ಕರುನಾಡ ಮುಕುಟದಲ್ಲಿ ಹಿಂದಿ ದಬ್ಬಾಳಿಕೆ..! ದಕ್ಷಿಣ ಭಾರತದಲ್ಲಿ ಮಂಡಿಯೂರಿದ ಕರ್ನಾಟಕ..!

ಕನ್ನಡ ರಾಜ್ಯೋತ್ಸವ ಕರುನಾಡಿನ ಮಕ್ಕಳಿಗೆ ಹೆಮ್ಮೆಯ ದಿನ. ಕನ್ನಡಿಗರಿಗೆ ಇದೊಂದು ಸುದಿನ. ಕನ್ನಡಿಗರು ಎಲ್ಲಾ ಭಾಷೆಗಳನ್ನೂ ಪ್ರೀತಿಸುವ, ಗೌರವಿಸುವ ಸಂಸ್ಕೃತಿ ಮೈಗೂಡಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕದ ಮುಕುಟ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೇರೆ ಬೇರೆ ಭಾಷೆಯ ಜನರು ನಿಶ್ಚಿಂತೆಯಿಂದ ವಾಸ ಮಾಡುತ್ತಾರೆ. ಆದರೆ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಪರೀಕ್ಷಗಳನ್ನು ನಡೆಸುವುದರಿಂದ ಹಿಡಿದು ಕೆಲವೊಮ್ಮೆ ಕಾರ್ಯಕ್ರಮಗಳ ಆಯೋಜನೆಯಲ್ಲೂ ಹಿಂದಿಮಯ ಮಾಡುವುದು ಕನ್ನಡಿಗರ ತಾಳ್ಮೆ ಪರೀಕ್ಷೆ ಎಂದೇ ಹೇಳಬಹುದು. ಆದರೆ ಇನ್ನೊಂದು ವಿಚಾರದಲ್ಲಿ ಕರ್ನಾಟಕದ ಮುಕುಟದಲ್ಲಿ ಹಿಂದಿ ಮನೆ ಮಾಡಿಕೊಂಡಿದೆ. ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲಿ ಇಲ್ಲದ ಪರಂಪರೆ ಕರ್ನಾಟಕದಲ್ಲಿ ಮಾತ್ರ ಕಾಲೂರಿದೆ. ಕನ್ನಡದ ಪರವಾಗಿ ಮಾತನಾಡುವ ರಾಜಕಾರಣಿಗಳು, ಕನ್ನಡ ಪರವಾಗಿ ಹೋರಾಟ ಮಾಡುವ ಸಂಘಟನೆಗಳು ಈ ಬಗ್ಗೆ ಹೋರಾಟ ನಡೆಸಬೇಕಿದೆ.

ಕರ್ನಾಟಕ ಸರ್ಕಾರದ ಚಿಹ್ನೆಯೊಳಗೆ ಹಿಂದಿ ಬರಹ..!

ದಕ್ಷಿಣ ಭಾರತದ ಭಾಷೆಗಳಿಗೆ ತನ್ನದೇ ಆದ ಚಾರಿತ್ಯ್ರವಿದೆ. ಅದರಲ್ಲೂ ಕನ್ನಡ ಭಾಷೆಗೆ ಮಹತ್ವದ ಇತಿಹಾಸ ಇದೆ. ಆದರೆ ಕರ್ನಾಟಕ ಸರ್ಕಾರದ ಚಿಹ್ನೆಯಲ್ಲಿ ಕನ್ನಡವೇ ಇಲ್ಲ. ಹಿಂದಿಯಲ್ಲಿ ಬರೆದಿರುವ ಸತ್ಯಮೇವ ಜಯತೇ ಎನ್ನುವ ಬರಹವಿದೆ. ಆದರೆ ತಮಿಳುನಾಡಿನಲ್ಲಿ ಹಿಂದಿ, ಇಂಗ್ಲಿಷ್​ಗೆ ಅವಕಾಶವೇ ಇಲ್ಲ. ಇನ್ನೂ ನೂತನವಾಗಿ ಸ್ಥಾಪನೆಯಾದ ತೆಲಂಗಾಣ ರಾಜ್ಯದಲ್ಲೂ ಹಿಂದಿ ಹಸ್ತಕ್ಷೇಪವಿಲ್ಲ. ಕೇರಳ, ಆಂಧ್ರ ಸರ್ಕಾರದ ಚಿಹ್ನೆಯಲ್ಲಿ ಹಿಂದಿ ಬರಹ ಇದೆ. ಆದರೆ ಅದಕ್ಕೂ ಮೊದಲು ತಮ್ಮ ಭಾಷೆಗೆ ಆದ್ಯತೆ ಕೊಡಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇಲ್ಲೀವರೆಗೂ ಕನ್ನಡದ ಬರಹ ಬಂದಿಲ್ಲ. ರಾಜಭವನದ ಮುಂಭಾಗದಲ್ಲೂ ಮೊದಲು ಹಿಂದಿ, ಆಮೇಲೆ ಇಂಗ್ಲಿಷ್​ ಕೊನೆಯಲ್ಲಿ ಕನ್ನಡ ಭಾಷೆಯನ್ನು ಬಳಸಲಾಗಿದೆ. ಮಾತೃಭಾಷೆಗೆ ಮೊದಲ ಆದ್ಯತೆ ಎನ್ನುವ ರಾಜಕಾರಣಿಗಳು, ಕನ್ನಡವೇ ಸಾರ್ವಭೌಮ ಎನ್ನುವ ಸಂಘಟನೆಗಳು ಈ ಬಗ್ಗೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬೇಕಿದೆ.

Read this;

ಕನ್ನಡ ಮತ್ತು ಸಂಸ್ಕೃತಿ ಸಚಿವ ಜವಾಬ್ದಾರಿ ಇಲ್ಲಿದೆ..!

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್​ ಕುಮಾರ್​, ಕನ್ನಡದ ಬಗ್ಗೆ ಹೆಚ್ಚು ಕಾಳಜಿ ವ್ಯಕ್ತಪಡಿಸಿದ್ದಾರೆ. ಕನ್ನಡವನ್ನು ಒಂದು ದಿನಕ್ಕೆ ಸೀಮಿತ ಮಾಡುವುದು ಬೇಡ ಎನ್ನುವ ಉದ್ದೇಶದಿಂದ ಮಾತಾಡ್ ಮಾತಾಡ್ ಕನ್ನಡ ಎನ್ನುವ ಸರಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಕರ್ನಾಟಕ ಸರ್ಕಾರದ ಚಿಹ್ನೆಯೊಳಗೆ ಕನ್ನಡ ಅಕ್ಷರಗಳು ಇಲ್ಲದಿರುವುದರ ಬಗ್ಗೆ ಸಚಿವರು ಗಮನ ಹರಿಸಬೇಕಿದೆ. ಕನ್ನಡದ ಕಟ್ಟಾಳು ಆಗಬೇಕು ಎನ್ನುವ ಕಾರಣಕ್ಕೆ ಕನ್ನಡ ಸಾಹಿತ್ಯ ಪರಿಷತ್​ ಚುನಾವಣೆಗೆ ಸ್ಪರ್ಧಿಸುತ್ತಿರುವ ನಾಯಕರು ಈ ಬಗ್ಗೆ ಚಕಾರ ಎತ್ತಬೇಕಿದೆ. ಕರ್ನಾಟಕ ಸರ್ಕಾರದ ಚಿಹ್ನೆಯೊಳಗೆ ಕನ್ನಡ ಅಕ್ಷರಗಳನ್ನು ಜೋಡಿಸಲು ಹೋರಾಟ ಮಾಡುತ್ತೇವೆ ಎನ್ನುವ ಸಂದೇಶ ರವಾನೆಯಾಗಬೇಕಿದೆ. ಕನ್ನಡದ ಬಗ್ಗೆ ಅಭಿಮಾನ ಹೊಂದಿರುವ ಸಚಿವ ಸುನೀಲ್​ ಕುಮಾರ್​ ಅವರು ಕನ್ನಡಿಗರ ಹೋರಾಟಕ್ಕೆ ಬೆನ್ನೆಲುಬಾಗಿ ಮುಂದೆ ನಿಂತು ತಮ್ಮ ಅವಧಿಯಲ್ಲಿ ಕನ್ನಡ ಸೇರಿಸುವ ಕೆಲಸ ಮಾಡಬೇಕಿದೆ.

Also Read;

ಎಲ್ಲಿ ಸಾಧ್ಯವೋ ಅಲ್ಲಲ್ಲಿ ಕನ್ನಡ ಬಳಸುವ ಹವ್ಯಾಸ ನಿಮ್ಮದಾಗಲಿ..!

ಕನ್ನಡ ಭಾಷೆಯನ್ನು ಬಳಸುತ್ತೇವೆ ಎನ್ನುವ ಕಾರಣಕ್ಕೆ ಎಲ್ಲಾ ಕಡೆಗಳಲ್ಲೂ ಕನ್ನಡವನ್ನೇ ಬಳಸಿದ್ರೆ ಉಪಯೋಗವಿಲ್ಲ. ಕೆಲವೊಮ್ಮೆ ಬೇರೆ ಭಾಷೆಗಳನ್ನು ಬಳಸುವ ಮೂಲಕ ಯಶಸ್ಸು ಕಾಣಬೇಕಾಗುತ್ತದೆ. ಆದರೆ ಕೆಲವು ಕಡೆಗಳಲ್ಲಿ ಕನ್ನಡ ಬಳಕೆಯನ್ನು ಹೆಚ್ಚಳ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಹೆಸರು ನಮೂದು ಮಾಡುವುದು, ರಾಜ್ಯಕ್ಕೆ ಸಂಬಂಧಿಸಿದ ಪೋಸ್ಟ್​ ಹಾಕುವಾಗ ಕನ್ನಡದ ಅಕ್ಷರಗಳನ್ನು ಬಳಸುವುದು ಸೇರಿದಂತೆ ಎಲ್ಲೆಲ್ಲಿ ಸಾಧ್ಯವಿದೆಯೋ ಎಲ್ಲಾ ಕಡೆಗಳಲ್ಲೂ ಕನ್ನಡ ರಾರಾಜಿಸಲಿ. ತಮ್ಮ ಸಹಿಯನ್ನು ಕನ್ನಡದಲ್ಲಿ ಮಾಡುವುದನ್ನು ಕಾರ್ಯಗತಗೊಳಿಸಲು ಇಂದೇ ನಿರ್ಧಾರ ಮಾಡಿ. ನಾವು ಭಾರತ ಎಂಬ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಂಡಿದ್ದೇವೆ. ಆದರೆ ನಮ್ಮ ತನು ಮನ ಇರುವುದು ಕನ್ನಡ ದೇಶದಲ್ಲಿ. ಒಕ್ಕೂಟ ವ್ಯವಸ್ಥೆಗೆ ಯಾವುದೇ ಕಾರಣಕ್ಕು ಧಕ್ಕೆ ಬಾರದಿರಲಿ, ಆದರೆ ನಮ್ಮ ಕನ್ನಡ ಭಾಷೆಯ ಕಡಗಣನೆಯೂ ಆಗದಿರಲಿ ಎನ್ನುವುದು ದಿ ಪಬ್ಲಿಕ್​ ಸ್ಪಾಟ್​​ ಕಾಳಜಿ.

Related Posts

Don't Miss it !