ಆ ಒಂದು ಕರೆಗೆ ಸಚಿವ ಆನಂದ್ ಸಿಂಗ್ ಬೆಚ್ಚಿಬಿದ್ದಿದ್ದು ಯಾಕೆ..?

ನಾನು ಹಠವಾದಿ ಒಮ್ಮೆ ತೆಗೆದುಕೊಂಡ ನಿರ್ಧಾರ ವಾಪಸ್​ ಪಡೆಯುವುದಿಲ್ಲ. ನಾನು ಒಮ್ಮೆ ನಿರ್ಧಾರ ಮಾಡಿದ್ರೆ ಮುಗೀತು ಎಂದೆಲ್ಲಾ ಹೇಳಿದ್ರು. ಜೊತೆಗೆ ರಾಜಕೀಯ ಆರಂಭವೋ..? ಅಂತ್ಯವೋ ಆಗುತ್ತೆ ಎನ್ನುವ ಸುಳಿವನ್ನೂ ನೀಡಿದ್ದ ಸಚಿವ ಆನಂದ್​ ಸಿಂಗ್​, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟೆನ್ಷನ್​ ಕೊಟ್ಟಿದ್ದರು. ಆ ಬಳಿಕ ಅಖಾಡಕ್ಕೆ ಇಳಿದಿದ್ದ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಆನಂದ್​ ಸಿಂಗ್​ಗೆ ಬುದ್ಧಿವಾದ ಹೇಳಿ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ಸೂಚನೆ ನೀಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಆನಂದ್​ ಸಿಂಗ್​ ನನ್ನ ದಾರಿ ನನಗೆ ಎಂದುಕೊಂಡು ಮಾಜಿ ಸಿಎಂ ಅವರ ಸರ್ಕಾರಿ ನಿವಾಸ ಕಾವೇರಿಯಿಂದ ಹೊರಟಿದ್ದರು. ಆ ಬಳಿಕ ಸಂಜೆ ಭೇಟಿ ಮಾಡೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಕೊಟ್ಟಿದ್ದರು.

read this also

ರೇಸ್​ಕೋರ್ಸ್​ ರಸ್ತೆಯ ಅಪಾರ್ಟ್​ಮೆಂಟ್​ನಲ್ಲಿ ಸಭೆ ಸೇರಿದ್ದ ಸಿಎಂ ಹಾಗೂ ಸಚಿವರು ಮಹತ್ವದ ಚರ್ಚೆ ನಡೆಸಿದ್ರು. ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದ ಆನಂದ್​ ಸಿಂಗ್​ ನನಗೆ ಇಂಧನ ಖಾತೆ ಕೊಡಿಸಿ ಎನ್ನುವ ಪಟ್ಟು ಹಿಡಿದಿದ್ದರು. ಮೊದಲ ಬಾರಿ ಸಚಿವರಾಗಿದ್ದರೂ ಇಂಧನ ಖಾತೆ ಕೊಡಲಾಗಿದೆ. ನಾನು ಈಗಾಗಲೇ ಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇದ್ದರೂ ಪರಿಸರ ವಿಜ್ಞಾನ ಮತ್ತು ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ನಾನು ಅಸಮರ್ಥನೆ ಎಂದೆಲ್ಲಾ ಪ್ರಶ್ನೆ ಮಾಡಿದ್ದರು. ನಾನು ತೆಗೆದುಕೊಂಡ ನಿರ್ಧಾರವಲ್ಲ. ಯಡಿಯೂರಪ್ಪ ಅವರು ಸೂಚಿಸಿದ ಖಾತೆಗಳೂ ಅಲ್ಲ. ಹೈಕಮಾಂಡ್​ ನೀಡಿರುವ ಖಾತೆಗಳು. ನಾನು ಏನನ್ನೂ ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ಹೈಕಮಾಂಡ್​ ನಾಯಕರು ಸೂಚಿಸಿದ ಸಚಿವರಿಗೆ ಅವರು ಹೇಳಿದ ಖಾತೆಗಳನ್ನು ನೀಡಲಾಗಿದೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದರು. ಅಷ್ಟರಲ್ಲಿ ಸಿಎಂಗೆ ಬಂದಿತ್ತು ಒಂದು ಫೋನ್​ ಕಾಲ್.

ಖಾತೆ ಅಸಮಾಧಾನದ ಸುದ್ದಿ ಹೊರಗಡೆ ಹೋಗಬಾರದು ಎನ್ನುವ ಕಾರಣಕ್ಕೆರ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಾವಲು ಪಡೆಯನ್ನು ಬಿಟ್ಟು ಬಂದಿದ್ದರು. ಆದರೂ ಸಿಎಂ ಬಸವರಾಜ ಬೊಮ್ಮಾಯಿ ನಡೆಸುತ್ತಿರುವ ಸಂಧಾನ ಸಭೆ ಬಗ್ಗೆ ದೆಹಲಿ ನಾಯಕರಿಗೆ ಸಂದೇಶ ತಲುಪಿತ್ತು. ಆ ಕಡೆಯಿಂದ ಮಾತನಾಡಿದ ನಾಯಕರು, ರಾಜೀನಾಮೆ ಕೊಡುವುದಾದರೆ ಅಂಗೀಕರಿಸಿ. ಮುಂದಿನ ದಿನಗಳಲ್ಲಿ ಪಕ್ಷ ಯಾವ ನಿರ್ಧಾರ ಮಾಡಬೇಕು ಎನ್ನುವುದನ್ನು ತೀರ್ಮಾನ ಮಾಡಲಿದೆ ಎಂದಿದ್ದರು. ಇಷ್ಟು ಹೇಳುತ್ತಿದ್ದ  ಹಾಗೆ ಆನಂದ್​ ಸಿಂಗ್​ ತಣ್ಣಗಾಗಿದ್ದರು ಎನ್ನಲಾಗಿದೆ. ದೆಹಲಿಯಿಂದ ಕರೆ ಬಂದ ಬಳಿಕ ಸಿಎಂ ಹೇಳಿದ್ದಕ್ಕೆ ಸರಿ ಎನ್ನುತ್ತ ಸಭೆ ಅಂತ್ಯವಾಗಿದೆ. ಆದರೆ ದೆಹಲಿ ನಾಯಕರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸುವ ನಿರ್ಧಾರ ಮಾಡಿದ್ದಾರೆ ಎನ್ನುವುದು ಸದ್ಯದ ಮಾಹಿತಿ.

read this also

ಇದೇ ಕಾರಣದಿಂದ ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಆನಂದ್​ ಸಿಂಗ್​ ಬದ್ಧರಾಗಲು ನಿರ್ಧಾರ ಮಾಡಿದ್ದಾರೆ. ಆನಂದ್​ ಸಿಂಗ್​ ಅವರ ಮನವಿಯನ್ನು ಹೈಕಮಾಂಡ್​ಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇನ್ನೂ ನಾನು ರಾಜೀನಾಮೆ ನೀಡುತ್ತೇನೆ ಎನ್ನುವ ಮಾತನ್ನೇ ಹೇಳಿಲ್ಲ ಎಂದ ಆನಂದ್​ ಸಿಂಗ್​, ನಮ್ಮ ಮನವಿಯನ್ನು ಪರಿಗಣಿಸುವುದಾಗಿ ಭರವಸೆ ಸಿಕ್ಕಿದೆ ಎಂದು ತೇಪೆ ಸಾರಿಸಿದರು. ಕೇವಲ ಮನವಿ ನೀಡಿ, ಮುಂದಿನ ದಿನಗಳಲ್ಲಿ ಪರಿಗಣಿಸಿ ಎನ್ನುವುದಾದರೆ ಶಾಸಕಾಂಗ ಕಾರ್ಯಾಲಯದ ಬೋರ್ಡ್​ ತೆರವು ಮಾಡಿದ್ದು ಯಾಕೆ..? ವೇಣುಗೋಪಾಲನ ದೇವಸ್ಥಾನದಲ್ಲಿ ನಿಂತು ರಾಜಕೀಯ ಜೀವನದ ಆರಂಭ ಅಥವಾ ಅಂತ್ಯದ ಬಗ್ಗೆ ಮಾತನಾಡಿದ್ದು ಯಾಕೆ..? ತರಾತುರಿಯಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಹೆಲಿಕಾಪ್ಟರ್​ನಲ್ಲಿ ಹಾರಿಕೊಂಡು ಬಂದಿದ್ದು ಯಾಕೆ..? ನಾನು ನಿರ್ಧಾರ ಮಾಡಿದ ಮೇಲೆ ಬದಲಿಸುವ ಪ್ರಶ್ನೆಯೇ ಇಲ್ಲ ಎಂದಿದ್ದವರು ಹಿಂದೆ ಸರಿದಿದ್ದು ಯಾಕೆ..? ಎನ್ನುವ ಪ್ರಶ್ನೆಗಳಿಗೆ ಆನಂದ್​ ಸಿಂಗ್​ ಅವರಲ್ಲಿ ಉತ್ತರ ಇರಲಿಲ್ಲ.

Related Posts

Don't Miss it !