ಇಂದು ಕಾಲೇಜು ಆರಂಭ.. ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ..!? ಮಕ್ಕಳು ಸೇಫಾ..?

ಹಿಜಬ್​ ಹಾಗೂ ಕೇಸರಿ ಹೊಡೆತಕ್ಕೆ ಸಿಲುಕಿದ್ದ ಕಾಲೇಜು ಶಿಕ್ಷಣ ಇಂದಿನಿಂದ ಮತ್ತೆ ಹಳಿಗೆ ಬರುವ ತವಕದಲ್ಲಿದೆ. ಆದರೆ ಇಂದು ಸಾಕಷ್ಟು ಜಿಲ್ಲೆಗಳಲ್ಲಿ ಏನೆಲ್ಲಾ ಹೈಡ್ರಾಮ ನಡೆಯುತ್ತದೆ ಎನ್ನುವುದು ಕೂಡ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಇಂದು ಹೈಕೋರ್ಟ್​ ಆದೇಶ ಧಿಕ್ಕರಿಸಿ ಧಾರ್ಮಿಕ ಸೂಚಕ ಎಂದು ಆರೋಪಿಸಲಾಗಿರುವ ಹಿಜಬ್​ ಹಾಗೂ ಕೇಸರಿ ಶಲ್ಯ ಧರಿಸಿ ಬಂದರೆ ಕಾಲೇಜು ಪ್ರವೇಶಕ್ಕೆ ಅವಕಾಶ ಸಿಗುವುದು ಬಹುತೇಕ ಅನುಮಾನ. ಈಗಾಗಲೇ ಕಾಲೇಜು ಸುತ್ತಮುತ್ತ 200 ಮೀಟರ್​ ವ್ಯಾಪ್ತಿಒಯಲ್ಲಿ 144 ಸೆಕ್ಷನ್​ ಜಾರಿ ಮಾಡಿದ್ದು. ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರನ್ನು ಹೊರತುಪಡಿಸಿ ಉಳಿದ ಯಾವುದೇ ವ್ಯಕ್ತಿಗೂ ಕಾಲೇಜು ವ್ಯಾಪ್ತಿಗೆ ಪ್ರವೇಶವಿಲ್ಲ ಎಂದು ಎಲ್ಲಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗದ 3 ಕಾಲೇಜುಗಳಿಗೆ ರಜೆ ಘೋಷಣೆ..!

ಹಿಜಬ್​ ಹಾಗೂ ಕೇಸರಿ ಶಲ್ಯದ ವಿವಾದ ಹುಟ್ಟಿದ್ದು ಉಡುಪಿಯಲ್ಲೇ ಆಗಿದ್ದರೂ ಅರದು ಉಗ್ರ ರೂಪ ಪ್ರದರ್ಶನ ಆಗಿದ್ದ ಮಾತ್ರ ಶಿವಮೊಗ್ಗ, ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ. ಇನ್ನು ಮಂಡ್ಯದಲ್ಲಿ ಮುಷ್ಕಾನ್​ ಕೂಗಿದ್ದ ಘೋಷಣೆ ದೇಶ ವಿದೇಶದಲ್ಲೂ ಭರ್ಜರಿ ಪ್ರಚಾರ ಪಡೆದಿತ್ತು. ಇದೀಗ ಶಾಲಾ ಕಾಲೇಜು ಆರಂಭಕ್ಕೆ ಹೈಕೋರ್ಟ್​ ಸೂಚನೆ ಕೊಟ್ಟ ಬಳಿಕ ಮೊದಲು ಶಾಲೆಗಳನ್ನು ಆರಂಭ ಮಾಡಿದ್ದ ಸರ್ಕಾರ ಇಂದಿನಿಂದ ಕಾಲೇಜು ತರಗತಿಗಳನ್ನು ಆರಂಭ ಮಾಡುವುದಕ್ಕೆ ಸಕಲ ತಯಾರಿ ಮಾಡಿಕೊಂಡಿದೆ. ಆದರೆ ಶಿವಮೊಗ್ಗದಲ್ಲಿ ಕಲ್ಲು ತೂರಾಟ ಹಾಗೂ ಕೇಸರಿ ಧ್ವಜ ಹಾರಿಸಿದ ಘಟನೆಗಳು ನಡೆದಿದ್ದು, ಇನ್ನೂ ಕೂಡ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಹೀಗಾಗಿ ಸೂಕ್ಷ್ಮ ಕಾಲೇಜುಗಳು ಎಂದು ಪರಿಗಣಿಸಿ 3 ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಮಗಳು ಗರ್ಭಿಣಿ ಆದರೂ ಕರಗದ ಕೋಪ.. ಆಕ್ಸಿಡೆಂಟ್ ಹೆಸರಲ್ಲಿ ಅಳಿಯನ ಮರ್ಡರ್..!!

ಸಿಡಿಸಿ ನಿರ್ಧಾರದ ಸಮವಸ್ತ್ರ ಪಾಲನೆಗೆ ನಿರ್ಧಾರ..!

ಪಿಯು, ಪದವಿ ಕಾಲೇಜುಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮೊದಲಿಗೆ ಹೈಕೋರ್ಟ್ ಮಧ್ಯಂತರ ಆದೇಶವನ್ನು ಪಾಲಿಸಬೇಕು ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಪೋಷಕರಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಮನವಿ ಮಾಡಿದ್ದಾರೆ. ಯಾರೂ ತರಗತಿಯ ವಾತಾವರಣ ಕೆಡಿಸಬಾರದು. ಕಾನೂನು ಕೈಗೆತ್ತಿಕೊಂಡರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇನ್ನೂ ರಾಜ್ಯದಲ್ಲಿ ಟಿಪ್ಪು ದಿನಾಚರಣೆ ಗಲಾಟೆ ನಂತರ ಸೂಕ್ಷ್ಮ ಪ್ರದೇಶಗಳ ಪಟ್ಟಿಯಲ್ಲಿರುವ ಕೊಡಗು ಜಿಲ್ಲಾಡಳಿತ ಕಾಲೇಜು ತೆರೆಯುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಾಲೇಜು ಅಭಿವೃದ್ಧಿ ಸಮಿತಿ ಈಗಾಗಲೇ ಸೂಚಿಸಿರುವ ಸಮವಸ್ತ್ರ ಧರಿಸಿಯೇ ಕಾಲೇಜುಗಳಿಗೆ ಬರಬೇಕು. ಒಂದು ವೇಳೆ ಈ ಹಿಂದೆಯೇ ಕಾಲೇಜು ಆಡಳಿತ ಮಂಡಳಿ ಸಮವಸ್ತ್ರದ ಜೊತೆಗೆ ಹಿಜಾಬ್​ ಧರಿಸುವುದಕ್ಕೆ ಅವಕಾಶ ನೀಡಿದ್ದರೆ..! ಈಗಲೂ ಹಿಜಬ್​ ಧರಿಸಿ ಬರಬಹುದು ಎಂದು ಕೊಡಗು ಜಿಲ್ಲಾಧಿಕಾರಿ ಡಾ ಬಿ ಸಿ ಸತೀಶ್ ಹೇಳಿದ್ದಾರೆ.

ದಾವಣಗೆಯಲ್ಲೂ ಕಾಲೇಜುಗಳ ಆರಂಭಕ್ಕೆ ಗ್ರೀನ್​ ಸಿಗ್ನಲ್​..!

ಇಂದಿನಿಂದ ಕಾಲೇಜು ತರಗತಿಗಳು ಆರಂಭ ಆಗಲಿವೆ, ಮುಂದಿನ ಶನಿವಾರದ ತನಕ ಜಿಲ್ಲೆಯಲ್ಲಿ 144 ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ. ಸೂಕ್ಷ್ಮ ಪ್ರದೇಶದ ಕಾಲೇಜುಗಳಿಗೆ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಹೈಕೋರ್ಟ್ ಆದೇಶವನ್ನು ಅಕ್ಷರಶಃ ಪಾಲನೆ ಮಾಡಲು ಜಿಲ್ಲಾಡಳಿತ ಕಟಿಬದ್ಧವಾಗಿದೆ. ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧ ಮಾಡಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಶೈಕ್ಷಣಿಕ ಸಿಬ್ಬಂದಿ ಹೊರತುಪಡಿಸಿ ಬೇರೆ ವ್ಯಕ್ತಿಗಳಿಗೆ ಪ್ರವೇಶ ಇಲ್ಲ ಎಂದಿದ್ದಾರೆ. ಇನ್ನೂ ರಾಜ್ಯದ ಇತರೆ ಭಾಗಗಳಲ್ಲೂ ಕಾಲೇಜು ತರಗತಿಗಳು ಆರಂಭ ಆಗುವುದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಕಾನೂನು ಕೈಗೆತ್ತಿಕೊಳ್ಳಲು ಮುಂದಾದರೂ ನಿಯಂತ್ರಣಕ್ಕೆ ಆರಕ್ಷಕ ಪಡೆ ಸಜ್ಜಾಗಿದೆ. ಹೈಕೋರ್ಟ್​ ಆದೇಶ ಪಾಲಿಸಿದ್ರೆ ಎಲ್ಲರಿಗೂ ಕ್ಷೇಮ.

ಇದನ್ನೂ ಓದಿ: ಕುಸಿದು ಬೀಳುವುದು, ಮೆದುಳು ನಿಷ್ಕ್ರಿಯ.. ಯುವ ಸಮುದಾಯಕ್ಕೆ ಆತಂಕ..!

ಹಿಜಬ್​ ಧರಿಸದೆ ಹಾಜರಾಗ್ತಾರಾ ಮುಸ್ಲಿಂ ಮಕ್ಕಳು..?

ಈಗಾಗಲೇ ಹಿಜಬ್​ ಧರಿಸಿಕೊಂಡು ಕಾಲೇಜಿಗೆ ಬರುವುದಕ್ಕಾಗಿ ಪಟ್ಟು ಹಿಡಿದಿರುವ ಮಕ್ಕಳು ಇಂದು ಕಾಲೇಜಿಗೆ ಹಾಜರಾಗುವುದು ಬಹುತೇಕ ಅನುಮಾನ ಎಂದು ಹೇಳಲಾಗ್ತಿದೆ. ಹಿಜಬ್​ ಧರಿಸದೆ ಕಾಲೇಜಿಗೆ ಹೋಗುವುದಾಗಿದ್ದರೆ ಒಂದು ತಿಂಗಳ ಕಾಲ ನಡೆದ ಸಂಧಾನದ ಬಳಿಕ ಕಾಲೇಜಿಗೆ ತೆರಳುತ್ತಿದ್ದರು. ಆದರೆ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧಾರಕ್ಕೆ ಸಡ್ಡು ಹೊಡೆದು ನಿಂತಿದ್ದೇ ಕಾನೂನು ಮೂಲಕ ನ್ಯಾಯ ಪಡೆದುಕೊಳ್ಳುವ ಉದ್ದೇಶದಿಂದ. ಪರಿಸ್ಥಿತಿ ಹೀಗಿರುವಾಗ ಹೈಕೋರ್ಟ್​ ಮಧ್ಯಂತರ ಆದೇಶಕ್ಕೆ ಮನ್ನಣೆ ಕೊಡುವುದು ತೀರಾ ಕಡಿಮೆ ಎಂದೇ ಹೇಳಲಾಗ್ತಿದೆ. ಇಂದೂ ಕೂಡ ಕಾಲೇಜು ಬಳಿಗೆ ಹಿಜಬ್​ ಧರಿಸಿ ಬಂದು ಪ್ರತಿಭಟನೆ ವ್ಯಕ್ತಪಡಿಸಿ ವಾಪಸ್​ ಆಗಲಿದ್ದಾರೆ ಎನ್ನಲಾಗಿದೆ. ಇನ್ನೂ ಬೇರೆ ಬೇರೆ ಜಿಲ್ಲೆಗಳಲ್ಲೂ ಹೀಗಾಗಲೇ ಹಿಜಬ್​ ಕಿಚ್ಚು ರಂಗು ಪಡೆದುಕೊಂಡಿದ್ದು, ಉಳಿದ ಕೆಲವು ಜಿಲ್ಲೆಗಳಲ್ಲೂ ಹೈಡ್ರಾಮಾ ಖಚಿತ.

Related Posts

Don't Miss it !