ದೇಶದಲ್ಲಿ ಬಿಜೆಪಿ ಪಕ್ಷದ್ದೇ ಕಾರುಬಾರು, ಕಾಂಗ್ರೆಸ್ ಕಂಗಾಲು..! ಮತದಾನೋತ್ತರ ಸಮೀಕ್ಷೆ ಢವಢವ..!

ಭಾರತದಲ್ಲಿ ಮತ್ತೆ ಬಿಜೆಪಿ ಪಕ್ಷ ತನ್ನ ಕಾರುಬಾರು ಮುಂದುವರಿಸಲಿದೆ ಎಂದು ಮತದಾನೋತ್ತರ ಸಮೀಕ್ಷೆಯ ಅಂಕಿ ಅಂಶಗಳಲ್ಲಿ ಬಹಿರಂಗ ಆಗಿದೆ. ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಈ ಬಾರಿ ಯೋಗಿ ಆದಿತ್ಯನಾಥ್​ ಸರ್ಕಾರವನ್ನು ಅಧಿಕಾರದಿಂದ ಇಳಿಸಿ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​​ ಯಾದವ್​​ ಪ್ರಯತ್ನ ವಿಫಲವಾಗಿದೆ ಎನ್ನಲಾಗ್ತಿದೆ. ಇನ್ನೂ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಬಿಜೆಪಿ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್​​ ಮಕಾಡೆ ಮಲಗಲಿದೆ ಎನ್ನುವುದು ಸಮೀಕ್ಷೆ ವರದಿ ಪ್ರಮುಖಾಂಶ. ಇನ್ನೂ ಘರ್ಜಿಸದೆ ಅಬ್ಬರಿಸದೆ ತಾನು ನಡೆದಿದ್ದೇ ಹಾದಿ ಎನ್ನುವಂತೆ ಸಾಗಿದ್ದ ಮಾಯಾವತಿ ಅವರ ಆನೆ, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವತ್ತ ಫಲಿತಾಂಶದ ದಿಕ್ಸೂಚಿ ತೋರಿಸುತ್ತಿದೆ.

ಪಂಜಾಬ್​ನಲ್ಲೂ ಕಾಂಗ್ರೆಸ್​​ ಆಡಳಿತ ಅಂತ್ಯ..!

ಕಾಂಗ್ರೆಸ್​ ಪಕ್ಷ ಪಂಜಾಬ್​ನಲ್ಲಿ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸ ಇತ್ತು. ಆದರೆ ಚುನಾವಣೆ ಕೆಲವೇ ತಿಂಗಳುಗಳ ಮುನ್ನ ಮಾಡಿಕೊಂಡ ಎಡವಟ್ಟು ಕಾಂಗ್ರೆಸ್​​ ಪಕ್ಷಕ್ಕೆ ಮುಳುವಾಗಿ ಪರಿಣಮಿಸಿದೆ. ಈ ಬಾರಿ ಕಾಂಗ್ರೆಸ್​ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿರುವ ಪಂಜಾಬಿಗರು, ಆಮ್​ ಆದ್ಮಿ ಪಾರ್ಟಿಯನ್ನು ಆಯ್ಕೆ ಮಾಡುವ ಮನಸ್ಸು ಮಾಡಿದ್ದಾರೆ ಎನ್ನುತ್ತಿವೆ ಸಮೀಕ್ಷೆಗಳು. ಆಮ್​ ಆದ್ಮಿ ಪಾರ್ಟಿ ಪಂಜಾಬ್​ನಲ್ಲಿ ಅತಿ ದೊಡ್ಡ ಪಕ್ಷವಾಗಿ ಸಮೀಕ್ಷೆಗಳಲ್ಲಿ ಹೊರಹೊಮ್ಮಿದ್ದು, ದೆಹಲಿ ಬಳಿಕ ಅರವಿಂದ್​ ಕೇಜ್ರಿವಾಲ್​​ ನೇತೃತ್ವದ ಆಮ್​ ಆದ್ಮಿ ಪಾರ್ಟಿ ಪಂಜಾಬ್​ನಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ. ಇನ್ನೂ ಅಮರಿಂದರ್​ ಸಿಂಗ್​ ಅವರನ್ನು ಕಾಂಗ್ರೆಸ್​​ನಿಂದ ಹೊರಕ್ಕೆ ಕರೆತರುವಲ್ಲಿ ಯಶಸ್ನಿಯಾಗಿದ್ದ ಬಿಜೆಪಿ ಹೈಕಮಾಂಡ್​ ಪಂಜಾಬಿ ಜನರ ಮನಗೆಲ್ಲುವಲ್ಲಿ ವಿಫಲ ಆಗಿದೆ ಎನ್ನುವುದು ಕೂಡ ಸತ್ಯ.

ಮಣಿಪುರದಲ್ಲಿ ಬಿಜೆಪಿ ಗೋವಾದಲ್ಲಿ ಅತಂತ್ರ ಪರಿಸ್ಥಿತಿ..!

ಮಣಿಪುರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎನ್ನುವುದು ಸಮೀಕ್ಷೆಗಳು ನೀಡಿರುವ ಮಾಹಿತಿ. ಇನ್ನು ಗೋವಾದಲ್ಲಿ ಮಾತ್ರ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆದಿದ್ದು, ಕಾಂಗ್ರೆಸ್​​, ಬಿಜೆಪಿ ಎರಡೂ ಪಕ್ಷಗಳು ಹೆಚ್ಚೂ ಕಡಿಮೆ ಸಮಬಲ ಸಾಧಿಸಲಿವೆ ಎನ್ನಲಾಗ್ತಿದೆ. ಸಮೀಕ್ಷೆಯಲ್ಲಿ ಕೊಟ್ಟಿರುವ ಅಂಕಿ ಅಂಶಗಳು ಸತ್ಯವಾದ ಮತ್ತೆ ಆಪರೇಷನ್​ ಅಥವಾ ಪಕ್ಷೇತರರನ್ನು ಸೆಳೆದು ಅಧಿಕಾರ ನಡೆಸುವ ನಾಯಕರಿಗೆ ಅಧಿಕಾರ ಕೈಸೇರಲಿದೆ ಎನ್ನಲಾಗ್ತಿದೆ. ಮಾಜಿ ಮುಖ್ಯಮಂತ್ರಿ ನಿಧನದ ಬಳಿಕ ಮನೋಹರ್​​ ಪರೀಕ್ಕರ್​ ಪುತ್ರನಿಗೆ ಟಿಕೆಟ್​​ ನೀಡದೆ ಪಕ್ಷದಿಂದ ದೂರ ಹೋಗುವಂತೆ ಮಾಡಿದ್ದರೂ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇನ್ನೂ ಈಗಾಗಲೇ ಆಡಳಿತದಲ್ಲಿರುವ ಪಕ್ಷ ಬಿಜೆಪಿ ಆಪರೇಷನ್​ ಸೇರಿದಂತೆ ಎಲ್ಲದಕ್ಕೂ ಸಿದ್ಧವಿದ್ದು, ಅಧಿಕಾರ ಕೇಸರಿ ಪಾಳಯದಲ್ಲೇ ಉಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಉತ್ತರ ಪ್ರದೇಶದಲ್ಲಿ ಗೆದ್ದು ಸೋಲುಂಡ ಕಮಲ ಪಡೆ..!

ಕಳೆದ ವಿಧಾನಸಭಾ ಚುನಾವಣೆ ಮುಕ್ತಾಯ ಆಗುತ್ತಿದ್ದಂತೆ ಮುಖ್ಯಮಂತ್ರಿ ಅಭ್ಯರ್ಥಿ ಆಗಿ ಆಯ್ಕೆಯಾಗಿದ್ದು ಅಂದಿನ ಗೋರಕ್​ಪುರ ಸಂಸದ ಯೋಗಿ ಆದಿತ್ಯನಾಥ್​. ಕಳೆದ 5 ವರ್ಷಗಳಿಂದ ಯೋಗಿ ಆದಿತ್ಯನಾಥ್​ ಆಡಳಿತದ ಬಗ್ಗೆ ಬಿಜೆಪಿ ನಾಯಕರು ಹೊಗಳಿಕೆಯ ಮಾತನ್ನಾಡಿದ್ದರು. ಆ ಬಳಿಕ ಕಳೆದ ಒಂದು ವರ್ಷದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಘಟನೆಗಳಿಂದ ಯೋಗಿ ಸರ್ಕಾರದ ಘನತೆಗೆ ಕುಂದುಂಟಾಗಿತ್ತು. ಅದೇ ಪ್ರಕಾರವಾಗಿ ಕಳೆದ ಬಾರಿಗಿಂತ ಈ ಬಾರಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಸರ್ಕಾರ ಮತ್ತೆ ಅಧಿಕಾರ ಹಿಡಿಯುತ್ತೆ ಎನ್ನುವುದು ಸಮೀಕ್ಷೆಯಲ್ಲಿ ಹೇಳಿರಬಹುದು. ಆದರೆ ಉತ್ತರ ಪ್ರದೇಶದ ಜನರು ಯೋಗಿ ಸರ್ಕಾರವನ್ನು ಒಪ್ಪಿಕೊಂಡಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕಳೆದ ಬಾರಿ ಗೆದ್ದಿದ್ದ 100 ಸ್ಥಾನಗಳನ್ನು ಈ ಬಾರಿ ಬಿಜೆಪಿ ಕಳೆದುಕೊಳ್ಳುತ್ತಿದೆ ಎನ್ನುವುದು ಪ್ರಮುಖ ವಿಚಾರ.

Related Posts

Don't Miss it !