SSLC ಫಲಿತಾಂಶಕ್ಕೆ ದಿನಾಂಕ ನಿಗದಿ, ಉಚಿತ ಕಾಲೇಜು ಪ್ರವೇಶಕ್ಕೆ ಇಲ್ಲಿದೆ ಮಾಹಿತಿ..!

ಇತಿಹಾಸದಲ್ಲೇ ಮೊದಲ ಬಾರಿ ಬಹು ಆಯ್ಕೆ ಪ್ರಶ್ನೆಗಳ ಮೂಲಕ ಪರೀಕ್ಷೆ ಎದುರಿಸಿದ್ದ ಎಸ್​ಎಸ್​ಎಲ್​ಸಿ ಮಕ್ಕಳ ಫಲಿತಾಂಶ ನಾಳೆ ಪ್ರಕಟ ಮಾಡಲು ನಿಗದಿ ಮಾಡಲಾಗಿತ್ತು ಆಗಲಿದೆ. 2020-21 ನೇ ಸಾಲಿನ SSLC ಫಲಿತಾಂಶ ಪ್ರಕಟಕ್ಕೂ ಮುನ್ನ ಸಿಎಂ ಜೊತೆ ವಿಡಿಯೋ ಕಾನ್ಪರೆನ್ಸ್ ಸಭೆ ನಡೆಸಿ ಈ ನಿರ್ಧಾರ ಮಾಡಲಾಗಿತ್ತು. ನಾಳೆ ಫಲಿತಾಂಶ ಪ್ರಕಟ ಎಂದು ಘೋಷಣೆ ಮಾಡಿದ ಬಳಿಕ ಮತ್ತೆ ದಿನಾಂಕ ಮುಂದೂಡಲಾಗಿದ್ದು, ನೂತನ ಶಿಕ್ಷಣ ಸಚಿವರ ನೇಮಕವಾದ ಬಳಿಕ ಮುಂದಿನ ಎರಡು ದಿನದಲ್ಲಿ ಫಲಿತಾಂಶ ಘೋಷಣೆ ಮಾಡಲು ನಿರ್ಧಾರ ಮಾಡಲಾಗಿದೆ. ಸದ್ಯ ಶಾಲೆ ಆರಂಭಿಸುವ ಚಿಂತನೆಯಲ್ಲಿ ಸರ್ಕಾರ ಇಲ್ಲ ಎನ್ನಲಾಗಿದೆ. ಅದೇ ಕಾರಣಕ್ಕಾಗಿ ವಿದ್ಯಾಗಮ ಆರಂಭಿಸಲು ಶಿಕ್ಷಣ ಇಲಾಖೆ ಉತ್ಸುಕತೆ ತೋರಿಸಿದ್ದು, ಶೀಘ್ರದಲ್ಲೇ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ.

ಪಿಯುಸಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ..!

2021-22ನೇ ಸಾಲಿನ ಪದವಿ ಪೂರ್ವ ಕಾಲೇಜು ಪ್ರವೇಶಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಸರ್ಕಾರಿ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿ ಆರ್ಜಿ ಆಹ್ವಾನ ಮಾಡಲಾಗಿದೆ. ರಾಜ್ಯಾದ್ಯಂತ 21 ಕಾಲೇಜುಗಳನ್ನು ಹೊಂದಿದ್ದು, ಕಾಮರ್ಸ್​ ಹಾಗೂ ವಿಜ್ಞಾನ ವಿಭಾಗದಲ್ಲಿ ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 60 ಹಾಗೂ ವಿಜ್ಞಾನ ವಿಭಾಗದಲ್ಲಿ 60 ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತದೆ. ಆದರೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್​, ಬೌದ್ಧ, ಜೈನ್​, ಸಿಖ್​, ಪಾರ್ಷಿ ಸಮುದಾಯದ ಮಕ್ಕಳಿಗೆ ಶೇಕಡ 75 ಹಾಗೂ ಉಳಿದ ಒಬಿಸಿ ವರ್ಗಕ್ಕೆ ಶೇಕಡ 25ರಷ್ಟು ಸೀಟು ಕಾಯ್ದಿರಿಸಲಾಗಿದೆ.

ಸಂಪೂರ್ಣ ಶಿಕ್ಷಣ, ವಸತಿ ಎಲ್ಲವೂ ಉಚಿತ..!

ಹೆಣ್ಣು ಮಕ್ಕಳ ಶಿಕ್ಷಣ ಪ್ರೋತ್ಸಾಯಿಸುವ ಉದ್ದೇಶದಿಂದ ಅಲ್ಪಸಂಖ್ಯಾತ ಇಲಾಖೆ ಶಿಕ್ಷಣ ಇಲಾಖೆ ಜೊತೆಗೆ ಕೈಜೋಡಿಸಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡುತ್ತಿದೆ. ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಕಾಲೇಜುಗಳಲ್ಲಿ 2 ವರ್ಷಗಳ ಕಾಲ ಉಚಿತ ಶಿಕ್ಷಣದ ಜೊತೆಗೆ ಊಟ, ವಸತಿಯೂ ಉಚಿತವಾಗಿ ಇರಲಿದೆ. ಜೊತೆಗೆ ಪಠ್ಯ ಪುಸ್ತಕ, ಸಿಇಟಿ ತರಗತಿ, ಮೂರು ಜೊತೆ ಸಮವಸ್ತ್ರ, 2 ಜೊತೆ ಶೂ, ಟ್ರ್ಯಾಕ್​ ಸೂಟ್​, ಸ್ಮಾರ್ಟ್​ ಕ್ಲಾಸ್​ ಸೌಲಭ್ಯ ಒದಗಿಸಲಾಗುತ್ತದೆ. ಇನ್ನು ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಇರಲಿದೆ. ನುರಿತ ಬೋಧನಾ ಸಿಬ್ಬಂದಿ ತರಗತಿ ನೀಡಲಿದೆ. ಎಲ್ಲಾ ಕಾಲೇಜುಗಳಲ್ಲೂ ಸೋಲಾರ್​ ವ್ಯವಸ್ಥೆ ಮಾಡಿರುವ ಕಾರಣ ದಿನದ 24 ಗಂಟೆಯೂ ಬಿಸಿನೀರಿನ ಸೌಲಭ್ಯ ಲಭ್ಯವಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಗೂರಮಾರನಹಳ್ಳಿ ಬಳಿ ಸುಸಜ್ಜಿತ ಕಾಲೇಜು ನಿರ್ಮಾಣವಾಗಿದೆ. ಇಲ್ಲಿ ಯಾವುದೇ ಒತ್ತಡಕ್ಕೆ ಆಸ್ಪದವಿಲ್ಲ. ಮೆರಿಟ್​ ಆಧಾರದ ಮೇಲೆ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಅಲ್ಪಸಂಖ್ಯಾತ ಇಲಾಖೆ, ತಾಲೂಕು ವಿಸ್ತರಣಾ ಅಧಿಕಾರಿಗಳು ಅಲ್ಪಸಂಖ್ಯಾತ ಇಲಾಖೆ ಹಾಗೂ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಮಹಿಳಾ ಕಾಲೇಜು ಪ್ರಾಂಶುಪಾಲರನ್ನು ಸಂಪರ್ಕ ಮಾಡಬಹುದಾಗಿದೆ. ನವೋದಯ ಮಾದರಿಯ ಕಾಲೇಜು ಇದಾಗಿದ್ದು, ಸುರಕ್ಷಿತ ಉತ್ತಮ ಶಿಕ್ಷಣಕ್ಕೆ ಹೇಳಿ ಮಾಡಿಸಿದ ಶಿಕ್ಷಣ ಸಂಸ್ಥೆ ಎನ್ನಬಹುದು.

Related Posts

Don't Miss it !