ಹಿಂದೂಗಳ ಗಣೇಶೋತ್ಸವ ಕನಸಿಗೆ ಬ್ರೇಕ್​.. ಹೈಕೋರ್ಟ್​ ಆದೇಶಕ್ಕೆ ಕಾರಣ ಏನು..?

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಮಾಡಲು ಅವಕಾಶ ಕೊಡಬೇಕು ಅನ್ನೋದು ಹಿಂದೂಪರ ಸಂಘಟನೆಗಳ ಆಗ್ರಹವಾಗಿತ್ತು. ಗಣೇಶ ಕೂರಿಸುವ ವಿಚಾರದಲ್ಲೇ ಈಗಾಗಲೇ ಪೈಪೋಟಿ ಶುರುವಾಗಿತ್ತು. ಆದರೆ ಇದೀಗ ಹೈಕೋರ್ಟ್​ ಆದೇಶ ಎಲ್ಲದ್ದಕ್ಕೂ ಫುಲ್​ ಸ್ಟಾಪ್​ ಇಟ್ಟಿದೆ. ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎನ್ನುವ ಬಿಬಿಎಂಪಿ ಆದೇಶವನ್ನು ರದ್ದು ಕೋರಿ ರಾಜ್ಯ ವಕ್ಫ್​ ಮಂಡಳಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿರುವ ಹೈಕೋರ್ಟ್​ ಚಾಮರಾಜಪೇಟೆ ಆಟದ ಮೈದಾನ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ, ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡುವ ತನಕ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆದೇಶ ನೀಡಿದೆ.

ಹೈಕೋರ್ಟ್​ ನೀಡಿರುವ ಮಧ್ಯಂತರ ಆದೇಶದಲ್ಲಿ ಏನಿದೆ..?

ಚಾಮರಾಜಪೇಟೆ ಆಟದ ಮೈದಾನ ವಕ್ಫ್​​ ಬೋರ್ಡ್​ ಸೇರಿದ್ದಲ್ಲ. ಅದು ಕಂದಾಯ ಇಲಾಖೆಗೆ ಸೇರಿದ ಜಾಗ ಎಂದು ಬಿಬಿಎಂಪಿ ಇತ್ತೀಚಿಗೆ ಆದೇಶ ಹೊರಡಿಸಿತ್ತು. ಕಳೆದ ಆಗಸ್ಟ್​ 15ರಂದು ಇದೇ ಮೊದಲ ಬಾರಿಗೆ ಧ್ವಜಾರೋಹಣ ಕೂಡ ನೆರವೇರಿತ್ತು. ಆದರೆ ಹಿಂದೂಗಳು ಗಣೇಶೋತ್ಸವ ಮಾಡಲು ಮುಂದಾಗ್ತಿದ್ದ ಹಾಗೆ ಹೈಕೋರ್ಟ್​ ಮೆಟ್ಟಿಲೇರಿದ್ದ ವಕ್ಫ್​ ಬೋರ್ಡ್​ ಬಿಬಿಎಂಪಿ ಆದೇಶಕ್ಕೆ ತಡೆ ಕೋರಿತ್ತು. ಸೆಪ್ಟೆಂಬರ್​ 23ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿರುವ ಹೈಕೋರ್ಟ್​ ಮಧ್ಯಂತರ ಆದೇಶದಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಬೇಕು. ಆಟದ ಮೈದಾನಕ್ಕೆ ಮಾತ್ರ ಬಳಸಬೇಕು. ಜೊತೆಗೆ ಮುಸ್ಲಿಮರ ರಂಜಾನ್, ಬಕ್ರೀದ್ ಹಬ್ಬದಂದು ಪ್ರಾರ್ಥನೆಗೆ ಅವಕಾಶವಿದೆ. ಆದರೆ ಪ್ರತಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶವಿಲ್ಲ ಎಂದಿದೆ.

ಆಟದ ಮೈದಾನ ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ..!

ಹೈಕೋರ್ಟ್​ ಏಕಸದಸ್ಯ ಪೀಠದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದ್ದು ಯಾವುದೇ ಕಾರಣಕ್ಕೂ ಬೇರೆ ಬೇರೆ ಚಟುವಟಿಕೆಗೆ ಅವಕಾಶ ಕೊಡಬಾರದು, ಧ್ವಜಾರೋಹಣ ಮಾಡುವುದಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಯಾವುದೇ ವಿವಾದಕ್ಕೆ ಆಸ್ಪದ ಮಾಡಿಕೊಡಬೇಡಿ ಎಂದು ರಾಜ್ಯ ಸರ್ಕಾರ ಹಾಗು ವಿವಿಧ ಸಂಘ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಹೈಕೋರ್ಟ್​ ಆದೇಶದ ಬಳಿಕ ಈ ಬಗ್ಗೆ ಮಾತನಾಡಿದ ವಕ್ಫ್​ ಬೋರ್ಡ್​ ಅಧ್ಯಕ್ಷ ಮೊಹಮ್ಮದ್ ಶಫಿ ಸಅದಿ, ಗಣೇಶೋತ್ಸವ ವಿಚಾರವೇ ಚರ್ಚೆಗೆ ಬರೋದಿಲ್ಲ. ಹೈಕೋರ್ಟ್​ ಆದೇಶ ಸೂಕ್ತವಾಗಿದೆ ಎಂದಿದ್ದಾರೆ. ಆದರೆ ಹಿಂದೂಗಳು ಮಾತ್ರ ಬೇಸರ ನಡುವೆ ಹೈಕೋರ್ಟ್​ ಆದೇಶ ಪಾಲಿಸುತ್ತೇವೆ ಎಂದಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಹಿಂದೂ ಸಂಘಟನೆಗಳು ಅನುಮಾನ ವ್ಯಕ್ತಪಡಿಸುತ್ತಿವೆ. ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಹಿಂದೂಗಳ ಕೋಪಕ್ಕೆ ಸರ್ಕಾರ ತುತ್ತಾಗಿದೆ.

ವಕ್ಫ್​ಬೋರ್ಡ್​ ಸರ್ಕಾರದ ಅಧೀನದಲ್ಲಿದೆಯೋ ಇಲ್ಲವೋ..?

ರಾಜ್ಯ ವಕ್ಫ್​ ಬೋರ್ಡ್​ ರಾಜ್ಯ ಸರ್ಕಾರದ ಅಧೀನದಲ್ಲಿ ಇರುವ ಒಂದು ಸಂಸ್ಥೆ. ಆ ಸಂಸ್ಥೆಗೆ ಅಧ್ಯಕ್ಷ ಹಾಗು ಸದಸ್ಯರನ್ನೂ ಸರ್ಕಾರವೇ ನೇಮಿಸುತ್ತದೆ. ಆದರೆ ವಕ್ಫ್​​ ಬೋರ್ಡ್​ ಸರ್ಕಾರದ ವಿರುದ್ಧವೇ ಕೋರ್ಟ್ ಮೆಟ್ಟಿಲೇರುತ್ತದೆ. ಹಿಂದೂಗಳ ಗಣೇಶೋತ್ಸವಕ್ಕೆ ಅನುಮತಿ ನೀಡಿದರೆ ಮುಸ್ಲಿಂ ಸಮುದಾಯದ ಕೋಪ ತಾರಕ್ಕಕ್ಕೇರುತ್ತದೆ. ಗಣೇಶ ಹಬ್ಬದ ಸಮಯದಲ್ಲಿ ಕೋಮುಗಲಭೆ ಸೃಷ್ಟಿಯಾದರೆ ನಿಯಂತ್ರಣ ಮಾಡುವುದು ಕಷ್ಟವಾಗಲಿದೆ ಎನ್ನುವುದು ಸರ್ಕಾರದ ನಿರ್ಧಾರದ ಹಿಂದಿನ ಉದ್ದೇಶ ಎನ್ನಲಾಗ್ತಿದೆ. ಆದರೂ ಹಿಂದೂ ಸಂಘಟನೆಗಳ ಕೋಪ ತಾರಕ್ಕೇರಿದೆ. ಹೈಕೋರ್ಟ್​ ಆದೇಶದ ವಿರುದ್ಧ ಮಾತನಾಡಬಾರದು ಎನ್ನುವ ಕಾರಣಕ್ಕೆ ಯಾರೊಬ್ಬರೂ ಯಾವುದೇ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಆಕ್ರೋಶ ಸರ್ಕಾರವನ್ನು ಕಾಡಲಿದೆ ಎನ್ನುತ್ತಾರೆ ಹಿಂದೂ ಮುಖಂಡರು.

Related Posts

Don't Miss it !