ಬ್ರಾಹ್ಮಿ ಮುಹೂರ್ತದಲ್ಲಿ ಬೆಂಕಿಯ ಕೆನ್ನಾಲಿಗೆ, ಕಾರಲ್ಲೇ ಪ್ರೇಮಿಗಳು ಭಸ್ಮ..! ನಿಗೂಢ ರಹಸ್ಯ

ಉಡುಪಿ ಹುಡುಗ, ಹುಡುಗಿ ಒಟ್ಟಿಗೆ ಕಂಡರೆ ಕೆಂಗಣ್ಣು ಬೀರುವ ಕಟ್ಟರ್​ ಹಿಂದುತ್ವವಾದಿಗಳ ವ್ಯಾಪ್ತಿಗೆ ಸೇರಿದ ಕರಾವಳಿ. ಅಂತಹ ಕಟು ಹಿಂದುತ್ವವಾದಿಗಳ ನಾಡಿನಲ್ಲಿ ಸೋಮವಾರ ಮುಂಜಾನೆ 3 ಗಂಟೆ ಆಸುಪಾಸಿನಲ್ಲಿ ಸ್ವಿಫ್ಟ್​ ಕಾರು ಒಂದು ಹೊತ್ತಿಕೊಂಡು ದಗದಗನೆ ಉರಿಯುತ್ತಿತ್ತು. ಬೆಳಗ್ಗಿನ ಸಮಯದಲ್ಲಿ ಆ ಕಡೆ ಯಾರೋ ದಾರಿ ಹೋಕರು ನೋಡಿದಾಗ ಬೆಂಕಿ ನಂದಿಸಿದ್ದು, ಅದರ ಒಳಗೆ ಇಬ್ಬರು ಪರಸ್ಪರ ತಬ್ಬಿಕೊಂಡು ಕುಳಿತಂತೆ ಇದ್ದ ಎರಡು ಶವಗಳು ಪತ್ತೆಯಾಗಿವೆ. ಅಸಲಿಗೆ ಅವರು ಪ್ರೇಮಿಗಳಂತೆ ಕಂಡಿದ್ದು, ಸಾಯುವ ಮುನ್ನ ಪೋಷಕರಿಗೆ ಸಂದೇಶ ಕಳುಹಿಸಿದ್ದಾರೆ. ನಾವು ಒಬ್ಬರನೊಬ್ಬರು ಬಿಟ್ಟು ಇರುವುದಿಲ್ಲ, ನಮ್ಮನ್ನು ಕ್ಷಮಿಸಿ ಎಂದಿದ್ದಾರೆ. ಬಾಡಿಗೆಗೆ ತೆಗೆದುಕೊಂಡು ಹೋಗಿದ್ದ ಕಾರಿನ ಒಳಗೇ ಕುಳಿತು ಸಾವಿನ ಮನೆ ಸೇರಿದ್ದಾರೆ.

ಮಂಗಳೂರಲ್ಲಿ ಮದುವೆ, ಮೂರು ದಿನ ಪ್ರವಾಸ..!

ಮೇ 18 ರಂದು ಬೆಳಗ್ಗೆ ಇಂಟರ್​ವ್ಯೂಗೆ (Interview) ಹೋಗ್ತೇನೆ ಎಂದು ಮನೆಯಿಂದ ಹೊರಟಿದ್ದ ಜ್ಯೋತಿ, ನೇರವಾಗಿ ಪ್ರಿಯಕರನ ಭೇಟಿ ಆಗಿದ್ದಳು. ಅತ್ತ ಯುವಕ ಯಶವಂತ ಯಾದವ್​ ಕೂಡ ಟ್ಯಾಲಿ ಕ್ಲಾಸ್​ಗೆ (Tally Class) ಹೋಗಿ ಬರುವುದಾಗಿ ಹೇಳಿ ಪ್ರಿಯತಮೆ ಜೊತೆಗೆ ಮಂಗಳೂರಿಗೆ ಪ್ರಯಾಣ ಬೆಳೆಸಿದ್ರು. ಬೆಳಗ್ಗೆ ಮಂಗಳೂರಿನ ದೇವಸ್ಥಾನ ಒಂದರಲ್ಲಿ ಮದುವೆಯಾಗಿ ಸಂಜೆ ವೇಳೆಗೆ ಮಂಗಳೂರಿನಲ್ಲೇ ಒಂದು ಬಾಡಿಗೆ ಮನೆಯನ್ನೂ ಮಾಡಿದ್ದರು. ಮದುವೆ, ಬಾಡಿಗೆ ಮನೆ ಮಾಡಿದ ಬಳಿಕ ಮುಂದೇನು ಎನ್ನುವ ಆತಂಕಕ್ಕೆ ಒಳಗಾದರು. ಅಷ್ಟರಲ್ಲಿ ಮೇ 19ರಂದು ಬೆಂಗಳೂರಿನ ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ಜ್ಯೋತಿ ತಾಯಿ ನಾಪತ್ತೆ ದೂರು ದಾಖಲು ಮಾಡಿದ್ದರು. ಒಂದು ದಿನದ ಬಳಿಕ ಅಂದರೆ ಮೇ 20 ರಂದು ಯಶವಂತ್ ಯಾದವ್​ ತಂದೆ ಕೂಡ ಹೆಬ್ಬಾಳ ಠಾಣೆಯಲ್ಲೇ ದೂರು ದಾಖಲು ಮಾಡಿದ್ದರು. ಅಲ್ಲಿಗೆ ಮದುವೆ ಆಗಿದ್ದವರಿಗೆ ಆತಂಕ ಇಮ್ಮಡಿಯಾಗಿತ್ತು.

ಮದುವೆ ವಿಚಾರ ಹೇಳಿದಾಗಲೇ ಸಾವಿನ ನಿರ್ಧಾರ..!

ಮದುವೆ ಆಗಿದ್ದ ಯುವಕ, ಯುವತಿ ಬಾಡಿಗೆ ಮನೆಯಲ್ಲಿ ಸಂಸಾರವನ್ನೂ ಶುರು ಮಾಡಿದ್ದರು. ಆ ಬಳಿಕ ಮನೆಯವರಿಗೆ ಫೋನ್​ ಮಾಡಿ ಮದುವೆ ಆಗಿದ್ದೇವೆ ಎನ್ನುವ ವಿಚಾರವನ್ನೂ ತಿಳಿಸಿದ್ರು. ಆದರೆ ಮದುವೆಯನ್ನು ಎರಡೂ ಕುಟುಂಬದವರು ಒಪ್ಪಲಿಲ್ಲ ಎನ್ನಲಾಗಿದೆ. ಜೊತೆಗೆ ಪೊಲೀಸ್​ ಠಾಣೆಗೆ ದೂರು ನೀಡಿದ್ದೇವೆ ಎನ್ನುವ ಮಾಹಿತಿಯನ್ನೂ ನೀಡಿದ್ರು. ಅಷ್ಟರಲ್ಲಿ ಎರಡೂ ನಾಪತ್ತೆ ಪ್ರಕರಣದಲ್ಲಿ ಸಾಮ್ಯತೆ ಇದೆ ಎನ್ನುವ ಕಾರಣಕ್ಕೆ ಕುಟುಂಬಸ್ಥರನ್ನು ಕರೆದು ಪೊಲೀಸರು ವಿಚಾರಣೆ ಮಾಡಿದ್ದರು. ಆದರೆ ಪ್ರೀತಿ, ಪ್ರೇಮದ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಎರಡು ಕುಟುಂಬಗಳಿಗೂ ಪರಸ್ಪರ ಪರಿಚಯ ಇಲ್ಲ ಎನ್ನುವ ಹೇಳಿಕೆ ನೀಡಿದ್ದರು. ಆದರೆ ಯುವಕ, ಯುವತಿಯ ಕಾಲ್​ ಡೀಟೈಲ್ಸ್​​ ತೆಗೆದು ನೋಡಿದಾಗ ಇಬ್ಬರು ಪರಿಚಯಸ್ಥರಾಗಿದ್ದು, ಜೊತೆಯಲ್ಲೇ ಪ್ರಯಾಣ ಮಾಡಿದ್ದಾರೆ ಎನ್ನುವ ಅಂಶ ಗೊತ್ತಾಗಿತ್ತು. ಪೊಲೀಸರು ಯುವ ಜೋಡಿ ಕಂಡು ಬಂದರೆ ಕೂಡಲೇ ಮಾಹಿತಿ ಒದಗಿಸುವಂತೆ ಎಲ್ಲಾ ಠಾಣೆಗಳಿಗೂ ಮಾಹಿತಿ ರವಾನೆ ಮಾಡಿದ್ದರು. ಈ ವಿಚಾರ ತಿಳಿಯುತ್ತಿದ್ದ ಹಾಗೆ ಯಶವಂತ ಯಾದವ್​ ಹಾಗೂ ಜ್ಯೋತಿ ಸಾಯುವ ನಿರ್ಧಾರ ಮಾಡಿದ್ದರು.

ಸಾಯುವ ಸ್ಥಳಕ್ಕಾಗಿ ಬಾಡಿಗೆ ಕಾರಲ್ಲಿ ಹುಡುಕಾಟ..!

ಮಂಗಳೂರಿನ ಮನೆಯಿಂದ ಎಲ್ಲಾದರೂ ದೂರದ ಪ್ರದೇಶಕ್ಕೆ ತೆರಳಿ ಸಾಯುವ ನಿರ್ಧಾರ ಮಾಡಿದ ಯುವ ಜೋಡಿ, ಬಾಡಿಗೆ ಕಾರು ಬುಕ್​ ಮಾಡಿದ್ದರು. ಹುಸೇನ್​ ಎಂಬುವರ ಕಾರನ್ನು ಬಾಡಿಗೆಗೆ ಪಡೆದುಕೊಂಡು ಸೋಮೇಶ್ವರ ಬೀಚ್​, ಮುರುಡೇಶ್ವರ ಬೀಚ್​, ಭಟ್ಕಳಕ್ಕೂ ಹೋಗಿ ಹತ್ತಾರು ಕಡೆಗಳಲ್ಲಿ ಸಾಯುವ ಸ್ಥಳವನ್ನು ಹುಡುಕಾಡಿದ್ದಾರೆ. ಎರಡು ಜೀವಗಳು ಸಾಯುವುದಕ್ಕೆ ಹರಸಾಹಸ ಮಾಡಿದ್ದು, ಯಾವುದೇ ಸ್ಥಳದಲ್ಲೂ ಸಾಯಲು ಧೈರ್ಯ ಒದಗಿ ಬಂದಿಲ್ಲ. ಕೊನೆಗೆ ಕುಂದಾಪುರ ಮಾರ್ಗವಾಗಿ ಮಂದಾರ್ತಿ ಕಡೆಗೆ ವಾಪಸ್​ ಆಗಿದ್ದಾರೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆ ಕಡೆಗೆ ಕಾಡಿನೊಳಕ್ಕೆ ಕಾರು ದಿಕ್ಕು ಬದಲಿಸಿದೆ. ಮಧ್ಯರಾತ್ರಿ ಕಳೆದು ಬೆಳಕು ಮೂಡುವ ಹೊತ್ತಿಗೆ ಇಹಲೋಕ ತ್ಯಜಿಸುವ ನಿರ್ಧಾರ ಮಾಡಿದ್ದು, ಮೊಬೈಲ್​ ಆನ್​ ಮಾಡಿ ಮನೆಯವರಿಗೆ ಸಂದೇಶ ಕಳುಹಿಸಿದ್ದಾರೆ. ಅಪ್ಪ ಅಮ್ಮ ಇಲ್ಲದೆ ನಾವು ಬದುಕುವುದಿಲ್ಲ. ಮದುವೆ ಆಗಿದೆ, ಒಳ್ಳೆ ಕೆಲಸವೂ ಸಿಕ್ಕಿದೆ, ಆದರೂ ನೆಮ್ಮದಿ ಇಲ್ಲ. ನಾವು ತಪ್ಪು ಮಾಡುತ್ತಿದ್ದೇವೆ ಕ್ಷಮಿಸಿ ಎಂದು ಹೇಳಿ, ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಯುವಕ, ಯುವತಿ ಪೋಷಕರು ಸುಳ್ಳು ಹೇಳುತ್ತಿದ್ದಾರಾ..?

ಮಕ್ಕಳು ನಾಪತ್ತೆಯಾದ ಬಳಿಕ ಪೊಲೀಸ್​ ಠಾಣೆಯಲ್ಲಿ ನಮಗೆ ಇವರು ಯಾರೆಂದು ಗೊತ್ತೇ ಇಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ. ಆದರೆ ಮಕ್ಕಳು ಫೋನ್​ ಮಾಡಿ ಮದುವೆ ಬಗ್ಗೆ ಹೇಳಿಕೊಂಡಾಗ ಸರಿ, ಆಗಿದ್ದು ಆಯ್ತು ಬನ್ನಿ ಎಂದಿದ್ದರೆ ಮಕ್ಕಳು ಸಾಯುವ ನಿರ್ಧಾರ ಯಾಕೆ ಮಾಡುತ್ತಿದ್ದರು. ಆದರೆ ಪೋಷಕರು ಮಕ್ಕಳ ಮೇಲೆ ಯಾವ ರೀತಿ ಭಾವನಾತ್ಮಕವಾಗಿ ಒತ್ತಡ ಹೇರಿದ್ದಾರೆ ಎನ್ನುವುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ. ಇಬ್ಬರಿಗೂ 23 ವರ್ಷ ವಯಸ್ಸಾಗಿತ್ತು. ಬಿಕಾಂ ವಿದ್ಯಾಭ್ಯಾಸ ಆಗಿತ್ತು. ದುಡಿದು ತಿನ್ನುವ ಶಕ್ತಿಯೂ ಬಂದಿತ್ತು. ಆದರೆ ಸಾಯುವ ನಿರ್ಧಾರ ಮಾಡಿದ್ದು ಮಾತ್ರ ಮೂರ್ಖತನ. ಪ್ರೀತಿಯನ್ನು ಬಿಟ್ಟು ಆಕೆಗೆ ಮೋಸ ಮಾಡಲಾರೆ ಎಂದು ಯುವಕ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. ಅಂದರೆ ಯುವಕನ ಮನೆಯಿಂದಲೇ ಒತ್ತಡ ಹೇರಿದ್ದಾರಾ..? ಎನ್ನುವ ಬಗ್ಗೆ ಹೆಬ್ಬಾಳ ಪೊಲೀಸರು ಹೇಳಬೇಕಿದೆ.

ನೀತಿ: ಸತ್ತು ಸಾಧಿಸುವುದು ಏನೂ ಇಲ್ಲ, ಬದುಕಿ ಸಾಧಿಸಬೇಕೇ ಹೊರತು ಆತ್ಮಹತ್ಯೆ ಮೂರ್ಖತನ

Related Posts

Don't Miss it !