ಬೆಂಗಳೂರು ಪೊಲೀಸರೇ ಮಂಗಳಮುಖಿಯರ ಗೂಂಡಾಗಿರಿಗೆ ಅಂತ್ಯ ಯಾವಾಗ..?

ಬೆಂಗಳೂರಿನ ಯಾವುದೇ ಏರಿಯಾದಲ್ಲೂ ಮಂಗಳಮುಖಿಯರು ಇಲ್ಲ ಎನ್ನುವ ಹಾಗಿಲ್ಲ. ಪ್ರತಿಯೊಂದು ಏರಿಯಾದ ಪ್ರತಿಯೊಂದು ಸಿಗ್ನಲ್​ಗಳಲ್ಲೂ ಮಂಗಳಮುಖಿಯರು ಭಿಕ್ಷಾಟನೆ ಮಾಡುವುದು ಕಾಣಿಸುತ್ತದೆ. ಭಿಕ್ಷಾಟನೆ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಲೇ ಇರುತ್ತಾರೆ. ಮಂಗಳಮುಖಿಯರ ವಿರುದ್ಧ ದೂರು ಕೊಟ್ಟು ಪೊಲೀಸ್​ ಠಾಣೆಗೆ ಅಲೆಯುವ ಇಚ್ಛೆ ಇಲ್ಲದ ವಾಹನ ಸವಾರರು ಅಲ್ಲಿಂದ ತಪ್ಪಿಸಿಕೊಂಡು ಮುಂದೆ ಹೋದರೆ ಸಾಕು ಎನ್ನುವಂತೆ ಜೇಬಿನಲ್ಲಿ ಸಿಕ್ಕ ಚಿಲ್ಲರೆ ಕೊಟ್ಟರೆ ಮುಂದೆ ಸಾಗುತ್ತಾರೆ. ಜೇಬಿನಲ್ಲಿ ಹೆಚ್ಚು ಹಣ ಇದೆ ಎನ್ನುವುದನ್ನು ಕಂಡರೆ ಮೈಮೇಲೆ ಬೀಳುವ ಮಂಗಳಮುಖಿಯರು 100, 500 ಕೊಳ್ಳೆ ಹೊಡೆಯುತ್ತಾರೆ. ಅಷ್ಟೇ ಅಲ್ಲದೆ ಮಹಿಳೆಯರನ್ನು ಕೂರಿಸಿಕೊಂಡು ಬರುವ ಪುರುಷರನ್ನೇ ಗುರಿಯಾಗಿಸಿಕೊಂಡು ಬೇಕಾಬಿಟ್ಟಿ ಮಾತನಾಡಿ ಹಣ ವಸೂಲಿ ಮಾಡುವ ದಂಧೆ ಶುರು ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಇದೀಗ ಬೆಂಗಳೂರಲ್ಲಿ ಹೊಸ ಅವತಾರ ಸೃಷ್ಟಿಯಾಗಿದೆ.

ಅಸಭ್ಯ ವರ್ತನೆ

ಹೊಸ ಮನೆ ಗೃಹ ಪ್ರವೇಶದಲ್ಲಿ ಹಫ್ತಾ ವಸೂಲಿ..!

ಬೆಂಗಳೂರಿನ ಕಲ್ಕೆರೆ ಚನ್ನಸಂದ್ರದಲ್ಲಿ ಲೋಕೇಶ್ ಎಂಬುವವರ ಮನೆ ಗೃಹಪ್ರವೇಶ ಹಮ್ಮಿಕೊಂಡಿದ್ದರು. ಗುರುವಾರ ಮುಂಜಾನೆ ಪೂಜಾ ಸ್ಥಳಕ್ಕೆ ನುಗ್ಗಿದ ಮಂಗಳಮುಖಿಯರ ಟೀಂ 50 ಸಾವಿರ ರೂಪಾಯಿ ಕೊಡುವಂತೆ ಒತ್ತಾಯ ಮಾಡಿತ್ತು. ಎರಡೂವರೆ ಸಾವಿರ ಕೊಡ್ತೇವೆ, ಪೂಜೆಗೆ ತೊಂದರೆ ಮಾಡಬೇಡಿ, ಊಟ ಮಾಡಿಕೊಂಡು ಹೋಗಿ ಎಂದು ಮನವಿ ಮಾಡಿದರೂ ಸುಮ್ಮನಾಗದ ಟೀಂ, ಮನಸೋ ಇಚ್ಛೆ ಮಾತನಾಡಿದ್ದು, ಬಟ್ಟೆಯನ್ನು ಎತ್ತಿಕೊಂಡು ಅಸಭ್ಯವಾಗಿ ವರ್ತಿಸಿದೆ. ಸ್ಥಳದಲ್ಲಿದ್ದ ಸಂಬಂಧಿಕರು ಪೊಲೀಸ್​ ಸಹಾಯವಾಣಿ 100ಕ್ಕೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾವಣೆಯೂ ಆಗಿದೆ. ಆ ಬಳಿಕ ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ನೀಡ್ತಿದ್ದ ಹಾಗೆ ಜಾಗ ಖಾಲಿ ಮಾಡಿರುವ ಮಂಗಳಮುಖಿಯರು, ಇನ್ನೂ ಹೆಚ್ಚಿನ ಜನರನ್ನು ಕರೆದುಕೊಂಡು ಗಲಾಟೆ ಮಾಡ್ತೇವೆ ಅಂತಾ ಧಮ್ಕಿ ಕೂಡ ಹಾಕಿದ್ದಾರಂತೆ. ಪೊಲೀಸ್ರು ಮಾತ್ರ ದೂರು ಕೊಡಿ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.

ಸ್ವಯಂ ಪ್ರೇರಣೆಯಿಂದ ನಿಯಂತ್ರಣ ಯಾಕಿಲ್ಲ..?

ಈ ರೀತಿಯ ಘಟನೆಗಳು ಬೆಂಗಳೂರಿನಲ್ಲಿ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಮದುವೆ, ನಾಮಕರಣ, ಗೃಹ ಪ್ರವೇಶ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಾಗುವ ಮಂಗಳಮುಖಿಯರು ಬೇಕಾಬಿಟ್ಟಿ ಮಾತನಾಡ್ತಾರೆ. ತಾವು ದೇವಲೋಕದಿಂದ ಆಶೀರ್ವಾದ ಮಾಡಲೆಂದೇ ದೇವರು ಕಳುಹಿಸಿದ್ದಾನೆ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ಜನರು ಅವರ ಕಾಟದಿಂದ ಮುಕ್ತಿ ಸಿಕ್ಕರೆ ಸಾಕು ಎನ್ನುವಂತೆ ಹಣ ಕೊಟ್ಟು ಸುಮ್ಮನಾಗ್ತಾರೆ. ಆದರೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿರುವ ಆರಕ್ಷಕರು (Police) ಮಾತ್ರ ಜಾನಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಎಲ್ಲಾ ಸಿಗ್ನಲ್​ಗಳಲ್ಲೂ ಮಂಗಳಮುಖಿಯರು ಭಿಕ್ಷಾಟನೆ ಮಾಡುತ್ತಾರೆ. ಅದೇ ಸಿಗ್ನಲ್​ಗಳಲ್ಲಿ ಪೊಲೀಸರೂ ಇರುತ್ತಾರೆ. ಆದರೂ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಮಂಗಳಮುಖಿಯರ ವೇಶದಲ್ಲಿ ಸಾಮಾನ್ಯ ಜನರೇ ಈ ರೀತಿ ಭಿಕ್ಷಾಟನೆ ಮಾಡ್ತಾರೆ ಎನ್ನುವ ಆರೋಪವೂ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಕಷ್ಟು ಕಡೆಗಳಲ್ಲಿ ನಕಲಿ ಮಂಗಳಮುಖಿಯರೂ ಸಿಕ್ಕಿಬಿದ್ದಿದ್ದಾರೆ. ಇದಕ್ಕೆಲ್ಲಾ ಮುಕ್ತಿ ಯಾವಾಗ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ಜನರೇ ಕೊಟ್ಟ ಆದ್ಯತೆ ಇಂದು ತಿರುಗು ಬಾಣವಾಗಿದೆ..!

ಮಂಗಳಮುಖಿಯರು ಸಮಾಜದಲ್ಲಿ ಕೀಳಾಗಿ ಕಾಣಬಾರದು ಎನ್ನುವುದು ಸತ್ಯ. ಅವರೂ ನಮ್ಮಂತಯೇ ಮನುಷ್ಯರು. ಹಲವಾರು ಕಾರಣಗಳಿಂದ ಗಂಡು, ಹೆಣ್ಣು ಎರಡೂ ಅಲ್ಲದ ರೀತಿಯಲ್ಲಿ ಬದುಕು ಸಾಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಎಲ್ಲಾ ರೀತಿಯ ಮೀಸಲಾತಿಯನ್ನೂ ಕಲ್ಪಿಸಿದ್ದು, ಪೊಲೀಸ್​ ಇಲಾಖೆಗೂ ನೇಮಕ ಮಾಡಿಕೊಳ್ಳುವ ನಿರ್ಧಾರ ಮಾಡಿದೆ. ಆದರೂ ಜನರ ಬಳಿ ಭಿಕ್ಷಾಟನೆ ನಿಲ್ಲುವುದಿಲ್ಲ. ಇದೊಂದು ಮಾಫಿಯಾ. ಇನ್ನೂ ಮಂಗಳಮುಖಿಯರಿಗೆ ಹಣ ಕೊಟ್ಟು ವಾಪಸ್​ ಚಿಲ್ಲರೆ ಕಾಸು ತೆಗೆದುಕೊಂಡರೆ ಕೋಟ್ಯಾಧಿಪತಿ ಆಗ್ತೇವೆ ಎನ್ನುವುದು ಮುಟ್ಟಾಳತನ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಸಮಾಜ ಅವರನ್ನು ಎಲ್ಲರಂತೆ ಗೌರವಿಸಲಿ ಎನ್ನುವ ಆಶಯದ ಜೊತೆಗೆ ಭಿಕ್ಷಾಟನೆ ಬಿಟ್ಟು ಬೇರೆ ವೃತ್ತಿಗಳಲ್ಲಿ ತೊಡಗುವಂತೆ ಹಲಾವರು ಸಂಸ್ಥೆಗಳು ಕಾರ್ಯಕ್ರಮ ರೂಪಿಸಬೇಕಿದೆ. ಅಲ್ಲೀತನಕ ಪೊಲೀಸ್​ ಇಲಾಖೆ ಕೇಸ್​ ದಾಖಲಿಸಿ ಕಂಬಿ ಹಿಂದೆ ತಳ್ಳುವ ಕೆಲಸ ಮಾಡಬೇಕಿದೆ.

Related Posts

Don't Miss it !