JDS​ ಶಾಸಕರದ್ದು ಚೈಲ್ಡೀಶ್, ಪ್ರತಾಪ್​ ಸಿಂಹದು ಮೂರ್ಖತನ.. ಜಗಳಕ್ಕೆ ಆಹ್ವಾನ..

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ವಿಚಾರವಾದರೂ ವಿವಾದದ ಸ್ವರೂಪ ಪಡೆಯುವುದು ಸಾಮಾನ್ಯವಾಗಿದೆ. ಬುಧವಾರ ನಡೆದ ದಿಶಾ ಸಭೆಯಲ್ಲಿ ಜೆಡಿಎಸ್​ ಶಾಸಕರು ಸಂಸದರ ವಿರುದ್ಧ ಮುಗಿಬಿದ್ದಿದ್ದರು. ಒಂದೊಂದೇ ವಿಚಾರಗಳನ್ನು ಹಿಡಿದುಕೊಂಡು ಅಧಿಕಾರಿಗಳು ಹಾಗೂ ಸಂಸದರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಾ ಇಡೀ ಸಭೆ ವಾಗ್ವಾದದ ಸಭೆ ಆಗುವಂತೆ ಮಾಡಿದ್ರು. ಮಂಡ್ಯ ಜಿಲ್ಲೆಯಲ್ಲಿ ಸಂಪೂರ್ಣ ಜೆಡಿಎಸ್​ ಶಾಸಕರೇ ಇರುವ ಕಾರಣ ಸಂಸದೆ ಸುಮಲತಾ ಉತ್ತರ ಕೊಡುವ ಸಂಕಷ್ಟಕ್ಕೆ ಸಿಲುಕಿದ್ದು ಸುಳ್ಳಲ್ಲ. ಸಭೆ ಬಳಿಕ ಶಾಂತವಾಗಿದ್ದ ಸುಮಲತಾ ಕೆಆರ್​ಎಸ್​ ಬಳಿ ಗುಡುಗಿದ್ದಾರೆ.

ಮಂಡ್ಯಕ್ಕೆ ಮಾತ್ರ ಕಾನೂನು ಬೇರೆ ಇದ್ಯಾ..?

ಗಣಿ ಅಧಿಕಾರಿಗೆ ಜೆಡಿಎಸ್​ ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸಿ.ಎಸ್.ಪುಟ್ಟರಾಜು ವಾಗ್ದಾಳಿ ಮಾಡಿದ್ದು, ಹೆದ್ದಾರಿ ಆದರೆ ಹೈವೇ ರೋಡ್ ಒಂದು ಆದರೆ ಸಾಕಾ..? ಬೇರೆ ಇನ್ಯಾವುದೇ ಅಭಿವೃದ್ಧಿ ಕೆಲಸ ಆಗಬಾರದಾ..? ಕೈ ಕುಳಿ ಕೆಲಸ ಮಾಡುವ ಬಡವರ ಹೊಟ್ಟೆ ಮೇಲೆ ಯಾಕೆ ಕಲ್ಲಾಕ್ತಿದ್ದೀರಿ ಎಂದಿರುವ ಅವರು, ಇಡೀ ರಾಜ್ಯಕ್ಕೆ ಇಲ್ಲದ ಕಾನೂನು ಮಂಡ್ಯಕ್ಕಿದೆಯಾ..? ಎಂದು ಪ್ರಶ್ನಿಸಿದ್ದಾರೆ. ಅಕ್ರಮ ಗಣಿಗಾರಿಕೆ ಹೆಸರಲ್ಲಿ ಸಕ್ರಮ ಮಾಡುವವರಿಗೆ ಯಾಕೆ ತೊಂದರೆ ಕೊಡ್ತಿದ್ದೀರಿ..? ಯಾವ ಅಭಿವೃದ್ಧಿ ಕಾಮಗಾರಿಗೂ ಮೆಟೀರಿಯಲ್ ಸಿಕ್ತಿಲ್ಲ ಎಂದು ಸಂಸದರ ಮೇಲಿನ ಕೋಪವನ್ನ ಅಧಿಕಾರಿಗಳ ಮೇಲೆ ತೀರಿಸಿಕೊಂಡಿದ್ದಾರೆ. ಸಭೆ ಆರಂಭಕ್ಕೂ ಮುನ್ನವೇ ಪ್ರಶ್ನೆ ಯಾಕೆ ಮಾಡ್ತೀರ ಎಂದ ಸಂಸದೆ ಸುಮಲತಾ ಅವರಿಗೆ ತಿರುಗೇಟು ಕೊಟ್ಟ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ ಮಾಡೋದೇ ತಪ್ಪಾ ಎಂದು ಮರು ಪ್ರಶ್ನೆ ಮಾಡಿದ್ರು.

ಇದನ್ನೂ ಓದಿ

ದಿಶಾ ಸಭೆ ಬಳಿಕ ಕೆಆರ್​ಎಸ್​ಗೆ ಭೇಟಿ ನೀಡಿದ್ದ ಸಂಸದೆ ಸುಮಲತಾ ಜೆಡಿಎಸ್​ ಶಾಸಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. KRS ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಸುಮಲತಾ, ದಿಶಾ ಸಭೆಗೆ JDS ಶಾಸಕರು ಯಾಕೆ ಬಂದ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ಕಳೆದ 7 ಸಭೆಗೆ ಬಾರದವರು 8ನೇ ಸಭೆಗೆ ಬಂದಿದ್ದಾರೆ ಎಂದರೆ ಏನರ್ಥ..? ಸಭೆಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆ ಮಾಡಬಹುದಿತ್ತು. ಆದ್ರೆ ಅಕ್ರಮ ಗಣಿಗಾರಿಕೆಯನ್ನ ಸಮರ್ಥನೆ ಮಾಡೋಕೆ ಸಭೆಗೆ ಬಂದಿದ್ದರು, ಇದು ಮಂಡ್ಯ ಜಿಲ್ಲೆಯ ದುರಂತ ಎಂದು ವ್ಯಾಖ್ಯಾನ ಮಾಡಿದ್ದಾರೆ.

ಪ್ರತಾಪ್​ ಸಿಂಹ ವಿರುದ್ಧ ಸುಮಲತಾ ಗುಡುಗು..!

ಬೆಂಗಳೂರು – ಮೈಸೂರು ಹೆದ್ದಾರಿ ಯೋಜನೆಯನ್ನು ತಂದಿದ್ದು ನಾನು ಎಂದಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ವಿರುದ್ಧ ಸುಮಲತಾ ವಾಗ್ದಾಳಿ ಮಾಡಿದ್ದಾರೆ. ಹೆದ್ದಾರಿ ನಿರ್ಮಾಣದ ಯೋಜನೆಯನ್ನು ನಾನೇ ತಂದೆ ಎನ್ನುವುದು ಮೂರ್ಖತನ. ಯಾರ ಮನೆಯಿಂದಲೂ ಹಣ ತಂದು ಯಾವ ಯೋಜನೆಯನ್ನು ಮಾಡ್ತಿಲ್ಲ. ಸಾರ್ವಜನಿಕರ ಹಣದಲ್ಲಿ ಯೋಜನೆಗಳು ಆಗೋದು. ನನ್ನ ಜನರ ಪರವಾಗಿ ನಿಲ್ಲುವುದು ನನ್ನ ಜವಾಬ್ದಾರಿ. ಮಂಡ್ಯ ಜಿಲ್ಲೆಯಲ್ಲಿ 58 ಕಿಲೋ ಮೀಟರ್​ ಹೆದ್ದಾರಿ ಆಗುತ್ತಿದೆ. ಮೈಸೂರಿಗೆ ನಾಲ್ಕೈದು ಕಿಲೋ ಮೀಟರ್​ ಮಾತ್ರ ಇದೆ. ನನ್ನ ಜಿಲ್ಲೆಯ ಜನರಿಗೆ ಯಾರು ಉತ್ತರ ನೀಡ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಪ್ರತಾಪ್​ ಸಿಂಹ ಯಾವ ಉದ್ದೇಶಕ್ಕೆ ನನ್ನನ್ನು ವಿರೋಧಿಸ್ತಾರೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಆ‌ ವಿಚಾರವನ್ನ ಎಲ್ಲಿ ಹೇಳಬೇಕೊ ಅಲ್ಲೇ ಹೇಳ್ತಿನಿ ಎನ್ನುವ ಮೂಲಕ ಪ್ರತಾಪ್​ ಸಿಂಹಗೆ ಟಾಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ;

ಜೆಡಿಎಸ್​ ಶಾಸಕರು ಚೈಲ್ಡೀಶ್​ ಬುದ್ಧಿ ಬಿಡಲಿ..!

ಸುಮಲತಾ ಆಪ್ತರನ್ನ ಸಭೆಯಿಂದ ಹೊರಗಿಡಿ ಎಂಬ JDS ಶಾಸಕರ ಹೇಳಿಕೆಗೆ ಉತ್ತರ ಕೊಟ್ಟಿರುವ ಸಂಸದೆ ಸುಮಲತಾ, ನನ್ನ ಸಿಬ್ಬಂದಿ ಎಲ್ಲರೂ ಅಧಿಕೃತ. ದಿಶಾ ಸಭೆ ಗೌಪ್ಯ ಸಭೆಯಲ್ಲ. JDS ಶಾಸಕರು ಸಭೆಗೆ ಬಂದಿದ್ದೇ ಅಡ್ಡಿಪಡಿಸಲು. ಜೆಡಿಎಸ್ ಶಾಸಕರು​ ಬರ್ತಾರೆ ಎಂದಾಗ ಸಭೆ ನಿಲ್ಲಿಸುವ ಉದ್ದೇಶಕ್ಕೆ ಬರ್ತಿದ್ದಾರೆ ಎನ್ನುವುದು ಗೊತ್ತಿತ್ತು. ಕೋವಿಡ್ ಸಂದರ್ಭದಲ್ಲೂ ಸಭೆಗೆ ಬಾರದವರು ಸಭೆಗೆ ಬಂದಿದ್ದಾರೆ. ನನ್ನ ಆಪ್ತ ಕಾರ್ಯದರ್ಶಿ ನನ್ನ ಹೆಸರಿನಲ್ಲಿ ಸಹಿ ಮಾಡ್ತಿಲ್ಲ. ಆಪ್ತ ಕಾರ್ಯದರ್ಶಿ ಎಂದೇ ಸಹಿ ಮಾಡ್ತಿದ್ದಾರೆ. ಜೆಡಿಎಸ್​​ ಶಾಸಕರು ಚೈಲ್ಡಿಶ್ ಆಗಿ ಬಿಹೇವ್ ಮಾಡೋದನ್ನು ಬಿಡಲಿ. ನನ್ನನ್ನ ಹೆದರಿಸಿ ಬೆದರಿಸಿದ್ರೆ ನಾನು ಹೆದರೋಳಲ್ಲ. ನನ್ನ ಶಕ್ತಿ ಹಾಗೂ ಸ್ಪೂರ್ತಿ ಬಗ್ಗೆ ಅವರಿಗೆ ಗೊತ್ತಿಲ್ಲ. ಅಕ್ರಮ ಗಣಿಗಾರಿಕೆ ನಿಂತಿದ್ದರಿಂದ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ. ಇದು 500% ಸತ್ಯ.JDS ಶಾಸಕರಿಗೆ ಚಿಕಿತ್ಸೆ ಅಗತ್ಯ ಇದೆ ಎಂದು ಚುಚ್ಚಿದ್ದಾರೆ.

ತಣ್ಣನೆಯ ಉತ್ತರ ಕೊಟ್ಟ ಕುಮಾರಸ್ವಾಮಿ..!

ಮಂಡ್ಯ ಗಲಾಟೆ ಬಗ್ಗೆ ಕೋಲಾರದಲ್ಲಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಮಂಡ್ಯದಲ್ಲಿ ಗಣಿಗಾರಿಕೆ ವಿಚಾರದ ಗದ್ದಲ ಆಗಿದೆ. ದಿಶಾ ಸಭೆಯಲ್ಲಿ ಸಂಸದೆ ಸುಮಲತಾ ಗಣಿಗಾರಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ಹೆಣ್ಣುಮಗಳ ಬಗ್ಗೆ ನಾನೇನೇ ಮಾತನಾಡಿದರೂ ತಿರುಚುವಂತಾಗುತ್ತದೆ. ಅಕ್ರಮ ಗಣಿಗಾರಿಕೆ ನಡೀತಿದ್ದರೆ ಸರ್ಕಾರ ಕ್ರಮ ಜರುಗಿಸಲಿ ಎಂದಿದ್ದಾರೆ. ಇನ್ನೂ ಹೆದ್ದಾರಿ ಕಾಮಗಾರಿ ಬಗ್ಗೆ ಮಾತನಾಡಿದ್ದ ಸಂಸದೆ ಸುಮಲತಾ ಮಾತಿಗೆ ತಣ್ಣನೆಯ ತಿರುಗೇಟು ಕೊಟ್ಟಿದ್ದು, ಅವರು ತಾಂತ್ರಿಕ ತಜ್ಞರು ಇರಬಹುದು, ನಾನು ಸಾಮಾನ್ಯ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದಾರೆ.

Related Posts

Don't Miss it !