ಶಾಸಕರೇ ಮತಕ್ಕೆ ಕೊಡುವ ಕಾಸು ಇಲ್ಲೇ ಖರ್ಚು ಮಾಡಿ..!

ಕೊರೊನಾ‌ ಲಸಿಕೆ ಎನ್ನುವುದು ವ್ಯಾಪಕ‌ ಭ್ರಷ್ಟಾಚಾರದ ಕೂಪ ಎನ್ನುವಂತಾಗಿದೆ. ಕೇಂದ್ರ ಸರ್ಕಾರ ₹150ರೂಪಾಯಿಗೆ ಖರೀದಿ ಮಾಡುವ ಲಸಿಕೆಯನ್ನು ರಾಜ್ಯ‌ ಸರ್ಕಾರ ₹300 ರೂಪಾಯಿ ಕೊಟ್ಟು‌ ಖರೀದಿ ಮಾಡುತ್ತಿದೆ. ಅದೇ ಲಸಿಕೆ ಖಾಸಗಿ ಆಸ್ಪತ್ರೆಯಲ್ಲಿ ₹900 ರಿಂದ ₹1200 ರೂಪಾಯಿಗೆ ವ್ಯಾಪಾರ ಆಗುತ್ತಿದೆ. ಕೇಂದ್ರ ಸರ್ಕಾರ ಲಸಿಕೆಗೆ ಎಂದು ಬಜೆಟ್‌ನಲ್ಲಿ ಮೀಸಲಿಟ್ಟಿದ್ದ 35 ಸಾವಿರ ಕೋಟಿ ರೂಪಾಯಿ ಏನಾಯ್ತು..? ಈ ಬಗ್ಗೆ ಲೆಕ್ಕ ಪರಿಶೋಧನೆ ಮಾಡಿ ವರದಿ ನೀಡಿ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಲಸಿಕೆ ಸಿಗದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಣವಿದ್ದವರು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ತೆಗೆದುಕೊಳ್ತಿದ್ದಾರೆ. ಹಣ ಇಲ್ಲದವರು ಬೆಳಗ್ಗೆ 5 ಗಂಟೆಯಿಂದಲೇ ಸರ್ಕಾರಿ ಆಸ್ಪತ್ರೆಗಳ ಎದುರು‌ ಕ್ಯೂ ನಿಲ್ಲುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ.

ಕಾಂಗ್ರೆಸ್ ಶಾಸಕನ ಮಾದರಿ ಕೆಲಸ..!

ದಾವಣಗೆರೆ ದಕ್ಷಿಣ ಕ್ಷೇತದ ಶಾಸಕ ಶಾಮನೂರು ಶಿವಶಂಕರಪ್ಪ ಇಡೀ ಮತಕ್ಷೇತ್ರದ ಜನರಿಗೆ ಉಚಿತ ಲಸಿಕೆ ಹಾಕಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತನ್ನ ಕ್ಷೇತ್ರದ ಎಲ್ಲಾ ಜನರಿಗೆ ತಾನೇ ಲಸಿಕೆ ಕೊಡಿಸುವ ವಾಗ್ದಾನ ಮಾಡಿದ್ದರು. ಅದರಂತೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಸ್ವತಃ ತಾವೂ ಕೂಡ ಎರಡನೇ ಡೋಸ್ ಪಡೆಯುವ ಮೂಲಕ ಲಸಿಕೆ ಜಾಗೃತಿ ಮೂಡಿಸಿದ್ರು. ಇದು ಇಡೀ ದೇಶದಲ್ಲಿ ವಿಶೇಷ ಕಾರ್ಯಕ್ರಮ. ಇದೇ ಮೊದಲ ಬಾರಿಗೆ ಖಾಸಗಿ ವ್ಯಕ್ತಿಯೊಬ್ಬರು ಲಸಿಕೆ ಕೊಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ತನ್ನ ಕ್ಷೇತ್ರಕ್ಕೆ ಲಸಿಕೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಪಕ್ಷದ ಶಾಸಕರೂ ಶಾಮನೂರು ಶಿವಶಂಕರಪ್ಪ ಅವರ ರೀತಿಯಲ್ಲೇ ತನ್ನ ಮತ ಕ್ಷೇತ್ರದ 18 ವರ್ಷ ಮೇಲ್ಪಟ್ಟ ಮತದಾರರಿಗೆ ಲಸಿಕೆ ಹಾಕಿಸುವ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಲಸಿಕೆ ಬರವನ್ನು ನೀಗಿಸಬಹುದಾಗಿದೆ. ಮತವನ್ನು ಮನೆ ಬಾಗಿಲಿಗೆ ಬಂದು ಕೇಳುವ ರಾಜಕಾರಣಿಗಳು ಕೊರೊನಾ ಸಂಕಷ್ಟದ ಸಮಯದಲ್ಲಿ‌ ಮನೆ ಮನೆ ಬಾಗಿಲಿಗೆ ಬಂದು ಲಸಿಕೆ ಹಾಕುವ ಮೂಲಕ ಜನರ ಮನಸ್ಸಲ್ಲಿ ಸಾರ್ಥಕ ಭಾವನೆ ಮೂಡುವಂತೆ ಮಾಡಿದರೆ ಜನರೇ ಮೆಚ್ಚುತ್ತಾರೆ. ಮುಂದಿನ ಬಾರಿಯೂ ಚಿಲ್ಲರೆ ಕಾಸು ಕೇಳದೆ ಗೆಲ್ಲಿಸುತ್ತಾರೆ.

ಸೋತವರಿಗೂ ಇದು ಒಳ್ಳೆ ಅವಕಾಶ..!

ಸೋತ ಅಭ್ಯರ್ಥಿ ಜನಮನ ಗೆಲ್ಲಲು ಇದು ಒಳ್ಳೆಯ ಅವಕಾಶ. ಜನರು ನನ್ನನ್ನು ಸೋಲಿಸಿದ್ದಾರೆ‌, ನಾನ್ಯಾಕೆ ಜನರಿಗೆ ಸಹಾಯ ಮಾಡಬೇಕು ಎನ್ನುವ ಮನೋಭಾವದಿಂದ ಹೊರಗೆ ಬಂದು ಇಡೀ ಕ್ಷೇತ್ರದ ಎಲ್ಲಾ ಹಳ್ಳಿ ಹಳ್ಳಿಗೂ ಹೋಗಿ ಲಸಿಕೆ ಹಾಕಿಸಿಕೊಳ್ಳಿ, ಇದು ಮತಕ್ಕಾಗಿ ಕೊಡುತ್ತಿರೋ ಆಮೀಷವಲ್ಲ. ಜನರ ಆರೋಗ್ಯವೇ ನಮಗೆ ಮುಖ್ಯ ಎಂದು ಜನರಿಗೆ ಒಳಿತು ಮಾಡಿದರೆ ಮುಂದಿನ ಬಾರಿ ಚುನಾವಣೆಯಲ್ಲಿ ಕಾಸು ಕೊಡದೆ ವಿಜಯ ಪತಾಕೆ ಹಾರಿಸಬಹುದು. ಜನರು ಪ್ರಾಣ ಉಳಿಸುವ ಕೆಲಸ ಮಾಡಿದವರನ್ನು ಸ್ಮರಿಸದೆ ಇರಲಾರರು. ಗೆದ್ದಿರುವ ಶಾಸಕರು ಮತ್ತೆ ಗೆದ್ದು ಶಾಸಕರಾಗಲು, ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಗದೆ ಸೋಲುಂಡವರು ಶಾಸಕರಾಗುವ ಅವಕಾಶ ಪಡೆಯಲು, ಇಬ್ಬರಿಗೂ ಇದೊಂದು ಉತ್ತಮ ಅವಕಾಶ. ಸದುಪಯೋಗ ಪಡಿಸಿಕೊಂಡವರು ಚುನಾವಣೆಯಲ್ಲಿ ಗೆಲ್ಲುವುದು‌ ಖಚಿತ. ಸರ್ಕಾರ ಲಸಿಕೆ ಹಾಕಿಸುವಲ್ಲಿ ಸೋತಿತು ಎಂದು ಆರೋಪ ಮಾಡಲು ವಿರೋಧ ಪಕ್ಷಕ್ಕೊಂದು ಅವಕಾಶ. ಸದ್ಬಳಕೆ ಮಾಡಿಕೊಂಡವರು ಜಾಣರು.

Related Posts

Don't Miss it !