B.S ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ, ಅಬ್ಬಿಗೆರೆಯಲ್ಲಿ ಅಂತ್ಯಸಂಸ್ಕಾರ..! ಕಾರಣ..

ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಮೊಮ್ಮಗಳು ಡಾ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿ.ಎಸ್ ​ಯಡಿಯೂರಪ್ಪ ಪುತ್ರಿ ಪದ್ಮಾವತಿ ಅವರ ಪುತ್ರಿ ಆಗಿರುವ ಡಾಕ್ಟರ್​ ಸೌಂದರ್ಯ, ವೃತ್ತಿಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ನೆಲಮಂಗಲ ಬಳಿಯ ಅಬ್ಬಿಗೆರೆ ನಿವಾಸಿ ಡಾ ನೀರಜ್​ ಅವರ ಜೊತೆಗೆ ವಿವಾಹ ಮಾಡಿಕೊಡಲಾಗಿತ್ತು. ಇಬ್ಬರೂ ವೈದ್ಯರಾಗಿದ್ದರಿಂದ ಅನ್ಯೋನ್ಯವಾಗಿದ್ದ ಸಂಸಾರಕ್ಕೆ 9 ತಿಂಗಳ ಹಿಂದೆ ಮುದ್ದಾದ ಮುಗುವಿನ ಆಗಮನವಾಗಿತ್ತು. ಹೀಗಾಗಿ ಶಾಂಗ್ರಿಲಾ ಹೋಟೆಲ್​ ಬಳಿ ಇರುವ ಅಪಾರ್ಟ್​ಮೆಂಟ್​ನಲ್ಲಿ ಡಾ ನೀರಜ್​ ಜೊತೆಗೆ ವಾಸವಾಗಿದ್ದರು. ಇಂದು ಬೆಳಗ್ಗೆ ಎಂದಿನಂತೆ ಡಾ ನೀರಜ್​ ಕೆಲಸಕ್ಕೆ ಹೋದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದ್ದು, ಮನೆಯ ಕೆಲಸದಾಕೆ ಬಾಗಿಲು ತಟ್ಟಿದ್ದು, ಬಾಗಿಲು ತೆರೆಯದಿದ್ದಾಗ ಅನುಮಾನ ಬಂದ್​ ಕರೆ ಮಾಡಿದ್ದಾರೆ. ಕೂಡಲೇ ಮನೆಗೆ ತೆರಳಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ.

ಬೌರಿಂಗ್​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ..! ಕುತ್ತಿಗೆಯಲ್ಲಿ ಮಾರ್ಕ್​..!

ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡ ವಿಚಾರ ಗೊತ್ತಾಗ್ತಿದ್ದ ಹಾಗೆ ಶವವನ್ನು ಬೌರಿಂಗ್​ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಮೂವರು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ತಹಶೀಲ್ದಾರ್​ಗೆ ವರದಿ ಸಲ್ಲಿಕೆ ಮಾಡಲಾಗಿದೆ. ಕುತ್ತಿಗೆ ಭಾಗದಲ್ಲಿ ಕಪ್ಪು ಮಾರ್ಕ್​ ಪತ್ತೆಯಾಗಿದೆ. ದೇಹದ ಯಾವುದೇ ಭಾಗದಲ್ಲಿ ಗಾಯದ ಗುರುತುಗಳಿಲ್ಲ ಎನ್ನುವ ಮಾಹಿತಿಯನ್ನು ಮರಣೋತ್ತರ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಡಾ ಸತೀಶ್​ ಮಾಹಿತಿ ನೀಡಿದ್ದಾರೆ. ಡಾ ಸೌಂದರ್ಯ ಪತಿ, ಡಾ ನೀರಜ್​ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಪೊಲೀಸರು ತನಿಖೆ ಮಾಡಲು ನಿರ್ಧಾರ ಮಾಡಿದ್ದು, ಸಾವಿಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ಸ್ಪಷ್ಟಪಡಿಸಬೇಕಿದೆ.

ಡಾ ಸೌಂದರ್ಯ ನೇಣು ಬಿಗಿದುಕೊಂಡಿದ್ದಕ್ಕೆ ಕಾರಣ ಏನು..?

MS ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಕೆಲಸ ಮಾಡುತ್ತಿದ್ದ ಡಾ ಸೌಂದರ್ಯ, ವಸಂತನಗರದ ಅಪಾರ್ಟ್​ಮೆಂಟ್​​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, 9 ತಿಂಗಳ ಪುಟ್ಟ ಮಗು ಇದ್ದರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು ಯಾಕೆ ಎನ್ನುವ ಅನುಮಾನ ಕಾಡುತ್ತಿದೆ. ಇನ್ನೂ ಡಾ. ಸೌಂದರ್ಯ ಇತ್ತೀಚಿಗೆ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಮಾಹಿತಿಯೂ ಬರುತ್ತಿದೆ. ಆದರೆ ಕೇವಲ 30 ವರ್ಷ ವಯಸ್ಸಿನ ಡಾ ಸೌಂದರ್ಯ ಖಿನ್ನತೆಗೆ ಕಾರಣವೇನು ಎನ್ನುವುದನ್ನು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಾತ್ರ ಖಚಿತ ಮಾಡಬೇಕಿದೆ.

ಲಿಂಗಾಯತ ಸಂಪ್ರದಾಯದಂತೆ ಅಬ್ಬಿಗೆರೆಯಲ್ಲಿ ಅಂತ್ಯಕ್ರಿಯೆ..!

ಪ್ರಧಾನಿ ನರೇಂದ್ರ ಮೋದಿ ಬಿ.ಎಸ್​ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಮೊಮ್ಮಗಳು ಸೌಂದರ್ಯ ಸಾವಿನ ಬಗ್ಗೆ ಮಾತನಾಡಿ ಧೈರ್ಯ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಇನ್ನೂ ನೆಲಮಂಗಲ ಬಳಿಯ ಅಬ್ಬಿಗೆರೆ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ಮಾಡಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ ನೆರವೇರಲಿದೆ. ಶಿವಗಂಗೆಯ ರುದ್ರಮುನಿ ಶಿವಾಚಾರ್ಯ ಶ್ರೀಗಳ ಮಾರ್ಗದರ್ಶನದಂತೆ ವಿಧಿವಿಧಾನ ನೆರವೇರಲಿದೆ. ಅಬ್ಬಿಗೆರೆ ನಿವಾಸಿಗಳಿಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡದ ಪೊಲೀಸರು, ಕೇವಲ ಬಿ.ಎಸ್​ ಯಡಿಯೂರಪ್ಪ ಹಾಗೂ ಡಾ ನೀರಜ್​ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮೊಮ್ಮಗಳ ಹಣೆಯನ್ನು ಮುಟ್ಟಿ ಬಿ.ಎಸ್​ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿದ್ದು, ದಂಪತಿ ನಡುವೆ ಯಾವ ಸಮಸ್ಯೆ ಎದುರಾಗಿತ್ತು ಎನ್ನುವುದು ಪತ್ತೆಯಾಗಬೇಕಿದೆ.

Related Posts

Don't Miss it !