ಪ್ರಧಾನಿ ನರೇಂದ್ರ ಮೋದಿ ಅಲೆ ವಿರುದ್ಧ ಈಜುವ ಛಲಗಾರ ನಾಯಕ ಯಾರಿದ್ದಾರೆ..?

ದೇಶದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಅಸಮಾಧಾನ ಭುಗಿಲೆದ್ದಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ ಕೇಸರಿ ಪಾಳಯ ಚುನಾವಣೆಯಲ್ಲಿ ಪದೇ ಪದೇ ಗೆಲ್ಲುವ ಮೂಲಕ ಜನಪರ ಅಧಿಕಾರ ನೀಡುವ ಏಕೈಕ ಪಕ್ಷ ಎನ್ನುವಂತೆ ಸಾಬೀತು ಮಾಡುತ್ತಲೇ ಇದೆ. ಇದೀಗ ಪಂಚ ರಾಜ್ಯ ಚುನಾವಣೆಯಲ್ಲೂ ಉತ್ತರ ಪ್ರದೇಶ ಸೇರಿದಂತೆ ಮಣಿಪುರ, ಗೋವಾ, ಉತ್ತರಾಖಂಡ್​ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಯವಾಗಿದೆ. ಇನ್ನೂ ಪಂಜಾಬ್​ನಲ್ಲಿ ಬಿಜೆಪಿಯನ್ನು ಜನರು ತಿರಸ್ಕಾರ ಮಾಡಿದ್ದು, ಕಾಂಗ್ರೆಸ್​​ ಜೊತೆಗೆ ಬಿಜೆಪಿ ಕೂಡ ಹೀನಾಯ ಸೋಲುಂಡಿದೆ. ಇದೀಗ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತಿರುವ ಭಾರತೀಯ ಜನತಾ ಪಾರ್ಟಿಗೆ ಲೋಕಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರ ಹಿಡಿದಿರುವುದು, ಮುಂಬರುವ ಚುನಾವಣೆಗಳಿಗೆ ಬೂಸ್ಟ್​ ಸಿಕ್ಕಂತೆ ಆಗಿದೆ. ಒಂದಾದರೂ ರಾಜ್ಯದಲ್ಲಿ ಅಧಿಕಾರ ರಚಿಸುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಲು ಕಾಂಗ್ರೆಸ್​ ಮಾಡಿಕೊಂಡಿದ್ದ ಯೋಜನೆ ತಲೆ ಕೆಳಗಾಗಿದೆ.

ಸಮೀಕ್ಷೆ ನಂಬಿ ಕೆಟ್ಟ ಕನ್ನಡಿಗ ಕಾಂಗ್ರೆಸ್ ನಾಯಕರು..!!

ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶ ಹಾಗೂ ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನ ಸಮೀಕ್ಷೆಗಳು ಹೇಳಿದ್ದವು. ಅದರ ಜೊತೆಗೆ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರ ಹೊಂದುವ ಬಗ್ಗೆಯೂ ಹೇಳಲಾಗಿತ್ತು. ಆದರೆ ಉತ್ತರಾಖಂಡ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಅಧಿಕಾರದ ಪೈಪೋಟಿ ನಡೆಯಲಿದೆ ಎನ್ನಲಾಗಿತ್ತು. ಆದರೆ ಆ ರೀತಿಯ ಯಾವುದೇ ಅವಕಾಶವನ್ನು ಕಾಂಗ್ರೆಸ್ ಪಡೆಯುವುದಕ್ಕೆ ಸಾಧ್ಯವಾಗಲಿಲ್ಲ. ಒಂದು ವೇಳೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ರಾಜಕೀಯ ತಂತ್ರಗಾರಿಕೆ ಮಾಡಲು ಕನ್ನಡಿಗರನ್ನು ಕಾಂಗ್ರೆಸ್ ನಿಯೋಜಿಸಿತ್ತು. ಉತ್ತರಾಖಂಡದಲ್ಲಿ ಎಂ.ಬಿ ಪಾಟೀಲ್ ಹಾಗೂ ಗೋವಾದಲ್ಲಿ ಡಿ.ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್ ಮೊಕ್ಕಾಂ ಹೂಡಿದ್ದರು. ಇದೀಗ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದ್ದು ಬರಿಗೈಲಿ ಪ್ರವಾಸ ಮುಗಿಸಿ ವಾಪಸ್ ಆಗಬೇಕಿದೆ.

ಕುಟುಂಬ ರಾಜಕಾರಣ ಅಂತ್ಯವೇ ನಮ್ಮ ಧ್ಯೇಯ..!!

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನು ಗೆಲ್ಲುವುದಕ್ಕೆ ಸಾಧ್ಯವಾಗಿದೆ. ಇಷ್ಟು ದಿನಗಳ ಕಾಲ ಉತ್ತರ ಪ್ರದೇಶದ ಮೇಲೆ ಹಿಡಿತ ಹೊಂದಿದ್ದ ಗಾಂಧಿ ಕುಟುಂಬವನ್ನು ನರೇಂದ್ರ ಮೋದಿ ಟೀಕಿಸಿದ್ರು. ಸೋನಿಯಾ ಗಾಂಧಿ ಸ್ಪರ್ಧಿಸುವ ರಾಯ್ ಬರೇಲಿ ಹಾಗೂ ರಾಹುಲ್ ಗಾಂಧಿ ಸೋಲುಂಡಿದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲೂ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ಇದರಿಂದ ಉತ್ತೇಜಿತರಾದ ಪ್ರಧಾನಿ ನರೇಂದ್ರ ಮೋದಿ, ನನಗೆ ಯಾರ ಮೇಲೂ ದ್ವೇಷವಿಲ್ಲ, ಯಾವ ಕುಟುಂಬದ ಮೇಲೂ ಕೋಒವಿಲ್ಲ. ಆದರೆ ಕುಟುಂಬ ರಾಜಕಾರಣ ಅಂತ್ಯ ಮಾಡ್ತೇನೆ ಎಂದಿದ್ದಾರೆ. ಇನ್ನು ನಾನು ವಾರಣಾಸಿ ಕ್ಷೇತ್ರದ ಮಗನಾಗಿದ್ದೆ, ಆದರೀಗ ಉತ್ತರ ಪ್ರದೇಶದ ಪ್ರೀತಿಯ ಮನೆ ಮಗ ಎಂದು ತನ್ನನ್ನು ಉತ್ತರ ಪ್ರದೇಶದ ಜನ ಬೆಂಬಲಿಸಿದ್ದಾರೆ ಎಂದು ಹೇಳಿಕೊಂಡರು. ನಾಲ್ಕು ರಾಜ್ಯಗಳಲ್ಲಿ BJP ಅಧಿಕಾರ ಹಿಡಿಯುವುದು ಪಕ್ಕಾ ಆಗ್ತಿದ್ದ ಹಾಗೇ ಪ್ರಧಾನಿ ನರೇಂದ್ರ ಮೋದಿ ದೆಹಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದರು. ಬಿಜೆಪಿ ಕಾರ್ಯಕರ್ತನ್ನು ಉದ್ದೇಶಿಸಿ ಭಾಷಣ ಮಾಡಿದ ನರೇಂದ್ರ ಮೋದಿ, BJP ಈ ಗೆಲುವಿನಲ್ಲಿ ಕಾರ್ಯಕರ್ತರ ಶ್ರಮ ಅಪಾರ ಎಂದು ಅಭಿನಂದನೆ ಸಲ್ಲಿಸಿದ್ರು. ಕುಟುಂಬ ರಾಜಕಾರಣ ಅಂತ್ಯ ಮಾಡುವ ಬಗ್ಗೆ ನರೇಂದ್ರ ಮೋದಿ ಪ್ರಸ್ತಾಪಿಸಿದ್ರು. ಅಂದರೆ ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತುಹಾಕುವ ಬಗ್ಗೆ ಪರೋಕ್ಷವಾಗಿ ಕುಟುಕಿದ್ರು.

ಮೋದಿ ಗಡಲುವಿನ ನಾಗಾಲೋಟಕ್ಕೆ ಎದುರಾಳಿ ಯಾರು..?

ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಬಿಜೆಪಿ ಗೆಲ್ಲುತ್ತಲೇ ಇದೇ ಎನ್ನುವ ಮಾತಿನ‌ ನಡುವೆ ಎದುರಾಳಿಗಳ ವೈಫಲ್ಯ ನರೇಂದ್ರ ಮೋದಿ‌ಗೆಲುವಿನ ಸಾಧ್ಯತೆ ಹೆಚ್ಚಿಸಿವೆ‌ ಎನ್ನುವ ಚರ್ಚೆ‌ ಕೂಡ ಚಾಲ್ತಿಯಲ್ಲಿದೆ. ದೇಶದಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಬಿಜೆಪಿ ಗೆಲುವಿನ ಶ್ರೀರಕ್ಷೆಯಾಗಿದೆ. ಜನರು ಬೇರೆ ಆಯ್ಕೆ ಇಲ್ಲದೆ ಅನಿವಾರ್ಯವಾಗಿ ಬಿಜೆಪಿ ಗೆಲ್ಲಿಸುತ್ತಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಆದರೆ ಇದೀಗ ನರೇಂದ್ರ ಮೋದಿ ಎದುರಿಸಬಲ್ಲ ನಾಯಕತ್ವ ಹುಡುಕುವುದಾದರೆ ಇಬ್ಬರ ಕಡೆಗೆ ಬೊಟ್ಟು ಮಾಡಬಹುದು. ಒಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮತ್ತೊಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್. ಇವಿಎಂ ತಿರುಚಿದ್ದಾರೆ ಎನ್ನುವ ಹೇಳಿಕೆ ನಡುವೆ ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿಯ ಅಬ್ಬರ ತಡೆದಿದ್ದು ಮಮತಾ ಬ್ಯಾನರ್ಜಿ. ಅದೇ ರೀತಿ ಪಂಜಾಬ್‌ನಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಪರ್ಯಾಯ ಕಾಣಿಸಿದ್ದು ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್. ಇಬ್ಬರಲ್ಲಿ ಒಬ್ಬರು ನಾಯಕತ್ವ ವಹಿಸಿಕೊಂಡರೆ ಮಾತ್ರ ದೇಶದಲ್ಲಿ ನರೇಂದ್ರ ಮೋದಿ ಜೊತೆಗೆ ಹೋರಾಡಲು ಸೂಕ್ತ ಎದುರಾಳಿ ಸಿಕ್ಕಂತಾಗುತ್ತದೆ. ಇಲ್ಲದಿದ್ದರೆ ಇದೇ ಫಲಿತಾಂಶ ಪುನರಾವರ್ತನೆ ಆದರೂ ಆಗಬಹುದು.

Related Posts

Don't Miss it !