RSS ನಾಯಕರ​ ಭೇಟಿ ಬಳಿಕ ಜಗದೀಶ್​ ಶೆಟ್ಟರ್​ ಬಹಿರಂಗ ಅಸಮಾಧಾನ..!

ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಬಳಿಕ ಬಿಜೆಪಿಯಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಆದರೆ ಬಹಿರಂಗವಾಗಿ ಏನನ್ನೂ ಹೇಳದೆ ಎಲ್ಲವೂ ಗುಪ್ತ್​ ಗುಪ್ತ್​ ಎನ್ನುವಂತೆ ಸಂಧಾನ ಸಭೆಗಳು, ಮನವೊಲಿಕೆ ಯತ್ನಗಳು ನಡೆಯುತ್ತಿವೆ. ನಿನ್ನೆಯಷ್ಟೇ ನಾನು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡಲ್ಲ ಎನ್ನುವ ಮೂಲಕ ಜಗದೀಶ್​ ಶೆಟ್ಟರ್​ ಅಸಮಾಧಾನ ಹೊರಹಾಕಿದ್ದರು. ಆದರೆ ನಾನು ಸಿಎಂ ಆಗಿದ್ದವನು, ಈಗ ಸಚಿವನಾಗಿ ಕೆಲಸ ಮಾಡುವುದು ಸರಿಯಲ್ಲ. ಹಾಗಾಗಿ ನಾನು ಮಂತ್ರಿ ಆಗುವುದಿಲ್ಲ ಅಷ್ಟೆ. ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ತೇಪೆ ಸಾರುವ ಕೆಲಸ ಮಾಡಿದ್ದರು. ಆದರೆ ಇಂದು ಅಸಮಾಧಾನ ಬಹಿರಂಗ ಮಾಡಿದ್ದಾರೆ.

ಜಗದೀಶ್​ ಶೆಟ್ಟರ್​ ಬಹಿರಂಗ ಅಸಮಾಧಾನ..!

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಹುಬ್ಬಳ್ಳಿಯಲ್ಲಿರೋ RSS ಕಚೇರಿಯಿಂದ ಕೇಶವ ಕುಂಜಕ್ಕೆ ಭೇಟಿ ನೀಡಿದ್ದ ಬಳಿಕ ಅಸಮಾಧಾನ ಹೊರಹಾಕಿದ್ದಾರೆ. RSS ಮುಖಂಡರ ಭೇಟಿ ಬಳಿಕ ಮಾತನಾಡಿದ ಜಗದೀಶ್​ ಶೆಟ್ಟರ್ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸರ್ಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ನಾನು ಸ್ವಾಭಿಮಾನ ಬಿಟ್ಟು ಹೇಗೆ ಸಚಿವ ಸಂಪುಟ ಸೇರಲಿ ಎಂದಿದ್ದಾರೆ. ನನಗೂ ಸ್ವಾಭಿಮಾನ, ನೈತಿಕತೆ ಇದೆ. ನಾನು ಬಿಜೆಪಿ ಶಾಸಕನಿದ್ದೇನೆ. ಮಂತ್ರಿ ಸ್ಥಾನ ಇಲ್ಲದಿದ್ದರೂ ಅಭಿವೃದ್ಧಿ ಮಾಡಬಹುದು‌. ನಾನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಭಾಗದವರೇ ಇದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಧಾರವಾಡ ಜಿಲ್ಲೆಯವರೇ ಆಗಿದ್ದಾರೆ. ನಾನು ಶಾಸಕನಾಗಿಯೇ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದಿದ್ದಾರೆ ಜಗದೀಶ್ ಶೆಟ್ಟರ್.

ಸಿಎಂ ಭೇಟಿಯಿಂದ ಹಿಂದೆ ಸರಿದಿದ್ದು ಯಾರು​..!

ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಬಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ವಾಪಸ್​ ಆಗುತ್ತಿದ್ದರು. ಈ ವೇಳೆ ಶೆಟ್ಟರ್​ ನಿವಾಸಕ್ಕೆ ಹೋಗಿ ಮಾತನಾಡುವ ಇಚ್ಛೆ ಹೊಂದಿದ್ದರು. ಇದೇ ಕಾರಣಕ್ಕಾಗಿ ಶೆಟ್ಟರ್​ ನಿವಾಸದ ಬಳಿ ಪೊಲೀಸರು ಬ್ಯಾರಿಕೇಡ್​ ಹಾಕಿ ಸಕಲ ತಯಾರಿ ಮಾಡಿಕೊಂಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ನಿರ್ಧಾರ ಬದಲಿಸಿದ ಜಗದೀಶ್​ ಶೆಟ್ಟರ್​ ಮುಖ್ಯಮಂತ್ರಿ ಭೇಟಿ ಕಾರ್ಯಕ್ರಮದಿಂದ ದೂರ ಉಳಿದರು ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ರದ್ದು ಮಾಡಿ ಬೆಂಗಳೂರಿಗೆ ವಾಪಸ್​ ಆಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಇಬ್ಬರು ನಾಯಕರ ನಡುವೆ ಕಂದಕ ಏರ್ಪಟ್ಟಿದೆ ಎನ್ನುವುದು ಮಾತ್ರ ಸತ್ಯ. ಇದನ್ನು The Public Spot ನಿನ್ನೆಯೇ ಬಹಿರಂಗ ಮಾಡಿತ್ತು.

ಆರ್​ಎಸ್​ಎಸ್​ ನಾಯಕರ ಭೇಟಿ, ಚರ್ಚೆ..!

ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರದ ಬಳಿಕ ಆರ್​ಎಸ್​ಎಸ್​ ಕಣ್ಣು ಕೆಂಪಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹುಬ್ಬಳ್ಳಿಯ ಕೇಶವ ಕುಂಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆ ಅಷ್ಟೇ ಭೇಟಿ ನೀಡಿದ್ದರು. ಆರ್​ಎಸ್ಎಸ್ ಮುಖಂಡ ಮಂಗೇಶ ಭೇಂಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇತ್ತ ಬೆಂಗಳೂರಿನಲ್ಲಿ ಆರ್​ಎಸ್​ಎಸ್​ ಕಚೇರಿ ಕೇಶವ ಕೃಪಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ಸಿಎಂ, ಮಾಜಿ ಸಿಎಂ ಭೇಟಿ ಬಳಿಕ ಹುಬ್ಬಳ್ಳಿಯ ಕೇಶವ ಕೃಪಕ್ಕೆ ಜಗದೀಶ್​ ಶೆಟ್ಟರ್​ ಭೇಟಿ ನೀಡಿದ್ದರು. ತದನಂತರ ಸರ್ಕಾರದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಸಾಕಷ್ಟು ರಾಜಕೀಯ ಬೆಳವಣಿಗೆಗಳಿಗೆ ಸಾಕಷ್ಟಿಯಾಗಿದೆ.

Related Posts

Don't Miss it !