ್​ ಇಲಾಖೆಯ ಕೆಲಸ ಅಲ್ಲ. ಅಪರಾಧಕ್ಕೂ ಮುನ್ನವೇ ಖಾಕಿಪಡೆ ಸನ್ನದ್ಧವಾಗಿದೆ ಎಂಬುದನ್ನು ಸಾರ್ವಜನಿಕರಿಗೆ ಗೊತ್ತುಪಡಿಸಬೇಕಿದೆ. ಹೀಗೆ ಮಾಡಬೇಕಿದ್ದ ಪೊಲೀಸರು ವಸೂಲಿ ಕೆಲಸ ಮಾಡುತ್ತ ತನಿಖೆಗಷ್ಟೇ ಸೀಮಿತವಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಆದೇಶ ಪ್ರತಿ

ಪೊಲೀಸ್ ಇಲಾಖೆ ಕರ್ತವ್ಯ ಮರೆತಿದ್ಯಾ..?

ಪೊಲೀಸ್​ ಅಧಿಕಾರಿಗಳು ಹೆದ್ದಾರಿಯಲ್ಲಿ ನಿಂತು ದಂಡ ವಸೂಲಿ ಮಾಡುವ ಬಗ್ಗೆ ರಮೇಶ್​ ಕುಮಾರ್​ ವಾಗ್ದಾಳಿ ಮಾಡಿದ್ದರು. ಮಾಜಿ ಸ್ಪೀಕರ್ ಕೋಪಕ್ಕೆ ಖಾಕಿಪಡೆಯೇ ಸಿಡಿದೆದ್ದಿತ್ತು. ಇದೀಗ ರಮೇಶ್​ ಕುಮಾರ್​ ಹೇಳಿದ್ದು ನಿಜ ಎನ್ನುವ ರೀತಿಯ ಮಾಹಿತಿ ಬಹಿರಂಗ ಆಗಿದೆ. ಹಾಸನದಲ್ಲಿ ಸಾರ್ವಜನಿಕರಿಂದ ದಂಡ ವಸೂಲಿಗೆ ಟಾರ್ಗೆಟ್​ ಕೊಟ್ಟಿರುವ ಆದೇಶ ಪ್ರತಿ ವೈರಲ್​ ಆಗಿದೆ. ಠಾಣಾ ಮಟ್ಟದ ಪೊಲೀಸರಿಗೆ ಮೇಲಾಧಿಕಾರಿಗಳು ಗುರಿ ನಿಗದಿಪಡಿಸಿ ಆದೇಶ ಹೊರಡಿಸಿದ್ದಾರೆ. ರಸ್ತೆಯಲ್ಲಿ ಹೆಚ್ಚು ಮಾರಾಣಾಂತಿಕ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆ ಕಂಡು ಬರುತ್ತಿರುವ ಹಿನ್ನೆಲೆ ಮೇಲಾಧಿಕಾರಿಗಳು ಆದೇಶ ಮಾಡಿದ್ದು, ದಂಡ ವಸೂಲಿಗೆ ಕನಿಷ್ಟ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ದಂಡ ವಸೂಲಿ ಟಾರ್ಗೆಟ್​ ಹೇಗಿದೆ ಗೊತ್ತಾ..?

ಜಿಲ್ಲೆಯ ಎಲ್ಲಾ ಸಿಪಿಐ ವೈಯಕ್ತಿಕವಾಗಿ 300 ಪ್ರಕರಣಗಳನ್ನು ದಾಖಲು ಮಾಡಬೇಕು. ಹಾಸನ ಹಾಗೂ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು 3 ಸಾವಿರ ಕೇಸ್​ ದಾಖಲಿಸಬೇಕು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ವೈಯಕ್ತಿಕವಾಗಿ 500 ಕೇಸ್​ ದಾಖಲಿಸಲೇಬೇಕು. ಇಂಟರ್ ಸೆಪ್ಟರ್ ವಾಹನದ ಅಧಿಕಾರಿಗಳು ವೈಯುಕ್ತಿಕವಾಗಿ 750 ಕೇಸ್​ ಹಾಕಬೇಕು. ಹೈವೆ ಪೆಟ್ರೋಲಿಂಗ್ ವಾಹನದ ಅಧಿಕಾರಿಗಳು ವೈಯುಕ್ತಿಕವಾಗಿ 500 ಐಎಂವಿ ಸ್ಥಳ ದಂಡ ವಿಧಿಸಬೇಕು. ಸಂಜೆ ವೇಳೆ ವಿಶೇಷ ಕಾರ್ಯಾಚರಣೆ ನಡೆಸಿ ಪ್ರತಿ ಪೊಲೀಸ್ ಠಾಣೆಯಲ್ಲೂ ಪ್ರತಿ ದಿನ 10 ಡ್ರಂಕ್ ಅಂಡ್ ಡ್ರೈವ್ ದಾಖಲಿಸಬೇಕು. ಸಂಚಾರಿ ಪೊಲೀಸ್ ಠಾಣೆಯವರು ಕನಿಷ್ಠ 20 ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಖಜಾನೆ ಭರ್ತಿ ಕೆಲಸ ಮಾಡುವ ಖಾಕಿಯದ್ದು..!

ಪೊಲೀಸ್​ ಇಲಾಖೆ ಕಂದಾಯ ವಸೂಲಿ ರೀತಿಯಲ್ಲಿ ಸರ್ಕಾರದ ಖಜಾನೆ ಭರ್ತಿ ಮಾಡುವ ಕೆಲಸ ಮಾಡುತ್ತಿದೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಈ ಹಿಂದೆ ಬ್ರಿಟೀಷ್​ ಆಳ್ವಿಕೆಯಲ್ಲಿ ಸೇನೆಯನ್ನು ಬಳಸಿಕೊಂಡು ನಗನಾಣ್ಯವನ್ನು ದೋಚುತ್ತಿದ್ದರು ಎಂದು ಇತಿಹಾಸದ ಪುಟಗಳು ಸಾರಿ ಹೇಳುತ್ತವೆ. ಆದರೆ ಈಗ ಸ್ವಾತಂತ್ರ್ಯ ಬಂದ ಬಳಿಕವೂ ಪೊಲೀಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ಲೂಟಿ ಮಾಡಲಾಗ್ತಿದೆ. ರಕ್ಷಣೆ ಮಾಡಬೇಕಿದ್ದ ಪೊಲೀಸರು ಭಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರಾ..? ಎನ್ನುವ ಅನುಮಾನ ಕಾಡದೆ ಇರದು. ಈ ಆದೇಶ ಕೇವಲ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಟಾರ್ಗೆಟ್​ ಫಿಕ್ಸ್​ ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೇಲಾಧಿಕಾರಿಗಳನ್ನು ದೂಷಣೆ ಮಾಡಿದರೂ ಪ್ರಯೋಜನವಿಲ್ಲ. ಕೋಟ್ಯಂತರ ರೂಪಾಯಿ ಆಸ್ತಿ ಮಾಡಿಕೊಂಡು ಅಧಿಕಾರದ ದಾಹಕ್ಕೆ ಸಿಲುಕಿರುವ ರಾಜಕಾರಣಿಗಳೇ ಕಾರಣಕರ್ತರು. ವಸೂಲಿಗೆ ನಿಂತಿರುವ ಖಾಕಿ ಪಡೆ ಕೊಲೆಯನ್ನು ತಡೆಯದು ಹೇಗೆ ಸಾಧ್ಯ..? ಅಲ್ಲವೇ..?!

Related Posts

Don't Miss it !