ಏರ್​ಪೋರ್ಟ್​ ಕೋವಿಡ್​ ಟೆಸ್ಟ್​ ದಂಧೆ..! ರೊಚ್ಚಿಗೆದ್ದ ಯುವತಿ, ತನಿಖೆಗೆ ತಂಡ..!

ಕೊರೊನಾ ಸೋಂಕು ಹೆಚ್ಚಳ ಆದಷ್ಟೂ ಲೂಟಿ ಮಾಡುವ ಅಧಿಕಾರಿಗಳಿಗೆ ಸುಗ್ಗಿ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಟೀಕೆ. ಇನ್ನೂ ಕೊರೊನಾ ಟೆಸ್ಟ್​ನಲ್ಲೂ ಸಾಕಷ್ಟು ಸುಳ್ಳು ಅಂಕಿ ಅಂಶ ಸೇರಿಸಲಾಗುತ್ತೆ ಎನ್ನುವುದು ಸ್ವತಃ ಜನಪ್ರತಿನಿಧಿಗಳೇ ಹೇಳುವ ಮಾತು. ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಯಾವುದೇ ಕೊರೊನಾ ಸೋಂಕಿನ ಲಕ್ಷ ಇಲ್ಲದಿದ್ದರೂ ಕೊರೊನಾ ತಪಾಸಣೆ ಮಾಡಿಸಿಕೊಂಡು, ನೆಗೆಟಿವ್ ವರದಿ ಜೊತೆಗೆ ದುಬೈಗೆ ತೆರಳುತ್ತಿದ್ದ ಯುವತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಪಟ್ಟು ಬಿಡದ ಯುವತಿ ಏರ್​ಪೋರ್ಟ್​ ಕೊರೊನಾ ಲ್ಯಾಬ್​ ವಿರುದ್ಧ ಸಮರ ಸಾರಿದ್ದಾರೆ.

ಏರ್ಪೋರ್ಟ್​ನಲ್ಲಿ ಟೆಸ್ಟ್​ ಮಾಡುವಾಗ ಆಗಿದ್ದೇನು..?

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ ಯುವತಿ ಖಾಸಗಿ ಲ್ಯಾಬ್​ನಲ್ಲಿ ಕೊರೊನಾ ತಪಾಸಣೆ ಮಾಡಿಸಿಕೊಂಡು ದುಬೈಗೆ ತೆರಳುತ್ತಿದ್ದರು. ಈ ವೇಳೆ ಏರ್​ಪೋರ್ಟ್​ನ ಆರಿಗಾ ಲ್ಯಾಬ್​ನಲ್ಲಿ Rapid ಟೆಸ್ಟ್​ ಮಾಡಿದಾಗ ಕೊರೊನಾ ಪಾಸಿಟಿವ್​ ಬಂದಿತ್ತು. ಇದರಿಂದ ರೊಚ್ಚಿಗೆದ್ದ ಯುವತಿ ವಿಮಾನ ಪ್ರಯಾಣವನ್ನೇ ರದ್ದು ಮಾಡಿ ಕೊರೊನಾ ಟೆಸ್ಟ್​​ ಫಲಿತಾಂಶದ ಗೋಲ್ಮಾಲ್​ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ಸರ್ಕಾರಿ ಲ್ಯಾಬ್​ನಲ್ಲಿ ಮತ್ತೊಮ್ಮೆ ತಪಾಸಣೆ ಮಾಡಿಸಿದ್ರು. ಆಗಲೂ ಕೊರೊನಾ ನೆಗೆಟಿವ್​ ಬಂದಿತ್ತು. ಆದರೆ ಏರ್​ಪೋರ್ಟ್​ನಲ್ಲಿ ಕೊರೊನಾ ಪಾಸಿಟವ್​ ಬಂದಿದ್ದು ಹೇಗೆ..? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಲು ಶುರುವಾಗಿತ್ತು. ಆರೋಗ್ಯ ಸಚಿವ ಡಾ ಸುಧಾಕರ್​​ ಗಮನಕ್ಕೂ ಬಂದಿತ್ತು.

ಇದನ್ನೂ ಓದಿ; ಪಿಯುಸಿಯಲ್ಲಿ ಶುರುವಾದ ಪ್ರೇಮ.. ಎರಡು ಮಕ್ಕಳಾದರೂ ನಿಲ್ಲಲಿಲ್ಲ..!!

ಏರ್​ಪೋರ್ಟ್​ ಆರಿಗಾ ಲ್ಯಾಬ್​ಗೆ ಅಧಿಕಾರಿಗಳು ಭೇಟಿ, ತಪಾಸಣೆ..!

ಏರ್​ಪೋರ್ಟ್​ ಲ್ಯಾಬ್​ ಅಥವಾ ಬೇರೆ ಯಾವುದೇ ಲ್ಯಾಬ್​ನಲ್ಲಿ ಕೊರೊನಾ ಟೆಸ್ಟ್​ ದಂಧೆ ಮಾಡುತ್ತಿದ್ದರೆ ಸರ್ಕಾರ ಲೈಸೆನ್ಸ್​ ರದ್ದು ಮಾಡುವ ಕೆಲಸ ಮಾಡುತ್ತೇವೆ ಎಂದು ಆರೋಗ್ಯ ಸಚಿವರು ಹೇಳಿದ ಬಳಿಕ ಗುರುವಾರ ಸಂಜೆ ಏರ್​ಪೋರ್ಟ್​ನ ಲ್ಯಾಬ್​ಗೆ ಭೇಟಿ ನೀಡಿದ್ದ ಆರೋಗ್ಯಾಧಿಕಾರಿಗಳ ತಂಡ ಪರೀಕ್ಷಾ ವಿಧಾನ ಸೇರಿದಂತೆ ಎಲ್ಲಾ ವಿಚಾರಗಳನ್ನು ಪರಿಶೀಲನೆ ನಡೆಸಿದರು. ಬೆಂಗಳೂರು ಗ್ರಾಮಾಂತರ DHO ತಿಪ್ಪೇಸ್ವಾಮಿ ನೇತೃತ್ವದ ತಂಡ ಹೊರಗೆ ನೆಗೆಟಿವ್ ಆರಿಗಾ ಲ್ಯಾಬ್​ನಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿದ್ದು ಹೇಗೆ ಎಂಬುದನ್ನು ಪರಿಶೀಲಿಸಿದ್ರು. ಆ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ವರದಿ ನೀಡುವುದಾಗಿ ತಿಳಿಸಿದ್ರು.

ಏರ್​ಪೋರ್ಟ್​ನಲ್ಲಿ ಗೋಲ್ಮಾಲ್​ ಹೇಗೆ ನಡೆಯುತ್ತೆ..? ಯಾಕೆ..?

ವಿದೇಶ ಪ್ರಯಾಣ ಮಾಡುವ ಜನರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ. ಎಲ್ಲಾ ಪ್ರಯಾಣಿಕರು 2 ಡೋಸ್​ ಲಸಿಕೆ ಆಗಿರುವ ಪ್ರಮಾಣ ಪತ್ರದ ಜೊತೆಗೆ ಕೊರೊನಾ ನೆಗೆಟಿವ್​ ಇರುವ ವರದಿಯನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಆದರೂ ಏರ್​ಪೋರ್ಟ್​ ಪ್ರವೇಶ ಮಾಡುವಾಗ ಮತ್ತೊಮ್ಮೆ ದೇಹದ ಉಷ್ಣಾಂಶ ಹಾಗೂ ಕೊರೊನಾ Rapid ಪರೀಕ್ಷೆ ಮಾಡಲಾಗುತ್ತದೆ. ಒಂದೊಮ್ಮೆ ಪರೀಕ್ಷೆಯಲ್ಲಿ ಪಾಸಿಟಿವ್​ ಬಂದರೆ, ಮತ್ತೊಮ್ಮೆ ಏರ್​ಪೋರ್ಟ್​ನಲ್ಲಿ RTPCR ಪರೀಕ್ಷೆ ಮಾಡಲಾಗುತ್ತದೆ. ಅದಕ್ಕಾಗಿ 3 ಸಾವಿರ ರೂಪಾಯಿ ಹಣವನ್ನು ಕಟ್ಟಬೇಕು. Rapid ಪರೀಕ್ಷೆಯಲ್ಲಿ ಪಾಸಿಟಿವ್​ ಎಂದು ರಿಪೋರ್ಟ್​ ಕೊಟ್ಟು, RTPCR ಪರೀಕ್ಷೆ ಮಾಡಿಸುವಂತೆ ಮಾಡಲಾಗುತ್ತದೆ. ವಿಮಾನಕ್ಕೆ ಹೋಗುವ ಆತುರದಲ್ಲಿ 3 ಸಾವಿರ ರೂಪಾಯಿ ಮುಖ ನೋಡದೆ ಹಣ ಕೊಟ್ಟು ಮತ್ತೆ RTPCR ಮಾಡಿಸ್ತಾರೆ. ಆ ಮೂಲಕ ಹಣ ಬರುತ್ತೆ ಎನ್ನುವ ಲೆಕ್ಕಾಚಾರ ಏರ್​ಪೋರ್ಟ್​ ಲ್ಯಾಬ್​​ನವರ ಉದ್ದೇಶ ಎನ್ನಲಾಗಿದೆ.

ಇದನ್ನೂ ಓದಿ: ಮಡಿಕೇರಿಯ ಕತ್ತಲೆ ಕೋಣೆಯಿಂದ ಹೊರಕ್ಕೆ ಬಂದಳು 27 ವರ್ಷದ ಪದವಿ ವಿದ್ಯಾರ್ಥಿನಿ..!

ಯುವತಿ ಮೂರು ಸಾವಿರ ಕೊಟ್ಟು RTPCR ಟೆಸ್ಟ್​ ಮಾಡಿಸಬಹುದಿತ್ತು. ಆದರೆ ಟೆಸ್ಟ್​ ರಿಪೋರ್ಟ್​ನಲ್ಲಿ ಗೋಲ್ಮಾಲ್​ ಮಾಡುತ್ತಿರುವುದನ್ನು ಬಯಲಿಗೆ ಎಳೆಯುವ ಉದ್ದೇಶದಿಂದಲೇ ಟಿಕೆಟ್​ ರದ್ದು ಮಾಡಿಕೊಂಡು ತನಿಖೆಗೆ ಆಗ್ರಹ ಮಾಡಿದ್ದರು. ತಮ್ಮ ಕೆಲಸ ಕಾರ್ಯಗಳಿಗೆ ತೊಂದರೆ ಆದರೂ ಪರವಾಗಿಲ್ಲ, ಆದರೆ ಈ ರೀತಿಯ ದಂಧೆ ಮಾಡುವುದು ತಪ್ಪು ಎನ್ನುವ ಸಂದೇಶ ರವಾನಿಸಿದರು.

ಕಮೆಂಟ್ ಮಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರೇ ನಮ್ಮ ಗುರುಗಳು

Related Posts

Don't Miss it !