ಒಂದೇ ಕುಟುಂಬದ 5 ಸಾವುಗಳಿಗೆ ಹಠವಾದಿ ಪತ್ನಿ, ಮಜಾವಾದಿ ಗಂಡ ಕಾರಣ..!

ಬೆಂಗಳೂರಿನಲ್ಲಿ ದುರಂತ ಅಂತ್ಯ ಕಂಡಿರುವ ಪ್ರಕರಣದ ಬಗ್ಗೆ ಪೊಲೀಸರು ಅಂತಿಮ ಘಟ್ಟದ ಕಡೆಗೆ ದಾಪುಗಾಲು ಇಟ್ಟಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಸಾವಿನ ತನಿಖೆಯನ್ನು ಅಸಹಜ ಸಾವು ಎಂದು ದಾಖಲಿಸಿಕೊಂಡು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಅದರಲ್ಲಿ ಸಾಕಷ್ಟು ಅಂಶಗಳನ್ನು ಪೊಲೀಸರು ಕೆದಕಿದ್ದಾರೆ. ಅದರಲ್ಲಿ ಹೊರಬಿದ್ದಿರುವ ಹಲವಾರು ಅಂಶಗಳಲ್ಲಿ ಹಠವಾದಿ ಪತ್ನಿ ಹಾಗೂ ಮಜಾವಾದಿ ಗಂಡನ ನಡುವೆ ಬಿಡಿಸಿಕೊಂಡ ಬಂಧನವೇ 5 ಸಾವುಗಳಿಗೆ ಕಾರಣವಾಗಿದೆ ಎನ್ನುವ ತೀರ್ಮಾನಕ್ಕೆ ಬರುತ್ತಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ಶಂಕರ್ ಪುತ್ರ ಮಧು ಸಾಗರ್ ಡೈರಿ ಬರೆಯುತ್ತಿದ್ದರು ಎನ್ನುವ ವಿಚಾರ ಮೊದಲೇ ನಡೆದಿದ್ದ ಗಲಾಟೆ ವೇಳೆಯೇ ಪೊಲೀಸರಿಗೆ ಗೊತ್ತಿದ್ದರಿಂದ ಆ ಡೈರಿಯನ್ನೇ ಹಿಡಿದು ಪೊಲೀಸರು ಎಳೆಎಳೆಯಾಗಿ ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ಅಳಿಯಂದಿರನ್ನೂ ವಿಚಾರಣೆಗೆ ಕರೆತಂದಿದ್ದು, ಅವರು ಪತ್ನಿಯರ ಜೊತೆಯಲ್ಲಿ ಸಂಪರ್ಕದಲ್ಲೇ ಇರಲಿಲ್ಲ ಎನ್ನುವ ವಿಚಾರವೂ ಬಯಲಾಗಿದೆ.

ಶಂಕರ್ ಕೊಟ್ಟ ದೂರಿನ ಸಾರಾಂಶದಲ್ಲಿ ಏನಿದೆ..?

ಮಂಡ್ಯ ಜಿಲ್ಲೆಯಿಂದ ಖಾಲಿ ಕೈಲಿ ಬಂದಿದ್ದ ಶಂಕರ್ ಇಂದು ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯನಾಗಿದ್ದರು. ಆದರೂ ಎಲ್ಲಾ ಆಸ್ತಿ, ಹಣವನ್ನು ತನ್ನ ಪತ್ನಿ ಹಾಗೂ ಮಗನ ಹೆಸರಿಗೆ ವರ್ಗಾವಣೆ ಮಾಡಿದ್ದರು. ಆ ಬಳಿಕ ತನ್ನ ಖರ್ಚಿಗೆ ಕಾಸು ಬೇಕಿದ್ದರೂ ಮಗ ಹಾಗೂ ಪತ್ನಿನ್ನೇ ಕೇಳಿ ಪಡೆಯುತ್ತಿದ್ದರೂ ಎಂದು ವಿವರಿಸಲಾಗಿದೆ. ಪತ್ನಿ, ಮಗ ಇಬ್ಬರ ಜೊತೆಗೂ ಶಂಕರ್ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನುವುದು ಗೊತ್ತಾಗಿದೆ. ಹೆಣ್ಣು ಮಕ್ಕಳಿಗೆ ತಿಳಿ ಹೇಳಿ ಗಂಡನ ಮನೆಗೆ ಕಳುಹಿಸಲು ಪತ್ನಿ ಅಡ್ಡಿಯಾಗಿದ್ದಳು ಎನ್ನುವುದು ಪತ್ನಿ ಜೊತೆಗಿನ ವೈಮನಸ್ಸಿಗೆ ಕಾರಣ . ಇನ್ನೂ ಮಗನ ಜೊತೆಗೆ ಹಣದ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಮಗನಿಗಾಗಿ ಬಾರ್ ಲೈಸೆನ್ಸ್ ಕೊಡಿಸಿದ್ದ ಶಂಕರ್, ರಿಜಿಸ್ಟರ್ ಮಾಡಿಸಲು ಸಿದ್ಧತೆ ನಡೆದಿತ್ತು. ಇದಕ್ಕಾಗಿ ಶಂಕರ್ ಸಹಿ ಬೇಕಾಗಿತ್ತು. ಆದರೆ ಸಹಿ ಹಾಕಲು ಕಂಡೀಷನ್ಸ್ ಹಾಕಿದ್ದ ಶಂಕರ್, ಆಶ್ರಮ ನಿರ್ಮಾಣವೊಂದಕ್ಕೆ 10 ಲಕ್ಷ ರೂಪಾಯಿ ನೀಡುವುದಾಗಿ ಒಪ್ಪಿಕೊಂಡಿದ್ದೇನೆ. 10 ಲಕ್ಷ ಹಣ ನೀಡು ಎಂದು ಮಗನನ್ನು ಕೇಳಿದ್ದರು ಎನ್ನಲಾಗಿದೆ. ಮಗ ಹಣ ನೀಡುವುದಕ್ಕೆ ನಿರಾಕರಿಸಿದ್ದರಿಂದ ಮನೆ ಬಿಟ್ಟು ಹೋಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಭಾನುವಾರ ಸಂಜೆ 4.30 ಕ್ಕೆ ವಾಟ್ಸ್ ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದ ಮಗ ಮಧುಸಾಗರ್, 10 ಲಕ್ಷ ಕೊಡುತ್ತೇನೆ ಮನೆಗೆ ಬಾ ಅಪ್ಪಾ ಎಂದಿರುವ ಸಂದೇಶ ಸಿಕ್ಕಿದೆ.

Read this also;

ಶಂಕರ್ ಬಳಿಯಿದ್ದ ವ್ಯವಹಾರ ಕಿತ್ತುಕೊಂಡಿದ್ದು ಯಾಕೆ..?

ಸ್ಥಳೀಯ ಪತ್ರಕರ್ತನಾಗಿ ಸಾಕಷ್ಟು ವ್ಯವಹಾರ ಜ್ಞಾನ ಹೊಂದಿದ್ದ ಶಂಕರ್, ತನ್ನ ಎಲ್ಲಾ ಆಸ್ತಿ ಹಾಗೂ ಹಣವನ್ನು ಪತ್ನಿ ಹಾಗೂ ಮಗನ ಹೆಸರಿಗೆ ವರ್ಗಾಯಿಸಿದ್ದರು ಎನ್ನುವುದನ್ನು ಸ್ವತಃ ಶಂಕರ್ ಪೊಲೀಸರಿಗೆ ಕೊಟ್ಟ ಹೇಳಿಕೆಯಲ್ಲೇ ತಿಳಿಸಿದ್ದಾರೆ. ಆದರೆ ವ್ಯವಹಾರ ಜ್ಞಾನವಿದ್ದರೂ ಕುಟುಂಬಸ್ಥರು ವ್ಯವಹಾರ ಕಸಿದುಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಎಲರಿಗೂ ಕಾಡುವುದು ಸಾಮಾನ್ಯ. ಆದರೆ ಶಂಕರ್ ಜೀವನದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು ಎನ್ನಲಾಗಿದ್ದು, ಬೇರೊಬ್ಬಾಕೆಯ ಸ್ನೇಹವೂ ಶಂಕರ್‌ಗೆ ಇತ್ತು ಎನ್ನುವ ವಿಚಾರವೂ ಹರಿದಾಡುತ್ತಿದೆ. ಇದೇ ಕಾರಣದಿಂದ ವ್ಯವಹಾರವನ್ನು ಹೋಂ ಮಿನಿಸ್ಟರ್ ಭಾರತಿ ಕಂಟ್ರೋಲ್‌ಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಆದರೆ ಭಾನುವಾರ ನೇರ ನೇರ ನಡೆದ ಚರ್ಚೆಯ ಬಳಿಕ ಶಂಕರ್ ಹೋಗಿದ್ದು ಎಲ್ಲಿಗೆ..? 5 ದಿನಗಳ ಕಾಲ ತಂಗಿದ್ದು ಎಲ್ಲಿ..? ಎನ್ನುವ ಅಂಶಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಹಣ ಕೊಡುತ್ತೇನೆ ಬಾ ಅಪ್ಪಾ ಎಂದು ಮಗ ಸಂದೇಶ ಕಳುಹಿಸಿದ್ರೂ ಉತ್ತರ ಕೊಡದೆ ಇದ್ದಿದ್ದು ಯಾಕೆ ಎನ್ನುವುದನ್ನೂ ಪ್ರಶ್ನೆ ಮಾಡ್ತಿದ್ದಾರೆ.

ಗಂಡನ ಮೋಜಿಗೆ ಪತ್ನಿ ಸಾವಿನತ್ತ ಹೋಗಿದ್ದೇ ದುರಂತ..!

ಶಂಕರ್ ಮನೆಯಿಂದ ಬಟ್ಟೆಗಳ ಸಮೇತ ಮನೆ ಖಾಲಿ ಮಾಡಿದ್ರಿಂದ ಮನನೊಂದಿದ್ದ ಪತ್ನಿ ಭಾರತಿ ಹಠಮಾರಿತನದಿಂದ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಅಮ್ಮನೇ ತಮ್ಮ ಶಕ್ತಿಯಾಗಿದ್ದ ಇಬ್ಬರೂ ಹೆಣ್ಣು ಮಕ್ಕಳು ದಿಕ್ಕುತೋಚದಂತಾಗಿದ್ದಾರೆ. ಅಮ್ಮನ ದಾರಿಯನ್ನೇ ತುಳಿಯುವ ನಿರ್ಧಾರ ಮಾಡಿ ತಮ್ಮ ತಮ್ಮ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬಳಿಕ ಒಂದು ದಿನವನ್ನು ಕಳೆದಿರುವ ಪುತ್ರ ಮಧು ಸಾಗರ್, ಅಂತಿಮವಾಗಿ ಆತ್ಮಹತ್ಯೆಯ ಹಾದಿ ತುಳಿದಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅಂತಿಮವಾಗಿ ಶಂಕರ್‌ಗೆ ಉಂಟಾಗಿದ್ದ ಕೋಪ ತಣಿಯಲು ನಾಲ್ಕು ದಿನವಾಗಿದೆ. ಗುರುವಾರ ಒಮ್ಮೆ ಮನೆ ಬಳಿಗೆ ಬಂದಿದ್ದರು. ಆದರೆ ಮನೆ ಬಾಗಿಲು ಬಂದ್ ಆಗಿದ್ದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳದ ಶಂಕರ್‌, ವಾಪಸ್ ಹೋಗಿದ್ದರು. ಆದರೆ ಅಂತಿಮವಾಗಿ ಶುಕ್ರವಾರ ಬಂದಾಗ ಮನೆಯಿಂದ ವಾಸನೆ ಬರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗ್ತಿದೆ.

Read this also;

ಓದಿ ತಿಳಿದಿದ್ದ ಜ್ಞಾನ ತಿಳುವಳಿ ಕೊಡಲೇ ಇಲ್ಲ..!

ಶಂಕರ್ ಮೂವರೂ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿದ್ದರು ಎನ್ನುವುದು ತಿಳಿದು ಬಂದಿದೆ. ಓದಿದ್ದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕ್ಷಣ ಮಾತ್ರವೂ ಚಿಂತಿಸಲಿಲ್ಲ ಎನ್ನುವುದು ವಿಧಿಯ ಕ್ರೂರತೆಗೆ ಸಾಕ್ಷಿಯಾಗಿದೆ. ಹಿರಿಯ ಮಗಳ ಸಿಂಚನಾ ಬಿಇ ಪದವಿ ಮಾಡಿದ್ದು, ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸವನ್ನೂ ಮಾಡುತ್ತಿದ್ದು, ಇತ್ತೀಚಿಗಷ್ಟೆ ರಾಜೀನಾಮೆ ನೀಡಿ ಮನೆಯಲ್ಲಿದ್ದರು ಎನ್ನಲಾಗಿದೆ. ಇನ್ನೂ 2ನೇ ಮಗಳು ಸಿಂಧೂರಾಣಿ ಎಂಬಿಎ ಪದವಿ ಪಡೆದಿದ್ದರು. ಮಗ ಮಧು ಸಾಗರ್ ಬಿಇ ಓದಿಕೊಂಡು ಬ್ಯಾಂಕ್ ಆಫ್ ಬರೋಡದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕಲಿತ ವಿದ್ಯೆ ಯಾವುದೂ ಆತ್ಮಹತ್ಯೆ ತಡೆಯುವ ಜ್ಞಾನ ನೀಡಲಿಲ್ಲ ಎನ್ನುವುದೇ ದುರಂತ. ಆತ್ಮಹತ್ಯೆ ನಿರ್ಧಾರ ಮಾಡಿದ 30 ಸೆಕೆಂಡ್‌ನಿಂದ 1 ನಿಮಿಷದೊಳಗೆ ಮನಸ್ಸು ಒಮ್ಮೆ ಬೇರೆ ಕಡೆಗೆ ಹೊರಳಿದರೆ ಆತ್ಮಹತ್ಯೆ ತಡೆಯಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಆತ್ಮಹತ್ಯೆಯೇ ಎಲ್ಲದಕ್ಕೂ ಪರಿಹಾರವಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ.

Related Posts

Don't Miss it !