ಅಭಿಮಾನಿಗಳಿಗೆ ಅಪ್ಪು ಕುಟುಂಬಸ್ಥರ ಅನ್ನಸಂತರ್ಪಣೆ, ದೊಡ್ಮನೆ ದೊಡ್ಡತನ..!

ಸೋಮವಾರ ಪುನೀತ್​ ರಾಜ್​ಕುಮಾರ್​ ಪುಣ್ಯತಿಥಿ ಕಾರ್ಯ ಮುಕ್ತಾಯವಾಗಿದೆ. ಅಪ್ಪ ಅಭಿಮಾನಿಗಳನ್ನು ಅಗಲಿ 11 ದಿನಗಳು ಮುಕ್ತಾಯ ಆಗಿದೆ. ಇಂದು ಅಭಿಮಾನಿಗಳಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬರೋಬ್ಬರಿ 25 ಸಾವಿರ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಮಾಂಸಹಾರ ಹಾಗೂ ಸಸ್ಯಹಾರ ಎರಡೂ ರೀತಿಯ ಖಾದ್ಯಗಳನ್ನು ಮಾಡಿಸಲಾಗ್ತಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಅಡುಗೆ ಭಟ್ಟರು ಕೆಲಸ ನಿರತರಾಗಿದ್ದಾರೆ. ಸರತಿ ಸಾಲಿನಲ್ಲಿ ಊಟ ಕೊಟ್ಟು ಕಳಿಸುವ ಸಂದರ್ಭದಲ್ಲಿ ನೂಕುನುಗ್ಗಲು ಆಗಬಹುದು ಎನ್ನುವ ಕಾರಣಕ್ಕೆ ಟೇಬಲ್​, ಕುರ್ಚಿ ಹಾಕಿಸಿ ಬಾಳೆ ಎಲೆಯಲ್ಲೇ ಊಟ ಹಾಕಿಸುವ ನಿರ್ಧಾರ ಮಾಡಿದ್ದಾರೆ. ಸುಮಾರು ಒಂದೇ ಪಂಕ್ತಿಯಲ್ಲಿ ಮೂರು ಸಾವಿರ ಜನರನ್ನು ಕೂರಿಸಿ ಊಟ ಹಾಕುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಊಟ ಶುರುವಾಗಲಿದ್ದು, ಸಂಜೆ 4 ಗಂಟೆ ತನಕ ಊಟೋಪಚಾರ ನಡೆಯಲಿದೆ.

ಯಾವುದೇ ಸಮಸ್ಯೆ ಆಗದಂತೆ ಪೊಲೀಸ್​ ಕಣ್ಗಾವಲು..!

ಅರಮನೆ ಮೈದಾನದ ಸುತ್ತಲು ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಭದ್ರತೆಗೆ ಒಂದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಗಾಯತ್ರಿ ವಿಹಾರದ ಗೇಟ್ ನಂಬರ್ 4ರ ಮೂಲಕ ಗಣ್ಯರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷ್ಣ ವಿಹಾರ್ ಗೇಟ್ ನಂಬರ್ 1 ರಲ್ಲಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಗೇಟ್ ನಂಬರ್ 2ರ ಗಾಯತ್ರಿ ವಿಹಾರ್ ಮೂಲಕ ಸಾರ್ವಜನಿಕರ ಪ್ರವೇಶ ಹಾಗೂ ಗಣ್ಯರ ಪ್ರವೇಶಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 20 ಸಾವಿರ ಅಭಿಮಾನಿಗಳು ಆಗಮಿಸಬಹುದು ಎಂದು ಅಂದಾಜು ಮಾಡಲಾಗಿದೆ. 25 ರಿಂದ 30 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳ ಸಂಖ್ಯೆ ಹೆಚ್ಚಾದರೆ ಪ್ರತ್ಯೇಕವಾಗಿ 8 ಕೌಂಟರ್​ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂವರು ಎಸಿಪಿ, 32 ಪೊಲೀಸ್ ಇನ್ಸ್​​ಪೆಕ್ಟರ್​, 70 ಪಿಎಸ್ಐ, 6 ಕೆಎಸ್ಆರ್​ಪಿ ತುಕಡಿ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಅಭಿಮಾನಿಗಳಿಗೆ ಅಣ್ಣಾವ್ರ ಮಕ್ಕಳ ದೊಡ್ಡತನ..!

ಡಾ ರಾಜ್​ಕುಮಾರ್​ ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಕರೆದಿದ್ದರು. ಅಣ್ಣಾವ್ರ ಮಕ್ಕಳು ಡಾ ರಾಜ್​ಕುಮಾರ್​ ಅವರನ್ನು ಯಥಾವತ್ತಾಗಿ ಪಾಲಿಸ್ತಿದ್ದಾರೆ. ಪುಣ್ಯಸ್ಮರಣೆ ಕಾರ್ಯಕ್ರಮ ಮುಗಿಸಿ ಆಪ್ತರು, ಸಂಬಂಧಿಕರು, ಹಿತೈಷಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಅಭಿಮಾನಿಗಳಿಗಾಗಿ ಊಟದ ವ್ಯವಸ್ಥೆ ಮಾಡಬೇಕು ಎನ್ನುವುದು ಕಡ್ಡಾಯವೇನು ಇರಲಿಲ್ಲ. ಆದರೆ ಅಭಿಮಾನಿಗಳನ್ನು ನೆನಪು ಮಾಡಿಕೊಂಡ ಅಣ್ಣಾವ್ರ ಮಕ್ಕಳು, ಅಭಿಮಾನಿಗಳಿಗಾಗಿಯೇ ವಿಶೇಷವಾಗಿ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಇದೇ ಕಾರಣಕ್ಕೆ ಅಲ್ಲವೆ ಲಕ್ಷ ಲಕ್ಷ ಅಭಿಮಾನಿಗಳು ಅಪ್ಪು ಅಂತಿಮ ದರ್ಶನಕ್ಕೆ ಬಂದು ತಮ್ಮ ಪ್ರೀತಿ ಅಭಿಮಾನ ತೋರಿಸಿದ್ರು. ಅದೇ ರೀತಿ ದೊಡ್ಮನೆ ಕೂಡ ಅಭಿಮಾನಿಗಳನ್ನು ಮರೆಯದೆ ದೊಡ್ತನ ಪ್ರದರ್ಶನ ಮಾಡಿದೆ. ಅಭಿಮಾನಿಗಳು ಯಾವುದೇ ಗೊಂದಲ, ಗಲಾಟೆಗಳಿಗೆ ಆಸ್ಪದ ಕೊಡದಂತೆ ಊಟ ಮಾಡಬೇಕಿದೆ.

Related Posts

Don't Miss it !