ಮಳೆ ಹಾನಿಗೆ ಸರ್ಕಾರದಿಂದ ಪರಿಹಾರ ಘೋಷಣೆ..! ಒಂದೇ ದಿನಕ್ಕೆ ಸಿಎಂ ಸುಸ್ತು..

ರಾಜ್ಯದಲ್ಲಿ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಡ್ಯಾಂಗಳಿಂದ ನದಿಗೆ ಅಪಾರ ಪ್ರಮಾಣದ ನೀರನ್ನು ಬಿಡಲಾಗ್ತಿದೆ. ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ (12-07-2022) ರಂದು ಮಳೆ ಹಾನಿ ಬಗ್ಗೆ ಖುದ್ದು ಭೇಟಿ ನೀಡಿ ಜನರ ಸಂಕಷ್ಟ ಆಲಿಸುವ ಉದ್ದೇಶದಿಂದ ಕೊಡಗು, ದಕ್ಷಿಣ ಕನ್ನಡ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು. ಕೊಯಿನಾಡು ಸಂತ್ರಸ್ಥರ ಕೇಂದ್ರಕ್ಕೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಮಳೆಯಿಂದ ಹಾನಿಗೆ ಒಳಗಾದ ಸಂತ್ರಸ್ಥರ ನೋವು ಆಲಿಸಿದ್ರು. ಆ ಬಳಿಕ ಸಾಕಷ್ಟು ಜನರಿಗೆ ಸ್ಥಳದಲ್ಲೇ ಪರಿಹಾರದ ಚೆಕ್​ ವಿತರಿಸಿದ್ರು. ಕರ್ತೋಜಿ ಹೆದ್ದಾರಿ ಉಬ್ಬುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿ ಮಾತನಾಡಿದ ಸಿಎಂ ಪರಿಹಾರದ ಹಣ ಬಿಡುಗಡೆಗೂ ಆದೇಶ ಮಾಡಿದ್ರು.

ಸಂಜೆ ಆಗುತ್ತಿದ್ದ ಹಾಗೆ ಸರ್ಕಾರದಿಂದ ಪರಿಹಾರ ಬಿಡುಗಡೆ..!

ಕೊಡಗಿನಿಂದ ನೇರವಾಗಿ ದಕ್ಷಿಣ ಕನ್ನಡ ಜಿಲ್ಲೆ ಕಡೆಗೆ ಪ್ರಯಾಣ ಬೆಳೆಸಿದ ಸಿಎಂ, ಉಪ್ಪಿನಂಗಡಿಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ನೇತ್ರಾವತಿ ಹಾಗು ಕುಮಾರಧಾರ ನದಿಯ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದ್ರು. ಆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ, ಮಳೆಯ ನಡುವೆಯೂ ಕಡಲ್ಕೊರೆತ ಸಮಸ್ಯೆ ವೀಕ್ಷಿಸಿದ್ರು. ಆ ಬಳಿಕ ಮಾತನಾಡಿದ ಸಿಎಂ, ಉಪ್ಪಿನಂಗಡಿಯಲ್ಲಿ ನದಿಗಳ ಸಂಗಮ ಪ್ರದೇಶದಲ್ಲಿ ತೋಟಗಳಿಗೆ ಹಾನಿ ಆಗಿದೆ. ಉಳ್ಳಾಲದಲ್ಲಿ ದೊಡ್ಡ ಪ್ರಮಾಣದಲ್ಲಿ 600 ಮೀಟರ್​ ಕಡಲ್ಕೊರೆತ ಆಗಿದೆ. ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳ ಕಡಲ್ಕೊರೆತ ಸಮಸ್ಯೆ ತಡೆಗೆ ಎಡಿಬಿ ಕೆಲಸ ಸರಿಯಾಗಿಲ್ಲ ಎಂಬ ಆರೋಪವಿದೆ. ಹೊಸ ತಂತ್ರಜ್ಞಾನವನ್ನು ಈ ಪ್ರದೇಶದಲ್ಲೇ ಅಳವಡಿಸಲು ಅನುಮತಿ ಕೊಡಲಾಗಿದೆ. ಸೀ ವೇವ್ ಬ್ರೇಕರ್ಸ್ ತಂತ್ರಜ್ಞಾನ ಬಟ್ಟಪಾಡಿಯಲ್ಲೇ ಜಾರಿ ಮಾಡಲಾಗುವುದು ಎಂದು ತಿಳಿಸಿದ್ರು. ಅಲ್ಲಿಂದ ನೇರವಾಗಿ ಉಡುಪಿಗೆ ತೆರಳಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ.

ರಾಜ್ಯ ಸರ್ಕಾರದ ಪರಿಹಾರ ಯಾರಿಗೆ ಎಷ್ಟು ಹಣ ಬರುತ್ತೆ..?

ಮಳೆಯಿಂದ ಬಹುತೇಕ ಅರ್ಧ ಕರ್ನಾಟಕದಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂತ್ರಸ್ಥರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಮಳೆಯಿಂದ ಅಥವಾ ಪ್ರವಾಹದಿಂದ ಜೀವ ಹಾನಿ ಆಗಿದ್ದರೆ 5 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಇನ್ನೂ ಮನೆಗೆ ನೀರು ನುಗ್ಗಿದ್ದು ಮನೆಯ ಗೃಹೋಪಯೋಗಿ ವಸ್ತುಗಳು ಮತ್ತು ಬಟ್ಟೆ ಬರೆ ಹಾನಿ ಆಗಿದ್ದರೆ 10 ಸಾವಿರ ಪರಿಹಾರ ಘೋಷಣೆ ಆಗಿದೆ. ಇನ್ನೂ ಶೇಕಡಾ 75ಕ್ಕಿಂತ ಹೆಚ್ಚು ಅಥವಾ ಶೇಕಡಾ ‌25 ರಿಂದ 75 ರಷ್ಟು ಹಾನಿಯಾಗಿ ಮನೆಯನ್ನು ಕೆಡವಿ ಕಟ್ಟಬೇಕು ಎನ್ನುವುದಾದರೂ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ನೀಡಲಿದೆ. ಆದರೆ ಕೇವಲ ದುರಸ್ಥಿ ಆದರೆ ಸಾಕು ಎನ್ನುವುದಾದರೆ 3 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಇನ್ನು ಶೇಕಡ 15 ರಿಂದ 25 ರಷ್ಟು ಭಾಗಶಃ ಮನೆಗೆ ಹಾನಿ ಆಗಿದ್ದರೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.

ಉತ್ತರ ಕನ್ನಡ ಪ್ರವಾಸ ಕೈ ಬಿಟ್ಟು ಬೆಂಗಳೂರಿಗೆ ವಾಪಸ್​..!

ಮಂಗಳವಾರ ಕೊಡಗು ಹಾಗು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಮಣಿಪಾಲ ಕಂಟ್ರಿ ಇನ್ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ಉಡುಪಿ ಜಿಲ್ಲೆ ಪ್ರವಾಸ ಮಾಡಲಿರುವ ಸಿಎಂ ನೇರವಾಗಿ ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ ಎನ್ನಲಾಗಿದೆ. ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಬಿಟ್ಟಿದ್ದು, ಕಪ್ಪು ಬಾವುಟ ಪ್ರದರ್ಶನ ಮಾಡುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಬಂದಿರುವುದರಿಂದ ಪ್ರವಾಸ ಮೊಟುಕು ಎಂದು ಮಾಧ್ಯಮಗಳ ಮೂಲಕ ತೇಪೆ ಹಾಕುವ ಕೆಲಸ ಮಾಡಲಾಗಿದೆ. ಆದರೆ ಸಿಎಂ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಕಾಲು ನೋವಿನಿಂದ ಬಳಲುತ್ತಿದ್ದು, ಕೊಡಗು ಹಾಗು ದಕ್ಷಿಣ ಕನ್ನಡ ಜಿಲ್ಲೆಗಳ ಸುತ್ತಾಟದಿಂದ ಬಸವರಾಜ ಬೊಮ್ಮಾಯಿ ಬಳಲಿದ್ದಾರೆ ಎನ್ನಲಾಗ್ತಿದೆ. ಒಂದೇ ದಿನದ ಸುತ್ತಾಟಕ್ಕೆ ಸುಸ್ತಾದ ಮುಖ್ಯಮಂತ್ರಿ ಇಂದು ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್​ ಆಗಲಿದ್ದಾರೆ ಎನ್ನಲಾಗಿದೆ.

Related Posts

Don't Miss it !