‘ಕಾಲು ಸಂಕ’ಕ್ಕೆ ಸಾವಿನ ಸುಂಕ ಕೊಟ್ಟ ಮೇಲೆ ಸೇತುವೆ ನಿರ್ಮಾಣ.! ತಪ್ಪು ಯಾರದ್ದು..?

ಕರಾವಳಿ ಹಾಗು ಮಲೆನಾಡು ಭಾಗದಲ್ಲಿ ಸಾಕಷ್ಟು ತೋಡುಗಳು, ಹಳ್ಳಗಳು ನದಿಗಳು ಹರಿಯುವುದು ಸಾಮಾನ್ಯ. ಆದರೆ ಅಲ್ಲಿನ ಜನರು ಮಳೆಗಾಲದಲ್ಲಿ ಸಂಚಾರ ಮಾಡುವುದು ದುಸ್ತರ ಎನ್ನಬಹುದು. ಕಾಲು ಸಂಕ ಅಂದರೆ ಬಿದಿರಿನ ಬಂಬುಗಳನ್ನು ಕಟ್ಟಿಕೊಂಡು ಸೇತುವೆ ರೀತಿಯಲ್ಲಿ ಮಾಡಿಕೊಂಡು ಸಂಚಾರ ಮಾಡಲು ಬಳಸುವ ಮಾರ್ಗ. ಇದರ ಆಶ್ರದಲ್ಲಿಯೇ ಜನರು ಓಡಾಡಬೇಕಾದ ಪರಿಸ್ಥಿತಿ ಇದೆ. ಆದರೆ ಇದೇ ರೀತಿಯ ಕಾಲು ಸಂಕದ ಮೇಲೆ ನಡೆಯುವಾಗ ಆಯತಪ್ಪಿ ಬಿದ್ದ 7 ವರ್ಷದ ಕಂದಮ್ಮ ನೀರು ಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿಯಲ್ಲಿ ನಡೆದಿದೆ. 2ನೇ ತರಗತಿ ಓದುತ್ತಿದ್ದ ಸನ್ನಿಧಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಆ ಬಳಿಕ ಬೈಂದೂರು ಶಾಸಕ ಸುಕುಮಾರಶೆಟ್ಟರು ಬಾಲಕಿಯ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಶಾಲಾ ಶಿಕ್ಷಕರ ತಪ್ಪೋ..? ಪೋಷಕರ ನಿರ್ಲಕ್ಷ್ಯವೋ..?

ಪ್ರತಿದಿನ ಶಾಲೆ ಬಿಟ್ಟ ಕೂಡಲೇ ಪೋಷಕರು ಬಂದು ಮಕ್ಕಳನ್ನು ಜೋಪಾನವಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದರು. ಆದರೆ, ನಿನ್ನೆ ಸೋಮವಾರ ಶಾಲೆ ಮಧ್ಯಾಹ್ನವೇ ಬಿಟ್ಟಿದ್ದರಿಂದ ಪೋಷಕರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಹಾಗಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿರಲಿಲ್ಲ. ಮಕ್ಕಳೇ ಕಾಲು ಸಂಕದ ಮೇಲೆ ಹೋಗುವುದಕ್ಕೆ ಹೋದಾಗ ಆಯತಪ್ಪಿ ಕೆಳಕ್ಕೆ ಸನ್ನಿಧಿ ಬಿದ್ದಿದ್ದಾಳೆ ಎನ್ನಲಾಗಿದೆ. ಆದರೆ ಶಾಸಕರು ಹೇಳುವ ಪ್ರಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆಯಲ್ಲಿ ಎರಡನೇ ತರಗತಿಯ ಕಲಿಯುತ್ತಿದ್ದ ಸನ್ನಿಧಿ ಹಾಗು ಇತರೆ ಮಕ್ಕಳನ್ನು ಮನೆಗೆ ಕಳುಹಿಸುವಾಗ ಕಾಲು ಸಂಕ ದಾಟಿಸಲು ಶಾಲೆಯ ಆಯ ಬಂದಿದ್ದರು ಎಂದಿದ್ದಾರೆ. ಪೋಷಕರಿಗೆ ಮಾಹಿತಿ ನೀಡದೆ ಮಧ್ಯಾಹ್ನವೇ ಶಾಲೆ ಬಿಟ್ಟು ಕಳುಹಿಸಿದ ಶಾಸಕರ ತಪ್ಪೋ..? ಮಕ್ಕಳನ್ನು ಕರೆದುಕೊಂಡು ಹೋಗಲು ಬಾರದ ಪೋಷಕರ ತಪ್ಪೋ ಎನ್ನುವ ಪ್ರಶ್ನೆ ಕಾಡುತ್ತಿದೆ. ಜೊತೆಗೆ ಜನಪ್ರತಿನಿಧಿಗಳ ಬೇಜವಾಬ್ದಾರಿಯೂ ಹೆಚ್ಚಾಗಿದೆ.

ಕಾಲು ಸಂಕದ ಜಾಗದಲ್ಲಿ ಸೇತುವೆ ನಿರ್ಮಾಣಕ್ಕೆ ನಿರ್ಧಾರ..!

ಬೈಂದೂರು ಕ್ಷೇತ್ರದ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಕಾಲ್ತೋಡು ಗ್ರಾಮಕ್ಕೆ ಭೇಟಿ ನೀಡಿದ್ದರು. ನೀರಿನಲ್ಲಿ ಕೊಚ್ಚಿ ಹೋದ ಎರಡನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಪೋಷಕರಾದ ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರನ್ನು ಭೇಟಿ ನೀಡಿ, ಸಾಂತ್ವನ ಹೇಳಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ತಹಶೀಲ್ದಾರ್ ಕಿರಣ್ ಗೋರಯ್ಯ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದರು. ಬಾಲಕಿ ನೀರುಪಾಲಾದ ಘಟನೆಗೆ ಶಾಸಕ ಸುಕುಮಾರ್ ಶೆಟ್ಟಿ ವಿಷಾದ ವ್ಯಕ್ತಪಡಿಸಿದ್ದರು. ಜೊತೆಗೆ ಘಟನೆ ನಡೆದ ಕಾಲ್ತೋಡು ಕಾಲು ಸೇತುವೆ ಸ್ಥಳದಲ್ಲಿ ಕಿರು ಸೇತುವೆ ಮಾಡಲು ಸೂಚನೆ ನೀಡಲಾಗಿದೆ. ಹತ್ತು ಲಕ್ಷ ಅನುಮೋದನೆ ಸಿಕ್ಕಿದ್ದು ಕೂಡಲೇ ಕಿರು ಸೇತುವೆ ನಡೆಸಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಆದರೆ ಒಂದು ಕಾಲುಸಂಕದ ಜಾಗದಲ್ಲಿ ಸಣ್ಣದೊಂದು ಸೇತುವೆ ನಿರ್ಮಾಣ ಮಾಡಬೇಕಾದರೆ ಓರ್ವ ಬಾಲಕಿಯ ಬಲಿ ಕೊಡಬೇಕಾಯ್ತಲ್ಲ ಅನ್ನೋದಷ್ಟೆ ಬೇಸರದ ಸಂಗತಿ

ಸ್ಥಳಕ್ಕೆ ಡಿಸಿ ಭೇಟಿ, ಇನ್ನೂ ಬಾಲಕಿ ಸನ್ನಿಧಿ ಸುಳಿವು ಸಿಕ್ಕಿಲ್ಲ..!

ನೀರಿನ ಸೆಳೆತದಲ್ಲಿ ಕೊಚ್ಚಿ ಹೋದ ಬಾಲಕಿ ಸನ್ನಿಧಿಯನ್ನು ಹುಡುಕಲು ಅಗ್ನಿಶಾಮಕ ದಳ, ಗ್ರಾಮಸ್ಥರು. ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಆದರೆ ಇಲ್ಲೀವರೆಗೂ ಬಾಲಕಿಯ ಸುಳಿವು ಸಿಕ್ಕಿಲ್ಲ. ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಭೇಟಿ ನೀಡಿದ್ದಾರೆ. ಗ್ರಾಮಸ್ಥರು ಡಿಸಿ ಮುಂದೆ ಹಲವಾರು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನೇ ಹೇಳಿಕೊಂಡಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಡಿಸಿ ಕೂರ್ಮರಾವ್. ಆದರೆ ಕಾಲು ಸಂಕ ನಿರ್ಮಾಣ ಮಾಡಿಕೊಡುವುದು ಮೂಲಭೂತ ಸೌಕರ್ಯ ಎಂದು ಭಾವಿಸದೆ ಇರುವ ಸರ್ಕಾರ ಹಾಗು ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಣ್ಣ ಮುಂದೆ ಕಾಣುತ್ತಿದೆ ಎನ್ನುವುದು ಮಾತ್ರ ಸತ್ಯ.

Related Posts

Don't Miss it !