ಇದು ನಿಮ್ಮದೇ ವೇದಿಕೆ.. ಒಳ್ಳೇದು ಕೆಟ್ಟದ್ದಕ್ಕೆ ನೀವೆ ಸಾಕ್ಷಿ ಅಷ್ಟೆ..

‘ದಿ ಪಬ್ಲಿಕ್​ ಸ್ಪಾಟ್​’ ಹೆಸರಿಗೆ ತಕ್ಕಂತೆ ಜನರಿಗಾಗಿ ಒಂದು ವಿಭಾಗ ಸೃಷ್ಟಿಸಿದೆ. ಅದುವೇ ನಿಮ್ಮದೇ ಸುದ್ದಿ. ದಿನಾಂಕ 02/08/2022 ರಂದು ರಾಜ್ಯಾದ್ಯಂತ ಮಳೆಯ ಪ್ರವಾಹ ಹೆಚ್ಚಾಗಿತ್ತು. ಅದರಲ್ಲೂ ಕರಾವಳಿ ತೀರ ಪ್ರದೇಶದ ಜನರ ಗೋಳು ಹೇಳ ತೀರದ್ದಾಗಿತ್ತು. ಈ ವೇಳೆ ಪ್ರೊ. ಆನಂದ ದೇವಾಡಿಗ ಅವರು, ಶಾಸಕರು ಸೇರಿದಂತೆ ಸರ್ಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ನೆರೆ ಪೀಡಿತ ಪ್ರದೇಶಕ್ಕೆ ಬಂದು ಜನರ ಸಮಸ್ಯೆ ಆಲಿಸಬೇಕಿದ್ದ ಶಾಸಕರು, ತಹಶೀಲ್ದಾರ್​, ಗ್ರಾಮ ಪಂಚಾಯ್ತಿ ಪಿಡಿಓ ಯಾರೊಬ್ಬರೂ ಬಂದಿರಲಿಲ್ಲ. ಆ ಬಳಿಕ ‘ದಿ ಪಬ್ಲಿಕ್​ ಸ್ಪಾಟ್​​’ನ ನಿಮ್ಮದೇ ವೇದಿಕೆಗೆ ಪುಟ್ಟದೊಂದು ಸುದ್ದಿ ಬರೆದು ಕಳುಹಿಸಿದ್ದರು. ನಾವು ನಮ್ಮ ವೆಬ್​ ತಾಣದಲ್ಲಿ ಪಬ್ಲಿಷ್​ ಕೂಡ ಮಾಡಿದ್ದೆವು. ಆ ಬಳಿಕ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದರು. ಈಗಲೂ ಒಂದು ಸುದ್ದಿ ಬರೆದು ಕಳುಹಿಸಿದ್ದಾರೆ. ನಮ್ಮ ಸಮಸ್ಯೆ ಆಲಿಸಿದ್ದಾರೆ ಶಾಸಕರು ಅನ್ನೋದು ಅವರ ಸುದ್ದಿಯ ಸಾರ.

ನೆರೆ ಇಳಿದ ಬಳಿಕ ಸಂತ್ರಸ್ತರ ಗೋಳು ಕೇಳಿದ ಶಾಸಕ..!

ಅಗಸ್ಟ್ 1 ಮತ್ತು 2 ರಂದು ಭಟ್ಕಳ ತಾಲೂಕಿನಲ್ಲಿ 530 MM ರಣ ಭೀಕರ ಮಳೆಗೆ ಶಿರಾಲಿ, ಮುಟ್ಟಳ್ಳಿ, ಮುಂಡಳ್ಳಿ , ಚೌಥನಿ ಸೇರಿದಂತೆ ಬಹುತೇಕ ಭಾಗಗಳು ನೀರಿನಲ್ಲಿ ಮುಳುಗಡೆ ಆಗಿದ್ದವು. ಮಳೆ ಪ್ರಮಾಣ ಕಡಿಮೆ ಆಗ ಬಳಿಕ ಜನರ ರಕ್ಷಣೆಗೆ ಆಗಮಿಸಿದ ಶಾಸಕರು, ಕಾರ್ಯಕರ್ತರು ಹಾಗೂ ಸ್ಥಳೀಯರ ಜೊತೆ ಸೇರಿಕೊಂಡು ಆಪತ್ತಿನಲ್ಲಿ ಇದ್ದವರನ್ನು ರಕ್ಷಣೆ ಮಾಡಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸ ಮಾಡಿದರು. ಭಟ್ಕಳದ ಮುಟ್ಟಳ್ಳಿಯಿಂದ ಶಿರಾಲಿ ಸಾರದಹೊಳೆ ತನಕ ರಾಷ್ಟ್ರೀಯ ಹೆದ್ದಾರಿ ಕೂಡ ಸಂಪೂರ್ಣ ಜಲಾವೃತ ಆಗಿದ್ದು, ಹೀಗಾಗಿ ರಕ್ಷಣಾ ಕಾರ್ಯಪಡೆ ಧಾವಿಸಲು ಸಾಧ್ಯವಾಗಲಿಲ್ಲ. ಇದೀಗ ಎಲ್ಲರ ಸಮಸ್ಯೆಯನ್ನು ಆಲಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಶಾಸಕ ಸುನಿಲ್ ನಾಯ್ಕ್.

ಇದನ್ನು ಓದಿ: Rain effect: ಸಿಎಂ ಸಾರ್ ಕೂಗಿ ಕರೆದರೂ ಯಾರೂ ರಕ್ಷಣೆಗೆ ಬರಲಿಲ್ಲ, ನಾವು ಮತಕ್ಕೆ ಮಾತ್ರ ಸೀಮಿತವೇ..?

ಮುಖ್ಯಮಂತ್ರಿ ಹಾಗು ಸಚಿವರ ಜೊತೆಗೂ ಶಾಸಕರ ಚರ್ಚೆ..!

ಕಾರ್ಮಿಕ ಇಲಾಖೆ ಸಚಿವರಾದ ಶಿವರಾಮ್ ಹೆಬ್ಬಾರ್ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆ ಗುಡ್ಡ ಕುಸಿದು ಅವಘಡಕ್ಕೀಡಾದ ಭಟ್ಕಳ ತಾಲೂಕಿನ ಮುಟ್ಟಳ್ಳಿಗೆ ಅಗಸ್ಟ್ 3 ರಂದು ಭೇಟಿ ನೀಡಿ ಶಾಸಕರು ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ನೆರೆ ಪೀಡಿತರ ಸಮಸ್ಯೆಗಳನ್ನು ಆಲಿಸಲು ಸ್ವತಃ ಮುಖ್ಯಮಂತ್ರಿಯವರೇ ಬರುವಂತೆ ಒತ್ತಾಯಿಸಿದರು. ಅದರಂತೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಕೂಡ ಭಟ್ಕಳಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳಿಗೆ ನೆರೆ ಪೀಡಿತರ ಸಮಸ್ಯೆಗಳ ಬಗ್ಗೆ ಶಾಸಕರು ಸಮಗ್ರ ಮಾಹಿತಿ ನೀಡಿ, ನೆರೆ ಸಂತ್ರಸ್ತರಿಗೆ ನೆರವಾಗಲು ವಿಶೇಷ ಅನುದಾನದ ಬೇಕಾಗಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಶಾಸಕರು ಕೆಲಸ ಮಾಡಿದ್ರು ಎಂದರೆ ಒಳ್ಳೆಯದೇ ಅಲ್ಲವೇ..?

ಶಾಸಕರು ಹಾಗು ಅಧಿಕಾರಿಗಳಿಗೆ ಕರೆ ಮಾಡಿದರೂ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಬರೆದಿದ್ದವರೇ ಇದೀಗ ಉತ್ತಮ ಕೆಲಸ ಮಾಡಿದ್ದಾರೆ ಎಂದು ಬರೆದಿರುವುದು ಉತ್ತಮ ಬೆಳವಣಿಗೆ. ಶಾಸಕರು ಕಾರ್ಯಭಾರ ನಿಮಿತ್ತ ತುರ್ತು ಸ್ಪಂದನೆ ನೀಡಲು ಸಾಧ್ಯವಿಲ್ಲದೆ ಇರಬಹುದು. ಕೊಂಚ ತಡವಾಗಿಯಾದರೂ ಸ್ಪಂದಿಸಿದ್ದಾರೆ ಎನ್ನುವುದೇ ಗಮನಿಸಬೇಕಾದ ವಿಚಾರ. ನೀವು ನಿಮ್ಮೂರಿನ ಸಮಸ್ಯೆಗಳು ಅಥವಾ ನಿಮ್ಮ ಊರಿನ ಯೋಜನೆಗಳಲ್ಲಿ ಅಕ್ರಮ ನಡೆಯುತ್ತಿದ್ದರೆ, ನೇರವಾಗಿ E-mail: infopublicspot@gmail.com ಗೆ ಇ-ಮೇಲ್ ಮಾಡಿ ಅಥವಾ ನಮ್ಮ ವಾಟ್ಸ್​ಆಪ್​ ಗ್ರೂಪ್​ ಸೇರಿಕೊಂಡು ನೇರವಾಗಿ ಸುದ್ದಿಯನ್ನು ನಮಗೆ ತಲುಪಿಸಿ. ನಿಮ್ಮ ಸಂಕಷ್ಟಕ್ಕೆ The Public Spot ಖಡಿತವಾಗಿಗೂ ವೇದಿಕೆ ಕಲ್ಪಿಸಲಿದೆ.

ಲೇಖಕರು:

ಪ್ರೊ. ಆನಂದ ದೇವಡಿಗ

Related Posts

Don't Miss it !