ಒಂದು ಕೊಲೆ, ಕದ್ದಿದ್ದು ಚಿನ್ನದ ಚೀಲ..! ಲೆಕ್ಕ ಸಿಗದ್ದಕ್ಕೆ ಸರ್ಕಾರದ ಸ್ವತ್ತು..!

ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಅಚ್ಚರಿ ಕೊಲೆಯೊಂದು ನಡೆದಿತ್ತು. ಬರೋಬ್ಬರಿ 77 ವರ್ಷದ ವಯೋ ವೃದ್ಧನ ಕೈಕಾಲು ಕಟ್ಟಿ, ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿ ಮನೆಯ ಕೆಲಸದ ಆಳು ಪರಾರಿಯಾಗಿದ್ದ. ಆದರೆ ಪರಾರಿ ಆಗುವ ಮುನ್ನ ಮನೆಯಲ್ಲಿದ್ದ ಕೆಜಿಗಟ್ಟಲೆ ಚಿನ್ನವನ್ನು ಚೀಲದಲ್ಲಿ ತುಂಬಿಕೊಂಡು ಓಡಿಹೋಗಿದ್ದ. ಆರೋಪಿಯ ಜಾಡು ಹಿಡಿದಿದ್ದ ಬೆಂಗಳೂರು ಪೊಲೀಸರು, ಆರೋಪಿ ಬಂಧಿಸುವ ಮುನ್ನವೇ ಗುಜರಾತ್​ನ ಅಮೀರ್​ಘಡ ಪೊಲೀಸರು ಆರೋಪಿ ಬಿಜುರಾಮ್​ನನ್ನು ಬಂಧಿಸಿದ್ದರು. ರಾತ್ರಿ ಗಸ್ತು ಮಾಡುವ ಸಮಯದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿ ಬಳಿ 23 ಲಕ್ಷ ರೂಪಾಯಿ ನಗದು ಸಿಕ್ಕಿತ್ತು. 77 ವರ್ಷದ ಜುಗುರಾಜ್​ನನ್ನು ಕೊಲೆ ಮಾಡಿದ ಬಳಿಕ ನಡೆದ ಘಟನಾವಳಿಗಳನ್ನು ಕೇಳಿದ ಪೊಲೀಸ್ರು ಶಾಕ್​ ಆಗಿದ್ರು. ಕಳ್ಳತನ ಮಾಡುವುದಕ್ಕೂ ಬಿಜುರಾಮ್​ ಬಳಿ ಸೂಕ್ತ ಕಾರಣವಿತ್ತು.

ಗುಜರಾತ್​, ರಾಜಸ್ಥಾನ, ಗೋವಾದಲ್ಲೂ ಅರೆಸ್ಟ್​..!

ಚಾಮರಾಜ ಪೇಟೆಯ ಕಿಂಗ್ಸ್​ ಎನ್​ಕ್ಲೈವ್​ ಅಪಾರ್ಟ್​ಮೆಂಟ್​ನಲ್ಲಿ ಮೇ 25ರಂದು ನಡೆದಿದ್ದ ಭೀಕರ ಕೊಲೆ ಬಗ್ಗೆ ಪೊಲೀಸ್ರು ಸರಿಯಾದ ದಾರಿಯಲ್ಲೇ ತನಿಖೆ ನಡೆಸಿದ್ದರು. ಅಕ್ಕ ಪಕ್ಕದ ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಮನೆಯ ಕೆಲಸದಾಳು ಬಿಜುರಾಮ್​​ ಕೊಲೆ ಮಾಡಿದ್ದಾರೆ. ಆ ಬಳಿಕ ಚಿನ್ನ, ಹಣವನ್ನು ತುಂಬಿಕೊಂಡು ಓಡಿಹೋಗಿದ್ದಾನೆ ಎಂದು ಖಚಿತ ಮಾಡಿಕೊಂಡಿದ್ದರು. ಆ ಬಳಿಕ ಆರೋಪಿ ಬಂಧಿಸಿದ ಬಳಿಕ ಆತನಿಂದ 5 ಕೋಟಿ ಮೌಲ್ಯದ 8.75 ಕೆಜಿ ಚಿನ್ನಾಭರಣ, 53 ಲಕ್ಷ ರೂಪಾಯಿ ನಗದು, 4 ಕೆಜಿ ಬೆಳ್ಳಿ ಪಾತ್ರೆಗಳನ್ನು ಜಪ್ತಿ ಮಾಡಲಾಗಿದೆ. ರಾಜಸ್ಥಾನ, ಗುಜರಾತ್​, ಗೋವಾ ಸೇರಿದಂತೆ ದೇಶದ ವಿವಿಧ ಕಡೆಯಿಂದ ಬಿಜೋರಾಮ್​, ಓಂಪ್ರಕಾಶ್​, ಮಹೇಂದ್ರ, ಪೂರನ್, ಓಂ ರಾವ್​ ಎಂಬ ಪ್ರಮುಖ ಆರೋಪಿಗಳನ್ನು​ಬಂಧಿಸಲಾಗಿದೆ. ಆದರೆ ಚಿನ್ನದ ಲೆಕ್ಕ ಕೇಳಿದ್ರೆ ಯಾರಿಗೂ ಗೊತ್ತಿಲ್ಲ.

ಹೆಂಡತಿ ಕಾಟಕ್ಕೆ ಬೇಸತ್ತು, ಕಳ್ಳತನ ಮಾಡಿದ್ದ ಬಿಜೋರಾಮ್​..!

ಚಿನ್ನದ ವ್ಯಾಪಾರಿ ಜುಗುರಾಜ್​ ಬಳಿ ಕೆಲಸ ಮಾಡುತ್ತಿದ್ದ ಬಿಜೋರಾಮ್​ಗೆ 15 ಸಾವಿರ ಸಂಬಳ ಸಿಗುತ್ತಿತ್ತು. ಆದರೆ ಅಷ್ಟು ಹಣ ಸಾಲೋದಿಲ್ಲ, ಚಿನ್ನದ ವ್ಯಾಪಾರಿ ಬಳಿ ಕೆಲಸ ಮಾಡ್ತಿದ್ಯಾ..! ಸ್ವಲ್ಪ ಚಿನ್ನ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಜುಗುರಾಜ್​ ಕಥೆ ಮುಗಿಸಲು ಸಂಚು ರೂಪಿಸಿದ್ದ ಎನ್ನುವುದು ಬಯಲಾಗಿದೆ. ರಾಜಸ್ಥಾನದ ಚಿನ್ನದ ವ್ಯಾಪಾರಿಯನ್ನು ಸಂಪರ್ಕಿಸಿದ್ದ ಬಿಜೋರಾಮ್​ ಚಿನ್ನ ಕರಗಿಸಿ ನಗದು ಮಾಡಿಕೊಳ್ಳಲು ಬೇಕಾಗಿದ್ದ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದ. ಆದರೂ ಅದೃಷ್ಟ ಕೈಕೊಟ್ಟ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆದರೆ ಇತ್ತ ವೃದ್ಧ ಜುಗುರಾಜ್​ಗೆ ಐವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿದ್ದು, ಮನೆಯಲ್ಲಿ ಕಳ್ಳತನ ಆಗಿರೋ ಚಿನ್ನದ ಲೆಕ್ಕ ಕೊಡಿ ಅಂದರೆ ಯಾರೊಬ್ಬರೂ ಲೆಕ್ಕ ಕೊಡೋದಕ್ಕೆ ತಯಾರಿಲ್ಲ ಎನ್ನಲಾಗ್ತಿದೆ. ಹೀಗಾಗಿ ಜಪ್ತಿ ಮಾಡಿರೋ ಚಿನ್ನ ಏನು ಮಾಡೋದು ಅನ್ನೋ ಚಿಂತೆಯಲ್ಲಿದ್ದಾರೆ ಬೆಂಗಳೂರು ಪೊಲೀಸ್​.

ಮನೆಯಲ್ಲಿ ಚಿನ್ನ ಎಷ್ಟಿತ್ತು..? ಕಳವು ಆಗಿದ್ದು ಎಷ್ಟು..? ಸಿಕ್ಕಿದ್ದು ಎಷ್ಟು..?

ಮನೆಯಲ್ಲಿ ವೃದ್ಧ ಜುಗುರಾಜ್​ ಮಾತ್ರ ಇದ್ದಾಗ ಕೊಲೆ ನಡೆದಿದೆ. ಮಕ್ಕಳಿಬ್ಬರು ಕೆಲಸದ ಮೇಲೆ ಬೇರೆ ಬೇರೆ ಕಡೆಗೆ ತೆರಳಿದ್ದರು ಎನ್ನಲಾಗಿದೆ. ಚಿನ್ನದ ವ್ಯಾಪಾರ ಮಾಡ್ತಿದ್ದ ಜುಗುರಾಜ್​ ಇಷ್ಟೊಂದು ಚಿನ್ನವನ್ನು ಮನೆಯಲ್ಲಿ ಇಟ್ಟಿದ್ದು ಯಾಕೆ..? ಖರೀದಿ ಮಾಡಿ ಇಟ್ಟಿದ್ದ ಚಿನ್ನ ಆಗಿದ್ದರೆ, ಇಷ್ಟೂ ಚಿನ್ನಕ್ಕೂ ಬಿಲ್​ ಇರಬೇಕಿತ್ತು. ಮಕ್ಕಳು ಚಿನ್ನವನ್ನು ಬಿಡಿಸಿಕೊಳ್ಳಬೇಕಿತ್ತು. ಆದರೆ ಇದ್ಯಾವುದು ನಡೆದಿಲ್ಲ. ಚಿನ್ನ, ಹಣ, ಬೆಳ್ಳಿ ಪಾತ್ರೆಗಳ ಬಿಡಿಸಿಕೊಳ್ಳಲು ಮಕ್ಕಳು ಸೂಕ್ತ ದಾಖಲೆ ಒದಗಿಸುತ್ತಿಲ್ಲ ಎನ್ನಲಾಗಿದೆ. ಕೊಲೆಯಾದ ಜುಗುರಾಜ್​ ಎಲೆಕ್ಟ್ರಾನಿಕ್​ ಐಟಂ ಶಾಪ್​ ಹಾಗೂ ಟ್ರಾವೆಲ್ಸ್​ ನಡೆಸ್ತಿದ್ದ ಅನ್ನೋದು ಮತ್ತೊಂದು ಮೂಲಗಳ ಮಾಹಿತಿ. ಆದರೆ ಪೊಲೀಸ್ರು ಮಾತ್ರ ಚಿನ್ನದ ವ್ಯಾಪಾರಿ ಅಂದಿದ್ದಾರೆ. ಈಗ ಜಪ್ತಿ ಆಗಿರೋ ಚಿನ್ನಕ್ಕೆ ಸೂಕ್ತ ದಾಖಲೆ ಕೊಡದಿದ್ರೆ ಸರ್ಕಾರದ ಖಜಾನೆಗೆ ಉಳಿದ ಚಿನ್ನ ಸೇರುವುದು ಖಚಿತ. ಆದರೂ ಈ ಪ್ರಕರಣದಲ್ಲಿ ಸಾಕಷ್ಟು ಅನುಮಾನ ಮೂಡಿಸ್ತಿದೆ. ಈ ಕೊಲೆ ಹಿಂದಿನ ಸತ್ಯ. ಮಕ್ಕಳ ನಡಾವಳಿಕೆಗೆ ಕಾರಣ ಬೇರೆ ಏನೋ ಇದೆ ಎನ್ನಲಾಗ್ತಿದೆ. ಖಾಕಿ ಬಯಲು ಮಾಡುತ್ತಾ..? ಮುಚ್ಚಿಡುತ್ತಾ..? ಅನ್ನೋದೇ ಈಗಿರುವ ಪ್ರಮುಖ ಪ್ರಶ್ನೆ.

Related Posts

Don't Miss it !