ಕುಣಿಗಲ್​ ಹುಡುಗಿ ನೆಲಮಂಗಲದಲ್ಲಿ ಆತ್ಮಹತ್ಯೆ..! ಅತ್ತೆ ಮಾಡಿದ ಅವಾಂತರ..!

22 ವರ್ಷದ ಮುದ್ದು ಮುಖದ ಪೂಜಾ, ತನ್ನ ಬಾಳನ್ನು ಮುಗಿಸಿದ್ದಾರೆ. ಹೊಸ ಜೀವನ ಕಟ್ಟಿಕೊಳ್ಳುವ ಹಂಬಲದಿಂದ ಹೊಸ ಮನೆ ಮಾಡಿದ್ದ ಪೂಜಾ, ತನ್ನ ತಂದೆ ತಾಯಿಯನ್ನು ಕರೆದುಕೊಂಡು ಬಂದು ಹೊಸ ಮನೆಯಲ್ಲಿ ಹಾಲು ಉಕ್ಕಿಸಿ, ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿದ್ದರು. ತಂದೆ ತಾಯಿ ವಾಪಸ್​ ಊರಿಗೆ ಹೋದ ಒಂದೇ ದಿನದಲ್ಲಿ ನಿಮ್ಮ ಮಗಳು ನೇಣು ಹಾಕಿಕೊಂಡಿದ್ದಾಳೆ ಎನ್ನುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. 22 ವರ್ಷದ ಮಗಳನ್ನು ಕಳೆದುಕೊಂಡು ಹೆತ್ತವರು ಕಣ್ಣೀರ ಶೋಕ ಮಾಡಿದ್ದಾರೆ. ಆಕ್ರಂದನ ಮುಗಿಲು ಮುಟ್ಟಿದ್ದು, ಗಂಡನ ಮನೆಯವ ಮೇಲೆ ಪೂಜಾ ಕುಟುಂಬಸ್ಥರು ಕೆಂಡ ಕಾರುತ್ತಿದ್ದರು.

ಕೋವಿಡ್​ ಸಮಯದಲ್ಲಿ ಮದುವೆ, ಕೈಕೊಟ್ಟ ಅದೃಷ್ಟ..!

ಕುಣಿಗಲ್​ ಮೂಲದ 22 ವರ್ಷದ ಪೂಜಾ ಹಾಗೂ ನೆಲಮಂಗಲದ ವೀವರ್ಸ್ ಕಾಲೋನಿಯ ಮಂಜುನಾಥ್​ ಜೊತೆಗೆ ವಿವಾಹ ನಿಗದಿಯಾಗಿತ್ತು. ಆದರೆ ಅದೇ ಸಮಯಕ್ಕೆ ವಕ್ಕರಿಸಿದ ಕೊರೊನಾ ಸೋಂಕು ಅದ್ದೂರಿ ವಿವಾಹಕ್ಕೆ ತೆರೆ ಎಳೆದಿತ್ತು. ಕೊರೊನಾ ಕಡಿಮೆ ಆದ ಬಳಿಕ ಮದುವೆ ಮಾಡೋಣ ಎನ್ನುವ ಯುವತಿ ಮನೆಯವರ ಪ್ರಸ್ತಾಪಕ್ಕೆ ಮಂಜುನಾಥ್​ ಕುಟುಂಬ ಒಪ್ಪಿರಲಿಲ್ಲ. ದೇವಸ್ಥಾನದಲ್ಲಿ ಮದುವೆ ಮಾಡಿಕೊಟ್ಟರೂ ಸಾಕು ಎನ್ನುವ ಪ್ರಸ್ತಾಪ ಇಟ್ಟಿದ್ದರು. ಮದುವೆಗೆ ಆಗುತ್ತಿದ್ದ ವೆಚ್ಚದ ಹಣದಲ್ಲಿ ಚಿನ್ನ ಮಾಡಿಸಿಕೊಡಿ ಎನ್ನುವ ಮೂಲಕ ಪೂಜಾ ಕುಟುಂಬಸ್ಥರನ್ನು ಕಾಡಿದ್ದರು. ಮಗಳು ಸುಖವಾಗಿದ್ದರೆ ಅಷ್ಟೇ ಸಾಕು ಎಂದುಕೊಂಡು ಪದ್ಮನಾಭ ಹಾಗೂ ನಳಿನಾ ದಂಪತಿ ಎಲ್ಲವನ್ನೂ ಮಾಡಿಸಿಕೊಟ್ಟರು. ಆದರೂ ಪೂಜಾಳಿಗೆ ಅದೃಷ್ಟ ಕೈಕೊಟ್ಟಿತ್ತು.

2 ಬಾರಿ ಗರ್ಭಿಣಿ ಆದರೂ ಮಕ್ಕಳಾಗಲಿಲ್ಲ..!

3 ವರ್ಷಗಳ ಹಿಂದೆ ಕೊರೊನಾ ಸಮಯದಲ್ಲಿ ಮದುವೆ ಆಗಿದ್ದ ಪೂಜಾ, ಸಂಸಾರ ಮೊದಲಿಗೆ ಚೆನ್ನಾಗಿಯೇ ಇತ್ತು. ಆ ಬಳಿಕ ಮೊದಲ ಬಾರಿಗೆ ಗರ್ಭಿಣಿ ಆಗಿದ್ದ ಪೂಜಾಗೆ ಗರ್ಭಪಾತ ( Abortion ) ಆಗಿತ್ತು. ಅದಾದ ಬಳಿಕ ಮತ್ತೊಮ್ಮೆ ಗರ್ಭಿಣಿ ಆಗಿದ್ದ ಪೂಜಾ ಮಗುವಿಗೆ ಜನ್ಮ ನೀಡಿದ್ದರು. ಆದರೆ ಆ ಮಗು ಹೃದಯ ಸಮಸ್ಯೆಯಿಂದ ಬಳಲಿತ್ತು. ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಿದಾಗ ಮಗು ಬದುಕುವುದಿಲ್ಲ ಎಂದು ಸ್ವತಃ ವೈದ್ಯರೇ ಖಚಿತ ಮಾಡಿದ್ದರು. ಆದರೂ ಮಗುವನ್ನು ಕೊಂದೇ ಎನ್ನುವ ಆರೋಪ ಪೂಜಾ ಮೇಲೆ ಬಂದಿತ್ತು. ಬಾಣಂತನ ಮುಗಿಸಿ ವಾಪಸ್​ ಅತ್ತೆ ಮನೆಗೆ ಬಂದ ಪೂಜಾ, ಕೆಲವೇ ದಿನಗಳಲ್ಲಿ ಸಾವನ್ನು ಬಯಸಿದ್ದಾರೆ. ಇದಕ್ಕೆ ಕಾರಣ ಅತ್ತೆ ಮಾಡಿದ ಅವಾಂತರ.

ಬೇರೆ ಮನೆ ಮಾಡಿದರೂ ತಪ್ಪಲಿಲ್ಲ ಅತ್ತೆ, ಮಾವನ ಕಾಟ..!

ಮೃತ ಪೂಜಾಳ ಅಕ್ಕ ಗಾಯತ್ರಿ ಹೇಳುವ ಪ್ರಕಾರ ಪೂಜಾ ಗಂಡ ಮಂಜುನಾಥ್​ ಅಮ್ಮನ ಸೆರಗು ಬಿಟ್ಟು ಇರುತ್ತಿರಲಿಲ್ಲ. ಅಮ್ಮ ಏನೇ ಹೇಳಿದರೂ ಆಯ್ತು ಎನ್ನುವುದನ್ನು ಬಿಟ್ಟು ಹೆಂಡತಿ ಬಗ್ಗೆ ಕಿಂಚಿತ್ತು ಕಾಳಜಿ ಇರಲಿಲ್ಲ ಎಂದಿದ್ದಾರೆ. ಇನ್ನೂ ಗಂಡ ಹೆಂಡತಿ ಜೊತೆಯಲ್ಲಿ ಕೂರುವಂತಿರಲಿಲ್ಲ. ಜೊತೆಯಲ್ಲಿ ಟಿವಿ ನೋಡುವಂತಿರಲಿಲ್ಲ. ಆ ರೀತಿ ಅತ್ತೆ ಕಾಟ ಕೊಡುತ್ತಿದ್ದರಂತೆ. ಈ ಹಿಂಸೆ ತಾಳಲಾರದೆ ಬೇರೆ ಮನೆ ಮಾಡಿ ಹಾಲು ಉಕ್ಕಿಸಿದರೂ ಅತ್ತೆ, ರಾತ್ರಿ ಮನೆ ಬಳಿಗೆ ಬಂದು ಜಗಳ ಮಾಡಿದ್ದರಂತೆ. ಬೆಳಗ್ಗೆ ಮತ್ತೆ ಮನೆ ಬಳಿಗೆ ಬಂದು ಗಲಾಟೆ ಮಾಡಿದ್ದರಂತೆ. ಇದನ್ನು ಫೋನ್​ ಮೂಲಕ ತಾಯಿಗೆ ತಿಳಿಸಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಕಷ್ಟು ಕನಸುಗಳನ್ನು ಹೊತ್ತು ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದ ಪೂಜಾ ಬದುಕು ಅಂತ್ಯವಾಗಿದೆ. ಅತ್ತೆ, ಮಾವನ ಬಂಧನ ಮಾಡಲಾಗಿದೆ.

Related Posts

Don't Miss it !