ಬಡವರ ಪ್ರಾಣಕ್ಕೆ ಸರ್ಕಾರದಿಂದ ಬೆಲೆ ನಿಗದಿ..! ಅದು ಕೇವಲ 5 ಲಕ್ಷ ರೂಪಾಯಿಗಳು ಮಾತ್ರ..!

ರಾಜ್ಯ ಸರ್ಕಾರ ಬೆಲೆ ಬಾಳುವ ಕೋಟಿ ಕೋಟಿ ರೂಪಾಯಿ ಆಸ್ತಿಯನ್ನು ಶ್ರೀಮಂತರಿಗೆ ಲೀಸ್​ಗೆ ಕೊಡುತ್ತದೆ. ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಕೆಲವೇ ಸಾವಿರ ರೂಪಾಯಿಗಳನ್ನು ಪಡೆದುಕೊಂಡು 99 ವರ್ಷಕ್ಕೆ ಲೀಸ್​ ಮಾಡಿಕೊಡುತ್ತದೆ. ಇನ್ನೂ ಟ್ರಸ್ಟ್​ ಸೇರಿದಂತೆ ಹಣ ಮಾಡುವ ದಂಧೆ ಮಾಡಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳಿಗೆ ಯಾವುದೇ ಚೌಕಾಸಿ ಮಾಡದೆ ಭೂಮಿ ಮಂಜೂರು ಮಾಡುತ್ತದೆ. ಮಠ ಮಾನ್ಯಗಳು, ಧಾರ್ಮಿಕ ಕೇಂದ್ರಗಳು ಎಂದಾಗಲೂ ಸರ್ಕಾರಕ್ಕೆ ಯಾವುದೇ ಅಡೆ ತಡೆ ಬರುವುದಿಲ್ಲ. ಆದರೆ ರೈತರು ಶ್ರಮವಹಿಸಿ, ಬೆವರು ಹರಿಸಿ ಕೆಲಸ ಮಾಡುವ ಭೂಮಿಯನ್ನು ಬಡ ರೈತರಿಗೆ ಮಂಜೂರು ಮಾಡಿಕೊಡುವುದಕ್ಕೆ ಸರ್ಕಾರಕ್ಕೆ ಅಡ್ಡಿ ಆತಂಕಗಳು ನೂರಾರು. ಸತ್ತ ಬಡವರ ಹೆಣಕ್ಕೆ ಬೆಲೆ ಕಟ್ಟಿ ಸುಮ್ಮನಾಗುತ್ತೆ. ಇದು ಯಾವುದೇ ಒಂದು ಸರ್ಕಾರದ ಕೆಲಸವಲ್ಲ. ಈ ವಿಚಾರದಲ್ಲಿ ಎಲ್ಲರೂ ಒಂದೇ.

ಮೃತ ನಿರ್ಮಲಾ ಪಾಟೀಲ್​

ಗದಗದಲ್ಲಿ ಬಗರ್​ ಹುಕುಂ ಭೂಮಿಗಾಗಿ ಆತ್ಮಹತ್ಯೆ..!

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಭೂಮಿ ತೆರವು ವಿರೋಧಿಸಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಪ್ರತಿಭಟನೆ ಮಾಡಿದ್ದರು. 7 ಎಕರೆ 20 ಗುಂಟೆ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾದ ವೇಳೆ, ಗ್ರಾಮಸ್ಥರು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ನಿರ್ಮಲಾ ಪಾಟೀಲ್ ಹಾಗೂ ಸರೋಜವ್ವ ಪಾಟೀಲ್​ ಎಂಬ ಇಬ್ಬರು ಮಹಿಳೆಯರು ಬೇಸಾಯಕ್ಕೆ ತಂದಿಟ್ಟಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಗದಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ರೂ ಚಿಕಿತ್ಸೆ ಫಲಕಾರಿ ಆಗದೆ ನಿರ್ಮಲಾ ಪಾಟೀಲ್​ ನಿಧನರಾದರು. ಇದ್ರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ನಿರ್ಮಲಾ ಪಾಟೀಲ್​ ಶವವಿಟ್ಟು ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ವಿಷಯ ತಿಳಿದ ಡಿಸಿ ಸುಂದರೇಶ್ ಬಾಬು ಹಾಗೂ ಎಸ್​ಪಿ ಶಿವಪ್ರಕಾಶ್ ದೇವರಾಜು ಜಿಮ್ಸ್​ (Gadag Institute of Medical Sciences) ಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಇದನ್ನೂ ಓದಿ: ದೇಶದಲ್ಲಿ ಬಿಜೆಪಿ ಪಕ್ಷದ್ದೇ ಕಾರುಬಾರು, ಕಾಂಗ್ರೆಸ್ ಕಂಗಾಲು..! ಮತದಾನೋತ್ತರ ಸಮೀಕ್ಷೆ ಢವಢವ..!

ಸದನದಲ್ಲೂ ಪ್ರತಿಧ್ವನಿಸಿದ ಗದಗ ಮಹಿಳೆ ಆತ್ಮಹತ್ಯೆ ಸುದ್ದಿ..!

ನಿರ್ಮಲಾ ಪಾಟೀಲ್​ ಆತ್ಮಹತ್ಯೆಗೆ ಶರಣಾದ ವಿಚಾರ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. ಕಾಂಗ್ರೆಸ್​​ ಶಾಸಕ ಹೆಚ್. ಕೆ ಪಾಟೀಲ್ ಪ್ರಸ್ತಾಪಿಸಿದ್ರು. ಹೆಚ್.ಕೆ ಪಾಟೀಲ್ ಪ್ರಸ್ತಾಪಕ್ಕೆ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಬೆಂಬಲಿಸಿದ್ರು. ಇದೊಂದು ಗಂಭೀರ ವಿಚಾರ, ಹೆಚ್.ಕೆ ಪಾಟೀಲ್ ಹೇಳಿರುವುದು ಸತ್ಯ. ಈ ಸಮಸ್ಯೆಯನ್ನು ಆದಷ್ಟು ಬೇಗ ಸಿಎಂ ಬಗೆಹರಿಸಬೇಕು ಅಂದ್ರು. ಸಮಸ್ಯೆ ಮುಂದುವರಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ, ರಾಜ್ಯಾದ್ಯಂತ ಹೋರಾಟಗಳು ಶುರುವಾಗಬಹುದು. ಅಗತ್ಯ ಇದ್ದರೆ ಸದನ ಸಮಿತಿ ರಚಿಸಿ. ಸಮಸ್ಯೆ ಬಗೆಹರಿಸಿ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು ಎಂದಿದ್ದಾರೆ. ಆ ಬಳಿಕ ಮೃತ ನಿರ್ಮಲಾ ಪಾಟೀಲ್​ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವ ಘೋಷಣೆ ಮಾಡಲಾಯ್ತು. ಆದರೆ ಬಗರ್​ ಹುಕುಂ ಸಮಸ್ಯೆಗೆ ಪರಿಹಾರ ಸಿಗುತ್ತಾ..? ಅದು ಅನುಮಾನ.

ನಿರ್ಮಲಾ ಪಾಟೀಲ್​​ರದ್ದು ಆತ್ಮಹತ್ಯೆಯೋ..? ಕೊಲೆಯೋ..?

ನಿರ್ಮಲಾ ಪಾಟೀಲ್​ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತೆ ಅಧಿಕಾರಿಗಳು ಪ್ರಚೋದಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪದ ಮೇಲೆ ದೂರು ದಾಖಲು ಮಾಡಿ ಬಂಧನ ಮಾಡಬೇಕಿದೆ. ಇನ್ನೂ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲು ತೆರಳಿದಾಗ ಆಸ್ಪತ್ರೆ ವೈದ್ಯರು ಕೂಡ ವಿಷ ಸೇವನೆ ಮಾಡಿಲ್ಲ, ಕೇವಲ ವಿಷ ಸೇವಿಸಿರುವಂತೆ ನಾಟಕ ಮಾಡುತ್ತಿದ್ದಾರೆ ಎಂದು ವೈದ್ಯರೇ ಹೇಳಿ, ನಿರ್ಲಕ್ಷ್ಯ ಮಾಡಿರುವ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಿದೆ. ಅರಣ್ಯ ಅಧಿಕಾರಿಗಳು ತೆರವು ಕಾರ್ಯಾಚರಣೆ ಮಾಡುವಂತೆ ಸರ್ಕಾರವೇ ಸೂಚಿಸಿರುವ ಕಾರಣ, ಇಡೀ ರಾಜ್ಯಾದ್ಯಂತ ತೆರವು ಕಾರ್ಯಾಚರಣೆ ಮಾಡುವುದಕ್ಕೆ ಶುರು ಮಾಡಿದೆ. ತುಮಕೂರಿನಲ್ಲೂ ಇದೇ ರೀತಿ ಘಟನೆ ನಡೆದಿದ್ದು, ಗುಬ್ಬಿ ಬಳಿಯ ಅಮ್ಮಘಟ್ಟ ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ತೋಟವನ್ನೇ ನಾಶ ಮಾಡಿದ್ದಾರೆ. ಅಡಿಕೆ, ತೆಂಗು ಸೇರಿದಂತೆ ಸಾಕಷ್ಟು ಮರಗಳನ್ನು ತೆರವು ಮಾಡಿರುವ ಬಗ್ಗೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಅಂದರೆ ಇದೆಲ್ಲವೂ ಸರ್ಕಾರದ ಕುಮ್ಮಕ್ಕು ಎನ್ನುವುದು ಸತ್ಯ. ಅಂದರೆ ಈ ಮಹಿಳೆ ಸಾವಿಗೆ ನೇರವಾಗಿ ಸರ್ಕಾರವೇ ಹೊಣೆ. ಕಳೆದ ಇಪತ್ತು ವರ್ಷದಿಂದ ಕೃಷಿ ಮಾಡುತ್ತಿದ್ದಾಗ ಸುಮ್ಮನಿದ್ದ ಸರ್ಕಾರ, ಮರಗಳು ಫಲ ನೀಡುವುದಕ್ಕೆ ಶುರು ಮಾಡಿದಾಗ ತೆರವು ಮಾಡ್ತೇವೆ ಎನ್ನುವುದು ಯಾವ ನ್ಯಾಯ. ಕೃಷಿ ಭೂಮಿಯನ್ನೇ ನಂಬಿಕೊಂಡವರಿಗೆ ಈ ರೀತಿ ಮಾಡುವುದು ಎಷ್ಟು ಸರಿ..? ಎನ್ನುವ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಬೇಕಿದೆ.

ರೈತರ ತೋಟ

Related Posts

Don't Miss it !