ಹಂದಿ, ಬಾವಲಿಗಳಿಂದ ದೂರ ಇರಿ.. ಪಕ್ಷಿ ಕಚ್ಚಿದ ಹಣ್ಣು ತಿನ್ನಬೇಡಿ..

ಕೊರೊನಾ 3ನೇ ಅಲೆ ಬರುತ್ತೆ ಎನ್ನುವ ಕಾರಣಕ್ಕೆ ಬೆಚ್ಚಿ ಬೀಳುತ್ತಿದ್ದ ರಾಜ್ಯ ಸರ್ಕಾರ ಇದೀಗ ನಿಫಾ ಕಡೆಗೆ ಕಣ್ಣು ಹೊರಳಿಸಿದೆ. ಕೇರಳದಲ್ಲಿ ಕೊರೊನಾ ನಡುವೆ ನಿಫಾ ಸೋಂಕು ಸದ್ದು ಮಾಡುತ್ತಿದ್ದು ಕರ್ನಾಟಕ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡಿದೆ. ಕೇರಳದಲ್ಲಿ ನಿಫಾ ವೈರಾಣು ಬಾಲಕನ ಬಲಿ ಪಡೆದ ಬಳಿಕ ರಾಜ್ಯದ ಗಡಿ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ಕೊಡಲಾಗಿದೆ. ಕಠಿಣ ಮಾರ್ಗಸೂಚಿ ರೂಪಿಸಲಾಗಿದೆ. ಕೇರಳದ ಗಡಿಭಾಗದಲ್ಲಿ ಹೆಚ್ಚಿನ ನಿಗಾ ಇಡಬೇಕು. ನಿಫಾ ಲಕ್ಷಣ ಕಂಡು ಬರುವ ವ್ಯಕ್ತಿಗಳು ಪತ್ತೆಯಾದರೆ ಸೂಕ್ತ ಚಿಕಿತ್ಸೆ ಕೊಟ್ಟು, ಲಕ್ಷಣ ಕಂಡು ಬಂದ ವ್ಯಕ್ತಿಯಿಂದ ಸ್ಯಾಂಪಲ್​​ ಪಡೆದು ಪುಣೆ ಲ್ಯಾಬ್​ಗೆ ರವಾನಿಸಿ ಟೆಸ್ಟ್​ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್​ ಸೂಚನೆ ರವಾನಿಸಲಾಗಿದೆ. ಜೊತೆಗೆ ನಿಫಾ ಸೋಂಕಿನ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ನಿಫಾ ಸೋಂಕು ಮತ್ತು ಸೋಂಕಿನ ಇತಿಹಾಸ..!

ನಿಫಾ ಸೋಂಕು ಎನ್ನುವುದು ವೈರಸ್​ನಿಂದ ಹರಡುವ ಸಾಂಕ್ರಾಮಿಕ ರೋಗ. ಈ ಸೋಂಕು ಪ್ರಮುಖವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ನಿಫಾ ವೈರಾಣು ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬ ಆರೋಗ್ಯವಂತ ವ್ಯಕ್ತಿಗೂ ಈ ವೈರಸ್​ ಹರಡುತ್ತದೆ. ನಿಫಾ ವೈರಾಣು ತಾಗಿರುವ ಆಹಾರ ಸೇವನೆಯಿಂದಲೂ ನಿಫಾ ಸೋಂಕು ಬರುತ್ತದೆ. ಕನಿಷ್ಟ 4 ಹಾಗೂ ಗರಿಷ್ಠ 14 ದಿನಗಳಲ್ಲಿ ಸೋಂಕು ಹರಡುತ್ತದೆ. 1998ರಲ್ಲಿ ಮೊದಲಿಗೆ ಮಲೇಷ್ಯಾದಲ್ಲಿ ಮೊದಲ ಸೋಂಕು ಪತ್ತೆಯಾಗಿತ್ತು. ಭಾರತಕ್ಕೆ 1998ರಲ್ಲಿ ಕೇರಳ ಮೂಲಕ ಕಾಲಿಟ್ಟ ನಿಫಾ ವೈರಾಣು, 2001 ಹಾಗೂ 2007ರಲ್ಲಿ ಪಶ್ಚಿಮ ಬಂಗಾಳದಲ್ಲಿ ಪತ್ತೆ ಆಗಿತ್ತು. 2018ರಲ್ಲಿ ಮತ್ತೆ ಕೇರಳದ ಕ್ಯಾಲಿಕಟ್​ನಲ್ಲಿ ಸೋಂಕು ವ್ಯಾಪಕವಾಗಿ ಹರಡಿ ಸುಮಾರು 18 ಜನರ ಸಾವು ಸಂಭವಿಸಿತ್ತು.

Read this also;

ನಿಫಾ ವೈರಾಣು ಲಕ್ಷಣಗಳು, ಸಾವಿನ ಸೋಂಕು..!

ನಿಫಾ ವೈರಾಣು ಕಾಣಿಸಿಕೊಂಡ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ತಲೆನೋವು, ಮೂಳೆನೋವು, ವಾಂತಿ ಜೊತೆಗೆ ಗಂಟಲು ನೋವು ಬರುತ್ತದೆ. ತಲೆಸುತ್ತಿ ಬೀಳುವುದು, ಯಾವಾಗಲೂ ನಿದ್ರೆ ಮಂಪರಿನಲ್ಲಿ ಬಳಲುವಂತಾಗುತ್ತದೆ. ಪ್ರಜ್ಞೆ ತಪ್ಪುವುದು, ಮೆದುಳಿನ ಉರಿ ಬಂದ ಬಳಿಕ ಮೆದುಳು ಜ್ವರ ಹೆಚ್ಚಾಗಿ ಸಾವು ಸಂಭವಿಸುತ್ತದೆ. ಕೊರೊನಾ ಸೋಂಕಿನಲ್ಲಿ ಸಾವಿನ ಪ್ರಮಾಣಕ್ಕಿಂತಲೂ ನಿಫಾ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಾಗಿರುತ್ತದೆ. ಶೇಕಡ 45 ರಿಂದ ಶೇಕಡ 70 ರಷ್ಟು ಜನರಲ್ಲಿ ಸಾವು ಸಂಭವಿಸುತ್ತದೆ. ಇದನ್ನು ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲೂ ತಿಳಿಸಲಾಗಿದೆ. ಒಂದು ವೇಳೆ ನಿಫಾ ಸೋಂಕು ಬಂದ ಕೂಡಲೇ ಎಚ್ಚರಿಕೆ ವಹಿಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ ಉಳಿಸುವ ಸಾಧ್ಯತೆಯೂ ಇದೆ. ಆದ್ರೆ ನಿಖರ ಚಿಕಿತ್ಸೆ ಇಲ್ಲದ ಕಾರಣ ಸಾವಿನ ಪ್ರಮಾಣ ಹೆಚ್ಚು ಎನ್ನುತ್ತಾರೆ ವೈದ್ಯರು.

Read this also;

ಸೋಂಕು ಹರಡುವ ರೂಪ ಹಾಗೂ ತಡೆಯುವ ಮಾರ್ಗ..!

ನಿಫಾ ಸೋಂಕು ಪ್ರಮುಖವಾಗಿ ಹಂದಿ, ಬಾವಲಿಗಳಿಂದ ವೇಗವಾಗಿ ಹರಡುತ್ತದೆ. ಹಂದಿ, ಬಾವಲಿಯ ರಕ್ತ, ಮಲ, ಮೂತ್ರಗಳ ಸಂಪರ್ಕದಿಂದಲೂ ನಿಫಾ ಸೋಂಕು ಹರಡುತ್ತದೆ. ಬಾವಲಿ ಕಚ್ಚಿದ ಹಣ್ಣನ್ನು ತಿನ್ನುವುದರಿಂದಲೂ ನಿಫಾ ಸೋಂಕು ಹರಡುತ್ತದೆ. ನಿಫಾ ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕಕ್ಕೆ ಹೋದ ವ್ಯಕ್ತಿಗೂ ಸೋಂಕು ಹರಡುತ್ತದೆ. ನಿಫಾ ಸೋಂಕಿಗೆ ಕೊರೊನಾ ಸೋಂಕಿನಂತೆ ಲಸಿಕೆ ಇಲ್ಲದಿರುವ ಕಾರಣ ಮುನ್ನೆಚ್ಚರಿಕೆಯೇ ಮದ್ದು. ಪದೇ ಪದೇ ಕೈ ತೊಳೆದುಕೊಳ್ಳಬೇಕು. ಮರದಿಂದ ಪಕ್ಷಿಗಳು ತಿಂದು ಕೆಳಗೆ ಬಿದ್ದ ಹಣ್ಣನ್ನು ಸೇವನೆ ಮಾಡಬಾರದು. ನಿಫಾ ಸೋಂಕಿತರ ಸಂಪರ್ಕಕ್ಕೆ ಹೋಗುವುದನ್ನು ತಪ್ಪಿಸಬೇಕು. ಹಸಿ ಖರ್ಜೂರ ಸೇವಿಸುವುದೂ ಸೂಕ್ತವಲ್ಲ. ನಿಫಾ ಸೋಂಕು ಬಂದ ಬಳಿಕ ಚಿಕಿತ್ಸೆ ಸಿಗದೆ ಸಾವನ್ನಪ್ಪುವ ಬದಲು ಸೋಂಕು ಹರಡುವ ಮುನ್ನವೇ ಎಚ್ಚರಿಕೆ ವಹಿಸುವುದು ಸೂಕ್ತ.

Related Posts

Don't Miss it !