‘ನಾಯಿಗೂ ಒಂದು ಕಾಲ ಬರುತ್ತೆ ಅಂತಾರಲ್ಲ ಅದು ಸುಳ್ಳಲ್ಲ’ ಅಂತ್ಯಕ್ರಿಯೆಗೆ ಬಂದ ನಟಿ ರಮ್ಯಾ..!!

ನಾಯಿಗೂ ಒಂದು ಕಾಲ ಬರುತ್ತೆ ಎಂದು ಸಾಮಾನ್ಯವಾಗಿ ಹಿಯ್ಯಾಳಿಸುವ ವ್ಯಕ್ತಿಗಳಿಗೆ ಈ ರೀತಿ ತಿರುಗೇಟು ನೀಡುವುದು ಸಹಜ. ಆದರೆ ಈ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ. ಬೀದಿ ನಾಯಿ ಲಾರಾ ಅಂತ್ಯಕ್ರಿಯೆಯಲ್ಲಿ ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಭಾಗಿಯಾಗಿದ್ದರು. ಬೆಂಗಳೂರಿನ ಸುಮನಹಳ್ಳಿ ಪ್ರಾಣಿಗಳ ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ, ಉದ್ದೇಶ ಪೂರ್ವಕವಾಗಿ ನಾಯಿಯನ್ನು ಹತ್ಯೆ ಮಾಡಿದ್ದು, ಮಾನವೀಯತೆಗೆ ವಿರುದ್ಧ ಎಂದು ಕಿಡಿಕಾರಿದ್ರು. ಬಳಿಕ ಸಂಘಟನೆಗಳ ಜೊತೆಗೆ ಲಾರಾಗೆ ಸಂತಾಪ ಸೂಚಿಸಿದ ನಟಿ ರಮ್ಯಾ, ಕ್ಯಾಂಡಲ್​ ಲೈಟ್​ ಹಚ್ಚುವ ಮೂಲಕ ನಾಯಿ ಆತ್ಮಕ್ಕೆ ಶಾಂತಿಯನ್ನೂ ಕೋರಿದ್ದು ವಿಶೇಷ.

ಬೀದಿ ನಾಯಿಗೆ ಇಷ್ಟೊಂದು ಗೌರವ ಬಂದಿದ್ದು ಯಾಕೆ..!?

ಸಾಮಾನ್ಯವಾಗಿ ಬೀದಿ ನಾಯಿಗಳಿಗೆ ಪಾಲಕರು ಇರುವುದಿಲ್ಲ. ಬೀದಿಯಲ್ಲಿ ಬಿಸಾಡಿದ್ದು ಅಥವಾ ಯಾರಾದರೂ ಅನ್ನ ಹಾಕಿದ್ದನ್ನು ತಿಂದು ಬೀದಿಯಲ್ಲೇ ಬೆಳೆಯುತ್ತವೆ. ಹೆದ್ದಾರಿಯಲ್ಲಿ ವಾಹನಗಳಿಗೆ ಸಿಲುಕಿ ಸಾಯುವ ನಾಯಿಗಳಿಗೂ ಕಡಿಮೆ ಏನಿಲ್ಲ. ಆದರೆ ಈ ಬೀದಿ ನಾಯಿ ಮಾತ್ರ ಸಾಕಷ್ಟು ಹೆಸರು ಮಾಡಿದೆ. ಇಷ್ಟೆಲ್ಲಾ ಆಗಿದ್ದಕ್ಕೆ ಕಾರಣ ಆ ನಾಯಿಗೆ ಎದುರಾದ ಆಕಸ್ಮಿಕ ಸಾವು. ಸುಮ್ಮನೆ ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿ ಮೇಲೆ ಉದ್ದೇಶ ಪೂರ್ವಕವಾಗಿ ಕಾರು ಹತ್ತಿಸಿದ್ದರಿಂದ ಪ್ರಾಣಿ ಪ್ರಿಯರಿಗೆ ನಾಯಿ ಮೇಲೆ ಮತ್ತಷ್ಟು ಕನಿಕರ ಸೃಷ್ಟಿಯಾಗಿತ್ತು. CCTV ಯಲ್ಲಿ ಘಟನೆ ಬಗ್ಗೆ ಮಾಹಿತಿ ತಿಳಿದ ಬಳಿಕ ಪ್ರಾಣಿ ದಯಾ ಸಂಘಟನೆಯವರ ಕಣ್ಣು ಕೆಂಪಾಗಿಸಿತ್ತು. ನಟಿ ರಮ್ಯಾ ಕೂಡ ಜಸ್ಟೀಸ್​ ಫಾರ್​ ಲಾರಾ ಎಂದು ಟ್ವೀಟ್​ ಮಾಡಿದ್ದರು.

ಆದಿಕೇಶವಲು ಮೊಮ್ಮೊಗ ಆದಿ ದುರ್ವರ್ತನೆ..!

ಜಯನಗರದ 1 ನೇ ಹಂತದಲ್ಲಿ ರಸ್ತೆ ಪಕ್ಕದಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಆದಿಕೇಶವಲು ಮೊಮ್ಮೊಗ ಆದಿ ಆಡಿ ಕಾರು ಹತ್ತಿಸಿದ್ದನು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಾಯಿ ಮೇಲೆ ಕಾರು ಹತ್ತಿಸುವ ಉದ್ದೇಶ ಸಿಸಿಟಿವಿಯಲ್ಲಿ ಸೆರೆಯಾಗಿದ್ದನ್ನು ತೆಗೆದುಕೊಂಡು ಹೋಗಿ ಸಿದ್ದಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಆದಿಯನ್ನು ಬಂಧಿಸಿ, ಆಡಿ ಕಾರು ಜಪ್ತಿ ಮಾಡಿದ್ದ ಪೊಲೀಸರು, ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದರು. ಕಾರು ಹತ್ತಿದ ಬಳಿಕ ನಾಪತ್ತೆಯಾಗಿದ್ದ ನಾಯಿ ಮೃತ ದೇಹ ಜನವರಿ 31ರಂದ ಪತ್ತೆಯಾಗಿತ್ತು. ಹೆಬ್ಬಾಳ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೃತ ಶ್ವಾನ ಲಾರಾ ಪೋಸ್ಟ್ ಮಾರ್ಟಂ ಮಾಡಿಸಿದ ಬಳಿಕ ಆಂಬುಲೆನ್ಸ್​ನಲ್ಲಿ ಸುಮನಹಳ್ಳಿ ಚಿತಾಗಾರಕ್ಕೆ ತರಲಾಯ್ತು. ನಟಿ ರಮ್ಯಾ ಸೇರಿದಂತೆ ಪ್ರಾಣಿ ಪ್ರಿಯರು ಭಾಗಿಯಾಗಿದ್ದರು.

ಮಾನವೀಯತೆ ಇಲ್ಲದ ಕೃತ್ಯಕ್ಕೆ ಮನುಷತ್ವದ ಕಣ್ಣೀರು..!

ಬೀದಿ ನಾಯಿಗಳ ಹಾವಳಿ ಬೆಂಗಳೂರಿನಲ್ಲಿ ಹೆಚ್ಚಾಗಿದೆ ಎನ್ನುವುದನ್ನು ಯಾರು ತಳ್ಳಿ ಹಾಕಲು ಸಾಧ್ಯವಿಲ್ಲ. ಕೋಳಿ ಅಂಗಡಿಯಲ್ಲಿ ಬಿಸಾಕುವ ತ್ಯಾಜ್ಯ ತಿಂದು ನಾಯಿಗಳ ಸಂತತಿ ಹೆಚ್ಚಾಗಿದ್ದು, ರಾತ್ರಿ ವೇಳೆ ಬೈಕ್​ ಸವಾರರು ಮನೆಗೂ ಹೋಗಲಾರದ ಸ್ಥಿತಿ ತಲುಪಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ನಾಯಿಗಳು ದಾಳಿ ಮಾಡುತ್ತವೆ ಎನ್ನುವ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಹತ್ಯೆ ಮಾಡುವುದು ಮಾನವೀಯತೆ ಎನಿಸಿಕೊಳ್ಳಲಾರದು. ಬೀದಿ ನಾಯಿ ಲಾರಾಗೆ ಊಟೋಪಚಾರ ಮಾಡುತ್ತಿದ್ದ ಮಹಿಳೆ ಗಾಯತ್ರಿ ನಾಯಿ ಮೃತದೇಹದ ಎದುರು ಕಣ್ಣೀರು ಹಾಕಿದ್ದು ವಿಶೇಷವಾಗಿತ್ತು. ನಮ್ಮ ದೇಶದಲ್ಲಿ ‘ಅನಿಮಲ್​ ಲಾ’ ಕಠಿಣವಾಗಿಲ್ಲ, ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಮ್ಯಾ ಒತ್ತಾಯಿಸಿದ್ರು. ಇದರ ಜೊತೆಗೆ ಬೀದಿ ನಾಯಿ ಹಾವಳಿ ಕಡಿಮೆ ಮಾಡುವ ನಿಟ್ಟಿನಲ್ಲೂ ಸರ್ಕಾರ ಕ್ರಮ ವಹಿಸಿದರೆ ಸೂಕ್ತ ಎನ್ನಬಹುದು.

Related Posts

Don't Miss it !