‘ಹೋಯ್​ ನಾಗ’ ಅಂತಿದ್ದ ಹಾಗೆ ಸಿಕ್ಕಿಬಿದ್ದ ‘ಆ್ಯಸಿಡ್​ ನಾಗ’..!

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಆ್ಯಸಿಡ್​ ಘಟನೆಯ ಆರೋಪಿ ಆ್ಯಸಿಡ್​ ನಾಗ ಖಾಕಿ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಆ್ಯಸಿಡ್​ ದಾಳಿ ನಡೆದು ಬರೋಬ್ಬರಿ 16 ದಿನಗಳ ನಂತರ ತಮಿಳುನಾಡು ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಕರ್ನಾಟಕ ಖಾಕಿಪಡೆಗೆ ಚಳ್ಳೇ ಹಣ್ಣು ತಿನ್ನಿಸಿದ್ದ ನಾಗ ಖಾವಿ ಧರಿಸಿ ಮಠ ಸೇರಿಕೊಂಡಿದ್ದ. ಮಠ ಬಿಟ್ಟು ಹೊರಕ್ಕೆ ಬಾರದ ನಾಗ, ಕೊನೆಗೂ ತನ್ನ ದೈವ ಭಕ್ತಿಯ ಕಾರಣದಿಂದಲೇ ಪೊಲೀಸರ ಖಾಕಿ ಬೀಸಿದ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಮಠದಿಂದ ಹೊರ ಬಂದಿದ್ದ ನಾಗನ ಮೇಲೆ ಅನುಮಾನಗೊಂಡಿದ್ದ ಮಫ್ತಿಯಲ್ಲಿದ್ದ ತಮಿಳುನಾಡು ಪೊಲೀಸರು ಹೋಯ್​ ನಾಗೇಶ್ ಎಂದು ಕೂಗಿದ್ದಾರೆ. ಯಾರೋ ಕೂಗುತ್ತಿದ್ದಾರೆ ಎಂದು ತಿರುಗಿ ನೋಡ್ತಿದ ಹಾಗೆ ಆ್ಯಸಿಡ್​ ಆರೋಪಿ ಈತನೇ ಎಂದು ಖಚಿತ ಮಾಡಿಕೊಂಡು ಪೊಲೀಸ್ರು ಸುತ್ತುವರಿದು ಬಂಧಿಸಿದ್ದಾರೆ.

ಸ್ವಾಮೀಜಿ ವೇಷದ ಆ್ಯಸಿಡ್ ನಾಗ

ಕರ್ನಾಟಕ ಪೊಲೀಸರಿಗೆ ಸಿಕ್ಕಿತ್ತು ಸ್ಪಷ್ಟ ಸುಳಿವು..!

ಆ್ಯಸಿಡ್​ ದಾಳಿ ನಡೆದ ಬಳಿಕ ನಾಗನಿಗೆ ಸಾಕಷ್ಟು ತಲಾಶ್ ನಡೆಸಿದ್ದ ಕರ್ನಾಟಕ ಪೊಲೀಸ್ರು, ಹತ್ತಾರು ಭಾಷೆಯಲ್ಲಿ ವಾಂಟೆಂಟ್​​ ಎಂದು ಪೋಸ್ಟರ್​ ಹಾಕಿದ್ದರು. ಬೇರೆ ಬೇರೆ ರಾಜ್ಯಗಳ ಕಂಟ್ರೋಲ್​ ರೂಮ್​ಗೂ ಮಾಹಿತಿ ರವಾನೆ ಮಾಡಿದ್ದರು. ಅಷ್ಟರಲ್ಲಿ ಆರೋಪಿ ನಾಗನ ಹೆತ್ತವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ನಾಗೇಶ, ಮಹಾನ್​ ದೈವ ಭಕ್ತ ಎನ್ನುವುದು ಪೊಲೀಸರ ಗಮನಕ್ಕೆ ಬಂದಿತ್ತು. ಪ್ರತಿ ಶನಿವಾರ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗುವ ಆ್ಯಸಿಡ್​ ನಾಗ, ಸೋಮವಾರ, ಶುಕ್ರವಾರವೂ ಮಿಸ್ ಮಾಡದೇ ದೇವಸ್ಥಾನಕ್ಕೆ ಹೋಗ್ತಿದ್ದ ಎನ್ನುವ ಖಚಿತ ಮಾಹಿತಿ ಸಿಕ್ಕಿತ್ತು. ಇದೀಗ ವೇಷ ಬದಲಿಸಿಕೊಂಡು ಮಠ ಮಾನ್ಯಗಳಲ್ಲೇ ಅವಿತು ಕುಳಿತಿರಬಹುದು ಎನ್ನುವ ನಿಲುವಿಗೆ ಬಂದಿದ್ದ ಕರ್ನಾಟಕ ಪೊಲೀಸರು, ಉಳಿದ ರಾಜ್ಯಗಳ ಪೊಲೀಸರ ಜೊತೆಗೂ ಮಾಹಿತಿ ಹಂಚಿಕೊಂಡಿದ್ದರು. ಆದರೆ ಬಂಧನದ ವೇಳೆ ನಾಗ ಹೈಡ್ರಾಮಾ.

ನಾನು ಯಾವುದೇ ತಪ್ಪು ಮಾಡಿಲ್ಲ, ಆರೋಪಿ ನಾನಲ್ಲ..!

ಕರ್ನಾಟಕ ಪೊಲೀಸರು ಕೊಟ್ಟಿದ್ದ ಮಾಹಿತಿ ಆಧಾರದಲ್ಲೇ ತಿರುವಣ್ಣಾಮಲೈ ಪೊಲೀಸರು ರಮಣರ್ ಆಶ್ರಮದ ಬಳಿ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಅಚಾನಕ್​ ಆಗಿ ಹೊರಕ್ಕೆ ಬಂದ ನಾಗನನ್ನು ಹೆಸರಿಡಿದು ಕೂಗ್ತಿದ್ದ ಹಾಗೆ ತಿರುಗಿ ನೋಡಿದ್ದ. ಪೊಲೀಸ್ರು ಸುತ್ತುವರಿದು ಹಿಡಿದುಕೊಂಡಾಗ, ನಾನು ಮಠದ ಶಿಷ್ಯ, ನನ್ನನ್ನು ಯಾಕೆ ಹಿಡಿಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದ. ಇದಕ್ಕೂ ಮೊದಲು ಖಾವಿ ವೇಷ ಹಾಕಿಕೊಂಡು ಖಾಕಿಯಿಂದ ತಪ್ಪಿಸಿಕೊಂಡಿದ್ದ ನಾಗನಿಗಾಗಿ ಪೊಲೀಸರು ಮೆಡಿಟೇಷನ್​ ಮಾಡಲು ಭಕ್ತರಂತೆ ಹೋಗಿದ್ದರು. ಮಠದ ಪದ್ದತಿಯಂತೆ ಎಲ್ಲರೂ ಮೆಡಿಟೇಷನ್​ ಮಾಡುವಾಗ ನಾಗನೂ ಕೂಡ ಮೆಡಿಟೇಷನ್​ ಮಾಡಲು ಕುಳಿತಿದ್ದ. ಈ ವೇಳೆ ಪೊಲೀಸರಿಗೆ ಅನುಮಾನ ಬಂದಿದೆ. ಕೂಡಲೇ ನಾಗ ಎಂದು ಕೂಗಿದ್ದು ಕೂಡಲೇ ತಿರುಗಿ ನೋಡಿದ ಎನ್ನಲಾಗಿದೆ. ಬಂಧನದ ಬಳಿಕ ಅಲ್ಲಿನ ಕೋರ್ಟ್​ಗೆ ಹಾಜರುಪಡಿಸಿ ಬಾಡಿ ವಾರೆಂಟ್​ ಮೇಲೆ ಕರ್ನಾಟಕಕ್ಕೆ ಕರೆತರಲಾಗ್ತಿದೆ.

ಈಗ ತೆರೆದುಕೊಳ್ಳಲಿದೆ ಆ್ಯಸಿಡ್​ ಘಟನೆಯ ಅಸಲಿ ಕಹಾನಿ..!

ಆ್ಯಸಿಡ್​ ದಾಳಿಗೆ ಸಿಲುಕಿ ನಲುಗಿದ್ದ ಯುವತಿ 16 ದಿನಗಳ ಕಾಲ ಐಸಿಯು ಚಿಕಿತ್ಸೆ ಪಡೆದು ಶುಕ್ರವಾರ ಅಷ್ಟೇ ವಾರ್ಡ್​ಗೆ ಶಿಫ್ಟ್​ ಆಗಿದ್ದಾಳೆ. ಹೆತ್ತವರ ಮೊಗದಲ್ಲಿ ಮಗಳು ಸಾವನ್ನು ಗೆದ್ದಳು ಎನ್ನುವ ನೆಮ್ಮದಿ, ಜೊತೆಗೆ ಆರೋಪಿ ನಾಗನ ಬಂಧನವಾಯ್ತು ಎನ್ನುವ ಸಂತೋಷ. ಕಠಿಣ ಶಿಕ್ಷೆಯಾಗಬೇಕು ಎಂದು ಪೋಷಕರು ಆಗ್ರಹ ಮಾಡಿದ್ದಾರೆ. ಇದರ ನಡುವೆ ಒಂದೆರಡು ಅನುಮಾನಗಳೂ ಕೂಡ ಕಾಡುತ್ತಿವೆ. ಪ್ರೀತಿ ಮಾಡಲಿಲ್ಲ ಎನ್ನುವ ಕಾರಣಕ್ಕೇ ಆ್ಯಸಿಡ್​ ಹಾಕಿದ್ನಾ..? ಎನ್ನುವ ಪ್ರಶ್ನೆಗಳು ಸಾಕಷ್ಟು ಜನರ ಮನಸ್ಸಿನಲ್ಲಿದೆ. ಆ್ಯಸಿಡ್​ ಹಾಕಿದ್ದ ಆರೋಪಿ ನಾಗೇಶ್​ ಕೂಡ ಡಬಲ್​ ಡಿಗ್ರಿ ಹೋಲ್ಡರ್​. ಸಂತ್ರಸ್ಥ ಯುವತಿಯೂ ಡಬಲ್​ ಡಿಗ್ರಿ ಹೋಲ್ಡರ್​. ಇಬ್ಬರೂ ಅಕೌಂಟೆಂಟ್ಸ್ ಆಗಿ ಪ್ರತ್ಯೇಕವಾಗಿ ಕೆಲಸ ಮಾಡ್ತಿದ್ದರು. ಇಬ್ಬರಿಗೂ ಈ ಮೊದಲು ಸ್ನೇಹವಿತ್ತಾ..? ಇಲ್ಲವಾ..? ಪ್ರೀತಿ ಮಾಡಿ ಕೊನೆಗೆ ಕೈಕೊಟ್ಟಿರಬಹುದಾ..? ಎನ್ನುವ ಎಲ್ಲಾ ಪ್ರಶ್ನೆಗಳಿಗಳಿಗೂ ಉತ್ತರ ಇನ್ಮುಂದೆ ಸಿಗಬೇಕಿದೆ.

Related Posts

Don't Miss it !