ನಟ ಪುನೀತ್ ಅಭಿಮಾನಿಗಳು ಸಾಯುತ್ತಿರೋದು ಯಾಕೆ..?

ನಟ ಪುನೀತ್ ರಾಜ್‍ಕುಮಾರ್ ಅಕ್ಟೋಬರ್ 29ರಂದು ಉಸಿರು ಚೆಲ್ಲಿದ ಬಳಿಕ ಚಾಮರಾಜನಗರ, ಮೈಸೂರು, ರಾಯಚೂರು, ಚಿಕ್ಕಮಗಳೂರು, ತುಮಕೂರು ಸೇರಿದಂತೆ ರಾಜ್ಯಾದ್ಯಂತ ಸಾವುಗಳು ಸಂಭವಿಸುತ್ತಲೇ ಇವೆ. ಕೆಲವು ಕಡೆ ಆತ್ಮಹತ್ಯೆ ಪ್ರಯತ್ನಗಳು ನಡೆದ್ರೆ ಮತ್ತೆ ಕೆಲವು ಕಡೆ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟು ಸಾವಿನ ಮನೆ ಸೇರುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ರೀತಿಯಲ್ಲೇ ನಮ್ಮ ಕಣ್ಣುಗಳನ್ನು ದಾನ ಮಾಡಬೇಕು ಎಂದೆಲ್ಲಾ ಪತ್ರ ಬರೆದಿಟ್ಟು ಸಾಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಬೆಳವಣಿಗೆ ದೊಡ್ಮನೆ ಕುಟುಂಬಸ್ಥರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಕಂಠೀರವ ಸ್ಟೇಡಿಯಂನಲ್ಲಿ ಲಕ್ಷಾಂತರ ಜನ ಅಪ್ಪು ಅಂತಿಮ ದರ್ಶನ ಪಡೆದು ಪ್ರೀತಿ ತೋರಿಸಿದ್ದಾರೆ. ಅದಾದ ಒಂದು ವಾರಗಳ ಕಾಲ ನಿರಂತರವಾಗಿ ಕಂಠೀರವ ಸ್ಟುಡಿಯೋ ಬಳಿ ದಿನನಿತ್ಯ ಸಾವಿರಾರು ಜನರು ಭೇಟಿ ನೀಡಿ, ಪುನೀತ್ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸೋಮವಾರ ಪುನೀತ್ ವೈಕುಂಠ ಸಮಾರಾಧನೆ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಅಭಿಮಾನಿಗಳಿಗಾಗಿ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗ್ತಿದೆ. ಆದರೆ ದಿನನಿತ್ಯ ಅಪ್ಪು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡ ನಮಗೂ ಚಿಂತೆಯಾಗಿದೆ ಎಂದಿದ್ದಾರೆ ಶಿವಣ್ಣ, ರಾಘಣ್ಣ.

ಪವರ್ ಸ್ಟಾರ್ ಅಪ್ಪು ಅಭಿಮಾನಿಗಳಲ್ಲಿ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಮನವಿ ಮಾಡಿಕೊಂಡಿದ್ದು, ದಯಮಾಡಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವ ದುಡುಕು ನಿರ್ಧಾರ ಮಾಡಬೇಡಿ. ನಿಮ್ಮನ್ನು ನಂಬಿರುವ ಕುಟುಂಬವೂ ಒಂದಿದೆ ಎಂಬುದನ್ನು ಮರೆಯಬೇಡಿ. ಈಗಾಗಲೇ ಅಪ್ಪು ಕಳೆದುಕೊಂಡಿರುವ ನೋವಿನಲ್ಲಿ ನಾವಿದ್ದೇವೆ. ಪುನೀತ್ ಅಭಿಮಾನಿಗಳೂ ಹೀಗೆ ದಿನನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಮತ್ತಷ್ಟೂ ನೋವು ಆಗುತ್ತದೆ. ದಯಮಾಡಿ ಎಲ್ಲರೂ ಧೈರ್ಯ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೇನೆ ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆ ಕೈಬಿಡಿ ಎಂದು ಮನವಿ ಮಾಡಿದ್ದಾರೆ.

ಮನೋಶಾಸ್ತ್ರಜ್ಞರ ಪ್ರಕಾರ ಆತ್ಮಹತ್ಯೆ ನಿಖರ ಕಾರಣ ಏನು..?

ಪುನೀತ್ ಸಾವಿನ ಬಳಿಕ ಬರೋಬ್ಬರಿ 15ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟ ಪುನೀತ್ ಮಾಡಿದ ನೇತ್ರದಾನವನ್ನು ಅಭಿಮಾನಿಗಳು ಹಿಂಬಾಲಿಸುತ್ತಿದ್ದಾರೆ. ಮೆಚ್ಚಿನ ನಟನೇ ಇಲ್ಲದೆ ಹೋದ ಮೇಲೆ ನಾವು ಇದ್ದು ಏನು ಮಾಡುವುದು ನಮ್ಮ ಕಣ್ಣುಗಳನ್ನು ದಾನ ಮಾಡೋಣ ಎನ್ನುವ ಹುಚ್ಚು ನಿರ್ಧಾರಕ್ಕೆ ಬರುತ್ತಿದ್ದಾರೆ. ಇನ್ನೂ ಕೆಲವರು ಸತ್ತವರ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಕಾರಣಕ್ಕೂ ಉತ್ತೇಜನಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆತ್ಮಹತ್ಯೆಗೆ ಯತ್ನಿಸುವುದು ಅಥವಾ ಮೈ ಕೈ ಮೇಲೆ ಪುನೀತ್ ಹೆಸರನ್ನು ಕೊಯ್ದುಕೊಳ್ಳುವುದೂ ಕೂಡ ಮಾನಸಿಕ ಕಾಯಿಲೆ, ನಾವು ಟಿವಿ, ಪತ್ರಿಕೆಯಲ್ಲಿ ಬರಬೇಕು, ನಮ್ಮ ಅಭಿಮಾನ ಹೇಗಿದೆ ಎನ್ನುವುದು ದೊಡ್ಡ ಸುದ್ದಿಯಾಗಬೇಕು ಎನ್ನುವ ಸಿಂಡ್ರೋಮ್ ಕಾರಣ ಎನ್ನುತ್ತಾರೆ ವೈದ್ಯರು. ಒಟ್ಟಿನಲ್ಲಿ ಆತ್ಮಹತ್ಯೆ ಹೆಚ್ಚಾಗುತ್ತಿರುವುದಕ್ಕೆ ಮಾಧ್ಯಮಗಳ ಪಾತ್ರ ಅಲ್ಪಸ್ವಲ್ಪ ಆದರೂ ಇದ್ದೇ ಇದೆ ಎನ್ನುವುದು ವೈದ್ಯರ ಅಭಿಪ್ರಾಯ.

Related Posts

Don't Miss it !