ಜಾತಿ ಬಲ ಇಲ್ಲದಿದ್ದರೂ ಸರ್ಕಾರಕ್ಕೆ ಸವಾಲು..! ಎದೆಗಾರಿಕೆಯೋ? ಬಂಡತನವೋ..?

ಬಳ್ಳಾರಿಯ ವಿಜಯನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಆನಂದ್​ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಮಗ್ಗಲ ಮುಳ್ಳಾಗಿ ಪರಿಣಮಿಸಿದ್ರು. ಸಣ್ಣದೊಂದು ಘಟನೆ ಬಳಿಕ ಪಕ್ಷದಿಂದ ಹೊರ ಹೋಗುವ ನಿರ್ಧಾರ ಮಾಡಿದ್ದರು. ಆಪರೇಷನ್​ ಕಮಲದ ಭಾಗವಾಗಿಯೇ ರಾಜೀನಾಮೆ ನೀಡಿದರಾದರೂ ಮುಂಬೈನಲ್ಲಿ ಟೆಂಟ್​ ಹಾಕದೆ ನೇರವಾಗಿ ತನ್ನ ಕ್ಷೇತ್ರದ ಜನರ ಎದುರಿಗೆ ಹೋಗಿದ್ದರು. ಕಾಂಗ್ರೆಸ್​​ ಪಕ್ಷವನ್ನು ತೊರೆದ ಬಳಿಕ ಒಂದೇ ಒಂದು ಅಜೆಂಡಾ ಇಟ್ಟುಕೊಂಡಿದ್ದ ಆನಂದ್​ ಸಿಂಗ್​, ಬಿಜೆಪಿ ಪಕ್ಷದಿಂದಲೂ ಶಾಸಕರಾಗಿ ಆಯ್ಕೆಯಾದರು. ತಾವು ಅಂದುಕೊಂಡಿದ್ದನ್ನು ನಾಜೂಕಾಗಿ ಕಾರ್ಯಗತಗೊಳಿಸಿದರು. ಇದೀಗ ಬಿಜೆಪಿ ನಾಯಕರು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿಲ್ಲ ಎನ್ನುವ ಅಸಮಾಧಾನ ಹೊರಹಾಕಿದ್ದಾರೆ. ಈಗಾಗಲೇ ಕೊಟ್ಟಿರುವ ಖಾತೆಯನ್ನು ಒಪ್ಪಿಕೊಳ್ಳದ ಆನಂದ್​ ಸಿಂಗ್,​ ಖಾಸಗಿ ಕಾರಿನಲ್ಲಿ ಓಡಾಡುತ್ತಿದ್ದಾರೆ.

‘ಪ್ರಬಲ ಖಾತೆಗೆ ಸಾಮರ್ಥ್ಯವಿಲ್ಲ ಎಂದಾದರೂ ಹೇಳಿ’

ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದರೂ ಸಚಿವ ಆನಂದ್​ ಸಿಂಗ್​ ಸರ್ಕಾರಿ ಕಾರು ಬಳಸುತ್ತಿಲ್ಲ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿಲ್ಲ. ಖಾಸಗಿ ಕಾರಿನಲ್ಲಿ ಓಡಾಡುತ್ತಾ..! ತನ್ನ ಸ್ವಂತ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ನನಗೆ ಪ್ರಮುಖ ಖಾತೆ ನೀಡದಿರಲು ಕಾರಣ ತಿಳಿಸಿ, ನೀನು ಅಸಮರ್ಥ ಎಂದಾದರೂ ಹೇಳಿ ಎಂದು ಬಿಜೆಪಿ ನಾಯಕರಿಗೆ ಸವಾಲು ಎಸೆದಿದ್ದಾರೆ ಆನಂದ್ ಸಿಂಗ್. ಜೊತೆಗೆ ಪಿಕ್ಚರ್​ ಅಭಿ ಬಾಕಿ ಹೈ ಎಂದು ಗೂಡಾರ್ಥದ ಮಾತನಾಡಿದ್ದಾರೆ,. ಇದೀಗ ಆನಂದ್​ ಸಿಂಗ್​ ನಿಲುವಿನಲ್ಲಿ ಸ್ಪಷ್ಟತೆ ಕಾಣಿಸುತ್ತಿದ್ದು, ಸದ್ಯಕ್ಕೆ ನೀಡಿರುವ ಖಾತೆಯಲ್ಲಿ ಮುಂದುವರಿಯುವುದಿಲ್ಲ ಎನ್ನುವ ಸಂದೇಶವನ್ನು ಗಟ್ಟಿಯಾಗಿ ರವಾನಿಸಿದ್ದಾರೆ. ಒಂದು ವೇಳೆ ಪ್ರಮುಖ ಖಾತೆ ನೀಡದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ನನಗೆ ನನ್ನ ಜನರ ಹಿತ ಅಷ್ಟೇ ಮುಖ್ಯ, ನಾನು ಅಂದುಕೊಂಡಿದ್ದ ವಿಜಯನಗರ ಜಿಲ್ಲೆ ರಚನೆಯಾಗಿದೆ ಎನ್ನುವುದನ್ನು ತನ್ನ ನಡಾವಳಿಕೆ ಮೂಲಕ ತೋರಿಸುತ್ತಿದ್ದಾರೆ.

ಇದನ್ನೂ ಓದಿ;

ಸಿಎಂ ಕಾರ್ಯಕ್ರಮದಿಂದಲೂ ಆನಂದ ದೂರ..!

ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಆಲಮಟ್ಟಿ ಡ್ಯಾಂಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬೆಂಗಳೂರಿನಿಂದ ಜಿಂದಾಲ್​ಗೆ ಬಂದಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಕ್ಕೆ ಸಚಿವ ಆನಂದ್​ ಸಿಂಗ್​ ಬಂದಿರಲಿಲ್ಲ. ಕೆಲವು ಆಪ್ತರ ಬಳಿ ಕೇಳಿದ ಸಿಎಂ, ಆನಂದ್​ ಸಿಂಗ್​ ಬರುವ ವಿಶ್ವಾಸದಲ್ಲಿ ಕಾದು ನಿಂತಿದ್ದರು. ಆದರೆ ಸಚಿವ ಆನಂದ್​ ಸಿಂಗ್​ ಅತ್ತ ಕಡೆ ಸುಳಿಯಲಿಲ್ಲ. ಕಳೆದ ಮಂಗಳವಾರ ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ತುಂಗಾಭದ್ರಾ ಡ್ಯಾಂಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸ್ವತಃ ವಿಜಯನಗರ ಕ್ಷೇತ್ರದಲ್ಲೇ ಕಾರ್ಯಕ್ರಮ ನಡೆದರೂ ಸಚಿವ ಆನಂದ್​ ಸಿಂಗ್​ ಗೈರು ಹಾಜರಾಗಿದ್ದರು. ಬಿಜೆಪಿ ನಾಯಕರು ಆನಂದ್​ ಸಿಂಗ್​ಗೆ ಯಾವುದೇ ಅಸಮಾಧಾನ ಇಲ್ಲ, ಬಿಜೆಪಿ ನಾಯಕರು ಎಲ್ಲವನ್ನು ಸರಿ ಮಾಡ್ತಾರೆ ಎನ್ನುವ ವಿಶ್ವಾಸದ ಮಾತುಗಳನ್ನು ಹೇಳುತ್ತಿದ್ದಾರೆ. sಚಿವ ಆನಂದ್​ ಸಿಂಗ್​ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ;

ಜಾತಿ ಬಲವಿಲ್ಲದಿದ್ದರೂ ಆನಂದ್​ ಸಿಂಗ್​ ಅಬ್ಬರ..!

ರಾಜಕಾರಣ ನಡೆಯುವುದೇ ಜಾತಿ ಲೆಕ್ಕಾಚಾರದ ಮೇಲೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ವಿಜಯನಗರ ಕ್ಷೇತ್ರದಲ್ಲಿ ತನ್ನ ಸಮುದಾಯ ಸಾವಿರ ಮತಗಳು ಇಲ್ಲದಿದ್ದರೂ ಆನಂದ್​ ಸಿಂಗ್​ ಮಾತ್ರ ಬಿಜೆಪಿಗೆ ಸವಾಲು ಹಾಕಿ ನಿಂತಿರುವುದು ಸಾಹಸಮಯವಾಗಿದೆ. ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಮಾಡುವ ತನ್ನ ಮಾತನ್ನು ಉಳಿಸಿಕೊಂಡಿದ್ದಾರೆ. ನಾನು ಭ್ರಷ್ಟಾಚಾರ ಮಾಡಿಲ್ಲ, ಜನರ ಹಣ ಲೂಟಿ ಹೊಡೆಯಲು ನಾನು ರಾಜಕಾರಣ ಮಾಡಲ್ಲ ಎನ್ನುವ ಸ್ಪಷ್ಟ ಮಾತುಗಳನ್ನಾಡುತ್ತ ಪ್ರಬಲ ಖಾತೆಯ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಆನಂದ್​ ಸಿಂಗ್​​ ಬಿಜೆಪಿಗೆ ಸೇರಿದ ಬಳಿಕ ವಿಜಯನಗರ ನೂತನ ಜಿಲ್ಲೆ ರಚನೆ ಘೋಷಣೆಯಾಗಿದೆ. ನಾನು ಯಾವುದೇ ಪಕ್ಷಕ್ಕೆ ಹೋದರೂ ಗೆಲ್ಲುತ್ತೇನೆ ಎನ್ನುವ ಹುಮ್ಮಸ್ಸು ಹೆಚ್ಚಾಗಿದೆ. ಹೀಗಾಗಿ ಕೊಟ್ಟರೆ ಪ್ರಬಲ ಖಾತೆ ಕೊಡಲಿ, ಇಲ್ಲದಿದ್ದರೆ ಮತ್ತೆ ಕಾಂಗ್ರೆಸ್​ ಕಡೆಗೆ ಮುಖ ಮಾಡೋಣ ಎನ್ನುವ ಮನಸ್ಸಿನಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಉಪರಾಷ್ಟ್ರಪತಿ ಸ್ವಾಗತಕ್ಕೂ ಆನಂದ್​ ಸಿಂಗ್​ ಗೈರು..!

ಆನಂದ್​ ಸಿಂಗ್​ ಖಾತೆಗಾಗಿ ಇಷ್ಟೊಂದು ಕಠೋರವಾಗಿ ಕೇಳಿರುವುದು ಅವರ ಎದೆಗಾರಿಕೆ ಎನ್ನುವ ಮಾತುಗಳನ್ನೂ ಅಭಿಮಾನಿಗಳು ಹೇಳುತ್ತಿದ್ದಾರೆ. ಕೊಟ್ಟಿರುವ ಖಾತೆಯಲ್ಲಿ ಕೆಲಸ ಮಾಡಲಿ ಎಂದು ಆಪರೇಷನ್​ ಕಮಲದ ಶಾಸಕರು ಹೇಳುತ್ತಿದ್ದಾರೆ. ವೆಂಕಯ್ಯನಾಯ್ಡು ಅಳಿದುಳಿದ ವಿಜಯನಗರ ಸಾಮ್ರಾಜ್ಯ ನೋಡಲು ಆಗಮಿಸಿದ್ದರೂ ಆನಂದ್​ ಸಿಂಗ್​ ಸುಳಿವು ಇರಲಿಲ್ಲ. ಇದನ್ನೆಲ್ಲಾ ನೋಡಿದರೆ ಆನಂದ್​ ಸಿಂಗ್​ ಕಾರು ಕಾಂಗ್ರೆಸ್​ ಕಚೇರಿ ಎದುರು ಪಾರ್ಕ್​ ಆಗಿರುವ ಲಕ್ಷಗಳು ಕಾಣಿಸುತ್ತಿವೆ. ಈಗ ಕೊಟ್ಟಿರುವ ಖಾತೆಯಲ್ಲೇ ವಿಶಿಷ್ಟ ಸಾಧನೆ ಮಾಡಿ ತೋರಿಸುವ ಅವಕಾಶವಿತ್ತು. ಗೆಲ್ಲುವ ಹುಂಬತನ ಆನಂದ್​ ಸಿಂಗ್​ ಅವರನ್ನು ಕಟ್ಟಿ ಹಾಕಿದೆ ಎಂದರೆ ಸುಳ್ಳಲ್ಲ.

Related Posts

Don't Miss it !