ಆನೇಕಲ್ ಜೋಡಿ ಕೊಲೆಗೆ ಮೂರು ಕಾರಣ..!! ಖಾಕಿ ಬಲೆಗೆ ಬಿದ್ದ ಮುತ್ತುರಾಜ..!!

ಆನೇಕಲ್‌ನ ಚಂದಾಪುರದ ರಾಮಯ್ಯ ಲೇಔಟ್‌ನಲ್ಲಿ ಶನಿವಾರ ರಾತ್ರಿ ಜೋಡಿ ಕೊಲೆ ನಡೆದಿತ್ತು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಒಬ್ಬ ಮಹಿಳೆಯ ಕೊಲೆ ವಿಚಾರ ಸಾರ್ವಜನಿಕರಲ್ಲಿ ಸಾಕಷ್ಟು ಭಯ ಸೃಷ್ಟಿಸಿತ್ತು. ಕೊಲೆ ನಡೆದ ಸ್ಥಳಕ್ಕೆ ಬಂದಿದ್ದ ಸೂರ್ಯನಗರ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಹಾಯದಿಂದ ಆರೋಪಿಗಳ ಬಗ್ಗೆ ಸುಳಿವು ಪತ್ತೆ ಮಾಡುವ ಪ್ರಯತ್ನ ಮಾಡಿದ್ದರು. ಬೆಂಗಳೂರು ಗ್ರಾಮಾಂತರ ( ASP ) ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾಧಿಕಾರಿ ಲಕ್ಷ್ಮೀ ಗಣೇಶ್ ಕೂಡ ಸ್ಥಳ ಪರಿಶೀಲನೆ ಮಾಡಿ ಕೊಲೆ ಮಾಡಿದ ಆರೋಪಗಳನ್ನು ಶೀಘ್ರದಲ್ಲೇ ಬಂಧನ ಮಾಡಲಾಗುತ್ತದೆ ಎಂದಿದ್ದರು. ಆನೇಕಲ್ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕೊಲೆಯಾಗಿದ್ದು ಯಾರು..? ಕೊಲೆ ಮಾಡಿದ್ದು ಯಾಕೆ..?

ಕೊಲೆಯಾಗಿದ್ದು ಓರ್ವ ಮಹಿಳೆ ಹಾಗೂ ಓರ್ವ ಪುರುಷ. ಇಬ್ಬರೂ ಗಂಡ ಹೆಂಡತಿ ಅಲ್ಲ. ಚಿಕ್ಕ ಹಾಗಡೆ ನಿವಾಸಿ, ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಅಲಿಯಾಸ್ ದಾಸ. ರಾಜಕೀಯವಾಗಿ ಉತ್ತಮ ಬೆಳವಣಿಗೆ ಕಂಡಿದ್ದ ನಾರಾಯಣಸ್ವಾಮಿ, ಕಳೆದ ಬಾರಿ ತನ್ನ ಪತ್ನಿಯನ್ನೂ ಗ್ರಾಮ ಪಂಚಾಯತಿ ಸದಸ್ಯಳನ್ನಾಗಿ ಮಾಡಿದ್ದ. ಇನ್ನು ಇದೇ ಗ್ರಾಮದ ಕಾವ್ಯಾ ಈತನ ಸ್ನೇಹಿತೆ ಆಗಿದ್ದಳು. ಕಳೆದ 10 ವರ್ಷದ ಹಿಂದೆ ಮುತ್ತುರಾಜ ಎಂಬಾತನ ಜೊತೆಗೆ ಕಾವ್ಯಾ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಆದರೆ ಆಕೆಯ ಗಂಡ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ಜೈಲು ಸೇರಿಕೊಂಡಿದ್ದ. ಆದರೆ ಕಾವ್ಯಾ ಮಾತ್ರ ತನ್ನ ಅತ್ತೆಯ ಜೊತೆಗೆ ಜೀವನ ನಡೆಸುತ್ತಿದ್ದಳು. ಆಕೆಗೆ ಒಬ್ಬ ಮಗಳೂ ಇದ್ದಳು. ಕಾವ್ಯಾಳ ಗಂಡ ಮುತ್ತುರಾಜ ಜೈಲಿನಿಂದ ವಾಪಸ್ ಬಂದ ಬಳಿಕ ಪತ್ನಿಯೊಂದಿಗೆ ಸಂಸಾರ ಮಾಡದೆ, ಅತ್ಯಾಚಾರ ಆರೋಪ ಹೊರಿಸಿದವಳ ಜೊತೆಗೆ ವಾಸ ಮಾಡುತ್ತಿದ್ದ. ಶನಿವಾರ ಕಾವ್ಯಾ ತನ್ನ ತವರು ಮನೆಗೆ ಬಂದಿದ್ದ ವೇಳೆ ನಾರಾಯಣಸ್ವಾಮಿ ಕೂಡ ಅಲ್ಲಿಗೆ ಬಂದಿದ್ದ. ಇದೇ ಸಮಯಕ್ಕಾಗಿ ಕಾಯುತ್ತಾ ಕುಳಿತಿದ್ದ ಆಗಂತುಕರು ಎರಡು ಆಟೋಗಳಲ್ಲಿ ಬಂದು ಹತ್ಯೆ ಮಾಡಿ ಪರಾರಿ ಆಗಿದ್ದಾರೆ.

ಕೊಲೆಯಾದ ನಾರಾಯಣಸ್ವಾಮಿ

ಹತ್ಯೆಗೆ ಪೊಲೀಸರ ಪ್ರಕಾರ ಮೂರು ಕಾರಣ.. ಅದರಲ್ಲಿ ಒಂದು ಕೊಲೆ ಗ್ಯಾಂಗ್..!

ಪೊಲೀಸರು ತನಿಖೆ ಕೈಗೆ ಎತ್ತಿಕೊಂಡ ಬಳಿಕ ಈ ಜೋಡಿ ಕೊಲೆ ಹಿಂದೆ ಇರುವ ಕಾರಣಗಳನ್ನು ಹೀಗೆ ಪಟ್ಟಿ ಮಾಡಿದ್ದರು. ಒಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನಾಗಿದ್ದ ನಾರಾಯಣಸ್ವಾಮಿ ಕಳೆದ ಬಾರಿ ತನ್ನ ಪತ್ನಿಯನ್ನು ಸದಸ್ಯಳನ್ನಾಗಿ ಮಾಡುವ ಮೂಲಕ ರಾಜಕೀಯ ಹಿಡಿತ ಸಾಧಿಸಲು ಮುಂದಾಗಿದ್ದ. ಜೊತೆಗೆ ಜೆಡಿಎಸ್ ಪಕ್ಷದಲ್ಲೂ ಗುರುತಿಸಿಕೊಂಡಿದ್ದ, ಇದೇ ಕಾರಣಕ್ಕೆ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎನ್ನುವ ಆತಂಕದಲ್ಲಿ ಕೊಲೆ ನಡೆದಿರಬಹುದು. ಎರಡನೇ ಕಾರಣ; ಕಾವ್ಯಾಳ ಗಂಡ ಜೈಲಿನಿಂದ ಹೊರಬಂದ ಬಳಿಕ ಬೇರೊಬ್ಬಳ ಜೊತೆಗೆ ಸಂಸಾರ ಮಾಡುತ್ತಿದ್ದರೂ ನನ್ನ ಕಷ್ಟಗಳಿಗೆ ಇವರಿಬ್ಬರ ಸ್ನೇಹವೇ ಕಾರಣ ಎಂದು ಸೇಡಿನಲ್ಲಿ ಕೊಲೆ ಮಾಡಿರಬಹುದು. ಇನ್ನೂ ಮೂರನೇ ಹಾಗೂ ಅಂತಿಮ ಕಾರಣ. ಯಾವುದೇ ಒಬ್ಬ ಮಹಿಳೆ ತನ್ನ ಗಂಡ ಪರ ಸ್ತ್ರೀ ಜೊತೆ ಪಲ್ಲಂಗ ಏರುತ್ತಿದ್ದಾನೆ ಎಂದರೆ ಮಹಿಳೆ ಸಹಿಸಲು ಸಾಧ್ಯವಿಲ್ಲ. ಗಂಡನ ಚಪಲವನ್ನು ಸಹಿಸದೆ ಗ್ರಾಮ ಪಂಚಾಯತಿ ಸದಸ್ಯೆ ಗಂಡನಿಗೂ ಸೇರಿ‌ ಮುಹೂರ್ತ ಇಟ್ಟಳಾ..? ಎನ್ನುವ ಅನುಮಾನವೂ ಖಾಕಿಪಡೆಯನ್ನು ಕಾಡಿತ್ತು. ಈ ಮೂರು ಕಾರಣಗಳನ್ನು ಜಾಲಾಡಿದ ಬಳಿಕ ಒಂದು ಕಾರಣ ಸರಿಯಾಗಿದೆ.

ಅಪ್ರಾಪ್ತೆ ಅತ್ಯಾಚಾರಿ, ಕಾವ್ಯಾ ಗಂಡನೇ ಜೋಡಿ ಕೊಲೆಗಾರ..!!

ಆನೇಕಲ್ ಡಬಲ್ ಮರ್ಡರ್ ಪ್ರಕರಣ ಬೇಧಿಸಿರುವ ಸೂರ್ಯ ನಗರ ಪೊಲೀಸರು, ಜೋಡಿ ಕೊಲೆ ಮಾಡಿದ ಆರೋಪದ ಮೇಲೆ ಕೊಲೆಯಾದ ಕಾವ್ಯಾಳ ಗಂಡ ಮುತ್ತುರಾಜನನ್ನು ಬಂಧಿಸಿದ್ದಾರೆ. ಚಿಕ್ಕಹಾಗಡೆ ನಿವಾಸಿ ಆಗಿರುವ ಮುತ್ತುರಾಜ, ಅಪ್ರಾಪ್ತೆ ಅತ್ಯಾಚಾರ ಕೇಸ್‌ನಲ್ಲಿ ಜೈಲುವಾಸ ಮಾಡಿದ ಬಳಿಕ ಆಕೆಯ ಜೊತೆಯಲ್ಲೇ ಸಂಸಾರ ಮುಂದುವರಿಸಿದ್ದ. ಆದರೆ ಕಾವ್ಯಾ ತನ್ನ ಮಗಳ ಹಾಗೂ ತಾಯಿಯ ಜೊತೆಯಲ್ಲೇ ವಾಸ ಮಾಡ್ತಿದ್ದ ಕಾರಣ, ತಾಯಿ ಹಾಗೂ ಮಗಳನ್ನು ಕಾಣಲು ಹಾಗಾಗ್ಗೇ ಮನೆಗೂ ಹೋಗ್ತಿದ್ದ. ಇತ್ತೀಚಿನ ದಿನಗಳಲ್ಲಿ ನಾರಾಯಣಸ್ವಾಮಿ ಜೊತಗೆ ಕಾವ್ಯಾ ಸ್ನೇಹ ಸಂಪಾದಿಸಿದ್ದಾಳೆ ಎನ್ನುವ ವಿಚಾರ ಮುತ್ತುರಾಜನ ಕಿವಿಗೆ ಬಿದ್ದಿತ್ತು. ಇಬ್ಬರನ್ನೂ ಮುಗಿಸುವ ನಿರ್ಧಾರಕ್ಕೆ ಬಂದಿದ್ದ ಮುತ್ತುರಾಜ, ಇಬ್ಬರಿಗೂ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಮುತ್ತುರಾಜನ ಬಂಧನ ಖಚಿತ ಮಾಡಿರುವ ಬೆಂಗಳೂರು ಗ್ರಾಮಾಂತರ ಎಸ್‌ಪಿ ಕೆ ವಂಶಿಕೃಷ್ಣ, ಮೃತ ಕಾವ್ಯಾಳ ಪತಿ ಮುತ್ತುರಾಜನನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ಮಾಡಿರುವ ಸಾಧ್ಯತೆ ಇದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಗಂಡು ಮಾಡಿದರೆ ಸರಿಯಾಗುತ್ತೆ..! ಹೆಣ್ಣು ಮಾಡಿದರೆ ತಪ್ಪೇ..?

ಗಂಡು ಮದುವೆಯಾದವಳನ್ನು ಬಿಟ್ಟು ಬೇರೊಬ್ಬಳನ್ನು ಅತ್ಯಾಚಾರ ಮಾಡಬಹುದು. ಜೈಲಿಗೂ ಹೋಗಬಹುದು. ಆ ಬಳಿಕ ಕಟ್ಟಿಕೊಂಡ ಹೆಂಡತಿ ಬಿಟ್ಟು ಮತ್ತೊಬ್ಬಳ ಜೊತೆಗೆ ಸಂಸಾರ ನೌಕೆ ಸಾಗಿಸಬಹುದು. ಆದರೆ ಗಂಡ ಬಿಟ್ಟರೂ ಹೆಣ್ಣು ಮಾತ್ರ ತನ್ನ ಪತ್ನಿ ಧರ್ಮ ಪರಿಪಾಲನೆ ಮಾಡಬೇಕು ಎನ್ನುವ ಮೂರ್ಖತನದಿಂದ ಕೊಲೆ ಮಾಡಿದ್ದಾನೆ ಆರೋಪಿ. ಕೊಲೆಪಾತಕನ ವಿರುದ್ಧ ಪೊಲೀಸರು ಸೂಕ್ತ ತನಿಖೆ ನಡೆಸಿ ಕಠಿಣ ಸಾಕ್ಷಿಗಳನ್ನು ಕಲೆಹಾಕಿ ಗಲ್ಲು ಶಿಕ್ಷೆ ಆಗುವಂತೆ ಮಾಡಬೇಕಿದೆ. ವ್ಯಭಿಚಾರ ಎಂದು ಭಾವಿಸಿದರೆ ಇಬ್ಬರಿಗೂ ಅದು ವ್ಯಭಿಚಾರ. ದೇಹ ಸುಖಕ್ಕೆ ಅಡ್ಡಿ ಇಲ್ಲ ಎನ್ನುವುದಾದರೆ ಇಬ್ಬರಿಗೂ ಅದೇ ನಿಯಮ. ಮುತ್ತುರಾಜನಿಗೆ ಕಠಿಣ ಶಿಕ್ಷೆ ಆಗದಿದ್ದರೆ..! ಗಂಡು ಮಾಡಿದ್ದೆಲ್ಲವೂ ಸರಿ, ಹೆಣ್ಣು ಮಾಡಿದ್ರೆ ಮಾತ್ರ ಅಪರಾಧ ಎಂದು ಸಾಬೀತಾಗಲಿ.

Related Posts

Don't Miss it !