ಬಾತ್‌ರೂಮ್ ಪೈಪ್‌ನಲ್ಲಿ ಹಣ ತುಂಬಿಸಿದ ಅಧಿಕಾರಿ ಬಂಧನ..! ಭ್ರಷ್ಟಾಚಾರಿಗಳಿಗೆ ಎಚ್ಚರಿಕೆ ಗಂಟೆ..

ಕಲಬುರಗಿಯೂ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟರ ಮೇಲೆ ಎಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದರು. ಲಂಚದ ಹಣವನ್ನೆ ಸುಪ್ಪತ್ತಿಗೆ ಮಾಡಿಕೊಂಡಿದ್ದ ಎಲ್ಲಾ ಭ್ರಷ್ಟರು ಎಸಿಬಿ ಬಲೆಯಲ್ಲಿ ಸಿಲುಕಿದ್ದರು. ಆದರೆ ಕಲಬುರಗಿಯ ಅಧಿಕಾರಿ ಒಬ್ಬರನ್ನು ದಾಳಿ ನಡೆಸಿದ ದಿನವೇ ಅರೆಸ್ಟ್ ಕೂಡ ಮಾಡಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಅಧಿಕಾರಿ ಎಸಿಬಿ ದಾಳಿಯ ವಾಸನೆ ಬಡಿಯುತ್ತಿದ್ದ ಹಾಗೆ ₹500 ಮುಖಬೆಲೆಯ ಕಂತೆ ಕಂತೆ ಬಂಡಲ್ಗಳನ್ನು ಮನೆಯ ಬಾತ್ರೂಮ್ ಪೈಪ್ ಒಳಕ್ಕೆ ತುಂಬಿದ್ದರು ಎನ್ನುವುದು ಬಯಲಾಗಿತ್ತು. ಬಾತ್ರೂಮ್ ಪೈಪ್ನಿಂದ ಬರೋಬ್ಬರಿ 13.5 ಲಕ್ಷ ನಗದು ಸೇರಿದಂತೆ ಒಟ್ಟು 54 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣ, ಅಪಾರ ಪ್ರಮಾಣ್ ಆಸ್ತಿ ಪಾಸ್ತಿಯನ್ನ ವಶಪಡಿಸಿಕೊಂಡಿದ್ದರು.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಜ್ಯೂನಿಯರ್ ಎಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ ನಡೆಸಲಾಗಿತ್ತು. PWD JE ಶಾಂತಗೌಡ ಬಿರಾದರ್ ಮನೆ, ಕಚೇರಿ, ತೋಟದ ಮನೆ ಮೇಲೂ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಕಲಬುರಗಿಯ ಗುಬ್ಬಿ ಕಾಲೋನಿ ನಿವಾಸಕ್ಕೆ ಎಂಟ್ರಿಕೊಟ್ಟ ಅಧಿಕಾರಿಗಳಿಗೆ ಆರಂಭದಲ್ಲೇ ಶಾಕ್ ಎದುರಾಯ್ತು. ಮನೆ ಬಾಗಿಲು ತೆರೆಯದೆ ಸಾಕಷ್ಟು ಸಮಯ ಎಸಿಬಿ ಅಧಿಕಾರಿಗಳನ್ನೇ ಕಣ್ಣಮುಚ್ಚಾಲೆ ಆಡಿಸಿದ್ರು. ಮನೆ ಒಳಕ್ಕೆ ಎಂಟ್ರಿ ಕೊಡ್ತಿದ್ದ ಹಾಗೆ ಚಿನ್ನಾಭರಣ, ಹಣ ನೋಡಿ ಅಧಿಕಾರಿಗಳೇ ಒಂದು ಕ್ಷಣ ಸ್ತಬ್ಧರಾಗಿದ್ರು. ಮನೆ ಬಾಗಿಲು ತೆರೆಯದೆ ಕಾಯಿಸಿದ್ದು ಯಾಕೆ..? ಎನ್ನುವ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ ಲೋಕೋಪಯೋಗಿ ಜೆಇ ಶಾಂತಗೌಡರ್ ಮೌನಕ್ಕೆ ಶರಣಾದರು. ಜಾಣ್ಮೆಯ ಆಟವಾಡಿದ ಎಸಿಬಿ ಅಧಿಕಾರಿಗಳು ಬಾತ್ರೂಮ್ ಪೈಪ್ ಪರಿಶೀಲಿಸಿ ಕಂತೆ ಕಂತೆ ನೋಟಿನ ಬಂಡಲ್ ಹೊರಕ್ಕೆ ತೆಗೆದಿದ್ದರು.

ಸಾಂಧರ್ಭಿಕ

ಕಲಬುರಗಿ ನಿವಾಸ ಹಾಗೂ ಯಡ್ರಾಮಿಯ ತೋಟದ ಮನೆ ಸೇರಿದಂತೆ ಮೂರು ಕಡೆ 60 ಸಿಬ್ಬಂದಿಗಳ ತಂಡದಿಂದ ಪರಿಶೀಲನೆ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಕಲಬುರಗಿ ಎಸಿಬಿ ಎಸ್ಪಿ ಮಹೇಶ್ ಮೇಘಣನವರ್ ತಿಳಿಸಿದ್ರು. ಮೂರು ಕಡೆ ಮೂವರು ಡಿಎಸ್ಪಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದು, ಅಕ್ರಮ ಆಸ್ತಿಯ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿಸಿದ್ರು. ಆ ಬಳಿಕ ಸಂಜೆ ಕಳೆದು ರಾತ್ರಿಯಾಗ್ತಿದ್ದ ಹಾಗೆ ಗುಬ್ಬಿ ಕಾಲೋನಿಯಲ್ಲಿ ಮೂರಂತಸ್ತಿನ ಭವ್ಯ ಬಂಗಲೆ, ವಿವಿ ರಸ್ತೆಯಲ್ಲಿ ಎರಡು ನಿವೇಶನ, ಯಡ್ರಾಮಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ 40 ಎಕರೆ ಜಮೀನು. ಹಂಗರಗಾ ಗ್ರಾಮದಲ್ಲಿ ಮೂರು ಮನೆಗಳು ಸೇರಿ ಕೋಟಿ ಕೋಟಿ ಆಸ್ತಿ ಪತ್ತೆಯಾಗಿತ್ತು. ಬೆಂಗಳೂರಿನಲ್ಲೂ ಆಸ್ತಿ ಮಾಡಿರುವ ಮಾಹಿತಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿದ್ದು, ತಪಾಸಣೆ ನಡೆಯುತ್ತಿದೆ. ಎರಡು ಕಾರು, ಎರಡು ಬೈಕ್ ಸೇರಿ ವಾಹನಗಳು ಸಹ ಪತ್ತೆಯಾಗಿವೆ.

ಲಾಕರ್ ಕೀ ಕೊಡದೆ ಅಧಿಕಾರಿ ದುಂಡಾವರ್ತನೆ..!

ಲಕ್ಷ ಲಕ್ಣ ಹಣ ಸಿಕ್ಕ ಮೇಲೂ ಲೋಕೋಪಯೋಗಿ ಜೆಇ ಶಾಂತಗೌಡ ಅಧಿಕಾರಿಗಳ ತನಿಖೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಎರಡು ಲಾಕರ್ ಕೀ ನೀಡದೆ ಸತಾಯಿಸುತ್ತಿದ್ದರಿಂದ ಲಾಕರ್ ಕತ್ತರಿಸುವ ಸಿಬ್ಬಂದಿ ಕರೆದು ಲಾಕರ್ ಕಟ್ ಮಾಡಿಸಲು ನಿರ್ಧಾರ ಮಾಡಿದ್ರು. ಟ್ರಜರಿನಲ್ಲಿ ಸಾಕಷ್ಟು ಚಿನ್ನಾಭರಣ ಕೂಡಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಯಾವುದೇ ಪ್ರಶ್ನೆಗಳಿಗೂ ಉತ್ತರಿಸದೆ ಮೌನವಾಗಿ ಸೋಫಾ ಮೇಲೆ ಕೈ ಕಟ್ಟಿಕೊಂಡು ಕುಳಿತ ಶಾಂತಗೌಡ ಅವರನ್ನು ವೈದ್ಯಕೀಯ ಸಿಬ್ಬಂದಿ ಕರೆಸಿ ತಪಾಸಣೆ ಮಾಡಿಸಿದ ಬಳಿಕ ಬಂಧನ ಮಾಡಲಾಯ್ತು.

ಶಾಂತಗೌಡ ಬಿರಾದಾರ್ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯ್ತು. 54 ಲಕ್ಷ ರೂಪಾಯಿ ನಗದು ಸೇರಿ ಅಪಾರ ಅಕ್ರಮ ಆಸ್ತಿ ಪತ್ತೆಯಾಗಿತ್ತು, ತನಿಖೆಗೆ ಸಹಕಾರ ನೀಡದ ಕಾರಣಕ್ಕೆ ಶಾಂತಗೌಡ ಬಿರಾದಾರ ಬಂಧನ ಮಾಡಲಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಬ್ಯಾಂಕ್ ಅಕೌಂಟ್ ಸೇರಿದಂತೆ ಇಂದು ತನಿಖೆ ಮುಂದುವರಿಸುವ ಅಗತ್ಯ ಇರುವ ಕಾರಣ ಬಂಧನ ಮಾಡಲಾಗಿದೆ. ಅಕ್ರಮ ಶೂರರಿಗೆ ಬಂಧನ ಶಾಕಿಂಗ್ ಆಗಿದೆ.

Related Posts

Don't Miss it !