ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ..! ಕಣ್ಣೀರು ಹಾಕಿದ ಯಡಿಯೂರಪ್ಪ..!

ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ನೀಡುವ ಮೂಲಕ ಹಲವು ದಿನಗಳಿಂದ ಶುರುವಾಗಿದ್ದ ಗೊಂದಗಳಿಗೆ ತೆರೆ ಎಳೆದಿದ್ದಾರೆ. ಇಂದು ಸಿಎಂ ಆಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು, ಸಾಧನಾ ಸಮಾವೇಶದಲ್ಲಿ ಸಿಎಂ ರಾಜೀನಾಮೆ ಘೋಷಣೆ ಮಾಡಿದ್ದು, ನಾನು ನೋವಿನಿಂದ ರಾಜೀನಾಮೆ ನೀಡುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ನಾನು ಸಕ್ರಿಯನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಈ ವೇಳೆ ಭಾವುಕರಾದ ಸಿಎಂ ಬಿ.ಎಸ್​ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಕಾರ್ಯಕರ್ತರೂ ಕೂಡ ಕಣ್ಣೀರು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಅವರಿಗೆ ನಾನು ಋಣಿ, ಅವರ ಅಭಿಲಾಷೆಯಂತೆ ಮುಂದಿನ ಬಾರಿ ಅಧಿಕಾರಕ್ಕೆ ತರಲು ಯತ್ನಿಸುತ್ತೇನೆ ಎಂದಿದ್ದಾರೆ.

2ನೇ ವರ್ಷಾಚರಣೆ ಸಂತೋಷದಲ್ಲಿ ಬೇಸರದ ಭೋಜನಕೂಟ..!

ಸಚಿವರ ಜೊತೆಗಿನ ಭೋಜನ ಕೂಟದಲ್ಲೂ ಸಿಎಂ ಬೇಸರದಿಂದಲೇ ಕುಳಿತಿದ್ದರು. ಸಚಿವ ಈಶ್ವರಪ್ಪ ಬಹಳ ಬೇಸರದಿಂದ ಯಡಿಯೂರಪ್ಪ ಅವರಿಗೆ ಕೈ ಮುಗಿದು ಹೊರನಡೆದರು. ಸಚಿವ ಜಗದೀಶ್​ ಶೆಟ್ಟರ್​ ಕೂಡ ಭೋಜನ ಕೂಟದಲ್ಲಿ ಬೇಸರದಿಂದ ಕುಳಿತರು. ಭೋಜನದ ಬಳಿಕ ಸಿಎಂ ಯಡಿಯೂರಪ್ಪ ಜೊತೆಗೆ ಅಧಿಕಾರಿಗಳು, ಸಚಿವರು ಶಾಸಕರು ಕಾರ್ಯಕರ್ತರು ಫೋಟೋ ತೆಗೆಸಿಕೊಂಡರು. ಸಚಿವ ವಿ. ಸೋಮಣ್ಣ, ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಜಗದೀಶ್​ ಶೆಟ್ಟರ್​, ಮಾಧುಸ್ವಾಮಿ ಮುಖ್ಯಮಂತ್ರಿ ಜೊತೆಗೆ ಹಾಜರಿದ್ದರು. ರಾಜ್ಯಪಾಲರ ಭೇಟಿಗೆ ತೆರಳಿದ ಸಿಎಂ ಯಡಿಯೂರಪ್ಪ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜಭವನಕ್ಕೆ ತೆರಳುವ ಮುನ್ನ ಮಾತನಾಡಿದ ಸಿಎಂ ಯಡಿಯೂರಪ್ಪ, ಮುಂದೆ ಯಾರೇ ಮುಖ್ಯಮಂತ್ರಿ ಆದರೂ ನಾನು ಬೆಂಬಲ ನೀಡುತ್ತೇನೆ ಎಂದಿದ್ದಾರೆ

ದೆಹಲಿಯಲ್ಲಿ ನಾಳೆ ಮುಖ್ಯಮಂತ್ರಿ ಆಯ್ಕೆ..!

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡುತ್ತಿದ್ದ ಹಾಗೆ ದೆಹಲಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿಗೆ ಈಗಾಗಲೇ ಜುಲೈ 24 ರಂದೇ ಬಿಜೆಪಿ ಸಂಸದೀಯ ಮಂಡಳಿ ಸಭೆ ನಿಗದಿಯಾಗಿತ್ತು. ಆದರೆ ಮಾಧ್ಯಮಗಳಿಗೆ ಮಾಹಿತಿ ಸಿಗದಂತೆ ಎಚ್ಚರ ವಹಿಸಲಾಗಿತ್ತು. ಇದೀಗ ಸಂಸದೀಯ ಮಂಡಳಿ ಸಭೆ ಕರೆದಿರುವ ಮಾಹಿತಿ ಬಹಿರಂಗವಾಗಿದೆ. ಅದರಂತೆ ಜುಲೈ 27ರ ಬೆಳಗ್ಗೆ 9.30ಕ್ಕೆ ಸಂಸದರು ಹಾಜರು ಇರುವಂತೆ ಸೂಚನೆ ನೀಡಲಾಗಿದೆ. ಅಲ್ಲಿನ ಸಭೆ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವ ಬಗ್ಗೆ ಬಿಜೆಪಿ ಹೈಕಮಾಂಡ್​ ರಾಜ್ಯ ನಾಯಕರಿಗೆ ಸಂದೇಶ ಕಳುಹಿಸಲಿದ್ದಾರೆ ಎನ್ನಲಾಗಿದೆ.

ಮುರುಗೇಶ್​ ನಿರಾಣಿಗೆ ಪಟ್ಟ ಖಚಿತನಾ..?

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ಘೋಷಣೆಗೂ ಮುನ್ನ ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದರು. ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಬಹುತೇಕ ಸಚಿವರು ಭಾಗಿಯಾಗಿದ್ದರು. ಆದರೆ ನಿನ್ನೆಯಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗ್ತೇನೆ ಎಂದಿದ್ದ ಸಚಿವ ಮುರುಗೇಶ್​ ನಿರಾಣಿ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಇದೀಗ ಮುಖ್ಯಮಂತ್ರಿ ಸ್ಥಾನ ಸಿಗುವ ವಿಶ್ವಾಸದಿಂದ ದೂರ ಉಳಿದಿದ್ದಾರಾ..? ಅಥವಾ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದ್ದಕ್ಕೆ ಸಮಾವೇಶದಿಂದ ದೂರ ಉಳಿದರಾ ಎನ್ನುವ ಕುತೂಹಲ ಉಂಟಾಗಿದೆ.

Related Posts

Don't Miss it !