ಅಕ್ಕ ಪ್ರೀತಿಗೆ ಒಪ್ಪಲಿಲ್ಲಎಂದು ತಮ್ಮನನ್ನು ಕಿಡ್ನ್ಯಾಪ್​ ಮಾಡಿದ ಪಾಗಲ್​ ಪ್ರೇಮಿ..!!

ಪ್ರೇಮಕ್ಕಾಗಿ ಪ್ರೇಮಿಗಳು ಏನನ್ನೂ ಬೇಕಾದರೂ ಮಾಡ್ತಾರೆ. ಯಾರನ್ನು ಬೇಕಾದ್ರೂ ಎದುರು ಹಾಕಿಕೊಳ್ತಾರೆ ಎನ್ನುವುದನ್ನು ಸಿನಿಮಾದಲ್ಲಿ ನೋಡಿದ್ದೇವೆ. ಅಲ್ಲಲ್ಲಿ ಕೇಳಿದ್ದೀವಿ. ಇದೀಗ ಬೆಂಗಳೂರಿನಲ್ಲಿ ಅಂತಹದ್ದೊಂದು ವಿಚಿತ್ರ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ತಾವು ಪ್ರೀತಿ ಮಾಡ್ತಿದ್ದ ವಿಚಾರವನ್ನು ಆಕೆ ಒಪ್ಪಿಲಿಲ್ಲ ಎನ್ನುವ ಕಾರಣಕ್ಕೆ ಆಕೆಯ ತಮ್ಮನನ್ನು ಕಿಡ್ನ್ಯಾಪ್​ ಮಾಡಿ ಬೆದರಿಸಿರುವ ಘಟನೆ ನಡೆದಿದೆ. ಕಾರು ಚಾಲಕನಾಗಿದ್ದ ವೆಂಕಟೇಶ್​ನನ್ನು ಕಾರಿನ ಸಮೇತ ಕಿಡ್ನ್ಯಾಪ್​ ಮಾಡಿದ್ದ ಆರೋಪಿ ಶ್ರೀನಿವಾಸ್​ ಅಲಿಯಾಸ್​ ಬೋಟ್​ ಸೀನ, ಆತ ಪ್ರೀತಿಸುತ್ತಿದ್ದ ಮಹಿಳೆಗೆ ವೀಡಿಯೋ ಕಾಲ್​ ಮಾಡಿ, ನನ್ನ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೆ ನಿನ್ನ ತಮ್ಮನನ್ನು ಸಾಯಿಸ್ತೇನೆ ಎಂದು ಬೆದರಿಕೆ ಹಾಕಿದ್ದ. ಇದೀಗ ತನ್ನ ಆರು ಮಂದಿ ಸಹಚರರ ಜೊತೆಗೆ ಖಾಕಿ ಬಲೆಯಲ್ಲಿ ಅಂದರ್​ ಆಗಿದ್ದಾನೆ.

ರಕ್ಷಣೆಯಾದ ವೆಂಕಟೇಶ್​

ಎರಡು ಮದುವೆ ಆಗಿದ್ದರೂ ಸಂಸಾರ ನೌಕೆ ಹಾದಿ ತಪ್ಪಿತ್ತು..!

ಶ್ರೀನಿವಾಸ ಅಲಿಯಾಸ್​ ಬೋಟ್​ ಸೀನನ ಬೋಟ್​ ಹಾದಿ ತಪ್ಪಿ ಹೋಗಿ ಸಂಸಾರದ ಕಡಲಲ್ಲಿ ಹಾದಿ ತಪ್ಪಿತ್ತು. ಜೀವನ ಸಾಗರದಲ್ಲಿ 2 ಮದುವೆಯಾಗಿದ್ದ ಶ್ರೀನಿವಾಸ ವೃತ್ತಿಯಲ್ಲಿ ಬೈಕ್​ ಸೀಜಿಂಗ್​ ಕೆಲಸ ಮಾಡುತ್ತಿದ್ದ. ಬೈಕ್​ ಸೀಜಿಂಕ್​ ಕೆಲಸ ಅಂದ ಮೇಲೆ ಒರಟು ಒರಟು ಭಾಷೆ ಕಾಯಂ ಆಗಿ ಅವನಲ್ಲಿ ಇದ್ದೇ ಇರುತ್ತದೆ. ಅದೇ ಕಾರಣಕ್ಕೋ ಏನೋ ತಾನು ಎರಡು ಮದುವೆ ಆದರೂ ಯಾರೊಬ್ಬರೂ ಆತನ ದೋಣಿಯಲ್ಲಿ ಸಾಗುವುದಕ್ಕೆ ಮನಸ್ಸು ಮಾಡಲಿಲ್ಲ. ಇಬ್ಬರೂ ಬಿಟ್ಟು ಹೋದ ಬಳಿಕ ಒಂಟಿ ಜೀವನ ನಡೆಸುತ್ತಿದ್ದ ಶ್ರೀನಿವಾಸ, ಎದುರು ಮನೆಯಲ್ಲೇ ವಾಸವಾಗಿದ್ದ ಮಹಿಳೆಯನ್ನು ಇಷ್ಟಪಟ್ಟಿದ್ದ. ಆಕೆಗೂ ವಿಚ್ಛೇದನ ಆಗಿತ್ತು ಎನ್ನುವುದು ಗಮನಿಸಬೇಕಾದ ಸಂಗತಿ. ಮೊದಲಿಗೆ ಪರಿಚಯವಾಗಿ ಆ ಬಳಿಕ ಪ್ರೇಮ ಸಲ್ಲಾಪ ಪ್ರಸ್ತಾಪ ಮಾಡಿದ್ದ, ಆದರೆ ಆ ಮಹಿಳೆ ಗಂಡನಿಂದ ದೂರ ಆಗಿದ್ದ ಬೇಸರಕ್ಕೋ ಅಥವಾ ಈತನ ಹಿನ್ನೆಲೆ ಗೊತ್ತಿದ್ದ ಕಾರಣಕ್ಕೋ ಏನೋ ಈತನ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು.

ಇದನ್ನೂ ಓದಿ; ಪವರ್ ಸ್ಟಾರ್​ ಅಪ್ಪು ಸಾವಿನ ಬಳಿಕ ಕೊನೆ ಆಸೆ ಈಡೇರಿಸಿದ ಸಹೋದರರು..!

ವಿಚ್ಛೇದಿತ ಮಹಿಳೆಯನ್ನು ಪಡೆಯುವ ಹಠಕ್ಕೆ ಬಿದ್ದ ಸೀನ..!!

ಗಂಡನಿಂದ ಬೇರ್ಪಟ್ಟ ಮಹಿಳೆ ಎನ್ನುವುದನ್ನು ಅರಿತಿದ್ದ ಶ್ರೀನಿವಾಸ ಅಲಿಯಾಸ್​ ಬೋಟ್​ ಸೀನ, ಮಹಿಳೆಯಲ್ಲಿ ತನ್ನ ಪ್ರೇಮ ಸಲ್ಲಾಪವನ್ನು ಬೈಕ್​ ಸೀಜ್​ ಮಾಡುವ ರೀತಿಯಲ್ಲೇ ನಿಬಾಯಿಸಲು ಮುಂದಾಗಿ ಹಳ್ಳಕ್ಕೆ ಬಿದ್ದಿದ್ದಾನೆ. ಆಕೆಯ ತಮ್ಮನನನ್ನು ಕಾರಿನ ಸಮೇತ ಕಿಡ್ನ್ಯಾಪ್​ ಮಾಡಿದ ಬಳಿಕ ವೀಡಿಯೋ ಕಾಲ್​ ಮಾಡಿ ಮಾತನಾಡಿದ್ದ. ಆದರೆ ಆಕೆ ಈತನ ಬೆದರಿಕೆ ಸೊಪ್ಪು ಹಾಕದೆ, ನೇರವಾಗಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಳು. ಕಿಡ್ನ್ಯಾಪ್​ ಮಾಡಿದ ಬಳಿಕ ಹೊಸಕೋಟೆ ಮೂಲಕ ಕೋಲಾರದ ಕಡೆಗೆ ಕರೆದುಕೊಂಡು ಹೊರಟಿದ್ದ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗ್ತಿದ್ದ ಹಾಗೆ ಅಖಾಡಕ್ಕೆ ಇಳಿದ ವಿಜಯನಗರ ಸಬ್ ಡಿವಿಷನ್ ಎಸಿಪಿ ನಂಜುಂಡೇಗೌಡರ ತಂಡ ಆರು ಆರೋಪಿಗಳನ್ನ ಬಂಧಿಸಿದೆ. ಶ್ರೀನಿವಾಸ್​​ ಜೊತೆಗೆ ಆಕಾಶ್, ಶಿವಕುಮಾರ್, ಹುಚ್ಚೇಗೌಡ, ಪ್ರತಾಪ್, ಗಂಗಾಧರ್ ಎಂಬುವವರನ್ನು ಕಂಬಿ ಹಿಂದೆ ಕಳುಹಿಸಿದ್ದಾರೆ.

ಇದನ್ನೂ ಓದಿ: ದುಡಿದು ತಿನ್ನುವ ಛಲಗಾತಿ, ಹೆತ್ತವರ ಮಾತು ಕೇಳದೆ ಹುಟ್ಟಿದ ದಿನವೇ ಹೆಣವಾದಳು..!!

ಪ್ರೇಮಿಯಾಗಿದ್ದು ತಪ್ಪಲ್ಲ, ಪಡೆಯಲು ಹಿಡಿದ ಹಾದಿ ಸರಿಯಲ್ಲ..!

ಎರಡು ಮದುವೆಯಾಗಿ ಸಂಸಾರದಲ್ಲಿ ವಿಫಲವಾದ ಬಳಿಕ ಮತ್ತೊಮ್ಮೆ ಪ್ರೀತಿ ಹುಟ್ಟಬಾರದು ಎನ್ನುವುದು ಸರಿಯಲ್ಲ. ಆದರೆ ಶ್ರೀನಿವಾಸ ಅಲಿಯಾಸ್​ ಬೋಟ್​​ ಸೀನ ಇಬ್ಬರು ಹೆಂಡತಿಯರು ತನ್ನನ್ನು ಬಿಟ್ಟು ಹೋಗಬೇಕಿದ್ದರೆ ಏನೋ ಸಮಸ್ಯೆ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕಿತ್ತು. ಆ ತಪ್ಪನ್ನು ಸರಿ ಮಾಡಿಕೊಂಡ ಬಳಿಕ ಮತ್ತೊಬ್ಬರನ್ನು ಪ್ರೀತಿಸಿದ್ದರೆ, ಪ್ರೀತಿ ಸೋಲುತ್ತಿರಲಿಲ್ಲ. ಆದರೆ ತನ್ನ ತಪ್ಪನ್ನು ತಿದ್ದಿಕೊಳ್ಳದೆ ಹಳೇ ವರಸೆಯಲ್ಲೇ ಮೂರನೇ ಪ್ರೀತಿಗೆ ಬಿದ್ದವನು ಇಂದು ಮುದ್ದೆ ಮುರಿಯಲು ಜೈಲು ಸೇರಿದ್ದಾರೆ. ಪ್ರೀತಿ ಪ್ರೇಮದ ಕನಸು ಕಂಡವನು ಕಂಬಿ ಹಿಂದೆ ಹೋಗಿದ್ದು ದುರಂತ. ಸ್ನೇಹಿತ ಅಥವಾ ಟೀಂ ಮುಖ್ಯಸ್ಥ ಹೇಳಿದ ಎನ್ನುವ ಕಾರಣಕ್ಕೆ ಅಪರಾಧ ಕೃತ್ಯಕ್ಕೆ ಕೈ ಹಾಕಿದವರು ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವ ಪರಿಸ್ಥಿತಿ ತಲುಪಿದ್ದಾರೆ. ಇದರಲ್ಲಿ ಇಬ್ಬರು ರೌಡಿಶೀಟರ್ಸ್​​ ಎನ್ನುವುದು ಗಮನಿಸಬೇಕಾದ ಅಂಶ.

ಕಮೆಂಟ್ ಮಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರೇ ನಮ್ಮ ಗುರುಗಳು

Related Posts

Don't Miss it !