5 ವರ್ಷದ ಪ್ರೀತಿ, 4 ತಿಂಗಳ ಸಂಸಾರ.. ಜಾತಿ ಬಿಟ್ಟು ಮದುವೆಯಾದವಳ ಕೊಂದಿದ್ಯಾಕೆ ಗಂಡ..?

ಮೈಸೂರಿನ ಹುಡುಗ ಕಾರ್ತಿಕ್​ ಬ್ರಾಹ್ಮಣ ಸಮುದಾಯ, ಹುಡುಗಿ ನಿಹಾರಿಕಾ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಜಾತಿ ಎಂಬ ಪಿಡುಗನ್ನು ಮೀರಿ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಆದ್ರೆ ಅದೇನಾಯ್ತೋ ಏನೋ ಸಂಸಾರ ನಡೆದಿದ್ದು, ಕೇವಲ ನಾಲ್ಕೂವರೆ ತಿಂಗಳು ಮಾತ್ರ. ಮದುವೆ ಆದ ದಿನದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಹಿಂಸೆ ನೀಡುವುದಕ್ಕೆ ಶುರುಮಾಡಿದ ಪಾಪಿ ಅಳಿಯ, ಇದೀಗ ಮಗಳನ್ನೇ ಕೊಲೆ ಮಾಡಿಬಿಟ್ಟಿದ್ದಾನೆ ಎಂದು ಕಣ್ಣೀರು ಹಾಕುತ್ತಿದ್ದಾರೆ ನಿಹಾರಿಕಾ ಪೋಷಕರು.

ಮೈಸೂರಿನ 25 ವರ್ಷದ ನಿಹಾರಿಕಾ ಬಿಎಸ್​ಸಿ ಓದುತ್ತಿರುವಾಗ, ಎಂಜಿನಿಯರಿಂಗ್​ ಓದುತ್ತಿದ್ದ ಕಾರ್ತಿಕ್​ ಎಂಬಾತನ ಸ್ನೇಹ ಆಗಿತ್ತು. ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಮೊದಲಿಗೆ ಜಾತಿ ಬಿಟ್ಟು ಜಾತಿಗೆ ಮಗಳನ್ನು ಕೊಡುವುದಕ್ಕೆ ಹಿಂದೆ ಮುಂದೆ ನೋಡಿದ್ರು ಹೆತ್ತವರು. ಆದ್ರೆ ಹಠ ಮಾಡಿ ಪೋಷಕರ ಒಪ್ಪಿಗೆ ಪಡೆದಿದ್ದ ನಿಹಾರಿಕಾ, ಕಾರ್ತಿಕ್​​ನನ್ನು ಜೂನ್​​ 1ರಂದು ಮದುವೆ ಆಗಿದ್ದರು. ಹುಡುಗನ ಅಪ್ಪ ನಿವೃತ್ತ ಪೊಲೀಸ್​ ಅಧಿಕಾರಿ ಆಗಿದ್ದರಿಂದ ಮೈಸೂರಿನ ಪೊಲೀಸ್​ ಭವನದಲ್ಲೇ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆದಿತ್ತು.

ಕಳೆದ ಒಂದು ವರ್ಷದಿಂದ ಎಂಎನ್​ಸಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕಾರ್ತಿಕ್​, ಹೆಂಡತಿ ಮೇಲೆ ಪ್ರೀತಿಯನ್ನು ಕ್ರಮೇಣ ಕಡಿಮೆ ಮಾಡಿಕೊಂಡಿದ್ದ. ಪುಟ್ಟೇನಹಳ್ಳಿ ವ್ಯಾಪ್ತಿಯ ತಿಮ್ಮಪ್ಪ ರೆಡ್ಡಿ ಲೇಔಟ್​ನ ಅಪಾರ್ಟ್​ಮೆಂಟ್​​ನಲ್ಲಿ ವಾಸವಾಗಿದ್ದ ದಂಪತಿ ನಡುವೆ ಮನಸ್ತಾಪ ಹೆಚ್ಚಾಗಿತ್ತು. ಕಳೆದ 20 ದಿನಗಳ ಹಿಂದೆ ಪತ್ನಿ ನಿಹಾರಿಕಾ ಮೇಲೆ ಹಲ್ಲೆ ಮಾಡಿದ್ದ ಕಾರ್ತಿಕ್​, ಕಿವಿ ತಮಟೆಯಲ್ಲಿ ರಕ್ತ ಬರುವ ಹಾಗೆ ಕ್ರೂರವಾಗಿ ವರ್ತಿಸಿದ್ದ. ನೊಂದ ನಿಹಾರಿಕಾ, ತನ್ನ ಪೋಷಕರಿಗೆ ಕರೆಮಾಡಿ ಸಂಪೂರ್ಣ ಮಾಹಿತಿ ನೀಡಿ, ಅಕ್ಕನ ಮನೆಗೆ ಹೋಗಿ ರಕ್ಷಣೆ ಪಡೆದಿದ್ದರು.

ಹೆತ್ತವರ ಮನೆಯಲ್ಲಿ ಮುದ್ದಾಗಿ ಬೆಳೆದಿದ್ದ ನಿಹಾರಿಕಾ ಎಲ್ಲೂ ಕೆಲಸ ಮಾಡಿರಲಿಲ್ಲ. ಆದರೆ ಮದುವೆ ಆಗಿ ಬೆಂಗಳೂರಿಗೆ ಬರುತ್ತಿದ್ದ ಹಾಗೆ ಕೆಲಸಕ್ಕೆ ಕಳುಹಿಸಿದ್ದ ಗಂಡ ಕಾರ್ತಿಕ್​, ಶಾಲಾ ವಿಚಾರದಲ್ಲೇ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ನಿನ್ನೆ ಶನಿವಾರ (22/10/2022)ರಂದು ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಶಾಲಾ ಕಾರ್ಯಕ್ರಮಕ್ಕೆ ನಿಹಾರಿಕಾ ಹೋಗುವುದನ್ನು ಕಾರ್ತಿಕ್​ ತಡೆದಿದ್ದ. ಇದ್ರಿಂದ ಬೇಸರಗೊಂಡ ನಿಹಾರಿಕಾ ಮೈಸೂರಿನ ತಂದೆ ಮನೆಗೆ ಹೋಗುವುದಾಗಿ ಅಕ್ಕನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಳು.

‘ದೀಪಾವಳಿ ಹಬ್ಬ ಇರುವ ಕಾರಣ, ನಾನೂ ಮೈಸೂರಿಗೆ ಬರ್ತೇನೆ. ಆಟೋ ಹಿಡಿದುಕೊಂಡು ಮನೆಗೆ ಬಂದು ಬಿಡು. ಇಬ್ಬರೂ ಒಟ್ಟಿಗೆ ಸಂಜೆ ಹೋಗೋಣ’ ಎಂದಿದ್ದ ಅಕ್ಕನ ಮಾತಿನಂತೆ ನಿಹಾರಿಕ ಸಿದ್ಧತೆ ಆಗಿದ್ದಳು. ಆದರೆ ಎಷ್ಟು ಹೊತ್ತಾದ್ರೂ ನಿಹಾರಿಕಾ ಬರಲಿಲ್ಲ, ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಹೀಗಾಗಿ ಗಂಡ ಕಾರ್ತಿಕ್​ ಫೋನ್​ಗೆ ಕರೆ ಮಾಡಿದಾಗ ನೇಣು ಬಿಗಿದುಕೊಂಡು ಸತ್ತು ಹೋಗಿದ್ದಾಳೆ ಎಂದಿದ್ದಾನೆ. ಇದು ಅನುಮಾನಕ್ಕೆ ಕಾರಣವಾಗಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಕಾರ್ತಿಕ್​ ಸೇರಿ ಆತನ ತಂದೆ ತಾಯಿ ಹಾಗು ಸಹೋದರಿ ಮೇಲೆ ದೂರು ದಾಖಲಾಗಿದೆ.

ಇದೀಗ IPC ಸೆಕ್ಷನ್​ 34ರ ಪ್ರಕಾರ ಕೊಲೆ ಮಾಡುವ ಉದ್ದೇಶದಿಂದ ಆರೋಪಿಗಳು ಒಟ್ಟುಗೂಡಿದ್ದರು. ಸೆಕ್ಷನ್​ 498ರ ಪ್ರಕಾರ ವಿವಾಹಿತ ಮಹಿಳೆ ಹೊರಕ್ಕೆ ಹೋಗದಂತೆ ಕೂಡಿಹಾಕಿದ್ದರು ಹಾಗು ಸೆಕ್ಷನ್​ 306ರ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರು ದಾಖಲಿಸಲಿದ್ದಾರೆ. ಅಪಾರ್ಟ್​ಮೆಂಟ್​​ನಲ್ಲಿ ಹಗ್ಗದಿಂದ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದು ಹೇಗೆ..? ಅನ್ನೋದು ಅನುಮಾನಕ್ಕೆ ಕನ್ನಡಿ ಹಿಡಿಯುತ್ತಿದೆ. ಅಪಾರ್ಟ್​ಮೆಂಟ್​​ನಲ್ಲಿ ಹಗ್ಗ ಬಂದಿದ್ದು ಹೇಗೆ..? ಅಕ್ಕನ ಮನೆಗೆ ಬರ್ತೇನೆ ಎಂದವಳು ಸತ್ತಿದ್ದು ಯಾಕೆ..? ಕೊಲೆ ಮಾಡುವ ಉದ್ದೇಶದಿಂದಲೇ ಕಾರ್ತಿಕ್​ ಮೊದಲೇ ಹಗ್ಗವನ್ನು ತಂದಿದ್ದನೇ..? ಪ್ರೀ ಪ್ಲ್ಯಾನ್ಡ್​​ ಮರ್ಡರ್​ ಆಗಿದ್ಯಾ..? ಅನ್ನೋ ಬಗ್ಗೆ ಪೊಲೀಸ್ರು ತನಿಖೆ ನಡೆಸಬೇಕಿದೆ.

Related Posts

Don't Miss it !