ಸಚಿವ ಆನಂದ್​ ಸಿಂಗ್​ ಕೋಪ ಶಮನಕ್ಕೆ ಸಿಎಂ ಕಂಡುಕೊಂಡ ಮಾರ್ಗ..! ಅರ್ಧ ಯಶಸ್ಸು..

ನೂತನ ಸಚಿವ ಸಂಪುಟದಲ್ಲಿ ನಾನು ಕೇಳಿದ ಖಾತೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಸಚಿವ ಆನಂದ್​ ಸಿಂಗ್​ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಬಳಿಕ ಮಂಗಳವಾರವಷ್ಟೇ ಶಾಸಕರ ಕಾರ್ಯಾಲಯದ ಬೋರ್ಡ್​ ತೆರವು ಮಾಡಿಸಿ ಕೋಪವನ್ನು ಬಹಿರಂಗ ಮಾಡಿದ್ದರು. ಆ ಬಳಿಕ ಆಕ್ಟೀವ್​ ಆದ ಸಿಎಂ ಬಸವರಾಜ ಬೊಮ್ಮಾಯಿ, ಆನಂದ್​ ಸಿಂಗ್​ ಕೋಪ ತಣಿಸುವ ಕೆಲಸಕ್ಕೆ ಕೈ ಹಾಕಿದ್ದರು. ನಿನ್ನೆ ರಾತ್ರಿಯೇ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಸವರಾಜ ಬೊಮ್ಮಾಯಿ, ಆನಂದ್​ ಸಿಂಗ್​ ಜೊತೆ ಮಾತನಾಡುವಂತೆ ಮನವಿ ಮಾಡಿದ್ದರು. ಸಾಕಷ್ಟು ಮೂಲಗಳಿಂದ ಆನಂದ್​ ಸಿಂಗ್​ ಮನವೊಲಿಕೆ ಯತ್ನ ಮಾಡಿದ ಬಸವರಾಜ ಬೊಮ್ಮಾಯಿ, ಅರ್ಧ ಯಶಸ್ಸು ಸಾಧಿಸಿದ್ದಾರೆ. ಇದರ ಭಾಗವಾಗಿಯೇ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಮಾಡುವ ಆನಂದ್​ ಸಿಂಗ್​ ಅವರ ನಿರ್ಧಾರ ಬದಲು ಮಾಡಿದ್ದಾರೆ.

ಅಸಮಾಧಾನ ಅಖಾಡಕ್ಕೆ ಇಳಿದ ಕೇಂದ್ರದ ಸಿಂಗ್​..!

ಆನಂದ್​ ಸಿಂಗ್​ ರಜಪೂತ ಸಮುದಾಯಕ್ಕೆ ಸೇರಿದ ಶಾಸಕನಾಗಿದ್ದು, ರಾಜಕೀಯ ಸಂಕಷ್ಟದ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರ ಸಲಹೆ ಸೂಚನೆ ಪಡೆಯುವ ರೂಢಿ ಮಾಡಿಕೊಂಡಿದ್ದಾರೆ. ಈಗ ಅದೇ ಅಸ್ತ್ರ ಬಳಸಿರುವ ಸಿಎಂ ಬಸವರಾಜ ಬೊಮ್ಮಾಯಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರ ಮೂಲಕ ಆನಂದ್​ ಸಿಂಗ್​ ಅವರ ಮನವೊಲಿಕೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು ಬಿ.ಎಸ್​ ಯಡಿಯೂರಪ್ಪ ಜೊತೆಗೆ ಆನಂದ್​ ಸಿಂಗ್​ ಮಾತುಕತೆ ನಿಗದಿಯಾಗಿದ್ದು, ವಿಶೇಷ ಹೆಲಿಕಾಪ್ಟರ್​ ಮೂಲಕ ಬೆಂಗಳೂರಿಗೆ ಬರುವುದಕ್ಕೆ ಆನಂದ್​ ಸಿಂಗ್​ ಸಜ್ಜಾಗಿದ್ದಾರೆ. ಆಪ್ತ ಶಾಸಕನ ಮೂಲಕ ಆನಂದ್​ ಸಿಂಗ್​ ಸಂಪರ್ಕ ಮಾಡಿರುವ ಯಡಿಯೂರಪ್ಪ ಸಂಧಾನದ ಬಾವುಟ ತೋರಿಸಿದ್ದಾರೆ.

ಯಾದಗಿರಿಗೆ ತೆರಳಿದ ವಿಶೇಷ ಹೆಲಿಕಾಪ್ಟರ್​..!

ಯಾದಗಿರಿಯ ಸುರಪುರ ಶಾಸಕ ರಾಜೂಗೌಡ ಬಿಎಸ್​ ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ. ಆನಂದ್​ ಸಿಂಗ್​ ಆಪ್ತ ಶಾಸಕನೂ ಕೂಡ ಆಗಿರುವ ರಾಜೂಗೌಡ ಅವರನ್ನು ಸಂಪರ್ಕ ಸಾಧನವಾಗಿ ಯಡಿಯೂರಪ್ಪ ಬಳಸಿಕೊಂಡಿದ್ದಾರೆ. ಈ ಕೂಡಲೇ ಆನಂದ್​ ಸಿಂಗ್​ ಕರೆದುಕೊಂಡು ಬೆಂಗಳೂರಿನ ನಿವಾಸಕ್ಕೆ ಬರುವಂತೆ ಯಡಿಯೂರಪ್ಪ ಸೂಚನೆ ರವಾನಿಸಿದ್ದಾರೆ. ಇದೇ ಕಾರಣಕ್ಕಾಗಿ ಯಾದಗಿರಿಯ ಸುರಪುರಕ್ಕೆ ವಿಶೇಷ ಹೆಲಿಕಾಪ್ಟರ್​ ಆಗಮಿಸಿದೆ. ಸುರಪುರದಿಂದ ಬಳ್ಳಾರಿಯ ಜಿಂದಾಲ್​ಗೆ ಹಾರುವ ಹೆಲಿಕಾಪ್ಟರ್​, ಅಲ್ಲಿ ಆನಂದ್​ ಸಿಂಗ್​ ಅವರನ್ನು ಕೂರಿಸಿಕೊಂಡು ಬೆಂಗಳೂರಿಗೆ ಪ್ರಯಾಣ ಬೆಳಸಲಿದೆ. ಇಲ್ಲಿ ಯಡಿಯೂರಪ್ಪ ಮನೆಯಲ್ಲಿ ನಡೆಯುವ ಸಂಧಾನ ಸಭೆಯಲ್ಲಿ ಆನಂದ್​ ಸಿಂಗ್​ ಬೇಡಿಕೆ ಏನು..? ಹೇಗೆ ಪೂರೈಸುವುದು. ಅಥವಾ ಆನಂದ್​ ಸಿಂಗ್​ ಬೇಡಿಕೆ ಪೂರೈಸಲು ಇರುವ ಅಡೆತಡೆಗಳು ಏನು..? ಎನ್ನುವ ಬಗ್ಗೆ ಚರ್ಚೆ ನಡೆಸಿ ಪ್ರಹಸನ ಅಂತ್ಯ ಮಾಡುವ ಸಾಧ್ಯತೆ ಇದೆ.

2 ದಿನದಲ್ಲಿ ಎಲ್ಲಾ ಅಸಮಾಧಾನ ಅಂತ್ಯ ನಿರೀಕ್ಷೆ..!

ಸಚಿವ ಆನಂದ್​ ಸಿಂಗ್​ ಅಸಮಾಧಾನದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವ ಸೋಮಣ್ಣ, ಇನ್ನೆರಡು ದಿನದಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ. ಆನಂದ್​ ಸಿಂಗ್​ ಬುದ್ಧಿವಂತರಿದ್ದಾರೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಹೈಕಮಾಂಡ್​ ನಾಯಕರ ಜೊತೆಗೆ ಚರ್ಚಿಸಿ ಆನಂದ್​ ಸಿಂಗ್​ ಜೊತೆಗೆ ಮತ್ತೊಮ್ಮೆ ಚರ್ಚೆ ನಡೆಸಲಿದ್ದಾರೆ ಎಂದಿದ್ದಾರೆ. ಇನ್ನೂ ಸಚಿವ ಎಸ್​.ಟಿ ಸೋಮಶೇಖರ್​ ಮಾತನಾಡಿ, ಆನಂದ್​ ಸಿಂಗ್​ ಇನ್ನೂ ರಾಜೀನಾಮೆ ನೀಡಿಲ್ಲ. ಸಂಜೆ 6 ಗಂಟೆಗೆ ಬೆಂಗಳೂರಿಗೆ ಬರ್ತಾರೆ. ಅವರೊಟ್ಟಿಗೆ ಮಾತನಾಡ್ತೇವೆ ಎಂದಿದ್ದಾರೆ. ಇನ್ನೂ ಶ್ರೀಮಂತ ಪಾಟೀಲ್, ಎಂಟಿಬಿ ನಾಗರಾಜ್​ ಸಮಸ್ಯೆಯೂ ಬಗೆಹರಿಯಲಿದೆ ಎನ್ನುವ ಮೂಲಕ ಮತ್ತೆ ಎರಡು ಸಂಕಷ್ಟ ಇದೆ ಎಂದು ಒಪ್ಪಿಕೊಂಡಿದ್ದಾರೆ. ಖಾತೆ ಪಡೆಯುವ ಉದ್ದೇಶ ಏನು..? ಈ ಖಾತೆಗಳಲ್ಲಿ ಕೆಲಸ ಮಾಡಲು ಸಮಸ್ಯೆ ಏನು..? ಸ್ವಹಿತಾಸಕ್ತಿಗಾಗಿ ಇಂತಹದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿದ್ದಾರಾ..? ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಶುರುವಾಗಿದೆ. ಆನಂದ್​ ಸಿಂಗ್​ ತನಗೆ ಬೇಕಾದ ಖಾತೆ ಪಡೆಯುತ್ತಾರಾ..? ಅಥವಾ ಸಂಧಾನಕ್ಕೆ ಒಪ್ಪಿ ಶಾಂತವಾಗ್ತಾರಾ..? ಎನ್ನುವುದಕ್ಕೆ ಸಂಜೆ ತನಕ ಕಾಯಬೇಕಿದೆ.  

Related Posts

Don't Miss it !