ಲೋಕಾಯುಕ್ತರ ಮೊದಲ ಬೇಟೆ ಆರಂಭ.. ಮುಂದಿದೆ ಭ್ರಷ್ಟರಿಗೆ ಹಬ್ಬ..!

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ, ಎಸಿಬಿ ಸಂಸ್ಥೆ ಸ್ಥಾಪನೆ ಮೂಲಕ ಲೋಕಾಯುಕ್ತ ಸಂಸ್ಥೆಯ ರೆಕ್ಕೆ ಪುಕ್ಕ ಮುರಿದು ಬಲಹೀನ ಸಂಸ್ಥೆಯನ್ನಾಗಿ ಮಾಡಿತ್ತು. ಇದೀಗ ರಾಜ್ಯ ಹೈಕೋರ್ಟ್​ ಎಸಿಬಿ ಸಂಸ್ಥೆ ರಚನೆಯನ್ನೇ ರದ್ದು ಮಾಡಿದ್ದು ಲೋಕಾಯುಕ್ತ ಸಂಸ್ಥೆಗೆ ಶಕ್ತಿವರ್ಧಕ ಕೊಟ್ಟಂತಾಗಿತ್ತು. ಅದೂ ಅಲ್ಲದೆ ಎಸಿಬಿಯನ್ನೇ ಲೋಕಾಯುಕ್ತ ಸಂಸ್ಥೆ ಜೊತೆಗೆ ಸೇರ್ಪಡೆ ಮಾಡಿದ್ದು ಮತ್ತಷ್ಟು ಶಕ್ತಿ ಬಂದಂತಾಗಿದ್ದು, ಲೋಕಾಯುಕ್ತ ಟೀಂ ಭ್ರಷ್ಟರ ಬೇಟೆ ಶುರು ಮಾಡಿದೆ.

ನಿನ್ನೆ ಸಂಜೆ ಬೆಂಗಳೂರಿನ ಬಿಬಿಎಂಪಿ ಪಶ್ಚಿಮ ವಿಭಾಗ ಜಂಟಿ ಆಯುಕ್ತರ ಕಚೇರಿ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಟೀಂ ಜಂಟಿ ಆಯುಕ್ತ ಶ್ರೀನಿವಾಸ್ ಹಾಗು ಶ್ರೀನಿವಾಸ್​ ಅವರ ಆಪ್ತ ಸಹಾಯಕ ಉಮೇಶ್​ನನ್ನು ಅರೆಸ್ಟ್​ ಮಾಡಿದೆ. ಅಷ್ಟೇ ಅಲ್ಲದೆ 4 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್​ ಹ್ಯಾಂಡ್​ ಆಗಿ ಅರೆಸ್ಟ್​ ಮಾಡಿ ಜೈಲಿಗೆ ಅಟ್ಟುವ ಕೆಲಸ ಮಾಡಿದೆ. ಲೋಕಾಯುಕ್ತ SP ಶ್ರೀನಾಥ್ ಮಹದೇವ್​ ಜೋಶಿ ನೇತೃತ್ವದಲ್ಲಿ ನಡೆದ ದಾಳಿ ಈ ಹಿಂದಿನ ಲೋಕಾಯುಕ್ತರ ಕೆಲಸವನ್ನು ನೆನಪು ಮಾಡುವಂತಿದೆ.

ನ್ಯಾಯಮೂರ್ತಿ ಎನ್​ ವೆಂಕಟಾಚಲ ಹಾಗು ಎನ್​ ಸಂತೋಷ್​ ಹೆಗ್ಡೆ ಕಾಲದಲ್ಲಿ ಲೋಕಾಯುಕ್ತ ಸಂಸ್ಥೆ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿತ್ತು. ಆದರೆ ಭ್ರಷ್ಟಾಚಾರ ತಡೆಯುವುದಕ್ಕೆ ಲೋಕಾಯುಕ್ತ ಸಾಲಲ್ಲ ಎನ್ನುವ ಕಾರಣ ಕೊಟ್ಟಿದ್ದ ಸಿದ್ದರಾಮಯ್ಯ ಸರ್ಕಾರ ಎಸಿಬಿ ರಚನೆ ಮಾಡಿ, ಲೋಕಾಯುಕ್ತದ ಕಾಲು ಕಟ್ಟಿ ಹಾಕಿತ್ತು. ಎಸಿಬಿ ರೇಡ್​ ಮಾಡಿದ ಬಳಿಕ ಎಲ್ಲಾ ಅಧಿಕಾರಿಗಳ ಮೇಲೂ ಬಿ ರಿಪೋರ್ಟ್​ ಹಾಕುತ್ತಿದ್ದದ್ದು ಹೈಕೋರ್ಟ್​ ಗಮನಕ್ಕೂ ಬಂದಿತ್ತು. ಅದೇ ಕಾರಣಕ್ಕೆ ಹೈಕೋರ್ಟ್​ ಎಸಿಬಿ ರಚನೆಯನ್ನೇ ರದ್ದು , ಮಾಡಿತ್ತು. ಇದೀಗ ಹೈಕೋರ್ಟ್​ ಆದೇಶದಂತೆ ರಾಜ್ಯ ಬಿಜೆಪಿ ಸರ್ಕಾರ ಎಲ್ಲಾ ಕೇಸ್​ಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ಸೂಚಿಸಿತ್ತು. ಅದರಂತೆ ಲೋಕಾಯುಕ್ತ ಮರು ಹುಟ್ಟು ಪಡೆದಿದೆ. ಭ್ರಷ್ಟರ ಎದೆಯಲ್ಲಿ ಢವಢವ ಶುರುವಾಗಿದೆ.

ಜಮೀನು ಖಾತೆ ಬದಲಾವಣೆ ಲಕ್ಷ ಲಕ್ಷ ಲಂಚ ಕೇಳಿದ್ದರಿಂದ ಮಂಜುನಾಥ್​ ಎಂಬುವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಸೈಟುಗಳ ಖಾತೆ ಬದಲಾವಣೆಗೆ ಒಟ್ಟು 12 ಲಕ್ಷ ರೂಪಾಯಿ ಲಂಚ ಕೇಳಿದ್ದು, ಅದರಲ್ಲಿ 4 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಕೆಸಿ ಜನರಲ್​ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಜಿಲ್ಲಾ ಹಾಗು ತಾಲೂಕು ಕೇಂದ್ರಗಳಲ್ಲಿ ಕಾಸಿಗೆ ಕೈ ಒಡ್ಡುವ ನೂರಾರು ಅಧಿಕಾರಿಗಳು ರೈತರನ್ನು ಹೆಣಗಾಡಿಸುತ್ತಾರೆ. ನೀವು ಕೂಡ ಲೋಕಾಯುಕ್ತರ ಮೊರೆ ಹೋದರೆ ಬಿಸಿ ಮುಟ್ಟಿಸಬಹುದು.

Related Posts

Don't Miss it !