ರಾಜಕೀಯಕ್ಕೆ ಎಂಟ್ರಿ ಬಗ್ಗೆ ಘೋಷಣೆ ಮಾಡಿದ ಅಭಿಷೇಕ್​ ಅಂಬರೀಷ್​..!

ರೆಬೆಲ್​ ಸ್ಟಾರ್​ ಅಂಬರೀಷ್​ ಪುತ್ರ ಅಭಿಷೇಕ್​ ಅಂಬರೀಷ್​ ರಾಜಕೀಯಕ್ಕೆ ಬರುವ ಘೋಷಣೆ ಮಾಡಿದ್ದಾರೆ. ಈ ಮೂಲಕ ತಾಯಿ ಸುಮಲತಾ ಅಂಬರೀಷ್​ ಹಾಗೂ ತಂದ ಅಂಬರೀಶ್​ ರೀತಿ ನಾನು ಕೂಡ ಮಂಡ್ಯದ ಜನರ ಸೇವೆಗೆ ಬರುತ್ತೇನೆ ಎನ್ನುವ ಮುನ್ಸೂಚನೆ ನೀಡಿದ್ದಾರೆ. ನಮ್ಮನ್ನು ಪ್ರೀತಿಸುವ ಜನರು ಬಯಸಿದ್ರೆ ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ ನಟ ಅಭಿಷೇಕ್. ಮಂಡ್ಯದ ಮದ್ದೂರಿನಲ್ಲಿ ಶುಕ್ರವಾರ ಮಾತನಾಡಿದ ನಟ ಅಂಬರೀಶ್ ಪುತ್ರ ಅಭಿಷೇಕ್ ರಾಜಕೀಯ ಎಂಟ್ರಿ ಬಗ್ಗೆ ಘೋಷಣೆ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಏನಾಗಲಿದೆ ಎನ್ನುವುದನ್ನು ಯಾರು ತಿಳಿಯುವುದಕ್ಕೆ ಸಾಧ್ಯವಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ನೋಡಣ ಎನ್ನುವ ಮೂಲಕ ಚುನಾವಣಾ ಅಖಾಡಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ. ಇವತ್ತು ಅಂಬರೀಶ್ ಅಣ್ಣನ ಹೆಸರಲ್ಲಿ ಒಂದು ಒಳ್ಳೆ ಕೆಲಸ ಆಗ್ತಿದೆ. ಹಾಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಅಂತ ಅಲ್ಲಾ ಜಿಲ್ಲೆಯ ಎಲ್ಲಾ ತಾಲುಕುಗಳಿಗೂ ಒಳ್ಳೆಯ ಎಂಎಲ್​ಎ ಸಿಗಬೇಕು ಎನ್ನುವ ಮೂಲಕ ಜೆಡಿಎಸ್​ ಶಾಸಕರನ್ನು ಕೆಣಕುವ ಕೆಲಸ ಮಾಡಿದ್ದಾರೆ. ಎಲ್ಲಾ ತಾಲೂಕಿಗೂ ಒಳ್ಳೆಯ ಶಾಸಕ ಬೇಕು ಎಂದರೆ ಈಗಿರುವ ಶಾಸಕರು ಒಳ್ಳೆಯ ಶಾಸಕರಲ್ಲವೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ.

ಮಗನಿಗಾಗಿ ಕ್ಷೇತ್ರ ಬಿಟ್ಟು ಕೊಡ್ತಾರಾ ಸುಮಲತಾ..?

ಮಂಡ್ಯ ಸಂಸದೆ ಸುಮಲತಾ ರಾಜಕೀಯ ವಿಚಾರದಲ್ಲಿ ತೆಗೆದುಕೊಳ್ತಿರೋ ನಿಲುವುಗಳನ್ನು ಗಮನಿಸಿದಾಗ ಮುಂದಿನ ಬಾರಿಯೂ ಗೆಲ್ಲಲೇಬೇಕು ಎನ್ನುವ ಹಠ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಆದರೆ ಇದೀಗ ಪುತ್ರ ಅಭಿಷೇಕ್​ ಸ್ಪರ್ಧೆ ಮಾಡುವ ಮಾತನ್ನಾಗಿದ್ದಾರೆ. ಸಂಸತ್​ ಸ್ಥಾನಕ್ಕೆ ಅಭಿಷೇಕ್​ ಸ್ಪರ್ಧೆ ಮಾಡುವ ಇಚ್ಛೆ ವ್ಯಕ್ತಪಡಿಸಿದರೆ ಖಂಡಿತವಾಗಿಯೂ ಸುಮಲತಾ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದೆ ಮಗನಿಗಾಗಿ ಕ್ಷೇತ್ರ ಬಿಟ್ಟುಕೊಡಬೇಕಾದ ಅನುವಾರ್ಯತೆ ಸೃಷ್ಟಿಯಾಗಲಿದೆ. ಆದರೆ ಅಭಿಷೇಕ್​ ಹೇಳಿರುವ ಮಾತಿನಲ್ಲಿ ಗಮನಿಸಿದರೆ ಎಲ್ಲಾ ತಾಲೂಕುಗಳಿಗೂ ಒಳ್ಳೆಯ ಶಾಸಕರು ಬೇಕು ಎಂದಿದ್ದಾರೆ. ಈ ಮಾತಿನ ಅರ್ಥದಲ್ಲಿ ಹೇಳುವುದಾದರೆ ಮಂಡ್ಯ ಲೋಕಸಭಾ ಸ್ಥಾನವನ್ನು ತಾಯಿ ಸುಮಲತಾಗೆ ಬಿಟ್ಟು ವಿಧಾನಸಭಾ ಕ್ಷೇತ್ರಕ್ಕೆ ಅಭಿಷೇಕ್​ ಎಂಟ್ರಿಯಾಗುವ ಸಾಧ್ಯತೆ ಇದೆ.

ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಅಭಿಷೇಕ್​..?

ಮಂಡ್ಯ ಜಿಲ್ಲೆಯಲ್ಲಿ ಅಭಿಷೇಕ್​ ಸ್ಪರ್ಧೆ ಮಾಡಬಹುದಾದ ಕ್ಷೇತ್ರಗಳು ಎಂದರೆ 2 ಮಾತ್ರ. ಒಂದು ಶ್ರೀರಂಗಪಟ್ಟಣ ಹಾಗೂ ಮದ್ದೂರು. ಈ ಎರಡೂ ಕ್ಷೇತ್ರಗಳಲ್ಲಿ ಅಭಿಷೇಕ್​ ಸ್ಪರ್ಧೆ ಮಾಡಬಹುದು. ಈ ಹಿಂದೆ ನಟ ಅಂಬರೀಷ್​ ಶ್ರೀರಂಗ ಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಇನ್ನೂ ಮದ್ದೂರು ಕ್ಷೇತ್ರದ JDS ಶಾಸಕ D C ತಮ್ಮಣ್ಣ 80 ಆಸುಪಾಸಿನಲ್ಲಿದ್ದಾರೆ. ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಕಡಿಮೆ ಇದೆ. ಜೊತೆಗೆ ನಟ ಅಂಬರೀಷ್​ ಅವರ ಹುಟ್ಟೂರು ಮದ್ದೂರು ಕ್ಷೇತ್ರವೇ ಆಗಿರುವ ಕಾರಣ ಜನರ ಬೆಂಬಲ ಪಡೆಯುವುದು ಸುಲಭ ಎನ್ನಬಹುದು. ಈ ಎರಡೂ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಅಭಿಷೇಕ್​ ಪೈಪೋಟಿ ನೀಡಬಹುದು. ಅದೂ ಕೂಡ ಯಾವ ಪಕ್ಷವನ್ನು ಸೇರುತ್ತಾರೆ ಎನ್ನುವ ಆಯ್ಕೆಯೂ ಪ್ರಮುಖ ಆಗಲಿದೆ.

Related Posts

Don't Miss it !